‘ಲೇ ಇದ್ಯಾಕೆ, ನಿಮ್ಮೂರಿನ ಹುಣಸಮ್ಮನ ಜಾತ್ರೆಗೆ ಹೋಗುವುದಿಲ್ಲವೇನೇ?’ – ಮೊಟ್ಟೆ ಆಮ್ಲೇಟಿಗೆ ಈರುಳ್ಳಿ ಹೆಚ್ಚುತ್ತಿದ್ದ ಮಡದಿಯನ್ನು ಕೇಳಿದೆ. ಅವಳ ತೌರೂರು ನಾಟನಹಳ್ಳಿ. ಅದು ಮೈಸೂರು ಜಿಲ್ಲೆ ಕೆ.ಆರ್. ನಗರ ತಾಲ್ಲೂಕಿಗೆ ಸೇರಿದೆ. ಸಾಲಿಗ್ರಾಮದಿಂದ 3 ಕಿ.ಮೀ. ದೂರವಿದೆ. ನಾಟನಹಳ್ಳಿಯಿಂದ 2 ಕಿ.ಮೀ. ದೂರದಲ್ಲಿ ಮಿರ್ಲೆ ಊರಿದೆ. ಇಲ್ಲಿ ನಡೆಯುವ ‘ಒಂಬತ್ತೂರಿನ ಹುಣಸಮ್ಮ ಜಾತ್ರೆ’ ವೈಶಿಷ್ಟ್ಯಪೂರ್ಣವಾಗಿದೆ. ಮಹಾಶಿವರಾತ್ರಿ ಕಳೆದು ಬರುವ 2ನೇ ಶುಕ್ರವಾರ ರಾತ್ರಿ ಒಂಬತ್ತೂರಿನಲ್ಲಿ ಈ ಜಾತ್ರೆ ಸಂಭ್ರಮ ಗರಿಗೆದರುತ್ತದೆ. ನಾಟನಹಳ್ಳಿ, ಶಾಬಾಳ್, ಹಳೇಮಿರ್ಲೆ, ನರಚನಹಳ್ಳಿ, ಮಿರ್ಲೆಯ ಐದು ಸಿಡಿಗಳು; ಹನುಮನಹಳ್ಳಿ, ಕೋಡಿಹಳ್ಳಿ, ಮಾಳನಾಯಕಹಳ್ಳಿ ಮತ್ತು ಬೀಚನಹಳ್ಳಿಯ ನಾಲ್ಕು ತೇರುಗಳು ಮಿರ್ಲೆಯ ಹುಣಸಮ್ಮ ದೇವಸ್ಥಾನದತ್ತ ಶುಕ್ರವಾರ ರಾತ್ರಿ ಹೊರಡುತ್ತವೆ.
‘ಹೌದು ಕಣ್ರೀ ಹೋಗಿಬರೋಣ, ಶನಿವಾರ ಬೆಳಿಗ್ಗೆ ಹೋಗಿ ದೇವರಿಗೆ ಹಣ್ಣುಕಾಯಿ ಮಾಡಿಸಿಕೊಂಡು ಮಧ್ಯಾಹ್ನಕ್ಕೆ ವಾಪಸ್ ಬರೋಣ’ ಎಂದಳು. ಹಿಂದಿನ ದಿನ ಶುಕ್ರವಾರವೇ ನಾಟನಹಳ್ಳಿಗೆ ಹೋಗೋಣವೆಂದರೆ ಅಲ್ಲಿ ಮಡದಿಯ ತೌರು ಮನೆಯವರು ಯಾರೂ ಇಲ್ಲ. ಆದರೆ ನಮ್ಮ ಮದುವೆಯಾದ ಹೊಸದರಲ್ಲಿ ಪ್ರತಿ ವರ್ಷ ಜಾತ್ರೆಗೆ ಶುಕ್ರವಾರ ಸಂಜೆ ಹೊತ್ತಿಗೆ ತಪ್ಪದೆ ಹೋಗುತ್ತಿದ್ದೆವು. ಆಗ ಊರಿನಲ್ಲಿ ನಡೆಯುತ್ತಿದ್ದ ಹಬ್ಬದ ವಾತಾವರಣ ಮರೆಯುವಂತಿಲ್ಲ.

ಊರಿನ ಹಿರಿಯರು ಮತ್ತು ಯುವಕರು ಸಿಡಿಯನ್ನು ಸಿದ್ಧಪಡಿಸುತ್ತಾರೆ. ಎರಡು ಚಕ್ರದ ಬಂಡಿಗೆ ದೊಡ್ಡ ಏಣಿಯೊಂದನ್ನು ಮಧ್ಯೆ ಇಡುತ್ತಾರೆ. ಏಣಿಯ ಮಧ್ಯಭಾಗಕ್ಕೆ ಏಳೆಂಟು ಉದ್ದದ ಮರದ ಕಂಬವನ್ನು (ಮಾಲ್ಗಂಬ) ಉದ್ದುದ್ದ ಇಡುತ್ತಾರೆ. ಇದನ್ನು ವೃತ್ತಾಕಾರವಾಗಿ ತಿರುಗಿಸಬಹುದಾಗಿರುತ್ತದೆ. ಸಿಡಿ ಏಣಿಯ ಮೇಲೆ ಮಾಲ್ಗಂಬದ ತೂಕಕ್ಕೆ ಸಮನಾಗಿ ಸುಮಾರು 25 ಅಡಿ ಉದ್ದದ ಅಡಿಕೆ ಮರವನ್ನು ಮಾಲ್ಗಂಬಕ್ಕೆ ಸಮಾನಾಂತರವಾಗಿ ಜೋಡಿಸುತ್ತಾರೆ. ಅಡಿಕೆ ಮರಕ್ಕೆ ಹರಕೆ ಕಟ್ಟಿಕೊಂಡವರು ಬಾಳೆಗೊನೆ, ತೆಂಗಿನಕಾಯಿ ಗೊಂಚಲನ್ನು ತೂಗುಹಾಕುತ್ತಾರೆ.
ಅಡಿಕೆ ಮರದ ಮುಂಭಾಗದ ತುದಿಯಲ್ಲಿ ಅಡಿಕೆ ದಬ್ಬೆಗಳಿಂದ ಗೋಪುರ ನಿರ್ಮಿಸಿ, ಬಣ್ಣಬಣ್ಣದ ಬಟ್ಟೆಗಳಿಂದ ಮುಚ್ಚಿ, ಗೋಪುರದ ಕೆಳಬದಿಯ ನಾಲ್ಕು ಮೂಲೆಗಳಿಂದ ಕೊಳವೆಯಾಕಾರದ ದಿಂಬನ್ನು ನೇತುಹಾಕುತ್ತಾರೆ. ಗೋಪುರದ ಮೇಲ್ತುದಿಯಲ್ಲಿ ಕಳಶವಿರುತ್ತದೆ. ಕಳಶವನ್ನು ಸಿಡಿಯಲ್ಲಿ ಇಡುವ ಮುನ್ನ ಗ್ರಾಮದ ಕೆರೆ ಕಾಲುವೆಯಲ್ಲಿ ಗಂಗಾಸ್ನಾನ ಮಾಡಿಸಿ, ವಾದ್ಯ ಸಮೇತ ಊರಿನಲ್ಲಿ ಮನೆಮನೆಗೂ ಸಾಗುವಾಗ ಹೆಂಗಸರು ಕಳಶವನ್ನು ಪೂಜಿಸುತ್ತಾರೆ. ಸಿಡಿ ಎಳೆದುಕೊಂಡು ಹೋಗುವ ಮೊದಲು ಊರಿನ ಗ್ರಾಮದೇವತೆಯ ಬಲಿಗಂಬಕ್ಕೆ ಆಡು-ಕುರಿ ಬಲಿ ಕೊಡುತ್ತಾರೆ. ನಂತರ ಜಯಘೋಷದೊಂದಿಗೆ ಉತ್ಸಾಹಿ ಯುವಕರು ಸಿಡಿಯನ್ನು ಎಳೆದುಕೊಂಡು ಮಿರ್ಲೆಯತ್ತ ಧಾವಿಸುತ್ತಾರೆ.

ಊರಿನ ಹೆಣ್ಣುಮಕ್ಕಳು ದೇವರಿಗೆ ನೈವೇದ್ಯಕ್ಕೆಂದು (ರಾವಿಗೆ ದೀವಿಗೆ ಉತ್ಸವಕ್ಕೆಂದು) ಅಕ್ಕಿ ತಂಬಿಟ್ಟನ್ನು ಎಡೆಯ ಮೂಲಕ ಹೊತ್ತುಕೊಂಡು ಹೋಗುತ್ತಾರೆ. ಅಕ್ಕಿ ತಂಬಿಟ್ಟಿನ ಮೇಲೆ ಹಣತೆ ಹಚ್ಚಿಟ್ಟಿರುತ್ತಾರೆ. ದೀಪವು ಗಾಳಿಗೆ ಆರಿಹೋಗದಿರಲು ಬಾಳೆಎಲೆಯಿಂದ ಸುತ್ತಿ, ಅದಕ್ಕೆ ಕಣಗಲ ಹೂವಿನಿಂದ ಶೃಂಗರಿಸಿಕೊಂಡು ತಲೆಯ ಮೇಲೆ ಹೊತ್ತುಕೊಂಡು ಹುಣಸಮ್ಮನನ್ನು ಕುರಿತು ಹಾಡುತ್ತಾ ಹೋಗುತ್ತಾರೆ:
“ಹುಣಸಮ್ಮ ತಾಯೇ ಗ್ರಾಮದ ದೇವತೆ ನೀನು ನಿನಗೆಂದು ನಾವು ತಂಬಿಟ್ಟಿನಾರತಿ ತಂದೆವು ಒಪ್ಪಿಸಿಕೊಳ್ಳೆ ಹುಣಸಮ್ಮ ತಾಯೇ…”
ಹೀಗೆ ಮುಖ್ಯ ಹಾಡುಗಾರ್ತಿಯರು ಹಾಡುವುದಕ್ಕೆ ಸಂಗಡಿಗರು: ‘ರಾವಿಗೆ ದೀವಿಗೆ ಹುಣಸಮ್ಮನಿಗೆ ಹೊತ್ತುಕೊಂಡು ಬಂದೆವು…’ ಎಂದು ಧ್ವನಿಗೂಡಿಸುತ್ತಾ ನಾಟನಹಳ್ಳಿಯಿಂದ ಮಿರ್ಲೆಗೆ ಸಾಗುತ್ತಾರೆ. ಒಂಬತ್ತು ಊರುಗಳಿಂದ ಬರುವ ಸಿಡಿ ಮತ್ತು ತೇರುಗಳೊಂದಿಗೆ ಈ ಗ್ರಾಮಗಳ ಹೆಂಗಸರು, ಮಕ್ಕಳಾದಿಯಾಗಿ ಎಲ್ಲರೂ ಆಗಮಿಸಿ ತೇರು ಮತ್ತು ಸಿಡಿಗಳನ್ನು ಹುಣಸಮ್ಮ ದೇವಾಲಯದ ಮುಂಭಾಗ ನಿಲ್ಲಿಸಿ ಊರಿಗೆ ಹಿಂತಿರುಗುತ್ತಾರೆ. ವಾಪಸ್ ಊರಿಗೆ ಹೋಗುವ ಮುನ್ನ ಹೆಂಗಸರು ತಾವು ತಂದ ಅಕ್ಕಿ ತಂಬಿಟ್ಟಿನ ಎಡೆಯನ್ನು ದೇವಸ್ಥಾನದ ಮುಂಭಾಗದ ಗರುಡಗಂಬಕ್ಕೆ ಸುರಿದು ದೇವತೆಗೆ ಕೈಮುಗಿಯುತ್ತಾರೆ. ವಿದ್ಯುತ್ ದೀಪಗಳಿಂದ ದೇವಾಲಯವನ್ನು ಶೃಂಗಾರಗೊಳಿಸಿರುತ್ತಾರೆ. ಹರಕೆ ಕಟ್ಟಿಕೊಂಡ ಕೆಲವು ಹೆಂಗಸರು ಬಾಯಿ ಬೀಗ ಹಾಕಿಕೊಂಡಿರುವುದನ್ನು ಅಂದು ನೋಡಿದ್ದೆ.
ಈ ವರ್ಷ ಜಾತ್ರೆ ಫೆಬ್ರವರಿ 28 ಶನಿವಾರದಂದು ಬಂದಿದೆ. ಅಂದು ಬೆಳಿಗ್ಗೆ “ರಾತ್ರಿ ಉಳಿದಿದ್ದ ಅನ್ನಕ್ಕೆ ಚಿತ್ರಾನ್ನ ಮಾಡಲೇ?” ಎಂದಳು ಮಡದಿ. “ಬೇಡ, ಎಣ್ಣೆ-ಕೊಲೆಸ್ಟ್ರಾಲ್; ಮೊಸರನ್ನ ಕಲೆಸು” ಎಂದೆ. “ಕಡ್ಲೇಬೇಳೆ ಒಗ್ಗರಣೆ ಹಾಕಲೇ?” ಎಂದಳು. “ಬೇಡ, ಸಿಂಪಲ್ ಆಗಿರಲಿ, ಮೊಸರನ್ನ ಹೊಟ್ಟೆಗೆ ತಂಪಾಗಿರುತ್ತದೆ. ಈ ಬಿಸಿಲಿನ ಝಳಕ್ಕೆ ಗಂಟಲು ಬೇಗನೇ ಒಣಗುತ್ತದೆ ಮಾರಾಯ್ತಿ” ಎಂದೆ. ಕುಶಾಲನಗರದ ಅವರಕ್ಕನಿಗೆ ಫೋನ್ ಮಾಡಿ ಅವರನ್ನು ಹೊರಡಿಸಿಕೊಂಡಳು. ಅವರು ಅಲ್ಲಿಂದ ಇಡ್ಲಿ ತರುವುದಾಗಿ ತಿಳಿಸಿದರು. ಹಾಗಾಗಿ ನಾವು ನಮ್ಮ ಮನೆ ಎದುರಿನ ಬಯಲು ಹೋಟೆಲ್ನಲ್ಲಿ ಇಡ್ಲಿ ಕಟ್ಟಿಸಿಕೊಳ್ಳುವುದನ್ನು ರದ್ದು ಮಾಡಿದೆವು. ಈ ಹೋಟೆಲ್ನಲ್ಲಿ 5 ರೂ.ಗೆ ಒಂದು ಇಡ್ಲಿ, 10 ರೂ.ಗೆ ತಟ್ಟೆ ಇಡ್ಲಿ. ಯಾರು ಕೊಡುತ್ತಾರೆ ಇಷ್ಟು ಅಗ್ಗದ ದರಕ್ಕೆ! ಕೆ.ಎಸ್.ಆರ್.ಟಿ.ಸಿ ಬಸ್ಸಿನಲ್ಲಿ ಬೆಂಗಳೂರಿಗೆ ಹೊರಟರೆ ಮಾರ್ಗಮಧ್ಯೆ ನಿಲ್ಲಿಸುವ ಹೋಟೆಲ್ನಲ್ಲಿ ಎರಡು ಇಡ್ಲಿ-ವಡೆಗೆ ಎಪ್ಪತ್ತು ರೂ. ಅದಕ್ಕೆ ನಾವು ಪಾರ್ಸಲ್ ತೆಗೆದುಕೊಂಡು ಹೋಗಲು ಯೋಚಿಸುತ್ತೇವೆ.
ಶನಿವಾರ ಬೆಳಿಗ್ಗೆ ಬೈಕ್ ಅನ್ನು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಪಾರ್ಕ್ ಮಾಡಿ ಮೈಸೂರು ಬಸ್ಸು ಹತ್ತಿದೆವು. ಹೊಳೆನರಸೀಪುರದಲ್ಲಿ ಇಳಿದೆವು. ಅಲ್ಲಿ ಹಳ್ಳಿಮೈಸೂರು ಮಾರ್ಗದ ಸಾಲಿಗ್ರಾಮ ಬಸ್ಸು ಹತ್ತಿದೆವು. ಸಾಲಿಗ್ರಾಮ ಈಗ ತಾಲ್ಲೂಕು ಕೇಂದ್ರವಾಗಿದೆ. ಬಸ್ ನಿಲ್ದಾಣದ ಎದುರಿನ ವಿಶಾಲವಾದ ಕೆರೆಗೆ ಬೇಲಿ ಹಾಕಿ ಸಂರಕ್ಷಿಸಿದ್ದಾರೆ. ನಾವೇ ಮುಂದೆ ಹೋಗಿ ಮಡದಿಯ ಅಕ್ಕನವರನ್ನು ಕಾಯುತ್ತಾ ಕುಳಿತೆವು. ಮಿರ್ಲೆ ಮಾರ್ಗವಾಗಿ ಕೆ.ಆರ್. ನಗರಕ್ಕೆ ಹೋಗುವ ಬಸ್ಸು ಎರಡು ಗಂಟೆಯಾದರೂ ಬರಲೇ ಇಲ್ಲ. “ಜಾತ್ರೆ ಜಾತ್ರೆ” ಎಂದು ಕೂಗಿ ಕರೆಯುತ್ತಿದ್ದ ಆಟೋದವರು ಒಬ್ಬರಿಗೆ ತಲಾ ಇಪ್ಪತ್ತು ರೂ.ನಂತೆ ಹಣ ಪಡೆದು, ಮಧ್ಯೆ ಎರಡು ಸಾಲು ಹಾಗೂ ಚಾಲಕನ ಪಕ್ಕವೂ ಹತ್ತಕ್ಕೂ ಹೆಚ್ಚು ಮಂದಿಯನ್ನು ಕೂರಿಸಿಕೊಂಡು ಹೋಗಿ ಕೆ.ಎಸ್.ಆರ್.ಟಿ.ಸಿಗೆ ನಷ್ಟ ಮಾಡಿದರು. ಮಹಿಳೆಯರೇ ಹೆಚ್ಚಾಗಿ ಆಟೋದವರಿಗೆ ಲಾಭ ಮಾಡಿಕೊಟ್ಟರು.
ನಾವು ಆಟೋದಲ್ಲಿ ಮಧ್ಯದ ಸೀಟು ಹಿಡಿಯಬೇಕೆಂದು ಯೋಚಿಸುತ್ತಿರುವಾಗ ಖಾಸಗಿ ಮಿನಿ ಬಸ್ (ಟೆಂಪೋ) ಬಂತು. ತಕ್ಷಣ ಹತ್ತಿ ಕುಳಿತೆವು. ಅದೂ ಕೂಡ ಎರಡೇ ನಿಮಿಷದಲ್ಲಿ ತುಂಬಿ ಹೋಯಿತು. ದರ ಮಾತ್ರ ಇಪ್ಪತ್ತು ರೂ. ಕುಳಿತವರು, ನಿಂತವರು ಸೇರಿ ಇಪ್ಪತ್ತೈದಕ್ಕೂ ಹೆಚ್ಚು ಮಂದಿ ಇದ್ದರು. ಒಂದು ರೌಂಡ್ ಜಾತ್ರೆಗೆ ಹೋಗಿಬಂದರೆ ಟೆಂಪೋದವರಿಗೆ ಕನಿಷ್ಠ ಐದುನೂರು ರೂಪಾಯಿ ಲಾಭ. “ಈಗ ಟ್ರಂಪ್ ದೆಸೆಯಿಂದ ಮಧ್ಯಪ್ರಾಚ್ಯದಲ್ಲಿ ಯುದ್ಧ ನಡೆದಿದೆ. ಅದು ಹೀಗೆ ಮುಂದುವರೆದರೆ ಪೆಟ್ರೋಲ್ ದರ ಏರುವುದು ಶತಸಿದ್ಧ” ಎಂದೆಲ್ಲಾ ಟೆಂಪೋದಲ್ಲಿ ಕುಳಿತು ಪೆಟ್ರೋಲ್ ಮತ್ತು ಶೇರ್ ಮಾರ್ಕೆಟ್ ಬಗ್ಗೆ ಚಿಂತಿಸಿದೆ.

ಟೆಂಪೋದವರು ಮಿರ್ಲೆಯ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಬಳಿ ಇಳಿಸಿ ಮೂರು ಸೀಟಿಗೆ 60 ರೂ. ಪಡೆದರು. ಅಲ್ಲಿಂದ ಮಿರ್ಲೆಗೆ ಒಂದು ಕಿ.ಮೀ.ಗೂ ಹೆಚ್ಚು ದೂರ. ಈ ಮಧ್ಯೆ ಹುಣಸಮ್ಮ ತಾಯಿ ದೇವಸ್ಥಾನವಿದೆ. ಬಸ್, ಕಾರು ಅಷ್ಟೇ ಏಕೆ ಬೈಕ್ ಕೂಡ ಓಡಾಡದಂತೆ ಟ್ರಾಫಿಕ್ ಬಂದ್ ಮಾಡಿದ್ದರು. ಇಳಿದ ಜಾಗದಲ್ಲೇ ಪೆಟ್ಟಿಗೆ ಅಂಗಡಿಯ ಮುಂದೆ ಕಲ್ಲುಹಾಸು ಇತ್ತು. ಅಲ್ಲಿ ಕುಳಿತು ಕುಶಾಲನಗರದಿಂದ ತಂದಿದ್ದ ಇಡ್ಲಿ ತಿಂದು ನೀರು ಕುಡಿದೆವು. ದೇವಸ್ಥಾನದಲ್ಲಿ ಸಾಕಷ್ಟು ಜನ ಸೇರಿದ್ದರು. ಕ್ಯೂನಲ್ಲಿ ಸಾಗಿ ತಾಯಿಯ ದರ್ಶನ ಮಾಡಿ ಹೊರಬಂದೆವು. ಅಲ್ಲೊಂದು ಜಮೀನಿನಲ್ಲಿ ಕಲ್ಯಾಣ ಮಂಟಪ ಕಟ್ಟಿಸಿದ್ದಾರೆ. ದೇವಸ್ಥಾನದ ಬಲಬದಿಯಲ್ಲಿ ತೇರು-ಸಿಡಿಗಳನ್ನು ಸಾಲಾಗಿ ನಿಲ್ಲಿಸಿದ್ದರು.
ಜನ ಅವರವರ ಊರಿನ ತೇರು-ಸಿಡಿ ಮುಂದೆ ನಿಂತು ಫೋಟೋ ತೆಗೆಸಿಕೊಳ್ಳುತ್ತಿದ್ದರು. ಜಾತ್ರೆಯಲ್ಲಿ ಕಬ್ಬಿನ ಹಾಲಿನ ಅಂಗಡಿಗಳು, ಪುರಿ-ಖಾರ ಅಂಗಡಿಗಳು ತುಂಬಿದ್ದವು. ಬಳೆ, ಪ್ಲಾಸ್ಟಿಕ್ ಆಟಿಕೆ ಸಾಮಾನುಗಳ ಅಂಗಡಿಗಳು ಸಾಲಾಗಿ ಹರಡಿಕೊಂಡಿದ್ದವು. ‘ಕಾಂತಿ, ಯಾವ ವರ್ಷವೂ ಇಷ್ಟು ಅಂಗಡಿಗಳು ಬಂದಿರಲಿಲ್ಲ’ ಎಂದು ಹೇಳಿದ ಮಡದಿ ಅಲ್ಲೇ ಗಂಟೆಗಟ್ಟಲೆ ನಿಂತಳು. ನಾನು ಬಿಸಿಲಿನಲ್ಲಿ ಸುಸ್ತಾದೆ. ಅಲ್ಲೊಂದು ಹಳೆಯ ಅರಳಿಮರ ಬಿಟ್ಟರೆ ಬೇರೆ ಮರಗಿಡಗಳಿಲ್ಲ. ಅಂಗಡಿಯ ಮುಂದೆ ಸುಮ್ಮನೆ ನಿಲ್ಲಲು ಬಿಡುವರೇ? ಕಬ್ಬಿನ ಹಾಲಿನವನು ಕೇಳಿಯೇ ಬಿಟ್ಟ: “ಸಾರ್, ನಮ್ಮಲ್ಲೇ ನೆರಳಿತ್ತು. ಇಲ್ಲಿ ನೀವು ಕಬ್ಬಿನ ಹಾಲು ಕುಡಿಯುವುದು ಬಿಟ್ಟು ಬಿಸಿಲಿನಲ್ಲಿ ನಿಂತಿದ್ದೀರಲ್ಲಾ, ಇದು ಸರಿಯೇ?” ಎಂದು. ಅವನ ಅಂಗಡಿ ಮುಂದೆ ಇನ್ನು ನಿಲ್ಲುವುದು ಸರಿಯಲ್ಲವೆಂದು ಅಲ್ಲಿಂದ ಜಾಗ ಖಾಲಿ ಮಾಡಿದೆವು.

ಶನಿವಾರ ಸಂಜೆ ಐದೂವರೆ ಸುಮಾರಿಗೆ ಸಿಡಿ ಮತ್ತು ತೇರುಗಳನ್ನು ಒಂದರ ಹಿಂದೆ ಒಂದರಂತೆ ಮೂರು ಸುತ್ತು ಹುಣಸಮ್ಮ ದೇವಸ್ಥಾನ ಮತ್ತು ದೇವಸ್ಥಾನದ ಮುಂಭಾಗದ ಉಯ್ಯಾಲೆ ಕಂಬದ ಸುತ್ತ ಸಡಗರ-ಸಂಭ್ರಮದಿಂದ ಎಳೆಯುತ್ತಾರೆ. ಯುವಕರು ಸಿಡಿಯನ್ನು ಮೇಲೆ-ಕೆಳಗೆ ಮಾಡುತ್ತಾ ಆರ್ಭಟದಿಂದ ರಭಸವಾಗಿ ಎಳೆಯುವುದು, ಬಸ್ಸಿಗೆ ಸಡನ್ ಬ್ರೇಕ್ ಹಾಕಿದಂತೆ ತಟ್ಟನೆ ನಿಲ್ಲಿಸುವುದು ರೋಚಕವಾಗಿರುತ್ತದೆ! ಸಿಡಿ ಎಳೆಯುವವರ ಆರ್ಭಟದ ಮುಂದೆ ಕೈತೇರು ಎಳೆಯುವವರು ಸಪ್ಪಗಾಗಿ ಬಿಡುತ್ತಾರೆ. ಸಿಡಿ-ತೇರುಗಳು ಮೂರು ಸುತ್ತು ಬಂದ ನಂತರ ಕುರಿಮಂದೆಯನ್ನು ಬಿಡುತ್ತಾರೆ. ಕುರಿಮಂದೆ ಸುತ್ತುವಾಗ ಎದ್ದ ಧೂಳು ಇಡೀ ಜಾತ್ರಾ ಮೈದಾನವನ್ನು ಆವರಿಸುತ್ತದೆ. ಆದ್ದರಿಂದ ಜಾಣರು ಮೊದಲೇ ಪುರಿ-ಕಡ್ಲೆ, ತಿಂಡಿಗಳನ್ನು ಕಟ್ಟಿಸಿಕೊಂಡಿರುತ್ತಾರೆ. ಇದು ಹಳೆಯ ನೆನಪು; ಆದರೆ ಈಗ ದೇವಸ್ಥಾನದ ಸುತ್ತಲೂ ಕಾಂಕ್ರೀಟ್ ರಸ್ತೆ ಮಾಡಿದ್ದಾರೆ.
ಧೂಳು ಅಡಗಿ ಕತ್ತಲು ಆವರಿಸುತ್ತಿದ್ದಂತೆ ಜಾತ್ರಾ ಮೈದಾನ ನಿರ್ಜನವಾಗುತ್ತದೆ. ತೇರು-ಸಿಡಿ ಎಳೆದ ರಾತ್ರಿ ಯಾರೂ ದೇವಸ್ಥಾನದ ಬಳಿ ಸುಳಿಯುವುದಿಲ್ಲ. ಏಕೆಂದರೆ ದೇವಸ್ಥಾನದ ಮುಂಭಾಗವಿರುವ ಉಯ್ಯಾಲೆಯಲ್ಲಿ ಹುಣಸಮ್ಮ ತಾಯಿ ತನ್ನ ಬಂಧು-ಬಳಗದವರೊಂದಿಗೆ ಸೇರಿ ಉಯ್ಯಾಲೆ ಆಡುತ್ತಾರೆ ಎಂಬ ನಂಬಿಕೆ ಇದೆ. ಇದನ್ನು ಪರೀಕ್ಷಿಸಲು ಹೋದರೆ ಅಪಾಯ ಎಂಬ ಹೆದರಿಕೆ ಇಂದಿಗೂ ಇದೆ. ಮಾರನೆಯ ದಿನ ಭಾನುವಾರ ನೆಂಟರಿಷ್ಟರಿಗೆಲ್ಲಾ ಬಾಡೂಟದ ಸಮಾರಾಧನೆ ನಡೆಯುತ್ತದೆ. ನಾಟನಹಳ್ಳಿಯ ಲಕ್ಷ್ಮೀದೇವಿ ದೇವಸ್ಥಾನವನ್ನು ಗ್ರಾನೈಟ್ ಶಿಲೆಗಳಿಂದ ನವೀಕರಿಸಿದ್ದಾರೆ. ನಾವು ದೇವತೆಗೆ ಕೈಮುಗಿದು ಮಿರ್ಲೆಗೆ ಹೋದೆವು. ಸರ್ಕಲ್ನಲ್ಲೇ ಸಾಲಿಗ್ರಾಮಕ್ಕೆ ಹೋಗುವ ಬಸ್ಸು ಬಂತು. ಅದು ನರಚನಹಳ್ಳಿ, ಹಳೇಮಿರ್ಲೆ ಮಾರ್ಗವಾಗಿ ನಾಟನಹಳ್ಳಿಗೆ ಬಂದು ನಮ್ಮನ್ನು ಸಾಲಿಗ್ರಾಮದಲ್ಲಿ ಇಳಿಸಿತು.
ಗೊರೂರು ಅನಂತರಾಜು, 
ಹಾಸನ
ಮೊ: 9449462879
