ಬೆಂಗಳೂರು, ಮಾ.24: ನಮ್ಮ ಮೆಟ್ರೋ 3ನೇ ಹಂತದ ಆರೆಂಜ್ ಲೈನ್ ಯೋಜನೆಗೆ ₹6,775 ಕೋಟಿ ಸಾಲ ಒದಗಿಸಲು ಜಪಾನ್ನ ಜಪಾನ್ ಇಂಟರ್ನ್ಯಾಷನಲ್ ಕೋ-ಆಪರೇಷನ್ ಏಜೆನ್ಸಿ (JICA) ಒಪ್ಪಿಕೊಂಡಿದ್ದು, ಈ ಸಂಬಂಧ ಭಾರತ ಸರ್ಕಾರ ಮತ್ತು ಜೈಕಾ ನಡುವೆ ಮಂಗಳವಾರ ನವದೆಹಲಿಯಲ್ಲಿ ಅಧಿಕೃತ ಸಾಲ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
ಈ ಕುರಿತು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಪ್ರಕಟಣೆ ನೀಡಿದ್ದು, ಜೈಕಾ ಪರವಾಗಿ ಭಾರತದ ಕಚೇರಿಯ ಮುಖ್ಯ ಪ್ರತಿನಿಧಿ ಟಕೆಉಚಿ ತಕುರು ಹಾಗೂ ಭಾರತ ಸರ್ಕಾರದ ಆರ್ಥಿಕ ವ್ಯವಹಾರಗಳ ಇಲಾಖೆಯ ಜಂಟಿ ಕಾರ್ಯದರ್ಶಿ ಅಲೋಕ್ ತಿವಾರಿ ಒಪ್ಪಂದ ಪತ್ರಕ್ಕೆ ಸಹಿ ಹಾಕಿದರು. ಈ ವೇಳೆ ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಡಾ. ಜೆ. ರವಿಶಂಕರ್ ಹಾಗೂ ಹಣಕಾಸು ನಿರ್ದೇಶಕ ಎಸ್. ಶಿವಮಾಥನ್ ಉಪಸ್ಥಿತರಿದ್ದರು.
ಎರಡು ಹಂತಗಳಲ್ಲಿ ಸಾಲ ಬಿಡುಗಡೆ
ಭಾರತ ಸರ್ಕಾರ ಅನುಮೋದಿಸಿರುವ ಒಟ್ಟು ₹6,775 ಕೋಟಿ ಸಾಲವನ್ನು ಜೈಕಾ ಎರಡು ಹಂತಗಳಲ್ಲಿ ಬಿಡುಗಡೆ ಮಾಡಲಿದೆ.
ಮೊದಲ ಹಂತದಲ್ಲಿ ₹6,100 ಕೋಟಿ, ಉಳಿದ ಮೊತ್ತವನ್ನು ದ್ವಿತೀಯ ಹಂತದಲ್ಲಿ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ.
30 ವರ್ಷಗಳ ಅವಧಿಯ ಸಾಲ
ಜೈಕಾ ಸಂಸ್ಥೆಯಿಂದ ಈ ಸಾಲವನ್ನು 30 ವರ್ಷಗಳ ಅವಧಿಗೆ ಒದಗಿಸಲಾಗುತ್ತಿದ್ದು, ಯೋಜನೆಗೆ ಅಗತ್ಯವಾದ ಮೂಲಸೌಕರ್ಯ, ತಾಂತ್ರಿಕ ಸೌಲಭ್ಯ ಹಾಗೂ ನಿರ್ಮಾಣ ಕಾರ್ಯಗಳಿಗೆ ಹಣಕಾಸು ನೆರವಾಗಲಿದೆ.
44.65 ಕಿ.ಮೀ. ಉದ್ದದ ಹಂತ-3 ಯೋಜನೆ
ಬೆಂಗಳೂರು ಮೆಟ್ರೋ ಹಂತ-3 ಯೋಜನೆ ಒಟ್ಟು 44.65 ಕಿ.ಮೀ. ಉದ್ದ ಹೊಂದಿದ್ದು, ಇದರಲ್ಲಿ ಎರಡು ಪ್ರಮುಖ ಕಾರಿಡಾರ್ಗಳು ಒಳಗೊಂಡಿವೆ:
- ಜೆಪಿ ನಗರ 4ನೇ ಹಂತದಿಂದ ಕೆಂಪಾಪುರವರೆಗೆ (ಹೊರ ವರ್ತುಲ ರಸ್ತೆ ಪಶ್ಚಿಮ ಭಾಗದ ಮೂಲಕ) – 32.15 ಕಿ.ಮೀ.
- ಹೊಸಹಳ್ಳಿಯಿಂದ ಕಡಬಗೆರೆವರೆಗೆ (ಮಗಡಿ ರಸ್ತೆಯ ಮೂಲಕ) – 12.5 ಕಿ.ಮೀ.
₹15,611 ಕೋಟಿ ವೆಚ್ಚದ ಮಹತ್ವದ ಯೋಜನೆ
ಈ ಯೋಜನೆಗೆ ಭಾರತ ಸರ್ಕಾರವು 2024ರ ಸೆಪ್ಟೆಂಬರ್ 13ರಂದು ಅನುಮೋದನೆ ನೀಡಿದ್ದು, ಒಟ್ಟು ₹15,611 ಕೋಟಿ ವೆಚ್ಚ ನಿಗದಿಪಡಿಸಲಾಗಿದೆ.
ಜೈಕಾ ಸಂಸ್ಥೆ 5 ಸಿವಿಲ್ ಪ್ಯಾಕೇಜುಗಳು, ಪರ್ಮನೆಂಟ್ ವೇ, ರೋಲಿಂಗ್ ಸ್ಟಾಕ್, ಸಿಗ್ನಲಿಂಗ್ ಮತ್ತು ಟೆಲಿಕಮ್ಯುನಿಕೇಶನ್ (S&T), ಆಟೋಮ್ಯಾಟಿಕ್ ಫೇರ್ ಕಲೆಕ್ಷನ್ (AFC), ಟ್ರ್ಯಾಕ್ಷನ್ ಹಾಗೂ ಸಲಹಾ ಸೇವೆಗಳಿಗೆ ಹಣಕಾಸು ನೆರವು ನೀಡಲಿದೆ ಎಂದು ತಿಳಿಸಲಾಗಿದೆ.
2032ರೊಳಗೆ ಸಂಚಾರಕ್ಕೆ ಮುಕ್ತ ಸಾಧ್ಯತೆ
ನಮ್ಮ ಮೆಟ್ರೋ 3ನೇ ಹಂತದ ಆರೆಂಜ್ ಲೈನ್ ಯೋಜನೆ 2032ರ ವೇಳೆಗೆ ಪೂರ್ಣಗೊಂಡು ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
