ಹಾಸನ: ಹಾಸನ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ವತಿಯಿಂದ ನಗರದ ಕೈಗಾರಿಕಾ ಪ್ರದೇಶದಲ್ಲಿ ಸುಮಾರು ₹830 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಮೆಗಾ ಡೇರಿಯನ್ನು ಮೇ 15ರ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟಿಸಲು ಉದ್ದೇಶಿಸಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಹಾಗೂ ಮಾಜಿ ಸಚಿವ ಎಚ್.ಡಿ. ರೇವಣ್ಣ ತಿಳಿಸಿದ್ದಾರೆ.
ಹಾಸನ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ನಿಯಮಿತ ವಿಶೇಷ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಮೇ 15ರ ನಂತರ ಮೆಗಾ ಡೇರಿ ಉದ್ಘಾಟನೆ ಕಾರ್ಯಕ್ರಮ ನಡೆಸಲು ಯೋಜಿಸಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲಾಗುವುದು ಎಂದು ಹೇಳಿದರು.
ಈ ಸಂಬಂಧ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಸ್ವತಃ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ಆಹ್ವಾನ ನೀಡಿದ್ದಾರೆ ಎಂದು ತಿಳಿಸಿದರು. ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕೇಂದ್ರ ಹಾಗೂ ರಾಜ್ಯದ ಸಚಿವರನ್ನು ಆಹ್ವಾನಿಸಲಾಗುವುದು ಎಂದರು.
₹830 ಕೋಟಿ ವೆಚ್ಚದ ಮಹತ್ವಾಕಾಂಕ್ಷಿ ಯೋಜನೆ
ಒಕ್ಕೂಟದ ಬಳಿ ಒಟ್ಟು 150 ಎಕರೆ 29 ಗುಂಟೆ ಆಸ್ತಿ ಇದ್ದು, ಹಾಸನದಲ್ಲಿ ನಿರ್ಮಾಣವಾಗುತ್ತಿರುವ ಈ ಮೆಗಾ ಡೇರಿ ಯೋಜನೆಗೆ ಸುಮಾರು ₹830 ಕೋಟಿ ವೆಚ್ಚವಾಗುತ್ತಿದೆ ಎಂದು ರೇವಣ್ಣ ವಿವರಿಸಿದರು.
ಈ ಯೋಜನೆಗಾಗಿ:
-
₹400 ಕೋಟಿ ಒಕ್ಕೂಟದ ಸ್ವಂತ ನಿಧಿಯಿಂದ ಬಳಸಲಾಗಿದೆ
-
₹298 ಕೋಟಿ ಮೊತ್ತವನ್ನು ನ್ಯಾಷನಲ್ ಡೇರಿ ಡೆವಲಪ್ಮೆಂಟ್ ಬೋರ್ಡ್ (NDDB) ಮೂಲಕ ಸಾಲವಾಗಿ ಪಡೆಯಲಾಗಿದೆ
-
ಎರಡನೇ ಹಂತದಲ್ಲಿ ಇನ್ನಷ್ಟು ₹150 ಕೋಟಿ ಸಾಲ ಪಡೆಯಲಾಗಿದೆ ಎಂದು ಹೇಳಿದರು
ಹಾಸನ ಹಾಲು ಒಕ್ಕೂಟಕ್ಕೆ ₹17.69 ಕೋಟಿ ಲಾಭ
ಹಾಸನ ಹಾಲು ಒಕ್ಕೂಟವು ಪ್ರಸ್ತುತ ದಿನಕ್ಕೆ ಸುಮಾರು 2 ಲಕ್ಷ ಲೀಟರ್ ಹಾಲು ಮಾರಾಟ ಮಾಡುತ್ತಿದ್ದು, ₹17.69 ಕೋಟಿ ಲಾಭ ಗಳಿಸಿದೆ ಎಂದು ರೇವಣ್ಣ ತಿಳಿಸಿದರು.
ರಾಜ್ಯದ ಲಾಭದಾಯಕ ಹಾಲು ಒಕ್ಕೂಟಗಳ ಪೈಕಿ ಹಾಸನ ಹಾಲು ಒಕ್ಕೂಟ ಎರಡನೇ ಸ್ಥಾನದಲ್ಲಿದೆ ಎಂದು ಹೇಳಿದ ಅವರು, ಮೆಗಾ ಡೇರಿ ಉದ್ಘಾಟನೆಯಾದ ಬಳಿಕ ದೇಶದಲ್ಲೇ ಮೊದಲ ಸ್ಥಾನಕ್ಕೇರುವ ವಿಶ್ವಾಸ ವ್ಯಕ್ತಪಡಿಸಿದರು.
1.10 ಲಕ್ಷ ಸದಸ್ಯರಿಗೆ ಡ್ರೆಸ್ ಕೋಡ್, ಡೇರಿಯಲ್ಲೇ ಊಟ ವ್ಯವಸ್ಥೆ
ಒಕ್ಕೂಟದಲ್ಲಿ ಸುಮಾರು 1.10 ಲಕ್ಷ ಸದಸ್ಯರು ಇದ್ದಾರೆ. ಮೆಗಾ ಡೇರಿ ಉದ್ಘಾಟನೆ ದಿನ ಎಲ್ಲ ಸದಸ್ಯರಿಗೆ ಒಂದೇ ರೀತಿಯ ಡ್ರೆಸ್ ಕೋಡ್ ಇರಲಿದ್ದು, ಡೇರಿಯಲ್ಲೇ ಊಟದ ವ್ಯವಸ್ಥೆ ಮಾಡಲಾಗುತ್ತದೆ ಎಂದು ರೇವಣ್ಣ ಹೇಳಿದರು.
ಕಾರ್ಯಕ್ರಮವನ್ನು ಹಬ್ಬದ ವಾತಾವರಣದಲ್ಲಿ ಆಯೋಜಿಸಲು ಉದ್ದೇಶಿಸಿದ್ದು, ಮೆಗಾ ಡೇರಿ ಸ್ಥಾಪನೆ ಮಾಡುವುದು ತನ್ನ ಬಹುಕಾಲದ ಕನಸಾಗಿತ್ತು. ಹಾಸನ ಹಾಲು ಒಕ್ಕೂಟವನ್ನು ದೇಶದ ಮೊದಲ ಸ್ಥಾನಕ್ಕೆ ಕೊಂಡೊಯ್ಯುವುದು ಗುರಿಯಾಗಿದೆ ಎಂದು ಹೇಳಿದರು.
ಹಾಲಿನ ಪ್ರೋತ್ಸಾಹಧನ ಹೆಚ್ಚಿಸಲು ಒತ್ತಾಯ
ಮುಂದಿನ ದಿನಗಳಲ್ಲಿ ಸರ್ಕಾರ ಹಾಲಿನ ಪ್ರೋತ್ಸಾಹಧನವನ್ನು ಲೀಟರ್ಗೆ ₹10ರಿಂದ ₹12ಕ್ಕೆ ಏರಿಸಬೇಕು ಎಂದು ರೇವಣ್ಣ ಒತ್ತಾಯಿಸಿದರು.
ಸಭೆಯಲ್ಲಿ ಒಕ್ಕೂಟದ ನಿರ್ದೇಶಕರಾದ ಸತೀಶ್, ರಾಮಚಂದ್ರೇಗೌಡ, ಚನ್ನೇಗೌಡ, ಜಗದೀಶ್, ಹೇಮಂತ್ ಕುಮಾರ್, ಸ್ವಾಮೀಗೌಡ, ಬಸವರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.
