ರಾಮನಾಥಪುರ, ಏಪ್ರಿಲ್ 8 (ಆರ್ಎನ್ಪಿ): ಕಾವೇರಿ ನದಿ ದಂಡೆಯಲ್ಲಿರುವ ಐತಿಹಾಸಿಕ ಶ್ರೀ ಪಟ್ಟಾಭಿರಾಮಸ್ವಾಮಿ ದೇವಾಲಯದಲ್ಲಿ ಕಳೆದ 10 ದಿನಗಳ ಕಾಲ ನಡೆದ ಸಂಗೀತೋತ್ಸವ ಭಕ್ತಿಭಾವ, ಸಂಗೀತ ಹಾಗೂ ಧಾರ್ಮಿಕ ಕಾರ್ಯಕ್ರಮಗಳ ಸಂಭ್ರಮದಲ್ಲಿ ಭವ್ಯವಾಗಿ ಸಂಪನ್ನಗೊಂಡಿತು.
ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಸಂಗೀತ ವಿದ್ವಾಂಸರು ಹಾಗೂ ಭರತನಾಟ್ಯ ಕಲಾವಿದರು ಪ್ರತಿನಿತ್ಯ ಸಂಗೀತ ಕಚೇರಿ ಮತ್ತು ನೃತ್ಯ ಕಾರ್ಯಕ್ರಮಗಳನ್ನು ನಡೆಸಿಕೊಟ್ಟು ಭಕ್ತರ ಮನಸೂರೆಗೊಂಡರು. ಉತ್ಸವದ ಅಂಗವಾಗಿ ವಿಶೇಷ ಪೂಜೆಗಳು, ಧಾರ್ಮಿಕ ಸೇವಾ ಕಾರ್ಯಗಳು, ಉತ್ಸವಗಳು ಹಾಗೂ ಕೈಂಕರ್ಯಗಳು ನೆರವೇರಿದವು.
ಶ್ರೀಸ್ವಾಮಿಗೆ ವಿಶೇಷ ಅಭಿಷೇಕ ನೆರವೇರಿಸಲಾಯಿತು. ದೇವಾಲಯವನ್ನು ಮನಮೋಹಕ ಹೂವಿನ ಅಲಂಕಾರದಿಂದ ಸಿಂಗರಿಸಲಾಗಿದ್ದು, ಭಕ್ತರ ಗಮನ ಸೆಳೆಯಿತು. ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ದೇವಾಲಯಕ್ಕೆ ಆಗಮಿಸಿ, ಭಕ್ತಿಭಾವದಿಂದ ಆರತಿ ಬೆಳಗಿ, ದೇವರ ದರ್ಶನ ಪಡೆದು ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿದರು.

ಪ್ರತಿದಿನ ಆಗಮಿಸಿದ್ದ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. 10 ದಿನಗಳ ಸಂಗೀತೋತ್ಸವಕ್ಕೆ ಸಹಕರಿಸಿದ ಕಲಾಭಿಮಾನಿಗಳು ಹಾಗೂ ಭಕ್ತರನ್ನು ಶ್ರೀರಾಮ ಸೇವಾ ಸಮಿತಿ ಕಾರ್ಯದರ್ಶಿ ಅರ್.ಅರ್. ಶ್ರೀನಿವಾಸ್ ಅಭಿನಂದಿಸಿದರು.
ಈ ಸಂದರ್ಭದಲ್ಲಿ ದೇವಾಲಯದ ಮಾಜಿ ಕನ್ವೀನರ್ ಅರ್.ಎಸ್. ನರಸಿಂಹಮೂರ್ತಿ, ಶ್ರೀರಾಮ ಸೇವಾ ಸಮಿತಿ ಅಧ್ಯಕ್ಷ ಬದರೀನಾಥ್, ಸದಸ್ಯರಾದ ಅರ್.ಕೆ. ಶ್ರೀನಿವಾಸ್, ಎಸ್. ಶ್ರೀನಿವಾಸ್, ಅರ್.ಎಸ್. ತಿರುಮಲಾಚಾರ್, ಕೃಷ್ಣಯ್ಯಂಗಾರ್, ಶ್ರೀನಿಧಿ, ಮೋಹನ್, ರಾಸು, ನಾಗರಾಜು, ವತ್ಸಲ, ಸತೀಶ್, ಲಕ್ಷ್ಮೀಕಾಶಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ದೇವಾಲಯದ ಮುಖ್ಯ ಅರ್ಚಕರಾದ ಶ್ರೀನಿವಾಸ್ ಭಟ್ಟರು ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.
– ಕುಮಾರಸ್ವಾಮಿ ಎಂ.ಎನ್.
