ಕೆ ಆರ್ ಪೇಟೆ: ಪಟ್ಟಣದ ಪ್ರವಾಸಿ ಮಂದಿರ ವೃತ್ತದಲ್ಲಿ ತಾಲೂಕು ವೀರಶೈವ ಲಿಂಗಾಯಿತ ಮಹಾಸಭಾ ವತಿಯಿಂದ ತ್ರಿವಿಧ ದಾಸೋಹಿ ಲಿಂಗೈಕ್ಯ ಡಾ. ಶಿವಕುಮಾರ ಮಹಾಸ್ವಾಮೀಜಿ ಅವರ 119ನೇ ಜನ್ಮ ದಿನಾಚರಣೆಯನ್ನು ಅನ್ನ ದಾಸೋಹ ನಡೆಸುವ ಮೂಲಕ ಅರ್ಥಪೂರ್ಣವಾಗಿ ಶ್ರದ್ದಾಭಕ್ತಿಯಿಂದ ಆಚರಿಸಲಾಯಿತು.
ತೆಂಡೇಕೆರೆ ಬಾಳೆಹೊನ್ನೂರು ಶಾಖಾ ಮಠದ ಶ್ರೀಗಳಾದ ಶ್ರೀ ಗಂಗಾಧರ ಶಿವಾಚಾರ್ಯ ಸ್ವಾಮಿ ಅವರು ಶಿವಕುಮಾರ ಸ್ವಾಮೀಜಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಗೌರವ ಸಲ್ಲಿಸಿದರು.
ಲಕ್ಷಾಂತರ ಮಕ್ಕಳಿಗೆ ಅಕ್ಷರ ದಾಸೋಹ ಅನ್ನದಾಸೋಹ, ಆರೋಗ್ಯ ಮತ್ತು ವಸತಿ ಸೌಲಭ್ಯ ಒದಗಿಸಿಕೊಡುವ ಮೂಲಕ ತ್ರಿವಿಧ ದಾಸೋಹಿ, ನಡೆದಾಡುವ ದೇವರು ಎಂದು ಜನಮನ್ನಣೆ ಗಳಿಸಿದ್ದರು. ಅದರಂತೆ ತಮ್ಮ ಜೀವಿತಾವಧಿಯಲ್ಲಿ ನಡೆದುಕೊಂಡರು ಬಸವಾದಿ ಶರಣರ ಆದರ್ಶಗಳನ್ನು ಮೈಗೂಡಿಸಿಕೊಂಡಿದ್ದು ಅದರಂತೆ ತಾವು ನಡೆದುಕೊಂಡು ಸಮಾಜದ ಪರಿವರ್ತನೆಗೆ ಅಪಾರವಾಗಿ ಶ್ರಮಿಸಿದರು.
ತಮ್ಮ ಸಿದ್ದಗಂಗಾ ಮಠದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಲಕ್ಷಾಂತರ ಮಕ್ಕಳಿಗೂ ಗುಣಮಟ್ಟದ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರದ ಗುಣಗಳನ್ನು ಕಲಿಸುವ ಮೂಲಕ ಉತ್ತಮ ಸಮಾಜಕ್ಕಾಗಿ ಅಪಾರವಾಗಿ ಶ್ರಮಿಸಿದ್ದರು. ಶ್ರೀಗಳ ಸಾಮಾಜಿಕ ಸೇವೆಯನ್ನು ಗುರುತಿಸಿ ಕರ್ನಾಟಕ ಸರ್ಕಾರವು ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಿತ್ತು. ಅದೇ ರೀತಿ ಭಾರತ ಸರ್ಕಾರವು ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಗಂಗಾಧರ ಶಿವಾಚಾರ್ಯ ಶ್ರೀಗಳು ಒತ್ತಾಯ ಮಾಡಿದರು.

ಕಾಪನಹಳ್ಳಿ ಗವೀಮಠದ ಶ್ರೀಗಳಾದ ಸ್ವತಂತ್ರ ಚನ್ನವೀರ ಸ್ವಾಮೀಜಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು. ಸಿದ್ದಗಂಗಾ ಮಠದ ಕೀರ್ತಿಯನ್ನು ಇಡೀ ದೇಶಕ್ಕೆ ಪಸರಿಸಿದ ಕೀರ್ತಿ ಡಾ.ಶಿವಕುಮಾರ ಸ್ವಾಮೀಜಿಗಳಿಗೆ ಸಲ್ಲುತ್ತದೆ. ಸಿದ್ದಗಂಗಾ ಮಠದಲ್ಲಿ ಶಿಕ್ಷಣ ಪಡೆದ ಸಾವಿರಾರು ಮಂದಿ ಉತ್ತಮ ಸಂಸ್ಕಾರ ಪಡೆದುಕೊಂಡು ಸಮಾಜದಲ್ಲಿ ಉತ್ತಮ ಸ್ಥಾನ ಮಾನ ಪಡೆದುಕೊಂಡು ಶ್ರೀಗಳಿಗೆ ಗೌರವ ತರುವ ಕೆಲಸ ಮಾಡಿದ್ದಾರೆ. ಹಾಗಾಗಿ ಸಿದ್ದಗಂಗಾ ಶ್ರೀಗಳ ಹೆಸರನ್ನು ಕೆ.ಆರ್.ಪೇಟೆ ಪಟ್ಟಣದ ಯಾವುದಾದರೊಂದು ಪ್ರಮುಖ ವೃತ್ತಕ್ಕೆ ನಾಮಕರಣ ಮಾಡಬೇಕು ಈ ಮೂಲಕ ಶ್ರೀಗಳಿಗೆ ಗೌರವ ಸಲ್ಲಿಸಬೇಕು ಎಂದು ತಾಲ್ಲೂಕು ಆಡಳಿತಕ್ಕೆ ಹಾಗೂ ಪುರಸಭಾ ಆಡಳಿತಕ್ಕೆ ಗವಿಮಠ ಶ್ರೀಗಳು ಸಲಹೆ ನೀಡಿದರು.
ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಅಧ್ಯಕ್ಷರಾದ ಸುಜೇಂದ್ರಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ವೀರಶೈವ ಮಹಾಸಭಾ ಮುಖಂಡರಾದ ಬ್ಯಾಂಕ್ ಪರಮೇಶ್ವರ್, ತೋಟಪ್ಪಶೆಟ್ಟಿ, ಉದ್ಯಮಿ ಕೆ.ಎಸ್.ರಾಜೇಶ್, ಮೋದೂರು ಮಂಜುನಾಥ್, ವಕೀಲರಾದ ಪುರ ಮಂಜುನಾಥ್, ಕೆ.ಎನ್.ನಾಗರಾಜು, ಆರ್ ಟಿ ಓ ಮಲ್ಲಿಕಾರ್ಜುನ್ ಆಪ್ತ ಸಹಾಯಕ ಗಂಜಿಗೆರೆ ಮಹೇಶ್, ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಉಪಾಧ್ಯಕ್ಷ ಯಗಚಗುಪ್ಪೆ ಶಿವಪ್ಪ, ಜಿಲ್ಲಾ ನಿರ್ದೇಶಕರಾದ ನಾಡಬೋಗನಹಳ್ಳಿ ದಿನೇಶ್, ತಾಲ್ಲೂಕು ಮಹಾಸಭಾ ನಿರ್ದೇಶಕರಾದ ಮಂಚಿಬೀಡು ಬಸವಲಿಂಗಪ್ಪ, ಡಿ.ಸಿ.ಕುಮಾರ್, ವೈ.ಸಿ.ಕುಮಾರ್, ಮೆಳ್ಳಹಳ್ಳಿ ರಾಜಶೇಖರ್, ಸಿ.ಎನ್.ಅಪ್ಪಾಜಿ, ಮೆಡಿಕಲ್ ಶಿವಪ್ಪ , ಲಿಂಗಾಪುರ ಎಲ್.ಐ.ಸಿ ಶಿವಪ್ಪ, ಎಂ.ಎಸ್.ಶಿವಮೂರ್ತಿ, ವಾಸ್ತು ತಜ್ಞ ಹಾಡ್ಲಿ ಪರಮೇಶ್, ಸಿದ್ದಗಂಗಾ ಶ್ರೀಗಳ ಅಭಿಮಾನಿ ಮುಸ್ಲಿಂ ಮುಖಂಡರಾದ ಆಟೋ ಜಾವಿದ್ ಸೇರಿದಂತೆ ನೂರಾರು ಗಣ್ಯರು ಭಾಗವಹಿಸಿ ಸಿದ್ದಗಂಗಾ ಶ್ರೀಗಳಿಗೆ ಗೌರವ ಸಮರ್ಪಣೆ ಮಾಡಿದರು.

ಇದೇ ಸಂದರ್ಭದಲ್ಲಿ ಸಿದ್ದಗಂಗಾ ಶ್ರೀಗಳ ಜನ್ಮ ದಿನಾಚರಣೆಯ ಅಂಗವಾಗಿ ಸಾರ್ವಜನಿಕರಿಗೆ ಅನ್ನದಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಅನ್ನಧಾನ ಕಾರ್ಯಕ್ರಮಕ್ಕೆ ತೆಂಡೇಕೆರೆ ಶ್ರೀಗಳು, ಗವಿಮಠ ಶ್ರೀಗಳು, ತಾಲ್ಲೂಕು ವೀರಶೈವ ಮಹಾಸಭಾ ಅಧ್ಯಕ್ಷ ಸುಜೇಂದ್ರಕುಮಾರ್, ಗಂಜಿಗೆರೆ ಮಹೇಶ್ ಇತರರು ಅನ್ನಧಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
– ಶ್ರೀನಿವಾಸ್ ಆರ್.
