ರಾಮನಾಥಪುರ, ಏ.1: ಸಮಾಜದ ಎಲ್ಲಾ ವರ್ಗಗಳಿಗೂ ವಿದ್ಯೆ, ಅನ್ನ ಹಾಗೂ ಸೇವೆಯ ಮಹತ್ವವನ್ನು ಜೀವನಪಾಠವಾಗಿ ಬೋಧಿಸಿದ ಪದ್ಮಭೂಷಣ, ಕರ್ನಾಟಕ ರತ್ನ, ತ್ರಿವಿಧ ದಾಸೋಹಿ, ನಡೆದಾಡುವ ದೇವರು ಎಂದೇ ಖ್ಯಾತರಾದ ಸಿದ್ದಗಂಗಾ ಮಠದ ಪರಮಪೂಜ್ಯ ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳ 119ನೇ ವರ್ಷದ ಜನ್ಮ ದಿನೋತ್ಸವವನ್ನು ರಾಮನಾಥಪುರದಲ್ಲಿ ಭಕ್ತಿಭಾವದಿಂದ ಆಚರಿಸಲಾಯಿತು.
ಶ್ರೀ ಸಿದ್ದಗಂಗಾ ಬಳಗ ಹಾಗೂ ಎಲ್ಲಾ ಸಮಾಜ ಬಾಂಧವರ ಸಹಭಾಗಿತ್ವದಲ್ಲಿ ನಡೆದ ಕಾರ್ಯಕ್ರಮವು ರಾಮನಾಥಪುರದ ಶ್ರೀ ನಂಜುಂಡೇಶ್ವರ ಜನರಲ್ ಸ್ಟೋರ್ ಮುಂಭಾಗದ ಮೈದಾನದಲ್ಲಿ ನಡೆಯಿತು.

ಕಾರ್ಯಕ್ರಮದ ಅಂಗವಾಗಿ ಶ್ರೀ ಸಿದ್ದಗಂಗಾ ಶ್ರೀಗಳ ಭಾವಚಿತ್ರವನ್ನು ಪ್ರತಿಷ್ಠಾಪಿಸಿ ಪುಷ್ಪಾರ್ಚನೆ ಸಲ್ಲಿಸಲಾಯಿತು. ಬಳಿಕ ಮಾತನಾಡಿದ ವೀರಶೈವ ಸಮಾಜದ ಮುಖಂಡ ಕೋಟವಾಳು ಕೆ.ಎಸ್. ಮಹದೇವ್, “ಕಾಯಕವೇ ಕೈಲಾಸ, ದಾಸೋಹವೇ ಮುಕ್ತಿಯ ದಾರಿ” ಎಂಬ ಶರಣರ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಇಂತಹ ಪುಣ್ಯಸ್ಮರಣೆಗಳು ಸಾರ್ಥಕವಾಗುತ್ತವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ವಕ್ಕಲಿಗರ ಸಮಾಜದ ಮುಖಂಡರಾದ ಉಪ್ಪರಿಕೇಗೌಡರು, ಹೋನ್ನೇಗೌಡರು, ಕಾಳಬೋಯಿ, ಸಿದ್ದರಾಜು, ಪಶುಪತಿ ಸೋಮಶೇಖರ್, ಶಿರದನಹಳ್ಳಿ ಜಯಲಿಂಗಪ್ಪ, ಬಸವಪಟ್ಟಣ ಬಿ.ಆರ್. ಮಧುಕರ್, ವಿರೂಪಾಕ್ಷ, ಮಲ್ಲಾಪುರ ಪಂಚಾಕ್ಷರಿ, ಮಹೇಶ್, ಅಶ್ವತ್, ಎಂ.ಎನ್. ಕುಮಾರಸ್ವಾಮಿ, ರವಿ, ಪ್ರಕಾಶ್, ಹನ್ಯಾಳು ಮಂಜುನಾಥ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭಕ್ತರಿಗೆ ದಾಸೋಹದ ವ್ಯವಸ್ಥೆ ಮಾಡಲಾಗಿದ್ದು, ಸರ್ವ ಸಮಾಜದ ಸಮ್ಮುಖದಲ್ಲಿ ಶ್ರೀಗಳ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
