ಬೆಂಗಳೂರು, ಫೆಬ್ರವರಿ 11: ಶಕ್ತಿ ಯೋಜನೆ ಜಾರಿಗೆ ಬಂದ ನಂತರ ಬಿಎಂಟಿಸಿ ಬಸ್ಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿ, ಪುರುಷರು ಹಾಗೂ ಶಾಲಾ–ಕಾಲೇಜು ವಿದ್ಯಾರ್ಥಿಗಳಿಗೆ ಸೀಟ್ ಸಿಗುತ್ತಿಲ್ಲ ಎಂಬ ಅಸಮಾಧಾನ ವ್ಯಕ್ತವಾಗುತ್ತಿತ್ತು. ಈ ನಡುವೆ ಕೇಂದ್ರ ಸರ್ಕಾರದ ಪಿಎಂ–ಈ–ಡ್ರೈವ್ (PM E-DRIVE) ಯೋಜನೆ ಅಡಿಯಲ್ಲಿ ಬಿಎಂಟಿಸಿಗೆ ಮೊದಲ ಹಂತದಲ್ಲಿ 1750 ಎಸಿ ಹಾಗೂ ನಾನ್ ಎಸಿ ಎಲೆಕ್ಟ್ರಿಕ್ ಬಸ್ಗಳು ಲಭ್ಯವಾಗಲಿದ್ದು, ಪ್ರಯಾಣಿಕರಲ್ಲಿ ಸಂತಸ ಮೂಡಿಸಿದೆ.
ಶಕ್ತಿ ಯೋಜನೆ ಬಳಿಕ ಬಿಎಂಟಿಸಿ ಬಸ್ಗಳಲ್ಲಿ ಕಾಲಿಡಲು ಜಾಗವಿಲ್ಲದಷ್ಟು ಪ್ರಯಾಣಿಕರು ಕಿಕ್ಕಿರಿದು ತುಂಬುತ್ತಿರುವುದು ಸಾಮಾನ್ಯ ದೃಶ್ಯವಾಗಿದೆ. ಸದ್ಯ 6800ಕ್ಕೂ ಹೆಚ್ಚು ಬಸ್ಗಳಿದ್ದರೂ ಬೇಡಿಕೆಗೆ ತಕ್ಕಂತೆ ಸಾಕಾಗುತ್ತಿಲ್ಲ. ಈ ಹಿನ್ನೆಲೆ ಹೊಸ ಎಲೆಕ್ಟ್ರಿಕ್ ಬಸ್ಗಳ ಸೇರ್ಪಡೆ ಪ್ರಯಾಣಿಕರ ಒತ್ತಡ ತಗ್ಗಿಸುವ ನಿರೀಕ್ಷೆ ಮೂಡಿಸಿದೆ.
ಮೊದಲ ಹಂತದಲ್ಲಿ ಸಿಇಎಸ್ಎಲ್ (CESL) ಸಂಸ್ಥೆ ಟೆಂಡರ್ ಪ್ರಕ್ರಿಯೆ ಮೂಲಕ ಏಕಾ ಮೊಬಿಲಿಟಿಗೆ 1750 ಬಸ್ಗಳ ಹಂಚಿಕೆ ಮಾಡಲು ಮುಂದಾಗಿದ್ದು, ಲೆಟರ್ ಆಫ್ ಇನ್ಫರ್ಮೇಷನ್ ಆಫ್ ಕ್ವಾಂಟಿಟಿ (LOI) ನೀಡಲಾಗಿದೆ.
ಈ ಬಸ್ಗಳು ಗುತ್ತಿಗೆ ಆಧಾರದಲ್ಲಿ 12 ವರ್ಷಗಳ ಕಾಲ ಬಿಎಂಟಿಸಿಯಲ್ಲಿ ಸಂಚರಿಸಲಿವೆ. ಸಾಮಾನ್ಯವಾಗಿ ಚಾಲಕರನ್ನು ಕಂಪನಿ ಒದಗಿಸಲಿದ್ದು, ನಿರ್ವಾಹಕರನ್ನು (ಕಂಡಕ್ಟರ್) ಬಿಎಂಟಿಸಿ ನಿಯೋಜಿಸಲಿದೆ. ಪ್ರತಿ ಕಿಲೋಮೀಟರ್ಗೆ ರೂ.45 ರಿಂದ 50ರವರೆಗೆ ವೆಚ್ಚವನ್ನು ಬಿಎಂಟಿಸಿ ಗುತ್ತಿಗೆದಾರ ಕಂಪನಿಗೆ ಪಾವತಿಸಲಿದೆ.
ಪಿಎಂ–ಈ–ಡ್ರೈವ್ ಯೋಜನೆ ಅಡಿಯಲ್ಲಿ ದೇಶದಾದ್ಯಂತ 14 ಸಾವಿರ ಎಸಿ ಮತ್ತು ನಾನ್ ಎಸಿ ಎಲೆಕ್ಟ್ರಿಕ್ ಬಸ್ಗಳನ್ನು ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಇದರಲ್ಲಿ ಬೆಂಗಳೂರಿಗೆ ಒಟ್ಟು 4500 ಬಸ್ಗಳ ಘೋಷಣೆ ಮಾಡಲಾಗಿದೆ.
ಹೊಸ ಬಸ್ಗಳ ಬಗ್ಗೆ ಮಾತನಾಡಿದ ಪ್ರಯಾಣಿಕ ವಸಂತ, “ಹೊಸ ಬಸ್ಗಳು ಬಂದರೆ ಪ್ರಯಾಣ ಸೌಲಭ್ಯ ಸುಧಾರಿಸುತ್ತದೆ” ಎಂದು ಹೇಳಿದ್ದಾರೆ. ಮಹಿಳಾ ಪ್ರಯಾಣಿಕ ಸೌಮ್ಯ ಕೂಡ ಹೊಸ ಬಸ್ಗಳ ಸೇರ್ಪಡೆಗೆ ಸಂತಸ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ, ಕೇಂದ್ರ ಸರ್ಕಾರದಿಂದ ಲಭ್ಯವಾಗಲಿರುವ 1750 ಎಲೆಕ್ಟ್ರಿಕ್ ಬಸ್ಗಳು ಸಿಲಿಕಾನ್ ಸಿಟಿಯ ಪ್ರಯಾಣಿಕರಿಗೆ ಮಹತ್ತರ ನೆರವಾಗುವ ನಿರೀಕ್ಷೆಯಿದೆ.