
18 ವರ್ಷ ವಯಸ್ಸಿನ ಗುಕೇಶ್ 2784 ರೇಟಿಂಗ್ ಹೊಂದಿದ್ದು ಕ್ರಮಾಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದ್ದಾರೆ.
ಫಿಡೆ ಕ್ರಮಾಂಕಪಟ್ಟಿಯಲ್ಲಿ ಐದನೇ ಕ್ರಮಾಂಕಕ್ಕೆ ಸರಿದ ಅರ್ಜುನ್ ಇರಿಗೇಶಿ
ವಿಶ್ವ ಚಾಂಪಿಯನ್ ಡಿ.ಗುಕೇಶ್ ಅವರು ಅರ್ಜುನ್ ಇರಿಗೇಶಿ ಅವರನ್ನು ಹಿಂದೆಹಾಕಿ ಭಾರತದ ಅಗ್ರಮಾನ್ಯ ಚೆಸ್ ಆಟಗಾರ ಎನಿಸಿದ್ದಾರೆ. ಗುರುವಾರ ಪ್ರಕಟವಾದ ಫಿಡೆ ಕ್ರಮಾಂಕಪಟ್ಟಿಯಲ್ಲಿ ಅರ್ಜುನ್ ಅವರು ಐದನೇ ಕ್ರಮಾಂಕಕ್ಕೆ ಸರಿದಿದ್ದಾರೆ.
18 ವರ್ಷ ವಯಸ್ಸಿನ ಗುಕೇಶ್ 2784 ರೇಟಿಂಗ್ ಹೊಂದಿದ್ದು ಕ್ರಮಾಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದ್ದಾರೆ.
ಕಳೆದ ಸೆಪ್ಟೆಂಬರ್ನಿಂದ ಭಾರತದ ಅಗ್ರ ಆಟಗಾರ ಎನಿಸಿದ್ದ ಇರಿಗೇಶಿ 2779.5 ರೇಟಿಂಗ್ ಪಾಯಿಂಟ್ಗಳೊಡನೆ ಐದನೇ ಸ್ಥಾನಕ್ಕೆ ಸರಿದಿದ್ದಾರೆ.
ಗುಕೇಶ್, ವಿಯ್ಕ್ ಆನ್ ಝೀಯಲ್ಲಿ (ನೆದರ್ಲೆಂಡ್ಸ್) ನಡೆಯುತ್ತಿರುವ ಟಾಟಾ ಸ್ಟೀಲ್ ಚೆಸ್ ಟೂರ್ನಿಯಲ್ಲಿ ಜರ್ಮನಿಯ ವಿನ್ಸೆಂಟ್ ಕೀಮರ್ ಅವರನ್ನು ಸೋಲಿಸಿ ಎರಡನೇ ಜಯ ದಾಖಲಿಸಿದ್ದರು.
ನಾರ್ವೆಯ ಮ್ಯಾಗ್ನಸ್ ಕಾರ್ಲ್ಸನ್ ಅವರು ವಿಶ್ವದ ಅಗ್ರಮಾನ್ಯ ಆಟಗಾರನಾಗಿ (2832.5 ರೇಟಿಂಗ್) ಮುಂದುವರಿದಿದ್ದಾರೆ. ಅಮೆರಿಕದ ಗ್ರ್ಯಾಂಡ್ಮಾಸ್ಟರ್ ಹಿಕಾರು ನಕಾಮುರಾ (2802) ಅವರು ಎರಡನೇ ಮತ್ತು ಅದೇ ದೇಶದ ಫ್ಯಾಬಿಯಾನೊ ಕರುವಾನ (2798) ಮೂರನೇ ಕ್ರಮಾಂಕ ಪಡೆದಿದ್ದಾರೆ.
ಕಳೆದ ತಿಂಗಳ ಮಧ್ಯದಲ್ಲಿ ಮುಕ್ತಾಯಗೊಂಡ ವಿಶ್ವ ಚೆಸ್ ಚಾಂಪಿಯನ್ಷಿಪ್ ಫೈನಲ್ನಲ್ಲಿ ಚೀನಾದ ಡಿಂಗ್ ಲಿರೆನ್ ಅವರನ್ನು ಸೋಲಿಸಿದ್ದ ಗುಕೇಶ್ ಅತಿ ಕಿರಿಯ ವಿಶ್ವ ಚಾಂಪಿಯನ್ ಎನಿಸಿದ್ದರು.
ಆದರೆ 21 ವರ್ಷ ವಯಸ್ಸಿನ ಅರ್ಜುನ್, ಹಾಲಿ ಟಾಟಾ ಸ್ಟೀಲ್ ಚೆಸ್ ಟೂರ್ನಿಯಲ್ಲಿ ಪರದಾಡುತ್ತಿದ್ದಾರೆ. ಐದು ಸುತ್ತುಗಳಿಂದ ಕೇವಲ ಒಂದು ಪಾಯಿಂಟ್ ಪಡೆದಿದ್ದಾರೆ. ಗುಕೇಶ್ 3.5 ಪಾಯಿಂಟ್ಸ್ ಗಳಿಸಿದ್ದಾರೆ.