ಹಾಸನ, ಅ.22: ಹಾಸನಾಂಬ ದೇವಿ ದರ್ಶನ ಪಡೆದ ಸಾರಿಗೆ ಹಾಗೂ ಮುಜರಾಯಿ ಖಾತೆ ಸಚಿವ ರಾಮಲಿಂಗಾ ರೆಡ್ಡಿ ಅವರು, ಈ ವರ್ಷದ ಹಾಸನಾಂಬ ಜಾತ್ರಾ ಮಹೋತ್ಸವ ಯಶಸ್ವಿಯಾಗಿ ನೆರವೇರಿದ ಹಿನ್ನೆಲೆಯಲ್ಲಿ ಭಕ್ತಿ, ಶಿಸ್ತಿನ ಮಾದರಿಯಾಗಿದೆಯೆಂದು ಪ್ರಶಂಸೆ ವ್ಯಕ್ತಪಡಿಸಿದರು.
ಮಾಧ್ಯಮದೊಂದಿಗೆ ಮಾತನಾಡಿದ ಅವರು, “ಸುಮಾರು 1200 ವರ್ಷಗಳ ಇತಿಹಾಸ ಹೊಂದಿರುವ ಹಾಸನಾಂಬ ದೇವಾಲಯ ಮತ್ತು ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ನೂರಾರು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಮಾತ್ರವಲ್ಲದೆ ಹೊರರಾಜ್ಯಗಳಿಂದಲೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ,” ಎಂದರು.
“ನಾಲ್ಕು ವರ್ಷಗಳ ಹಿಂದೆ ಮೂರ್ನಾಲ್ಕು ಲಕ್ಷ ಜನ ಬರುತ್ತಿದ್ದರು. 2023ರಲ್ಲಿ 12 ಲಕ್ಷ, 2024ರಲ್ಲಿ 17 ಲಕ್ಷ, ಈ ವರ್ಷ 25 ಲಕ್ಷಕ್ಕೂ ಹೆಚ್ಚು ಭಕ್ತರು ದರ್ಶನ ಪಡೆದಿದ್ದಾರೆ. ಹಿಂದಿನ ವರ್ಷ ಸ್ವಲ್ಪ ಗೊಂದಲಗಳಿದ್ದರೂ, ಈ ಬಾರಿ ಯಾವುದೇ ಅಸಮಾಧಾನವಾಗದೆ ಉತ್ಸವ ಸುಸೂತ್ರವಾಗಿ ನೆರವೇರಿದೆ,” ಎಂದು ಸಚಿವರು ತಿಳಿಸಿದರು.
ಜಾತ್ರಾ ಸಮಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಐದು ದಿನಗಳ ಕಾಲ ಹಾಸನದಲ್ಲೇ ನೆಲೆಸಿ ಕಾರ್ಯತತ್ಪರವಾಗಿ ಕೆಲಸ ಮಾಡಿದ ವಿಚಾರವನ್ನು ಮೆಚ್ಚಿ, “ಡಿಸಿ, ಎಸ್ಪಿ, ಎಸಿ ಸೇರಿದಂತೆ ಎಲ್ಲಾ ಅಧಿಕಾರಿಗಳು ಶ್ರಮಿಸಿದ್ದಾರೆ. ಕಂದಾಯ ಹಾಗೂ ಪೊಲೀಸ್ ಇಲಾಖೆಯವರ ಸಹಕಾರದಿಂದ ಉತ್ಸವ ಯಶಸ್ವಿಯಾಗಿದೆ,” ಎಂದರು.
ಪ್ರಸಾದ ಮಾರಾಟದಿಂದ 21 ಕೋಟಿ ರೂಪಾಯಿ ಆದಾಯ ಲಭಿಸಿರುವುದಾಗಿ ಸಚಿವರು ತಿಳಿಸಿದ್ದಾರೆ. “₹1000 ಮತ್ತು ₹300 ಪ್ರಸಾದ ಮಾರಾಟದ ಹಣ ದೇವಾಲಯದ ಖಾತೆಯಲ್ಲೇ ಇರುತ್ತದೆ. ಹುಂಡಿ ಎಣಿಕೆ ಇನ್ನೂ ಪ್ರಾರಂಭವಾಗಿಲ್ಲ,” ಎಂದರು.
ದೇವಾಲಯದ ವಿಸ್ತರಣೆ ಅಗತ್ಯದ ವಿಷಯದಲ್ಲೂ ಸಚಿವರು ಅಭಿಪ್ರಾಯ ವ್ಯಕ್ತಪಡಿಸಿ, “ದೇವಾಲಯದ ಜಾಗ ಚಿಕ್ಕದಾಗಿದೆ. ಸುತ್ತಮುತ್ತಲಿನ ಜಾಗ ದೊರೆಯುವಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಭಕ್ತರು ಆಗಮಿಸುವುದರಿಂದ ವ್ಯವಸ್ಥಿತ ಸೌಕರ್ಯಗಳು ಅಗತ್ಯ,” ಎಂದರು.
ಅವರು ಮುಂದುವರೆದು, “ದೇವಸ್ಥಾನದಲ್ಲೇ ಹಣ ಇದೆ. ಅವಶ್ಯಕತೆ ಇದ್ದರೆ ನಾನು ಹಾಗೂ ಉಸ್ತುವಾರಿ ಸಚಿವರು ಮುಖ್ಯಮಂತ್ರಿಗಳೊಂದಿಗೆ ಮಾತಾಡಿ ಅಗತ್ಯ ನೆರವು ತರಿಸುತ್ತೇವೆ. ಜಿಲ್ಲಾಡಳಿತದಿಂದ ಪ್ರಸ್ತಾಪ ಬಂದರೆ, ಸರ್ಕಾರ ಬಜೆಟ್ನಲ್ಲಿ ಅದರ ಕುರಿತು ತೀರ್ಮಾನ ಕೈಗೊಳ್ಳುತ್ತದೆ,” ಎಂದು ಹೇಳಿದರು.
ಚಾಮುಂಡೇಶ್ವರಿ, ರೇಣುಕಾಯಲ್ಲಮ್ಮ, ಹುಲಿಗೇಮ್ಮ ಹಾಗೂ ಘಾಟಿ ಸುಬ್ರಮಣ್ಯ ದೇವಾಲಯಗಳ ಭಕ್ತಸಾಗರದ ಉದಾಹರಣೆ ನೀಡುತ್ತಾ, “ಹಾಸನಾಂಬ ದೇವಾಲಯವೂ ಈಗ ರಾಜ್ಯದ ಪ್ರಮುಖ ಧಾರ್ಮಿಕ ತಾಣವಾಗಿ ರೂಪಾಂತರಗೊಳ್ಳುತ್ತಿದೆ. ಸರ್ಕಾರದ ಸಂಪೂರ್ಣ ಬೆಂಬಲ ಇರುತ್ತದೆ,” ಎಂದು ಸಚಿವ ರಾಮಲಿಂಗಾ ರೆಡ್ಡಿ ಭರವಸೆ ನೀಡಿದರು.
