ಬೆಂಗಳೂರು, ಕರ್ನಾಟಕ | 12 ಫೆಬ್ರವರಿ 2026: 1ಎಂ1ಬಿ (1M1B) ಫೌಂಡೇಶನ್ ಸಂಸ್ಥೆಯು ಮೈಕ್ರೋಸಾಫ್ಟ್, ಎಂಇಐಟಿವೈ ಸ್ಟಾರ್ಟ್ ಅಪ್ ಹಬ್ ಮತ್ತು ಕರ್ನಾಟಕ ಸರ್ಕಾರದ ಸಹಯೋಗದೊಂದಿಗೆ ಬೆಂಗಳೂರಿನಲ್ಲಿ ಇಂದು ಗ್ರೀನ್ ಸ್ಕಿಲ್ಸ್ ಮತ್ತು ಅಪ್ಲೈಡ್ ಎಐ ಫಾರ್ ಕ್ಲೈಮೇಟ್ ಆಕ್ಷನ್ ಸೆಂಟರ್ ಆಫ್ ಎಕ್ಸಲೆನ್ಸ್ ಅನ್ನು ಉದ್ಘಾಟಿಸಿದೆ. ಭಾರತದಲ್ಲಿ ಹವಾಮಾನ ಬದಲಾವಣೆಯ ಸವಾಲುಗಳನ್ನು ಎದುರಿಸಬಲ್ಲ ಕೌಶಲ್ಯಯುತ ಯುವ ಕಾರ್ಯಪಡೆಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಇದು ಮಹತ್ವದ ಮೈಲಿಗಲ್ಲಾಗಿದೆ.
ಈ ಕೇಂದ್ರವನ್ನು ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಸಚಿವರು ಡಾ. ಎಂ.ಸಿ. ಸುಧಾಕರ್ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮೈಕ್ರೋಸಾಫ್ಟ್ ನ ಎಲಿವೇಟ್ ಸ್ಕಿಲ್ಸ್ – ಇಂಟರ್ನ್ಯಾಷನಲ್ ಫೀಲ್ಡ್ ಲೀಡ್ ಸೋಮಣ್ಣ ಪಾಲಕಂಡ, ಮೈಕ್ರೋಸಾಫ್ಟ್ ಗ್ಲೋಬಲ್ ಪಾರ್ಟ್ನರ್ ಎನೇಬಲ್ಮೆಂಟ್, ಸಿಇ&ಎಸ್ ವಿಭಾಗದ ಹಿರಿಯ ನಿರ್ದೇಶಕರಾದ ಚಿಂತಾಮಣಿ ಪದ್ಮನಾಭನ್, ಮೈಕ್ರೋಸಾಫ್ಟ್ ಎಲಿವೇಟ್-ಸಿಎಸ್ಆರ್ ಇಂಡಿಯಾದ ಹಿರಿಯ ನಿರ್ದೇಶಕರಾದ ಮಂಜು ಧಾಸ್ಮಾನ ಮತ್ತು 1ಎಂ1ಬಿ (1M1B) ಸಂಸ್ಥಾಪಕರು ಮಾನವ್ ಸುಬೋಧ್ ಉಪಸ್ಥಿತರಿದ್ದರು. ಕರ್ನಾಟಕ ಸರ್ಕಾರ ಮತ್ತು ಮೈಕ್ರೋಸಾಫ್ಟ್ ನ ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಬೆಂಗಳೂರಿನ ಈ ಸೆಂಟರ್ ಆಫ್ ಎಕ್ಸಲೆನ್ಸ್, 1ಎಂ1 ಬಿ (1M1B) ಮತ್ತು ಮೈಕ್ರೋಸಾಫ್ಟ್ ಸ್ಥಾಪಿಸಲು ಉದ್ದೇಶಿಸಿರುವ ಒಟ್ಟು ಐದು ಕೇಂದ್ರಗಳಲ್ಲಿ ಮೊದಲನೆಯದಾಗಿದೆ. ಈ ಯೋಜನೆಯು ಹಸಿರು ಕೌಶಲ್ಯ ಮತ್ತು ಎಐ ಆಧಾರಿತ ಹವಾಮಾನ ಆವಿಷ್ಕಾರಗಳನ್ನು ದೊಡ್ಡ ಮಟ್ಟದಲ್ಲಿ ಬೆಳೆಸುವ ಗುರಿಯನ್ನು ಹೊಂದಿದೆ. 2030ರ ವೇಳೆಗೆ ಒಟ್ಟು 1,00,000 ಯುವಕರಿಗೆ ಕೌಶಲ್ಯ ತರಬೇತಿ ನೀಡುವ ಗುರಿಯನ್ನು ಈ ಯೋಜನೆ ಹೊಂದಿದ್ದು, ಮೊದಲ ವರ್ಷದಲ್ಲಿ 20,000 ಯುವಕರನ್ನು ತಲುಪಲಾಗುವುದು. ಇದರಲ್ಲಿ ಕನಿಷ್ಠ 10,000 ಅಭ್ಯರ್ಥಿಗಳು ಉದ್ಯೋಗ, ಇಂಟರ್ನ್ ಶಿಪ್ ಮತ್ತು ಇತರ ಜೀವನೋಪಾಯದ ಅವಕಾಶಗಳನ್ನು ಪಡೆಯಲಿದ್ದಾರೆ.
ಕರ್ನಾಟಕ ಸರ್ಕಾರದ ಗೌರವಾನ್ವಿತ ಉನ್ನತ ಶಿಕ್ಷಣ ಸಚಿವರಾದ ಡಾ. ಎಂ.ಸಿ. ಸುಧಾಕರ್ ಅವರು ಮಾತನಾಡಿ, “ಗ್ರೀನ್ ಸ್ಕಿಲ್ಸ್ ಆಂಡ್ ಅಪ್ಲೈಡ್ ಎಐ ಫಾರ್ ಕ್ಲೈಮೇಟ್ ಆಕ್ಷನ್ ಸೆಂಟರ್ ಆಫ್ ಎಕ್ಸಲೆನ್ಸ್ ಒಂದು ವಿಶ್ವದರ್ಜೆಯ ಸೌಲಭ್ಯವಾಗಿದ್ದು, ಇದು ನಮ್ಮ ತಾಂತ್ರಿಕ ಶಿಕ್ಷಣ ವಿದ್ಯಾರ್ಥಿಗಳ ತಾಂತ್ರಿಕ ಆಲೋಚನೆಗಳು, ಆವಿಷ್ಕಾರಗಳು ಮತ್ತು ಆಸೆಗಳಿಗೆ ಜೀವ ತುಂಬಲಿದೆ. ವಿಶೇಷವಾಗಿ ಈ ಘಟಕವು ಕರ್ನಾಟಕದ ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಹೊಸ ಅಧ್ಯಾಯವನ್ನು ಬರೆಯಲಿದೆ. ಉದ್ಯೋಗಾಧಾರಿತ ಶಿಕ್ಷಣ ಒದಗಿಸಲು ರಾಜ್ಯ ಸರ್ಕಾರ ಬದ್ಧವಾಗಿದ್ದು, ನಮ್ಮ ಸರ್ಕಾರಿ ಸಂಸ್ಥೆಗಳು ಕೌಶಲ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿವೆ. ಈ ಸೆಂಟರ್ ಆಫ್ ಎಕ್ಸಲೆನ್ಸ್ ವಿದ್ಯಾರ್ಥಿಗಳ ವೃತ್ತಿಜೀವನದ ಹಾದಿಯನ್ನು ಗಮನಾರ್ಹವಾಗಿ ಉತ್ತಮಗೊಳಿಸಲಿದೆ ಮತ್ತು ಅರ್ಥಪೂರ್ಣ ಉದ್ಯೋಗಾವಕಾಶಗಳನ್ನು ಒದಗಿಸಲಿದೆ” ಎಂದು ಹೇಳಿದರು.
ಈ ಸೆಂಟರ್ ಆಫ್ ಎಕ್ಸಲೆನ್ಸ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಮೈಕ್ರೋಸಾಫ್ಟ್ ಎಲಿವೇಟ್ ನ ಇಂಟರಪ್ ನ್ಯಾಷನಲ್ ಫೀಲ್ಡ್ ಲೀಡರ್ ಸೋಮಣ್ಣ ಪಾಲಕಂಡ ಅವರು, “ಹವಾಮಾನ ಬದಲಾವಣೆಯು ಈಗ ವಾಸವವಾಗಿ ಎದುರಿಸುತ್ತಿರುವ ತುರ್ತು ಸಮಸ್ಯೆಯಾಗಿದೆ. ಜನರೇಟಿವ್ ಎಐನ ಆವಿಷ್ಕಾರ ಮತ್ತು ವ್ಯಾಪ್ತಿಯ ಮೂಲಕ ಜಗತ್ತಿನ ಅತ್ಯಂತ ಗಂಭೀರವಾದ ಸಾಮಾಜಿಕ ಮತ್ತು ಪರಿಸರ ಸವಾಲುಗಳನ್ನು ಎದುರಿಸುವ ಸಾಮರ್ಥ್ಯ ನಮಗೆ ಸಿಕ್ಕಿದೆ. ಬೆಂಗಳೂರಿನಲ್ಲಿ ‘1M1B’ ಸಂಸ್ಥೆಯು ಮೈಕ್ರೋಸಾಫ್ಟ್ ಮತ್ತು ಎಂಇಐಟಿವೈ ಸ್ಟಾರ್ಟ್ ಅಪ್ ಹಬ್ ಸಹಯೋಗದೊಂದಿಗೆ ಹವಾಮಾನ ಕ್ರಿಯೆಗಾಗಿ ಗ್ರೀನ್ ಸ್ಕಿಲ್ಸ್ ಮತ್ತು ಅಪ್ಲೈಡ್ ಎಐನಂತಹ ಯೊಜನೆಗಳನ್ನು ನಡೆಸುತ್ತಿದೆ. ಯುವಕರು ಎಐ ಮತ್ತು ಹಸಿರು ಕೌಶಲಗಳಲ್ಲಿ ತರಬೇತಿ ಪಡೆಯಲು ಹಾಗೂ ಅವರು ಇಷ್ಟಪಡುವ ವೃತ್ತಿಜೀವನವನ್ನು ಉತ್ತಮ ರೀತಿಯಲ್ಲಿ ರೂಪಿಸಿಕೊಳ್ಳಲು ನೆರವಾಗಲು ಪೂರಕವಾಗಿ ಈ ಬೆಂಗಳೂರು ಸೆಂಟರ್ ಆಫ್ ಎಕ್ಸಲೆನ್ಸ್ ಅನ್ನು ಸ್ಥಾಪಿಸಿರುವ ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯ ದೂರದೃಷ್ಟಿಗೆ ಬೆಂಬಲ ನೀಡಲು ನಾವು ಸಂತೋಷಪಡುತ್ತೇವೆ” ಎಂದು ಹೇಳಿದರು.
ಈ ಸೆಂಟರ್ ಆಫ್ ಎಕ್ಸಲೆನ್ಸ್ ಉದ್ಘಾಟನೆಯ ಸಂದರ್ಭದಲ್ಲಿ ಮಾತನಾಡಿದ ಮಾನವ್ ಸುಬೋಧ್ ಅವರು, “ಈ ಯೋಜನೆಯು ಭಾರತದ ಯುವಪೀಳಿಗೆಯನ್ನು ಹವಾಮಾನ ಸಮಸ್ಯೆಗಳ ಪರಿಹಾರಕರನ್ನಾಗಿ ಮತ್ತು ಆವಿಷ್ಕಾರ ನಾಯಕರನ್ನಾಗಿ ರೂಪಿಸುವ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. 2047ರ ವೇಳೆಗೆ ‘ವಿಕಸಿತ ಭಾರತ’ದ ಕನಸನ್ನು ಸಾಕಾರಗೊಳಿಸಲು ಇದು ಪೂರಕವಾಗಲಿದೆ,” ಎಂದು ಹೇಳಿದರು.
ಸೌರಶಕ್ತಿ, ಎಲೆಕ್ಟ್ರಿಕ್ ವಾಹನ, ಪವನ ಶಕ್ತಿ ಮತ್ತು ಎಐಗಾಗಿ ಪ್ರತ್ಯೇಕ ವಲಯಗಳನ್ನು ಹೊಂದಿರುವ ಈ ಕೇಂದ್ರವು ಅತ್ಯಾಧುನಿಕ ತಂತ್ರಜ್ಞಾನದ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ. ಕರ್ನಾಟಕದ ಯುವಪೀಳಿಗೆ ಪ್ರಾಯೋಗಿಕ ತರಬೇತಿ ಮತ್ತು ಎಐ ಯೋಜನೆಗಳ ಮೂಲಕ ನೈಜ ಪ್ರಪಂಚದ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳಲು ಇದು ಸಹಕಾರಿಯಾಗಲಿದೆ. ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವ ಅಭ್ಯರ್ಥಿಗಳಿಗೆ ಇಂಟರ್ನ್ ಶಿಪ್ ಮತ್ತು ಉದ್ಯಮಶೀಲತೆಯ ಅವಕಾಶಗಳನ್ನು ನೀಡಲಾಗುವುದು.
ಈ ಸೆಂಟರ್ ಆಫ್ ಎಕ್ಸಲೆನ್ಸ್ ಮೂಲಕ ದೇಶದ ಅತ್ಯುತ್ತಮ ಯುವ ಹವಾಮಾನ ಆವಿಷ್ಕಾರಕರನ್ನು ಒಳಗೊಂಡ ‘ಪ್ರಾಬ್ಲಮ್ ಸಾಲ್ವರ್ಸ್ ರಿಜಿಸ್ಟ್ರಿ’ ಅನ್ನು ರಚಿಸಲಾಗುತ್ತದೆ. ಇದು ಸರ್ಕಾರಗಳಿಗೆ ರಾಷ್ಟ್ರ ಮಟ್ಟದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರತಿಭಾವಂತ ಯುವಪೀಳಿಗೆಯ ನೆರವು ಪಡೆಯಲು ಸಹಾಯ ಮಾಡುತ್ತದೆ.
