ಬೆಂಗಳೂರು: ಕರ್ನಾಟಕದ ಪಾಲಿಗೆ 2026 ರಾಜಕೀಯವಾಗಿ ಅತ್ಯಂತ ಮಹತ್ವದ ವರ್ಷವಾಗಲಿದೆ. ರಾಜ್ಯದಲ್ಲಿ ಬರೋಬ್ಬರಿ ಏಳು ವಿವಿಧ ಚುನಾವಣೆಗಳು ನಡೆಯುವ ಸಾಧ್ಯತೆ ಇದ್ದು, ರಾಜಧಾನಿ ಬೆಂಗಳೂರುದಿಂದ ಹಿಡಿದು ಗ್ರಾಮ ಮಟ್ಟದ ಸಂಸ್ಥೆಗಳವರೆಗೆ ಆಡಳಿತ ವ್ಯವಸ್ಥೆಯಲ್ಲಿ ಬದಲಾವಣೆ ಆಗಲಿದೆ.
2023ರಲ್ಲಿ ವಿಧಾನಸಭೆ ಹಾಗೂ 2024ರಲ್ಲಿ ಲೋಕಸಭೆ ಚುನಾವಣೆ ನಡೆದಿದ್ದರೂ, 2025ರಲ್ಲಿ ಯಾವುದೇ ಪ್ರಮುಖ ಚುನಾವಣೆಗಳು ನಡೆದಿರಲಿಲ್ಲ. ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳು ನಡೆಯಬೇಕಿದ್ದರೂ, ಮೀಸಲಾತಿ ಹಂಚಿಕೆ ವಿಳಂಬ ಹಾಗೂ ನ್ಯಾಯಾಲಯದ ಪ್ರಕ್ರಿಯೆಗಳಿಂದ ಅವು ಮುಂದೂಡಲ್ಪಟ್ಟಿದ್ದವು. ಇದರಿಂದ ರಾಜ್ಯದ ಬಹುತೇಕ ಸ್ಥಳೀಯ ಸಂಸ್ಥೆಗಳು ಜನಪ್ರತಿನಿಧಿಗಳಿಲ್ಲದೆ ಕಾರ್ಯನಿರ್ವಹಿಸುತ್ತಿವೆ.
2026ರಲ್ಲಿ ನಡೆಯುವ ಸಂಭಾವ್ಯ ಚುನಾವಣೆಗಳು
- ತಾಲೂಕು ಪಂಚಾಯಿತಿ ಚುನಾವಣೆ – 239 ತಾಲೂಕುಗಳು, 3,671 ಕ್ಷೇತ್ರಗಳು
- ಜಿಲ್ಲಾ ಪಂಚಾಯಿತಿ ಚುನಾವಣೆ – 31 ಜಿಲ್ಲೆಗಳು, 1,130 ಕ್ಷೇತ್ರಗಳು
- ಗ್ರಾಮ ಪಂಚಾಯಿತಿ ಚುನಾವಣೆ – 6,000ಕ್ಕೂ ಹೆಚ್ಚು ವಾರ್ಡುಗಳು
- ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ (ಪಟ್ಟಣ, ಪುರಸಭೆ, ನಗರ ಸಭೆ) – 185 ಸಂಸ್ಥೆಗಳು
- ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಚುನಾವಣೆ – 5 ಪಾಲಿಕೆಗಳು, 369 ವಾರ್ಡುಗಳು
- ಮಹಾನಗರ ಪಾಲಿಕೆ ಚುನಾವಣೆ – 5 ಪಾಲಿಕೆಗಳು
- ವಿಧಾನಸಭಾ ಉಪ ಚುನಾವಣೆ – 2 ಕ್ಷೇತ್ರಗಳು
4 ವರ್ಷಗಳಿಂದ ಬಾಕಿ ಉಳಿದಿರುವ ಜಿಪಂ-ತಾಪಂ ಚುನಾವಣೆ
239 ತಾಲೂಕು ಪಂಚಾಯಿತಿಗಳ 3,671 ಕ್ಷೇತ್ರಗಳು ಹಾಗೂ 31 ಜಿಲ್ಲಾ ಪಂಚಾಯಿತಿಗಳ 1,130 ಕ್ಷೇತ್ರಗಳಿಗೆ 2020-21ರಿಂದ ಚುನಾವಣೆಗಳು ಬಾಕಿ ಉಳಿದಿವೆ. ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆ ಪೂರ್ಣಗೊಂಡಿದ್ದರೂ, ಮೀಸಲಾತಿ ಪಟ್ಟಿ ಅಂತಿಮಗೊಳ್ಳದ ಕಾರಣ ಚುನಾವಣೆ ನಡೆಸಲು ಸಾಧ್ಯವಾಗಿರಲಿಲ್ಲ. ಈ ವಿಚಾರ ನ್ಯಾಯಾಲಯದ ಮುಂದಿದ್ದು, ಪ್ರಕರಣ ಇತ್ಯರ್ಥಗೊಂಡರೆ ಏಪ್ರಿಲ್ ವೇಳೆಗೆ ಚುನಾವಣೆ ದಿನಾಂಕ ಘೋಷಣೆಯಾಗುವ ನಿರೀಕ್ಷೆ ಇದೆ.
5 ಮಹಾನಗರ ಪಾಲಿಕೆಗಳಿಗೆ ಚುನಾವಣೆ
ಮಂಗಳೂರು, ಮೈಸೂರು, ಶಿವಮೊಗ್ಗ, ದಾವಣಗೆರೆ ಮತ್ತು ತುಮಕೂರು ಮಹಾನಗರ ಪಾಲಿಕೆಗಳಿಗೆ 2026ರಲ್ಲಿ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ಸಿದ್ಧತೆ ನಡೆಸಿದೆ. ಮತದಾರರ ಪಟ್ಟಿ ಅಂತಿಮಗೊಂಡಿದ್ದು, ಸರ್ಕಾರ ಮೀಸಲಾತಿ ಪಟ್ಟಿ ನೀಡಿದರೆ ಅದರಂತೆ, ಇಲ್ಲದಿದ್ದರೆ ಹಳೆಯ ಮೀಸಲಾತಿಯನ್ನೇ ಆಧರಿಸಿ ಚುನಾವಣೆ ನಡೆಯಲಿದೆ ಎಂದು ಆಯೋಗ ತಿಳಿಸಿದೆ.
185 ನಗರ ಸ್ಥಳೀಯ ಸಂಸ್ಥೆಗಳು
ಅವಧಿ ಮುಗಿದಿರುವ 185 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸುವ ಉದ್ದೇಶ ಸರ್ಕಾರ ಹೊಂದಿದೆ. ಹಲವೆಡೆ ಆಡಳಿತಾಧಿಕಾರಿಗಳ ನೇಮಕ ಮಾಡಿ ಆಡಳಿತ ನಡೆಸಲಾಗುತ್ತಿದ್ದು, ಜನಪ್ರತಿನಿಧಿಗಳ ನೇಮಕಕ್ಕಾಗಿ ಚುನಾವಣೆ ಅಗತ್ಯವಾಗಿದೆ.
2026ರಲ್ಲಿ ನಡೆಯುವ 2 ಉಪ ಚುನಾವಣೆ
ಬಾಗಲಕೋಟೆ ಶಾಸಕ ಎಚ್.ವೈ. ಮೇಟಿ ಹಾಗೂ ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕರಪ್ಪ ಅವರು 2025ರಲ್ಲಿ ನಿಧನರಾಗಿರುವ ಹಿನ್ನೆಲೆಯಲ್ಲಿ, ಈ ಎರಡು ವಿಧಾನಸಭಾ ಕ್ಷೇತ್ರಗಳಿಗೆ 2026ರಲ್ಲಿ ಉಪ ಚುನಾವಣೆ ನಡೆಯಲಿದೆ.
6 ಸಾವಿರಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳು
ರಾಜ್ಯದಲ್ಲಿ ಒಟ್ಟು 6,022 ಗ್ರಾಮ ಪಂಚಾಯಿತಿಗಳಿದ್ದು, ಬಹುತೇಕ ಸಂಸ್ಥೆಗಳ ಅವಧಿ ಜನವರಿ-ಫೆಬ್ರವರಿಯೊಳಗೆ ಮುಗಿಯುತ್ತಿದೆ. 2026ರಲ್ಲಿ ಚುನಾವಣೆ ನಡೆಸದಿದ್ದರೆ ವಿಕೇಂದ್ರೀಕೃತ ಆಡಳಿತ ವ್ಯವಸ್ಥೆಗೆ ಧಕ್ಕೆಯಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಜಿಬಿಎ ಚುನಾವಣೆಗೆ ತಯಾರಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಐದು ಪಾಲಿಕೆಗಳಿಗೆ ಚುನಾವಣೆ ನಡೆಸಲು ಸರ್ಕಾರ ಮುಂದಾಗಿದೆ. ಕಾಂಗ್ರೆಸ್ ಪಕ್ಷ ಈಗಾಗಲೇ ಟಿಕೆಟ್ ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಿದ್ದು, ಬಿಜೆಪಿ ಕೂಡ ಸಿದ್ಧತೆ ಆರಂಭಿಸಿದೆ. ಒಟ್ಟು 369 ವಾರ್ಡುಗಳನ್ನು ರಚಿಸಲಾಗಿದ್ದು, ಹಿಂದಿನ ಚುನಾವಣೆಗೆ ಹೋಲಿಸಿದರೆ ವಾರ್ಡುಗಳ ಸಂಖ್ಯೆ ದುಪ್ಪಟ್ಟಾಗಿದೆ.
ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ
ರಾಜ್ಯ ಚುನಾವಣಾ ಆಯೋಗದ ವ್ಯಾಪ್ತಿಯಲ್ಲಿರುವ ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ಇವಿಎಂ ಬದಲು ಬ್ಯಾಲೆಟ್ ಪೇಪರ್ ಬಳಸಲು ಸರ್ಕಾರ ತೀರ್ಮಾನಿಸಿದೆ. ಜಿಪಂ, ತಾಪಂ, ಜಿಬಿಎ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಸಾಂಪ್ರದಾಯಿಕ ಮತಪತ್ರಗಳ ಮೂಲಕ ನಡೆಯಲಿವೆ.
ಗ್ರಾಮ ಪಂಚಾಯಿತಿ ಚುನಾವಣೆ ಬಳಿಕ ಇತರೆ ಚುನಾವಣೆ?
ಮೊದಲು ಗ್ರಾಮ ಪಂಚಾಯಿತಿ ಚುನಾವಣೆ ನಡೆಸಿ ಜನರ ಅಭಿಪ್ರಾಯ ಅರಿತ ನಂತರ ಇತರೆ ಚುನಾವಣೆಗಳನ್ನು ನಡೆಸುವ ಚಿಂತನೆ ಸರ್ಕಾರದ ಮಟ್ಟದಲ್ಲಿ ನಡೆದಿದೆ ಎನ್ನಲಾಗಿದೆ. ಇನ್ನು ಎನ್ಡಿಎ ಮೈತ್ರಿಕೂಟದ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪ್ರತ್ಯೇಕವಾಗಿ ಕಣಕ್ಕಿಳಿಯುವ ಸಾಧ್ಯತೆ ಇದ್ದು, ಇದು ಮೈತ್ರಿಕೂಟದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
