ಚಿಕ್ಕಬಳ್ಳಾಪುರ: ನೋಯ್ಡಾದಿಂದ ಬೆಂಗಳೂರಿಗೆ ಕಂಟೇನರ್ನಲ್ಲಿ ಸಾಗಿಸುತ್ತಿದ್ದ 3 ಕೋಟಿ ಮೌಲ್ಯದ ಮೊಬೈಲ್ಗಳನ್ನು ಕಳ್ಳತನ ಮಾಡಿದ ಪ್ರಕರಣದಲ್ಲಿ ಚಿಕ್ಕಬಳ್ಳಾಪುರ ಪೊಲೀಸರು 7 ಆರೋಪಿಗಳನ್ನು ಬಂಧಿಸಿ, 56 ಮೊಬೈಲ್ಗಳನ್ನು ವಶಕ್ಕೆ ಪಡೆದಿದ್ದಾರೆ. ಇಮ್ರಾನ್, ಮಹಮ್ಮದ್ ಮುಸ್ತಫಾ , ಭುರ್ರ, ಅನೂಪ್ ರಾಯ್, ಅಭಿಜಿತ್ ಪೌಲ್, ಸಕೃಲ್ಲಾ, ಯುಸಾಫ್ ಖಾನ್ ಬಂಧಿತರು.
ರೆಡ್ಡಿಗೊಲ್ಲಾರಹಳ್ಳಿ ಬಳಿಯ ಹೆಚ್.ಪಿ.ಡಾಬಾ ಬಳಿ 2024ರ ನ.22 ರಂದು ಕಂಟೇನರ್ ವಾಹನವನ್ನು ಬಿಟ್ಟು ಚಾಲಕ ನಾಪತ್ತೆಯಾಗಿದ್ದ. ಇದಕ್ಕೂ ಮುನ್ನ ಚಾಲಕ ತನ್ನ ಸಹಚರರೊಂದಿಗೆ ಕಂಟೇನರ್ನಲ್ಲಿದ್ದ ಶಿಯೋಮಿ ಕಂಪನಿಗೆ ಸೇರಿದ 3 ಕೋಟಿ ಮೌಲ್ಯದ 5,140 ಮೊಬೈಲ್ ಕಳವು ಮಾಡಿದ್ದ. ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಸೇಫ್ ಸೀಡ್ ಕೊರಿಯರ್ ಲಿಮಿಟೆಡ್ ಕಂಪನಿಯ ಮ್ಯಾನೇಜರ್ ಪದ್ಮನಾಭ, ಪೆರೇಸಂದ್ರ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣ ದಾಖಲು ಮಾಡಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೆರೇಸಂದ್ರ ಪೊಲೀಸ್ ಇನ್ಸ್ಪೆಕ್ಟರ್ ನಯಾಜ್ ಬೇಗ್ 2024ರ ಡಿ.10 ರಂದು ಕಂಟೇನರ್ ಚಾಲಕ ರಾಹುಲ್ ನನ್ನು ಬಂಧಿಸಿದ್ದರು. ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಚಿಕ್ಕಬಳ್ಳಾಪುರದ ಸೈಬರ್ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು. ತನಿಖೆಯನ್ನು ಚುರುಕುಗೊಳಿಸಿದ ಡಿವೈಎಸ್ಪಿ ರವಿಕುಮಾರ್ ಕೆ.ವೈ, ಇನ್ಸ್ಪೆಕ್ಟರ್ ಸೂರ್ಯ ಪ್ರಕಾಶ್ ನೇತೃತ್ವದ ತನಿಖಾ ತಂಡ 7 ಆರೋಪಿಗಳನ್ನು ಬಂಧಿಸಿ, ಕಳವು ಮಾಡಲಾಗಿದ್ದ ಮೊಬೈಲ್ಗಳನ್ನು ಸಾಗಿಸಲು ಬಳಸಿದ್ದ ಟ್ರಕ್ ವಶಕ್ಕೆ ಪಡೆದಿದೆ.
ಆರೋಪಿಗಳು ಪ್ರತಿ ರಾಜ್ಯಗಳಲ್ಲಿ 300 ರಿಂದ 400 ಮೊಬೈಲ್ಗಳನ್ನು ಮಾರಾಟ ಮಾಡಿದ್ದು, IMEI ನಂಬರ್ ಆಧಾರದ ಮೇಲೆ ಮೊಬೈಲ್ಗಳನ್ನ ಬ್ಲಾಕ್ ಮಾಡಲಾಗುತ್ತಿದೆ.
