ತುಮಕೂರು: ಜಿಲ್ಲೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಹಾಕಿ ಕ್ರೀಡಾಂಗಣ ಹಾಗೂ ಈಜು ಕೊಳ ನಿರ್ಮಾಣ ಸೇರಿದಂತೆ ಕ್ರೀಡಾ ಅಭಿವೃದ್ಧಿಗೆ 6 ಕೋಟಿ ರೂ. ಅನುದಾನ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದ್ದಾರೆ.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಒಲಿಂಪಿಕ್ ಸಂಸ್ಥೆ ಹಾಗೂ ಜಿಲ್ಲಾಡಳಿತ ಸಹಯೋಗದಲ್ಲಿ ಶುಕ್ರವಾರ ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಕರ್ನಾಟಕ ಕ್ರೀಡಾಕೂಟ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ. ಪರಮೇಶ್ವರ ಅವರು ತಮ್ಮ ಭಾಷಣದಲ್ಲಿ ತುಮಕೂರಿನಲ್ಲಿ ವಿವಿಧ ಕ್ರೀಡಾಂಗಣಗಳಿದ್ದು, ಅಂತಾರಾಷ್ಟ್ರೀಯ ಮಟ್ಟದ ಈಜು ಕೊಳ ಹಾಗೂ ಹಾಕಿ ಕ್ರೀಡಾಂಗಣಗಳ ಅವಶ್ಯವಿದ್ದು, ಮಾನ್ಯ ಮುಖ್ಯಮಂತ್ರಿಗಳು 25 ಕೋಟಿ ರೂ.ಗಳ ಅನುದಾನ ನೀಡುವಂತೆ ಕೋರಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳೆದ ವರ್ಷ ಉಡುಪಿ ಮತ್ತು ಮಂಗಳೂರಿನಲ್ಲಿ ಕರ್ನಾಟಕ ಕ್ರೀಡಾಕೂಟ ನಡೆದ ಸಂದರ್ಭದಲ್ಲಿ 6 ಕೋಟಿ ರೂ.ಗಳ ಅನುದಾನವನ್ನು ಘೋಷಿಸಲಾಗಿತ್ತು. ಅದರಂತೆ ತುಮಕೂರಿಗೂ ಕ್ರೀಡಾಭಿವೃದ್ಧಿಗಾಗಿ 6 ಕೋಟಿ ರೂ. ಅನುದಾನ ನೀಡುವುದಾಗಿ ಭರವಸೆ ನೀಡಿದರು.

ವಿದ್ಯಾರ್ಥಿ ಜೀವನದಲ್ಲಿ ಓದಿನ ಜೊತೆಗೆ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದು ಅತ್ಯಂತ ಅವಶ್ಯಕವಾಗಿದ್ದು, ಇದರಿಂದ ಸಮಯ ಪ್ರಜ್ಞೆ, ಶಿಸ್ತು, ಸಮಯ ಪಾಲನೆ ಹಾಗೂ ತಂಡಭಾವನೆ ಬೆಳೆದರೆ ದೇಶಕ್ಕೆ ಉತ್ತಮ ಕೊಡುಗೆ ನೀಡಲು ಸಾಧ್ಯವಾಗುತ್ತದೆ ಎಂದ ಅವರು, ಯುವಕರು ಮಾದಕ ವ್ಯಸನಗಳಿಗೆ ತುತ್ತಾಗದೆ, ಕ್ರೀಡೆ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗಿ, ಆರೋಗ್ಯಕರ ಸಮಾಜ ನಿರ್ಮಾಣಕ್ಕೂ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.

ನಾನು ಕೂಡ ಕ್ರೀಡಾಪಟುವಾಗಿದ್ದು, ಕ್ರೀಡಾಭಿಮಾನಿಯಾಗಿದ್ದೇನೆ. ನನ್ನ ಶಾಲಾ ದಿನಗಳಲ್ಲಿ ಅಂತರ್ ಶಾಲಾ ಮಟ್ಟದ ಕಬಡ್ಡಿ ಕ್ರೀಡೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದೇನೆ. ಎಷ್ಟೇ ಕೆಲಸದ ಒತ್ತಡ ಇದ್ದರೂ ಟೆಸ್ಟ್ ಕ್ರಿಕೆಟ್ ಹಾಗೂ ಫುಟ್ಬಾಲ್ ಕ್ರೀಡೆಗಳನ್ನು ನೋಡುತ್ತಲೇ ಇರುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಪ್ರತಿಯೊಬ್ಬ ಕ್ರೀಡಾಪಟು ಗುರಿ ಹಾಗೂ ಪರಿಶ್ರಮದೊಂದಿಗೆ ನಿರಂತರ ತರಬೇತಿ ಪಡೆದರೆ ಏಷ್ಯಾ ಮಟ್ಟದ ಸ್ಪರ್ಧೆಗಳವರೆಗೆ ತಲುಪಲು ಸಾಧ್ಯವಾಗುತ್ತದೆ. ಕ್ರೀಡೆಯಲ್ಲಿ ಪಾಲ್ಗೊಳ್ಳುವುದು ಅತ್ಯಂತ ಮಹತ್ವದ್ದಾಗಿದ್ದು, ಕ್ರೀಡೆಗೆ ತೊಡಗಿಸಿಕೊಂಡರೆ ಭವಿಷ್ಯದಲ್ಲಿ ಸರ್ಕಾರಿ ಉದ್ಯೋಗ ಸಿಗುವುದಿಲ್ಲ ಎಂಬ ಬೇಸರ ಬೇಡ ಎಂದು ಅವರು ಸ್ಪಷ್ಟಪಡಿಸಿ, ರಾಜ್ಯ ಸರ್ಕಾರವು ಕ್ರೀಡಾಪಟುಗಳಿಗೆ ಪೊಲೀಸ್ ಮತ್ತು ಅರಣ್ಯ ಇಲಾಖೆ ನೇಮಕಾತಿಯಲ್ಲಿ ಶೇ.3ರಷ್ಟು ಮೀಸಲಾತಿ ಹಾಗೂ ಎಲ್ಲಾ ಇಲಾಖೆಗಳ ಉದ್ಯೋಗ ನೇಮಕಾತಿಯಲ್ಲೂ ಶೇ.2ರಷ್ಟು ಮೀಸಲಾತಿಯನ್ನು ನಿಗದಿಪಡಿಸಿದೆ ಎಂದರು.
ಅಲ್ಲದೆ, ವಿಶ್ವ ಒಲಿಂಪಿಕ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದವರಿಗೆ 6 ಕೋಟಿ ರೂ., ಬೆಳ್ಳಿ ಪದಕ ಗೆದ್ದವರಿಗೆ 4 ಕೋಟಿ ರೂ. ಹಾಗೂ ಕಂಚಿನ ಪದಕ ಪಡೆದವರಿಗೆ 3 ಕೋಟಿ ರೂ. ಬಹುಮಾನ ನೀಡಲಾಗುತ್ತಿದೆ. ಇಷ್ಟು ಪ್ರೋತ್ಸಾಹವನ್ನು ಬೇರೆ ಯಾವುದೇ ರಾಜ್ಯದಲ್ಲಿ ಕ್ರೀಡಾಪಟುಗಳಿಗೆ ನೀಡುವುದಿಲ್ಲ ಎಂದು ಅವರು ತಿಳಿಸಿದರು.
ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ.ಪರಮೇಶ್ವರ ಅವರು, ಒಲಂಪಿಕ್ ಕ್ರೀಡಾಕೂಟವನ್ನು ನಶೆಮುಕ್ತ ಕರ್ನಾಟಕ ನಿರ್ಮಾಣದ ಸಂಕಲ್ಪದೊಂದಿಗೆ ಯುವಜನತೆಗೆ ಮೀಸಲಾಗಿ ಆಯೋಜಿಸಲಾಗಿದ್ದು, ಯುವಕರು ಮಾದಕ ವ್ಯಸನಗಳಿಂದ ದೂರವಿದ್ದು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕೆಂಬ ಉದ್ದೇಶ ಹೊಂದಿದೆ ಎಂದು ಹೇಳಿದರು.
ಎಲ್ಲಾ ಆಟಗಳಲ್ಲಿ ಗೆಲ್ಲುವುದು ಮುಖ್ಯವಲ್ಲ, ಒಲಂಪಿಕ್ ಕ್ರೀಡಾಕೂಟದಲ್ಲಿ ಭಾಗವಹಿಸುವುದೇ ಮುಖ್ಯ ಎಂದು ಅಭಿಪ್ರಾಯಪಟ್ಟ ಅವರು, ಕ್ರೀಡೆ ವಿದ್ಯಾಭ್ಯಾಸದ ಜೊತೆಗೆ ಯುವಕರ ಜೀವನ ರೂಪಿಸುವ ಶಕ್ತಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಒಲಿಂಪಿಕ್ ಸಂಸ್ಥೆಯ ಅಧ್ಯಕ್ಷ ಹಾಗೂ ಶಾಸಕ ಡಾ:ಕೆ.ಗೋವಿಂದ ರಾಜು, ಟಿ.ಬಿ.ಜಯಚಂದ್ರ, ಶಾಸಕರುಗಳಾದ ಕೆ.ಎನ್ ರಾಜಣ್ಣ, ಎಸ್.ಆರ್. ಶ್ರೀನಿವಾಸ್, ಜಿ.ಬಿ.ಜ್ಯೋತಿ ಗಣೇಶ್, ಬಿ. ಸುರೇಶ್ ಗೌಡ, ಕೆ.ಷಡಾಕ್ಷರಿ, ಹೆಚ್.ವಿ.ವೆಂಕಟೇಶ್, ಆರ್.ರಾಜೇಂದ್ರ, ಅಶೋಕ್ ಪಟ್ಟಣ್, ಟಿ.ಅನಂತರಾಜ್, ನವೀನ್ ರಾಜ್ ಸಿಂಗ್, ಚೇತನ್.ಆರ್., ನಿಕೇತ್ ರಾಜ್ ಮೌರ್ಯ, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್,ಉಪವಿಭಾಗಾಧಿಕಾರಿಗಳಾದ ಶ್ರೀಮತಿ ನಹಿದಾ ಜ್ಹಮ್ ಜ್ಹಮ್,ತಹಸೀಲ್ದಾರ್ ಶ್ರೀಮತಿ ಪಿ.ಎಸ್.ರಾಜೇಶ್ವರಿ ಮತ್ತಿತರರು ಉಪಸ್ಥಿತರಿದ್ದರು.
– ಕೆ.ಬಿ.ಚಂದ್ರಚೂಡ
