ನವದೆಹಲಿ, ಸೆ.24:
ಭಾರತೀಯ ವನ್ಯಜೀವಿ ಸಂರಕ್ಷಣೆಗೆ ಮತ್ತೊಂದು ಮಹತ್ವದ ಹೆಜ್ಜೆ ಇಡುವ ಪ್ರಯತ್ನವಾಗಿ, ಈ ಡಿಸೆಂಬರ್ ವೇಳೆಗೆ 8ರಿಂದ 10 ಆಫ್ರಿಕನ್ ಚೀತಾಗಳು (Cheetahs) ಭಾರತಕ್ಕೆ ಆಗಮಿಸಲಿವೆ. ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದಂದು, ಸೆಪ್ಟೆಂಬರ್ 2022ರಲ್ಲಿ ಪ್ರಾರಂಭವಾದ ‘ಪ್ರಾಜೆಕ್ಟ್ ಚೀತಾ’ ಯೋಜನೆಯಡಿ ಈ ಚೀತಾಗಳನ್ನು ತರಲಾಗುತ್ತಿದೆ.
ಕೀನ್ಯಾ, ಬೋಟ್ಸ್ವಾನಾ ಮತ್ತು ನಮೀಬಿಯಾ ದೇಶಗಳಿಂದ ಈ ಬಾರಿ ಚೀತಾಗಳು ಬರಲಿದ್ದು, ಅವುಗಳನ್ನು ಭಾರತದಲ್ಲಿ ಪುನರ್ ವಸತಿ ಮಾಡುವ ಕಾರ್ಯ ಚುರುಕುಗೊಂಡಿದೆ. 1952ರಲ್ಲಿ ಭಾರತದಲ್ಲಿ ಚೀತಾಗಳು ಸಂಪೂರ್ಣವಾಗಿ ಅಳಿದು ಹೋದ ಹಿನ್ನೆಲೆ, ಅವುಗಳನ್ನು ಪುನಃ ಭಾರತೀಯ ಕಾಡುಗಳಲ್ಲಿ ಪರಿಚಯಿಸುವ ಗುರಿ ಈ ಯೋಜನೆಯದು.
ಇದುವರೆಗೆ ಈ ಯೋಜನೆಯಡಿ 20 ಆಫ್ರಿಕನ್ ಚೀತಾಗಳು ಭಾರತಕ್ಕೆ ತರಲಾಗಿದ್ದು, ಸೆಪ್ಟೆಂಬರ್ 2022ರಲ್ಲಿ ನಮೀಬಿಯಾದಿಂದ 8 ಹಾಗೂ ಫೆಬ್ರವರಿ 2023ರಲ್ಲಿ ದಕ್ಷಿಣ ಆಫ್ರಿಕಾದಿಂದ 12 ಚೀತಾಗಳನ್ನು ಕರೆತರಲಾಯಿತು.
‘ಪ್ರಾಜೆಕ್ಟ್ ಚೀತಾ’ ವಿಶ್ವದ ಮೊದಲ ದೊಡ್ಡ ಮಾಂಸಾಹಾರಿ ಪ್ರಾಣಿಗಳ ಸ್ಥಳಾಂತರ ಕಾರ್ಯಕ್ರಮ ಎಂಬ ವಿಶೇಷತೆಯನ್ನು ಹೊಂದಿದೆ. ವನ್ಯಜೀವಿ ಇಲಾಖೆ ಹಾಗೂ ಕೇಂದ್ರ ಸರ್ಕಾರವು ಈ ಯೋಜನೆಯನ್ನು ಯಶಸ್ವಿಗೊಳಿಸಲು ಅಗತ್ಯ ಸಿದ್ಧತೆಗಳನ್ನು ಕೈಗೊಂಡಿದೆ.
ಹೊಸ ಚೀತಾಗಳ ಆಗಮನದಿಂದ ಭಾರತದಲ್ಲಿ ವನ್ಯಜೀವಿ ವೈವಿಧ್ಯತೆ ಹೆಚ್ಚುವ ನಿರೀಕ್ಷೆಯಿದೆ ಎಂದು ವನ್ಯಜೀವಿ ತಜ್ಞರು ಹೇಳಿದ್ದಾರೆ.
