ರಾಮನಾಥಪುರ, ಏ.3: ರಾಮನಾಥಪುರದ ಕಾವೇರಿ ನದಿ ದಂಡೆಯಲ್ಲಿರುವ ಶ್ರೀ ಪಟ್ಟಾಭಿರಾಮಸ್ವಾಮಿ ದೇವಾಲಯದ ಸಭಾಂಗಣದಲ್ಲಿ ನಡೆಯುತ್ತಿರುವ 8ನೇ ದಿನದ ಸಂಗೀತೋತ್ಸವ ಕಾರ್ಯಕ್ರಮದಲ್ಲಿ ವಿದ್ವಾನ್ ಸಿಕ್ಕಿಲ್ ಗುರುಚರಣ್ ಅವರ ಸಂಗೀತ ಕಚೇರಿ ಭಕ್ತರಿಗೆ ರಸದೌತಣ ನೀಡಿತು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅರ್.ಅರ್. ಶ್ರೀನಿವಾಸ್, “ಸಂಕಷ್ಟಗಳ ಸಾಗರವನ್ನು ದಾಟಿ ಸುಖ, ಸಂತೃಪ್ತಿ, ನೆಮ್ಮದಿ ಮತ್ತು ಶಾಂತಿಯ ದಡ ಸೇರಲು ಭಗವಂತನು ಕರುಣಿಸಿರುವ ಪರಮೋತ್ತಮ ಸಾಧನವೇ ಸಂಗೀತ” ಎಂದು ಹೇಳಿದರು. ಇಂದಿನ ಪೀಳಿಗೆಯ ಜನರು ಇಂತಹ ಸಂಗೀತೋತ್ಸವಗಳಲ್ಲಿ ಭಾಗವಹಿಸಿ ಭಕ್ತಿ ಮತ್ತು ಸಂಗೀತ ಪರಂಪರೆಯನ್ನು ಉಳಿಸಬೇಕು ಎಂದರು.

ಈ ಸಂದರ್ಭದಲ್ಲಿ ವಿದ್ವಾನ್ ಸಿಕ್ಕಿಲ್ ಗುರುಚರಣ್ ಗಾಯನ ನೀಡಿದರೆ, ಮೈಸೂರು ಎಚ್.ಎನ್. ಭಾಸ್ಕರ್ ವಯಲಿನ್ ಸಹವಾದನ, ತುಮಕೂರು ರವಿಶಂಕರ್ ಮೃದಂಗ, ಶಮಿತ್ ಗೌಡ ಘಟಂ ವಾದನದಲ್ಲಿ ಸಾಥ್ ನೀಡಿದರು.

ಇಂದಿನ ಸೇವಾಕರ್ತರಾಗಿ ವಿದ್ವಾನ್ ಹೆಚ್.ಎಸ್. ಕೃಷ್ಣ ಅಯ್ಯಂಗಾರ್ ಮತ್ತು ಸಹೋದರರು, ಹಾಸನದ ಎಚ್.ಆರ್. ಮುರುಳಿಧರ್ ಮತ್ತು ಮಕ್ಕಳು ಕಾರ್ಯಕ್ರಮ ಹಾಗೂ ದಾಸೋಹದ ವ್ಯವಸ್ಥೆ ಮಾಡಿದ್ದರು. ಪೂಜಾ ಕೈಂಕರ್ಯವನ್ನು ದೇವಾಲಯದ ಮುಖ್ಯ ಅರ್ಚಕ ಶ್ರೀನಿವಾಸಭಟ್ಟರು ನೆರವೇರಿಸಿದರು.
ಕುಮಾರಸ್ವಾಮಿ ಎಂ.ಎನ್.
