
ಬೆಂಗಳೂರು- ಏರೋ ಇಂಡಿಯಾ ಏರ್ ಶೋಗೆ (Aero India Airshow) ಸಿದ್ಧತೆ ನಡೆಯುತ್ತಿದ್ದು, ಭದ್ರತೆಗೆ ನಿಯೋಜಿಸಿದ್ದ ಪೊಲೀಸರಿಗೆ (Police) ನೀಡಿದ್ದ ಊಟದಲ್ಲಿ ಜಿರಳೆ ಪತ್ತೆಯಾಗಿದೆ. ಭದ್ರತೆಗೆ ನಿಯೋಜಿಸಲಾಗಿದ್ದ ಸಿಬ್ಬಂದಿಗೆ ಯಲಹಂಕ ಪೊಲೀಸ್ ಠಾಣೆವತಿಯಿಂದ ಊಟದ ವ್ಯವಸ್ಥೆ ಮಾಡಿಸಲಾಗಿತ್ತು.
ಮಧ್ಯಾಹ್ನ ಪಾರ್ಸೆಲ್ ಬಾಕ್ಸ್ ತೆರೆದಾಗ ಓರ್ವ ಪೊಲೀಸ್ ಅಧಿಕಾರಿಗೆ ಊಟದಲ್ಲಿ ಜಿರಳೆ ಸಿಕ್ಕಿದೆ. ಜಿರಳೆ ಕಂಡು ಪೊಲೀಸರು ಊಟ ಮಾಡದೆ ಬಾಕ್ಸ್ ಅನ್ನು ಹಾಗೇ ಬಿಟ್ಟು ತೆರಳಿದ್ದಾರೆ. ಗುಣಮಟ್ಟದ ಊಟ ನೀಡದಿದ್ದಕ್ಕೆ ಪೊಲೀಸ್ ಸಿಬ್ಬಂದಿ ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ನು, ಎರಡು ವರ್ಷಗಳ ಹಿಂದೆ 2023ರಲ್ಲೂ ಇಂತಹದ್ದೇ ಘಟನೆ ನಡೆದಿತ್ತು. 2023ರ ಸೆಪ್ಟೆಂಬರ್ 26ರಂದು ವಿವಿಧ ಸಂಘಟನೆಗಳು ಬೆಂಗಳೂರು ಬಂದ್ಗೆ ಕರೆ ಕೊಟ್ಟಿದ್ದವು.
ಈ ಹಿನ್ನೆಲೆಯಲ್ಲಿ ಅಂದು ಬೆಳಗ್ಗೆ ಯಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭದ್ರತೆಗೆ ಯಶವಂತಪುರ ಟ್ರಾಫಿಕ್ ಪೊಲೀಸರನ್ನು ನಿಯೋಜಿಸಲಾಗಿತ್ತು. ಯಶವಂತಪುರ ಟ್ರಾಫಿಕ್ ಪೊಲೀಸರಿಗೆ ತಂದಿದ್ದ ಉಪಾಹಾರದಲ್ಲಿ (ರೈಸ್ ಬಾತ್) ಸತ್ತ ಇಲಿ ಪತ್ತೆಯಾಗಿತ್ತು. ಪೊಲೀಸ್ ಇಲಾಖೆಯಿಂದ ಸರಬರಾಜು ಮಾಡಿದ ಊಟದ ಪ್ಯಾಕೆಟ್ ತೆರೆದಾಗ ಅದರಲ್ಲಿ ಇಲಿ ಕಂಡುಬಂದಿತ್ತು. ಅದನ್ನು ನೋಡಿ ಪೊಲೀಸ್ ಸಿಬ್ಬಂದಿ ಹೌಹಾರಿದ್ದರು.
ಇನ್ನು, ಹಬ್ಬ ಹರಿದಿನಗಳು, ವಿಶೇಷ ಹಾಗೂ ಚುನಾವಣಾ ಸಂದರ್ಭಗಳಲ್ಲಿ ಬಂದೋಬಸ್ತ್ ಕರ್ತವ್ಯ ನಿರ್ವಹಿಸುವ ಪೊಲೀಸ್ ಅಧಿಕಾರಿ ಅಥವಾ ಸಿಬ್ಬಂದಿಗಳಿಗೆ 200 ರೂ. ನೀಡುವಂತೆ ಆಯಾ ಠಾಣಾಧಿಕಾರಿಗಳಿಗೆ ಸೂಚಿಸಿ ಡಿಜಿ ಆಯಂಡ್ ಐಜಿ ಕಚೇರಿಯಿಂದ ಇದೇ ವರ್ಷ ಫೆಬ್ರವರಿ 4 ರಂದು ಆದೇಶ ಹೊರಡಿಸಲಾಗಿದೆ.