ನಿಕೋಸಿಯಾ, ಜೂನ್ 16: ಸೈಪ್ರಸ್ ರಾಜಧಾನಿ ನಿಕೋಸಿಯಾದಲ್ಲಿ ಭಾನುವಾರ ನಡೆದ ದುಂಡು ಮೇಜಿನ ಸಭೆಯಲ್ಲಿ ಪ್ರಧಾನಿ Narendra Modi ಹಲವು ವಿಷಯಗಳ ಕುರಿತು ಮಾತನಾಡಿದ್ದಾರೆ. 20 ವರ್ಷಗಳಲ್ಲಿ ಸೈಪ್ರಸ್ಗೆ ಭಾರತೀಯ ಪ್ರಧಾನಿಯೊಬ್ಬರ ಮೊದಲ ಅಧಿಕೃತ ಭೇಟಿ ಇದಾಗಿದೆ. ಈ ಸಂದರ್ಭದಲ್ಲಿ, ಪ್ರಧಾನಿ ಮೋದಿ ಭಾರತದ ಆರ್ಥಿಕ ಪ್ರಗತಿ, ಡಿಜಿಟಲ್ ಕ್ರಾಂತಿ ಮತ್ತು ಸೈಪ್ರಸ್ ಜೊತೆಗಿನ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಕುರಿತು ಹಲವು ಪ್ರಮುಖ ವಿಷಯಗಳನ್ನು ಹಂಚಿಕೊಂಡರು.
ಭಾರತ ಮತ್ತು ಸೈಪ್ರಸ್ ನಡುವೆ 150 ಮಿಲಿಯನ್ ಡಾಲರ್ ವ್ಯಾಪಾರವಿದೆ, ಆದರೆ ನಿಜವಾದ ಸಾಮರ್ಥ್ಯ ಇದಕ್ಕಿಂತ ಹೆಚ್ಚಿನದಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಸೈಪ್ರಸ್ ಭಾರತದ ವಿಶ್ವಾಸಾರ್ಹ ಪಾಲುದಾರ. ಇಲ್ಲಿಂದ ಭಾರತಕ್ಕೆ ಹೂಡಿಕೆಗಳು ಬಂದಿವೆ ಮತ್ತು ಅನೇಕ ಭಾರತೀಯ ಕಂಪನಿಗಳು ಸೈಪ್ರಸ್ನಲ್ಲಿ ತಮ್ಮ ಅಸ್ತಿತ್ವವನ್ನು ಸ್ಥಾಪಿಸಿವೆ ಎಂದರು.
ತಮ್ಮ ಭಾಷಣದಲ್ಲಿ ಪ್ರಧಾನಿ ಮೋದಿ, ಭಾರತವು ಶೀಘ್ರದಲ್ಲೇ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವತ್ತ ವೇಗವಾಗಿ ಸಾಗುತ್ತಿದೆ ಎಂದು ಹೇಳಿದರು. ಕಳೆದ ದಶಕದಲ್ಲಿ ಭಾರತ ಐದನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಈಗ ನಾವು ಮೂರನೇ ಸ್ಥಾನದತ್ತ ವೇಗವಾಗಿ ಸಾಗುತ್ತಿದ್ದೇವೆ ಎಂದು ಅವರು ಹೇಳಿದರು.
ಇಂದು ವಿಶ್ವದ ಶೇಕಡಾ 50 ರಷ್ಟು ಡಿಜಿಟಲ್ ವಹಿವಾಟುಗಳು ಭಾರತದಲ್ಲಿ ಯುಪಿಐ ಮೂಲಕ ನಡೆಯುತ್ತಿವೆ. ನಾವು ಫ್ರಾನ್ಸ್ನಂತಹ ದೇಶಗಳನ್ನು ಸಂಪರ್ಕಿಸಿದ್ದೇವೆ ಮತ್ತು ಈಗ ಸೈಪ್ರಸ್ನೊಂದಿಗೆ ಯುಪಿಐ ಅನ್ನು ಸಂಪರ್ಕಿಸುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ನಾನು ಇದನ್ನು ಸ್ವಾಗತಿಸುತ್ತೇನೆ ಎಂದು ಹೇಳಿದರು.
ಭಾರತವು ಪ್ರತಿ ವರ್ಷ ಮೂಲಸೌಕರ್ಯ ಕ್ಷೇತ್ರದಲ್ಲಿ 100 ಶತಕೋಟಿ ಡಾಲರ್ಗಳಿಗೂ ಹೆಚ್ಚು ಹೂಡಿಕೆ ಮಾಡುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಈ ವರ್ಷದ ಬಜೆಟ್ನಲ್ಲಿ ಹೊಸ ಉತ್ಪಾದನಾ ಮಿಷನ್ ಅನ್ನು ಪ್ರಾರಂಭಿಸಲಾಗಿದೆ. ನಾವು ಸಾಗರ ಮತ್ತು ಬಂದರು ಅಭಿವೃದ್ಧಿ, ಹಡಗು ನಿರ್ಮಾಣ ಮತ್ತು ನಾಗರಿಕ ವಿಮಾನಯಾನದಂತಹ ಕ್ಷೇತ್ರಗಳಿಗೆ ವಿಶೇಷ ಗಮನ ನೀಡುತ್ತಿದ್ದೇವೆ. ನಮ್ಮ 1 ಲಕ್ಷಕ್ಕೂ ಹೆಚ್ಚು ನವೋದ್ಯಮ ಕಂಪನಿಗಳು ಕನಸುಗಳನ್ನು ಮಾತ್ರವಲ್ಲದೆ ಪರಿಹಾರಗಳನ್ನು ಮಾರಾಟ ಮಾಡುತ್ತಿವೆ ಎಂದು ಅವರು ಹೇಳಿದರು.
ಭಾರತ ಮತ್ತು ಸೈಪ್ರಸ್ ನಡುವಿನ ವಾಣಿಜ್ಯ ಸಂಪರ್ಕಗಳಿಗೆ ಚೈತನ್ಯ ತುಂಬಲು ಅಧ್ಯಕ್ಷ ನಿಕೋಸ್ ಕ್ರಿಸ್ಟೋಡೌಲೈಡ್ಸ್ ಮತ್ತು ಇತರೆ ಪ್ರಮುಖರೊಂದಿಗೆ ಮಾತುಕತೆ ನಡೆಸಿದ್ದೇನೆ.ಕಳೆದ ದಶಕದಲ್ಲಿ ಭಾರತದ ಸುಧಾರಣಾ ಪಥದ ಬಗ್ಗೆಯೂ ನಾನು ಮಾತನಾಡಿದ್ದೇನೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಬ್ಯಾಂಕಿಂಗ್, ಹಣಕಾಸು ಸಂಸ್ಥೆಗಳು, ಉತ್ಪಾದನೆ, ರಕ್ಷಣೆ, ಲಾಜಿಸ್ಟಿಕ್ಸ್, ಕಡಲ, ಸಾಗಣೆ, ತಂತ್ರಜ್ಞಾನ, ನಾವೀನ್ಯತೆ, ಡಿಜಿಟಲ್ ತಂತ್ರಜ್ಞಾನಗಳು, AI, ಐಟಿ ಸೇವೆಗಳು, ಪ್ರವಾಸೋದ್ಯಮ ಮತ್ತು ಚಲನಶೀಲತೆಯಂತಹ ವೈವಿಧ್ಯಮಯ ವಲಯಗಳ ಕುರಿತು ಚರ್ಚೆ ನಡೆಸಲಾಗಿದೆ.
ವಿದೇಶಾಂಗ ವ್ಯವಹಾರಗಳ ಅಧಿಕೃತ ವಕ್ತಾರ ರಣಧೀರ್ ಜೈಸ್ವಾಲ್ ಅವರ ಪ್ರಕಾರ, ಈ ಚರ್ಚೆ ಎರಡೂ ದೇಶಗಳ ನಡುವಿನ ಹೂಡಿಕೆ, ತಂತ್ರಜ್ಞಾನ ಮತ್ತು ವ್ಯವಹಾರ ಸಂಪರ್ಕಗಳನ್ನು ಮತ್ತಷ್ಟು ಗಟ್ಟಿಗೊಳಿಸಿದೆ.
