ಚಾಮರಾಜನಗರ:- ರಾಜ್ಯದಲ್ಲಿ ಆಷಾಢ ಮಾಸದಲ್ಲಿ ನಡೆಯುವ ಇತಿಹಾಸ ಪ್ರಸಿದ್ಧ ಶ್ರೀಚಾಮರಾಜೇಶ್ವರ ರಥೋತ್ಸವವು ಜು.10ರಂದು ನಿಗದಿಯಾಗಿದೆ. ಭಕ್ತಿಯ ಹೊಳೆ, ನವಜೋಡಿಗಳ ಕಲರವದ ಜೀವ ಜಾತ್ರೆಗೆ ದಿನಗಣನೆ ಶುರುವಾಗಿದೆ.
ನಗರದ ಹೃದಯಭಾಗದಲ್ಲಿರುವ ಶ್ರೀಚಾಮರಾಜೇಶ್ವರ ದೇವಸ್ಥಾನದ ರಥೋತ್ಸವಕ್ಕೆ ತನ್ನದೇ ಖ್ಯಾತಿ ಇದೆ. ಪ್ರತಿ ವರ್ಷವೂ ನಡೆಯುವ ಜಾತ್ರೆಯು ಈ ಸಲ ಜು.10ರಂದು ನಡೆಯಲಿದೆ. ಎಂದಿನಂತೆ ದೇಗುಲದ ಮುಂಭಾಗದಿಂದ ಶುರುವಾಗುವ ರಥೋತ್ಸವ ಒಂದು ಸುತ್ತು ಹಾಕಿ ಬಂದು ನಿಲ್ಲುವುದರೊಳಗೆ ಅಸಂಖ್ಯಾತ ಭಕ್ತರ ಪ್ರಾರ್ಥನೆ, ಪೂಜೆ-ಪುನಸ್ಕಾರ ಸಲ್ಲಿಕೆಯಾಗುತ್ತದೆ. ನಮ್ಮೂರ ದೈವದ ಮೇಲಿನ ಭಕ್ತಿಯ ಕಾರಣಕ್ಕೆ ತೇರಿನ ವೈಭವವೂ ಜೋರಾಗಿರುತ್ತದೆ.
ಆಷಾಢದ ತೇರು: ಯದುಕುಲದ ಚಾಮರಾಜ ಒಡೆಯರು ನಗರದ ಜನನ ಮಂಟಪದಲ್ಲಿ ಜನಿಸಿದ್ದರು. ಇದರ ಸ್ಮರಣಾರ್ಥ ಇವರ ಮಗ ಮುಮ್ಮಡಿ ಕೃಷ್ಣರಾಜ ಒಡೆಯರ್ ಶ್ರೀಚಾಮರಾಜೇಶ್ವರ ದೇಗುಲ ನಿರ್ಮಾಣ ಮಾಡಿದರು. ನವರತ್ನಗಳ ರಾಜ ಎಂದು ಬಿರುದನ್ನು ಪಡೆದುಕೊಂಡಿದ್ದ ಮುಮ್ಮಡಿಕೃಷ್ಣರಾಜ ಒಡೆಯರ ಜನ್ಮನಕ್ಷತ್ರದಂತೆ ಆಚಂದ್ರಾರ್ಕ ಸೇವೆ ನಡೆಯಲಿ ಎಂಬ ಉದ್ದೇಶದಿಂದ ಆಷಾಢಮಾಸದಲ್ಲಿ ಬರುವ ಹುಣ್ಣಿಮೆಯನ್ನು ಒಳಗೊಂಡ ಪೂರ್ವಾಷಾಢ ನಕ್ಷತ್ರದಲ್ಲಿ ಶ್ರೀಚಾಮರಾಜೇಶ್ವರಸ್ವಾಮಿ ಬ್ರಹ್ಮ ರಥೋತ್ಸವವನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ಶಕ್ತಿ ದೇವತೆಯ ಆರಾಧನೆಯ ಮಾಸವೇ ಆಷಾಢ. ಗುರುವಿನ ಪೂರ್ಣಿಮೆಯಂದು ಇಲ್ಲಿ ರಥೋತ್ಸವ ಜರುಗುವುದು ವಿಶೇಷ. ಈ ಮಾಸದಲ್ಲಿ ನೂತನ ದಂಪತಿಗಳು ಪ್ರತ್ಯೇಕಗೊಳ್ಳುತ್ತಾರೆ. ಆದರೆ ಬ್ರಹ್ಮ ರಥೋತ್ಸವದಲ್ಲಿ ಒಂದಾಗಿ ಪಾಲ್ಗೊಳ್ಳುತ್ತಾರೆ. ಪರಶಿವನು ಮತ್ತು ಪಾರ್ವತಿಯೂ ಲೋಕ ಕಲ್ಯಾಣಕ್ಕಾಗಿ ಸಂಚಾರ ಮಾಡುವ ವೇಳೆಯಲ್ಲಿ ಶ್ರೀಚಾಮರಾಜೇಶ್ವರನ ಉತ್ಸವಮೂರ್ತಿಗೆ ಎಸೆಯುವ ಹಣ್ಣು-ಧವನ, ಶಿವ-ಪಾರ್ವತಿ ದಂಪತಿಗಳ ಪಾದಕ್ಕೆ ಪ್ರಿಯವಾಗುತ್ತದೆ ಎಂಬ ಜಾನಪದರ ಮಾತುಗಳು ಬೆರೆತು ಶ್ರೀಚಾಮರಾಜೇಶ್ವರ ರಥೋತ್ಸವದ ವೈಭೋಗ ಲಕ್ಷಾಂತರ ಮನಗಳಲ್ಲಿ ನೆಲೆಗೊಂಡಿದೆ. ಸ್ಥಳೀಯ ಭಕ್ತರು ಮಾತ್ರವಲ್ಲದೆ, ವಿವಿಧ ಜಿಲ್ಲೆಗಳಿಂದ, ಪಕ್ಕದ ತಮಿಳುನಾಡಿನಿಂದಲೂ ಭಕ್ತರು ಬಂದು ರಥೋತ್ಸವದಲ್ಲಿ ಪಾಲ್ಗೊಳ್ಳುತ್ತಾರೆ.

ನಮ್ಮೂರ ತೇರು ವೈಭವ ಜೋರು:
ಪ್ರತಿ ವರ್ಷ ಶ್ರೀಚಾಮರಾಜೇಶ್ವರ ರಥೋತ್ಸವದ ವೈಭವ ಜೋರಾಗಿ ಸಾಗುತ್ತದೆ. ರಥದ ಬೀದಿಯಲ್ಲಿ ಸ್ವಾಮಿಯ ಬ್ರಹ್ಮರಥ ಸಾಗುವಾಗ, ರಥ ಎಳೆಯುವ ಯುವಕರ ಮಾರ್ಧನಿ, ಉತ್ಸವಮೂರ್ತಿಗೆ ಭಕ್ತಿ-ಭಾವದಿಂದ ಹಣ್ಣು-ಧವನ ಎಸೆಯುವ ನವಜೋಡಿಗಳು ರಥೋತ್ಸವದ ಮೆರುಗು ಹೆಚ್ಚಿಸುತ್ತದೆ. ಯುವಕ-ಯುವತಿಯರ ಹರ್ಷೋದ್ಗಾರದ ನಡುವೆ ಶ್ರೀಚಾಮರಾಜೇಶ್ವರ ರಥೋತ್ಸವ ವಿಜೃಂಭಣೆಯಿಂದ ನೆರವೇರುತ್ತಾ ಬಂದಿದೆ. ದೇವಸ್ಥಾನದ ಹಾಸುಪಾಸಿನಲ್ಲಿ ತೆರೆದಿದ್ದ ಅಂಗಡಿ ಮುಂಗಟ್ಟುಗಳಲ್ಲಿ ವ್ಯಾಪಾರ, ವಹಿವಾಟು ಜಾತ್ರೆಯಲ್ಲಿ ಜೋರಾಗಿ ನಡೆಯುತ್ತದೆ. ಪಾನಿಪುರಿ, ಗೋಬಿ ಅಂಗಡಿಗಳು, ನಗರದ ಹೋಟೆಲ್ಗಳ ಮಾಲೀಕರು ಕೂಡ ಶ್ರೀಚಾಮರಾಜೇಶ್ವರ ರಥೋತ್ಸವದಲ್ಲಿ ಉತ್ತಮ ವ್ಯಾಪಾರ ಮಾಡುತ್ತಾರೆ.
ನೂತನ ರಥ ಆಕರ್ಷಕ:
2017 ರ ಫೆಬ್ರವರಿಯಲ್ಲಿ ಕಿಡಿಗೇಡಿಯೊಬ್ಬ ಹಳೆಯ ರಥಕ್ಕೆ ಬೆಂಕಿ ಹಚ್ಚಿದ್ದ ಕಾರಣದಿಂದ ಹಾಗೂ ದೇವಾಲಯದ ಜೀರ್ಣೋದ್ಧಾರ ಹಾಗೂ ಕೋವಿಡ್ ಕಾರಣಗಳಿಂದ ರಥೋತ್ಸವ ನಡೆದಿರಲಿಲ್ಲ. ಬಳಿಕ ನೂತನ ರಥವನ್ನು ನಿರ್ಮಾಣ ಮಾಡಿ, 2022 ರಲ್ಲಿ ಜರುಗಿದ ಶ್ರೀಚಾಮರಾಜೇಶ್ವರ ರಥೋತ್ಸವಕ್ಕೆ ಮೈಸೂರಿನ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಚಾಲನೆ ನೀಡಿದ್ದರು. ಹಳೆಯ ರಥಕ್ಕೆ ಕಿಡಿಗೇಡಿಗಳು ಬೆಂಕಿ ಇಟ್ಟ ಸಂದರ್ಭದಲ್ಲಿ ಅಂದಿನ ಸ್ಥಳೀಯ ಶಾಸಕರಾಗಿದ್ದ ಸಿ.ಪುಟ್ಟರಂಗಶೆಟ್ಟಿ ಅವರು ಆಸಕ್ತಿವಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಿಂದ 1.2 ಕೋಟಿ ರೂ. ಬಿಡುಗಡೆಗೊಳಿಸಿದ್ದರು. ಬೆಂಗಳೂರಿನ ಹೆಸರಾಂತ ರಥಶಿಲ್ಪಿ ಶಿವಕುಮಾರ್ ಬಡಿಗೇರ್ ಅವರಿಂದ ನಿರ್ಮಾಣವಾದ ಶ್ರೀಚಾಮರಾಜೇಶ್ವರಸ್ವಾಮಿ ನೂತನ ರಥ ಆಕರ್ಷಕ ಕಲಾಕೃತಿಗಳಿಂದ ತುಂಬಿಕೊಂಡಿದೆ.
ಶನಿವಾರ ದಿಂದ ಶುರುವಾಗಿದೆ ಗಿರಿಜಾ ಕಲ್ಯಾಣ:
ಶ್ರೀಚಾಮರಾಜೇಶ್ವರ ದೇವಸ್ಥಾನದಲ್ಲಿ ಜೂ.14ರಿಂದ 19ವರೆಗೆ ಗಿರಿಜಾ ಕಲ್ಯಾಣ ಮಹೋತ್ಸವ ನಡೆಯಲಿದೆ. ಈ ಹಿನ್ನೆಲೆಯಲ್ಲಿ ದೇಗುಲದಲ್ಲಿ ಸಿದ್ಧತಾ ಕಾರ್ಯಗಳು ವಿಜೃಂಭಣೆಯಿಂದ ಕಂಗೊಳಿಸುತ್ತಿವೆ.
-ಶ್ರೀ ಸಾಯಿ ಎಸ್ ಮಂಜು
