
ಹೋಟೆಲ್ ಸೇರಿದ ದಿನ ರೂಮಿನಲ್ಲಿ ಅಲ್ಪ ವಿರಾಮದ ನಂತರ ಸಾಯಂಕಾಲ “ಫಂಟೆಸಿಯಾ” ಪ್ರದರ್ಶನಕ್ಕೆ ತೆರಳಿದೆವು. ಈ ಮನೋರಂಜನೆಯ ಉದ್ಯಾನವನ ಅಲ್ಲಿಯ “ಕಮಲಾ” ಪ್ರದೇಶದಲ್ಲಿ ಇದೆ. ಈ ಪ್ರದೇಶದ ಎಲ್ಲಾ, ಅಂದರೆ ರಸ್ತೆಯಿಂದ ಹಿಡಿದು ಕ್ಷೌರಿಕನ ಅಂಗಡಿಯವರಿಗು “ಕಮಲಾ” ಫಲಕಗಳಾಗಿರುತ್ತದೆ. ಆದರೇ ಈ ಕಮಲಾ ಯಾರು? ಇವನನ್ನು ತಿಳಿಯಲು ನಾವು ಈ ಮನೋರಂಜನೆಯ ಪ್ರದರ್ಶನಕ್ಕೆ ಹೋಗಲೇ ಬೇಕು. ಪ್ರದರ್ಶನಕ್ಕೆ ಮುನ್ನ ಅಲ್ಲಿಯ ಕಾರಂಜಿಗಳು, ಜಲಪಾತಗಳು, ಮನ ತಣಿಸುವ ಬೊಂಬೆಗಳು, ಹೂವಿನ ಅಲಂಕಾರಗಳು, ಗುಡ್ಡ ಬೆಟ್ಟಗಳ ನಿರ್ಮಾಣ, ಅಲ್ಲಿಯ ವಾಸ್ತುಶಿಲ್ಪ ಕಟ್ಟಡಗಳು, ವಿವಿಧ ಬಣ್ಣಗಳ ಬೆಳಕಿನ ಚಿತ್ತಾರ, ಆನೆಗಳನ್ನು ಬಿಂಬಿಸುವ ಮತ್ತು ತರತರಹದ ಆನೆ ಭಂಗಿಗಳ ಕಂಬಗಳನ್ನು ನೋಡುತ್ತಾ ಸಾಗಿದರೆ ಕೊನೆಗೆ “ಆನೆ ದೇವಸ್ಥಾನ” ತಲುಪುತ್ತೇವೆ. ಈ ದೇವಸ್ಥಾನದ ಒಳಗೆ ಸುಮಾರು ಮೂರು ಸಾವಿರ ಪ್ರವಾಸಿಗರು ಕೂರುವ ಪ್ರಾಂಗಣವಿದೆ. ಇದರಲ್ಲಿ ಬೃಹತ್ತಾದ ಸಭಾಮಂಟಪವಿದೆ. ಈ ಪ್ರಾಂಗಣದ ಒಳಗೆ ನಮ್ಮ ಮೊಬೈಲ್ ಫೋನ್ ತೆಗೆದುಕೊಂಡು ಹೋಗುವ ಹಾಗಿಲ್ಲ. ಎಲ್ಲವೂ ಸ್ವಚ್ಛ ಮತ್ತು ತುಂಬ ಅಚ್ಚುಕಟ್ಟಾಗಿ ಇಲ್ಲಿಯ ನಗೆ ಬೀರುವ ಮೇಲ್ವಿಚಾರಕರು ನೋಡಿಕೊಳ್ಳುತ್ತಾರೆ. ಸುಮಾರು ಒಂದು ಗಂಟೆಗಳ ಕಾಲ ನೆಡೆಯುವ ಈ ಮನರಂಜನೆಯ ಪ್ರದರ್ಶನ ಅದ್ಭುತ ಹಾಗೂ ವಿಸ್ಮಯ.
ಇಡೀ ಪ್ರದರ್ಶನದ ಪಾತ್ರಧಾರಿಯೇ ರಾಜಕುಮಾರ “ಕಮಲ”. ಪ್ರದರ್ಶನದ ಸಾರ ಇಲ್ಲಿಯ ಪೌರಾಣಿಕ ಕತೆ, ಸಂಸ್ಕೃತಿ, ಪರಂಪರೆಗಳ ಸಂಗಮ. ಈ ಪ್ರದರ್ಶನ ವೇಳೆ ನಾವು ಮೈ ಮರೆಯುವ ಹಾಗಿಲ್ಲ. ಕ್ಷಣ ಕ್ಷಣವೂ ರೋಮಾಂಚಕ ಡೊಂಬರಾಟಗಳಿಂದ ಕೂಡಿದ್ದಾಗಿರುತ್ತದೆ. ಇಲ್ಲಿಯ ನೃತ್ಯ, ಜೀವನ, ಕೃಷಿ, ಪ್ರೇಮ, ಸಲ್ಲಾಪ, ತಾವು ಮತ್ತು ತಮ್ಮ ಪ್ರಾಣಿಗಳ ಒಡನಾಟ, ಅದರಲ್ಲೂ ಆನೆಗಳ ಸಂಬಂಧ ಎಲ್ಲವನ್ನೂ ತೋರಿಸುತ್ತಾ ಹೋಗುತ್ತಾರೆ. ಇಲ್ಲಿಯ ಪೌರಾಣಿಕ ಕತೆಗಳಲ್ಲೂ ಸಹ ಶಾಪ ಹಾಗು ಶಾಪ ವಿಮೋಚನೆಗಳು ನಮ್ಮ ಪೌರಾಣಿಕ ಕತೆಗಳನ್ನೆ ಹೋಲುತ್ತದೆ.
ರಾಜಕುಮಾರನ ಶಾಪ ವಿಮೋಚನೆ ಆದ ನಂತರ ಸುಂದರವಾದ ಹುಡಿಗಿಯೊಬ್ಬಳು ಆತನ ಪ್ರೇಮಾಂಕುಶಕ್ಕೆ ಬಲಿಯಾಗುತ್ತಾಳೆ. ಈಕೆಯನ್ನು ದೃಷ್ಟಕೂಟ ಬಂಧಿಸುತ್ತವೆ. ರಾಜಕುಮಾರ ತನ್ನ ಆನೆಗಳ ಜೊತೆಗೂಡಿ ದೃಷ್ಟಶಕ್ತಿಗಳ ಬಣವನ್ನು ಸಂಹಾರ ಮಾಡುತ್ತಾನೆ. ಒಟ್ಟಾರೆ ನೃತ್ಯ ರೂಪಕ, ಡೊಂಬರಾಟ, ಇಂದ್ರಜಾಲ ಮತ್ತು ಬಾಣಬಿರುಸುವಿನ ಕಲೆ ಅವಿಸ್ಮರಣೀಯ. ಕಣ್ಣು ಮಿಟಿಕಿಸೊದರಳಗೆ ಆನೆ ಮಾಯ ಮತ್ತು ತೋಗು ಕೋಲುಗಳ ಮೇಲೆ ಮಾಡುವ ಆಕ್ರೋಬ್ಯಾಟಿಕ್ಸ ಮೈ ರೋಮಾಂಚನವಾಗಿಸುತ್ತೆ. ಕೊನೆಗೆ ಪ್ರೇಮ ಗೆದ್ದು ಸಂಸಾರ ನಿರಂತರವಾಗಿ ನೆಲೆ ಊರುತ್ತೆನ್ನುವುದೇ ಈ ಕತೆಯ ಮೂಲ ಸಂದೇಶ. ಪಾತ್ರದಾರಿಗಳ ಸಂಖ್ಯೆ ಸುಮಾರು ಇನ್ನೂರಕ್ಕೂ ಅಧಿಕ. ಪ್ರವಾಸಿಗರಿಗೆ ಒಂದು ಗಂಟೆಯ ಸಮಯ ಹೋಗುವುದೇ ತಿಳಿಯುವುದಿಲ್ಲ.
ಫುಕೆಟ್, ಥೈಲಾಂಡ ದೇಶದ ದಕ್ಷಿಣ ತುದಿಯ ಚಿಕ್ಕ ದ್ವೀಪ. ಕ್ರಾಬಿ ಇಲ್ಲಿಯ ಒಂದು ಪ್ರಾಂತ್ಯ. ಈ ಪ್ರದೇಶವು ಕಡಲತೀರದ ಪ್ರವಾಸಿಗರಿಗೆ ನೆಚ್ಚಿನ ಸ್ಥಾನ. ಭಾರತ, ಚೀನ, ಆಸ್ಟ್ರೇಲಿಯ, ಈರೋಪ್, ರಷ್ಯ ಮತ್ತು ಮಧ್ಯ ಅರಬ್ ದೇಶಗಳಿಂದ ಪ್ರವಾಸಿಗರ ದಂಡೇ ರಜಾ ದಿನಗಳಲ್ಲಿ ಇಲ್ಲಿಗೆ ಬರುತ್ತಾರೆ. ಈ ದ್ವೀಪದಲ್ಲಿ ಅಭಿ ವ್ಯಕ್ತಿ ಸ್ವಾತಂತ್ರ್ಯ ಅತಿ ಹೆಚ್ಚು. ಯಾವುದೇ ನಿಬಂಧನೆಗಳು ಇಲ್ಲ. ಹೀಗಾಗಿ ಹೆಂಗೆಳೆಯರು ತುಂಡು ಉಡಿಗೆಯಲ್ಲೇ ನೆಡೆದಾಡುತ್ತಿರುತ್ತಾರೆ. ಕೆಲವು ಮಡಿವಂತ ಪ್ರವಾಸಿಗರಿಗೆ ಕಸಿವಿಸಿ ಆಗಬಹುದು. ಇಲ್ಲಿಯ ಸಮುದ್ರ “ಇಂಡಿಯನ್ ಓಷನ್”. ಸೂರ್ಯನ ತಾಪ ಮತ್ತು ಸಕೆಗೆ ಸಮುದ್ರ ಸ್ನಾನ ಹಿತಕರ ಹಾಗು ಚರ್ಮ ಸಂಸ್ಕರಣೆಗೆ ಹೇಳಿ ಮಾಡಿಸಿದಂತ ಸ್ಥಳ. ಈ ತಿಂಗಳುಗಳಲ್ಲಿ ಎಲ್ಲಾ ಕಡಲು ತೀರಗಳು ಪ್ರವಾಸಿಗರಿಂದ ಭರ್ತಿ. ಇಲ್ಲಿಯ ಜನ ಸಂಖ್ಯೆ ಸುಮಾರು ಮೂವತ್ತು ಲಕ್ಷ. ಇಲ್ಲಿಯ ಶಿಕ್ಷಣ ಹನ್ನೆರಡನೇ ತರಗತಿಯವರಿಗೆ ಬಿಟ್ಟಿ. ಕಾಲೇಜ್ ಬಲು ದುಭಾರಿ. ಇಲ್ಲಿಯ ವ್ಯಾಪಾರದಲ್ಲಿ ಹುಡುಗಿಯರ ಮತ್ತು ಹೆಂಗಸರದೇ ಪ್ರಾಬಲ್ಯ.
ಈ ದೇಶದ ಹದಿಯರೆಯರು ಕಾಲೇಜ್ ಮೆಟ್ಟಲೇ ಹತ್ತುವುದಿಲ್ಲ. ಇವರಿಗೆ ಸರ್ಕಾರ ಪ್ರವಾಸಿಗರ ಜೊತೆ ಹೇಗೆ ನೆಡೆದುಕೊಳ್ಳಬೇಕು ಮತ್ತು ಅಲ್ಪ ಇಂಗ್ಲಿಷ್ನಲ್ಲಿ ಹೇಗೆ ಮಾತಾಡಬೇಕು ಎಂಬುದನ್ನು ಕಲಿಸುತ್ತಾರೆ. ಕಲಿತವರನ್ನು ಕೆಲಸಕ್ಕೆ ತೆಗೆದುಕೊಳ್ಳುತ್ತಾರೆ. ಇಲ್ಲಿಯ ಸರ್ಕಾರ ಹದಿಹರೆಯ ಸ್ಥಳೀಯರಿಗೆ ಕೆಲಸದ ಅವಕಾಶ ನೀಡಿ ಅವರವರ ಬದುಕಿಗೆ ದಾರಿ ಮಾಡಿ ಕೊಡುತ್ತಾರೆ.
ಥೈಲಾಂಡಿನ ಆರ್ಥಿಕತೆ ನಮ್ಮ ಭಾರತಕ್ಕಿಂತ ಮೇಲ್ವರ್ಗದಲ್ಲಿ ಇದೆ. ಇಲ್ಲಿಯ ಚಲಾವಣೆಯ ನಾಣ್ಯ “ಬಾತ್”. ಒಂದು ಬಾತ್ ಎರಡುವರೆ ರುಪಾಯಿಗೆ ಸಮ. 1997 ನೆ ಇಸವಿ ಹಿಂದೆ ಈ ದೇಶವು ಆರ್ಥಿಕವಾಗಿ ಬಹಳ ಮುಂಚೂಣಿಯಲ್ಲಿ ಇತ್ತು. ಇದನ್ನು ಸಹಿಸದ “ಜಾರ್ಜ್ ಸೋರೋಸ್”, ಅಮೇರಿಕಾದ ಬಂಡವಾಳ ಶಾಹಿ, ಈ ರಾಷ್ಟ್ರದ ಅತಿ ಹೆಚ್ಚು ಬಾತ್ ಖರೀದಿಸಿ ಹಣದುಬ್ಬರವನ್ನು ಮಾಡಿದ. ಇಡೀ ಏಶಿಯಾ ದೇಶಗಳನ್ನು ಹಾಳುಗೆಡುವಿದ. ಕೊರೋನ 19 ರ ವರ್ಷದಲ್ಲಿ ಥೈಲಾಂಡ ನೆಲ ಕಚ್ಚಿತ್ತು. ಈಗ ಸ್ವಲ್ಪ ಮಟ್ಟಿಗೆ ಚೇತರಿಸಿಕೊಳ್ಳುತ್ತಿದೆ. ಬಹುಪಾಲು ಥೈಲಾಂಡಿನ ಆರ್ಥಿಕತೆ ಪ್ರವಾಸೋದ್ಯಮದಿಂದ ಆಗುವುದು. ನಮ್ಮ ಭಾರತದಂತೆ ಇಲ್ಲಿಯವರಿಗೆ ಚಿನ್ನ ಖರೀದಿಸುವುದೆಂದರೆ ಬಲು ಪ್ರೀತಿ. ಅಲ್ಲಿಯ ಸರ್ಕಾರ ಗಣಿಗಾರಿಕೆಯಿಂದ ನೈಸರ್ಗಿಕ ಹರಳು, ಅದರಲ್ಲೂ ಸಫೈರ್ ಮತ್ತು ರೂಬಿಗಳನ್ನು ತೆಗೆದು ಸಂಸ್ಕರಣೆ ಮಾಡಿ, ಇವುಗಳನ್ನು ಮಾರಿ ತನ್ನ ಬೊಕ್ಕಸಕ್ಕೆ ಆದಾಯ ತರುತ್ತಿದೆ
ಇಲ್ಲಿಯ ಭಾಷೆ ಕೇಳುವವರಿಗೆ ಕರ್ಕಶವಾಗಿ ಕೇಳುತ್ತದೆ. ಇಡೀ ದಕ್ಷಿಣ ಏಶಿಯಾದ ದೇಶಗಳ ಭಾಷೆಗಳಲ್ಲಿ ವ್ಯಂಜನ ಅಕ್ಷರಗಳೇ ಪ್ರಧಾನ. ಸ್ವರ ಅಕ್ಷರಗಳು ಇರುವುದಿಲ್ಲ. ಸಂಯೋಜಿಸಿದ ಹಾಡುಗಳನ್ನು ಕೇಳಲು ಚಂದವಾಗಿರುತ್ತದೆ. ಇವರ ಪೌರಾಣಿಕ ನೃತ್ಯಗಳು ಬಹುತೇಕ ರಾಮಾಯಣ ಮತ್ತು ಮಹಾಭಾರತದ ಸಾರಗಳಿಂದ ಮತ್ತು ವಿಷಯಗಳಿಂದ ಕೂಡಿರುತ್ತದೆ.
ಮುಂದುವರೆಯುವುದು…
– ಡಾ|| ಎ.ಎಂ. ನಾಗೇಶ್

Clearly explained the life style of Thailand. It is very helpful for the tourists.