ಇವತ್ತಿನ ದಿನಗಳಲ್ಲಿ ಮಧ್ಯವರ್ತಿಗಳಿಲ್ಲದೆ ಯಾವುದೇ ಕೆಲಸಗಳೂ ಕೂಡ ಸಾಧ್ಯವಾಗುವುದೇ ಇಲ್ಲ ಎಂಬಷ್ಟು ಮಟ್ಟಿಗೆ ಸಮಾಜದಲ್ಲಿ ಜನ ಸಾಮಾನ್ಯರು ಅವರುಗಳ ಮೇಲೆ ಅವಲಂಬಿತರಾಗಿ ಬಿಟ್ಟಿದ್ದಾರೆ.
ಮದುವೆ ಮಾಡಬೇಕಾ..?? ನೋಡಿ..!! ಇಲ್ಲೂ ಕೂಡ ವರಸಾಮ್ಯ ನೋಡಲು , ಸಂಬಂಧ ಕುದುರಿಸಲು ಮಧ್ಯವರ್ತಿಗಳ ಮೂಗು ತೂರಿಸುವಿಕೆ . ಏನೇ ಸಮಸ್ಯೆ ಮಧ್ಯದಲ್ಲಿ ( ಸಂಸಾರದಲ್ಲಿ ) ಬಂದರೂ ಅವರೇ ಸ್ವತಃ ಮುಂದೆ ನಿಂತು ಬಗೆ ಹರಿಸುವಿಕೆ ಅದಕ್ಕೆ ಇಂತಿಷ್ಟು ಎಂಬ ಹಣದ ಬೇಡಿಕೆ.
ಇಂತಹ ಸಾಕಷ್ಟು ಉದಾಹರಣೆಗಳು ನಮ್ಮ ಸುತ್ತ ಮುತ್ತಲೂ ಹರಡಿಕೊಂಡಿವೆ. ಮನೆ ಕೊಳ್ಳಬೇಕೇ..?? ತರಕಾರಿ ಕೊಳ್ಳಬೇಕೇ..?? ಅಕ್ಕಿ ಬೇಳೆ ದಿನ ನಿತ್ಯದ ಸಾಮಗ್ರಿಗಳ ಮಧ್ಯದಲ್ಲೂ ಇವರುಗಳ ಮಧ್ಯಸ್ಥಿಕೆ ಅನಿವಾರ್ಯ ಎಂಬಷ್ಟರ ಮಟ್ಟಿಗೆ ಆಗಿದೆ. ಅಂದರೆ ಅವರುಗಳಿಲ್ಲದೆ ನಾವುಗಳಿಲ್ಲ ಎಂಬಷ್ಟು ಅವಲಂಬಿಕೆ. ದಿಕ್ಕುಗಾಣದ ಪರಿಸ್ಥಿತಿ!! ಹೌದೇ..?? ಅವರ ಅವಲಂಬಿಕೆ ಎಷ್ಟು ಸರಿ..? ನಮ್ಮಲ್ಲಿ ನಾವೇ ಒಮ್ಮೆ ಪ್ರಶ್ನಿಸಿಕೊಳ್ಳೋಣ. ಉತ್ತರ ತಂತಾನೇ ಸಿಗುತ್ತದೆ.
ಯಾರದೋ ಮನೆಯಲ್ಲಿ ಗಂಡ ಹೆಂಡಿರ ಮಧ್ಯೆ ಉಂಟಾದ ಸಣ್ಣ ಕಲಹ. ಈಗ ಊರೆಲ್ಲಾ ಹಬ್ಬಿ (ಸಿ ) ಅವರು ಮತ್ತೆ ಒಂದಾಗಿ ಸಂಸಾರ ಮಾಡಲು ಸಾಧ್ಯವೇ ಆಗುವುದಿಲ್ಲ ಎಂದು ಮನದಲ್ಲೇ ಕೊರಗಿ ಬೇರೆ ಯಾವುದೇ ದಾರಿ ಕಾಣದಾದಾಗ ಇಲ್ಲಿ ಮಧ್ಯವರ್ತಿಗಳ ಪ್ರವೇಶವಾಗುತ್ತದೆ. ಅವರು ಸಾಕಷ್ಟು ಹಣ ಪಡೆದು ಅವರನ್ನು ಒಂದಾಗಿಸಲೂ ಬಹುದು ಅಥವಾ ಬೇರೆ ಮಾಡಲೂ ಬಹುದು. ಅವರಿಗೆ ಇಲ್ಲಿ ಬಾಂಧವ್ಯ ಮುಖ್ಯವಾಗಿರುವುದಿಲ್ಲ. ನ್ಯಾಯ ಕಂಡು ಬರುವುದಿಲ್ಲ. ಬರಿದೇ ಹಣ ಪ್ರಮುಖವಾಗಿರುತ್ತದೆ. ಯಾರು ಎಷ್ಟು ಕೊಡುತ್ತಾರೆ ಎಂಬುದರ ಮೇಲೆ ಅವಲಂಬಿತರಾಗಿರುತ್ತಾರೆ. ಕೋರ್ಟ್ ಮೆಟ್ಟಿಲೇರಿದ ಎಷ್ಟೋ ಸಮಸ್ಯೆಗಳನ್ನು ಇವರುಗಳು ಕಾದಿದ್ದು ಹೊಂಚು ಹಾಕಿ ಅವರುಗಳನ್ನು ಮಾನಸಿಕವಾಗಿ ತಮಗೆ ಬೇಕಾದಂತೆ ತಿರುಗಿಸಿ ಮೊದಲೇ ಅವರಿಗೆ ಕೋರ್ಟ್ ಗಾಗಿ ಅಲೆದೂ ಅಲೆದೂ ಹಣ ಕಳೆದುಕೊಂಡಿರುವುದರಿಂದ ಇಲ್ಲಿ ಸುಲಭವಾಗಿ ಮನ ಪರಿವರ್ತನೆಯಾಗಿ ಬಿಡುತ್ತಾರೆ. ಅವರಲ್ಲಿ ಹಣ ಪೀಕಿ ತಮಗೆ ತೃಪ್ತಿಯಾದಂತೆ ನ್ಯಾಯಕ್ಕೆ ಎಳ್ಳು ನೀರು ಬಿಟ್ಟು ಹೃದಯಕ್ಕೆ ಬೀಗ ಜಡಿದು ಸರಿ ಮಾಡಿದೆ ( ಅವರ ಅನಿಸಿಕೆ ) ಎಂದು ಹೊರಟು ಬಿಡುತ್ತಾರೆ. ಸಾಲ ಸೋಲ ಮಾಡಿದ ಜನ ಸಾಮಾನ್ಯರು ಸಿಕ್ಕಂತಹ ಆ ಕ್ಷಣದ ಆತಂಕಕ್ಕೆ ತೆರೆ ಹಾಕಿ ನೆಮ್ಮದಿ ಕಂಡು ಕೊಳ್ಳುತ್ತಾರೆ. ನಂತರ ಅದೇ ಮುಂದುವರಿಕೆ. ಮುಂದುವರಿಯಲು ಕೂಡಾ ಇವರುಗಳದೇ ಒಗ್ಗರಣೆ. ಅರಿಯದ ಜನ ಸಾಮಾನ್ಯರ ಜೇಬಿಗೆ ಕತ್ತರಿ , ಮಾನಸಿಕ ನೆಮ್ಮದಿಯ ಅಡ ಇಡುವಿಕೆ.
ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ ಅವರುಗಳು ಸಮಾಜದ ಗಣ್ಯರ ಜೊತೆ ಒಡನಾಟ ಇರುವಂತೆ ವರ್ತಿಸಿ ಜನ ಸಾಮಾನ್ಯರಲ್ಲಿ ಹಣ ಲೂಟಿ ಮಾಡುವುದು ಇವರ ಹವ್ಯಾಸಗಳಲ್ಲಿ ಒಂದು. ಇದನ್ನು ಮುಗ್ಧ ಜನತೆ ನಂಬಿ ಬಿಡುವರು. ಹಣ ಇಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ.
ಮತ್ತೊಂದು ಉದಾಹರಣೆ ನೋಡುವುದಾದರೆ ರೈತ ವರ್ಷ ಪೂರ್ತಿ ಕಷ್ಟ ಪಟ್ಟು ಬೆಳೆದ ಬೆಳೆಯನ್ನು ಸುಲಭವಾಗಿ ವಂಚಿಸಿ ಅತ್ಯಂತ ಕಡಿಮೆ ಬೆಲೆಗೆ ಕೊಂಡು ನಂತರ ಹೆಚ್ಚಿನ ಮೊತ್ತಕ್ಕೆ ಮಾರಾಟ ಮಾಡುವುದು ಮಧ್ಯವರ್ತಿಗಳ ಕೆಲಸ. ಇಲ್ಲಿ ಕೈ ಬದಲಾಯಿಸುವಿಕೆ ಮಾತ್ರವೇ ಮಾಡಿರುತ್ತಾರೆ. ಯಾವುದೇ ರೀತಿಯ ಕಷ್ಟ ಪಟ್ಟಿರುವುದಿಲ್ಲ. ಹಣ ಸಿಗುವುದೇ ಇಂತಹವರಿಗೆ. ಪಾಪ !! ಬಡ ರೈತ ಸಿಕ್ಕಷ್ಟಕ್ಕೇ ಸಂತುಷ್ಟನಾಗಬೇಕಾಗಿದೆ.
ಯೋಚಿಸಿ!! ಇಂತಹ ಮಧ್ಯವರ್ತಿಗಳಿಂದ ಜನ ಸಾಮಾನ್ಯರು ಎಚ್ಚೆತ್ತು ದೂರ ಸರಿದು ಅವರ ಸಮಸ್ಯೆಗಳನ್ನು ಅವರೇ ಪರಿ ಹರಿಸಿಕೊಳ್ಳಬೇಕು.
ವಾಣಿಮಹೇಶ್
PH:7975353693
ಹಾಸನ

