ಯೋಗದ ಮಹತ್ವವನ್ನು ಪ್ರಪಂಚಕ್ಕೆ ಸಾರುವುದಕ್ಕಾಗಿ ಪ್ರತಿ ವರ್ಷ ಜೂನ್ 21 ರಂದು ಯೋಗ ದಿನಾಚರಣೆಯನ್ನು ಆಚರಿಸಲಾಗುವುದು. ಯೋಗ ಎನ್ನುವುದು ನಿನ್ನೆ, ಮೊನ್ನೆ ಹುಟ್ಟಿಕೊಂಡ ಸಾಧನೆಯಲ್ಲ. ಇದಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಯೋಗ ಹಿಂದೂ ಧರ್ಮದೊಂದಿಗೆ ಸಂಬಂಧವನ್ನು ಹೊಂದಿದೆ.
ಯೋಗಕ್ಕೂ ಹಿಂದೂ ಧರ್ಮಕ್ಕೂ ಇರುವ ಸಂಬಂಧವೇನು.? ಯೋಗ ಹಿಂದೂ ಧರ್ಮದಿಂದ ಹುಟ್ಟಿಕೊಂಡಿದ್ದು ಹೇಗೆ.?
ಪ್ರತೀ ವರ್ಷದಂತೆ ಈ ವರ್ಷವೂ ಯೋಗ ದಿನಾಚರಣೆಯನ್ನು ಆಚರಿಸಲಾಗುವುದು. 2025ರ ಯೋಗ ದಿನಾಚರಣೆಯನ್ನು ಜೂನ್ 21 ರಂದು ಶನಿವಾರದ ದಿನದಂದು ಆಚರಿಸಲಾಗುತ್ತಿದೆ. ಯೋಗವು ಶಿವನೊಂದಿಗೆ ಹುಟ್ಟಿಕೊಂಡಿತು ಎಂಬುದು ಧಾರ್ಮಿಕ ನಂಬಿಕೆಯಾಗಿದೆ. ಶಿವನಿಂದಾಗಿ ಸಪ್ತ ಋಷಿಗಳು ಯೋಗವನ್ನು ಅನುಸರಿಸಿಕೊಂಡು ಬಂದರು. ಪ್ರಸ್ತುತ ಪ್ರತಿಯೊಬ್ಬರೂ ಯೋಗವನ್ನು ತಮ್ಮ ಜೀವನದ ಒಂದು ಭಾಗವನ್ನಾಗಿ ಮಾಡಿಕೊಂಡಿದ್ದಾರೆ. ಸಾಮಾನ್ಯವಾಗಿ ನಾವು ಯೋಗವನ್ನು ಉತ್ತಮ ಆರೋಗ್ಯಕ್ಕಾಗಿ, ದೀರ್ಘಾಯುಷ್ಯಕ್ಕಾಗಿ ಮಾಡುತ್ತಿದ್ದೇವೆ. ಆದರೆ, ಹಿಂದೆಲ್ಲಾ ಜನರು ದೇವರನ್ನು ಧ್ಯಾನಿಸುವುದಕ್ಕಾಗಿ ಯೋಗವನ್ನು ಪಾಲಿಸುತ್ತಿದ್ದಾರೆ. ಸನಾತನ ಧರ್ಮದೊಂದಿಗೆ ಸಂಬಂಧವನ್ನು ಹೊಂದಿರುವ ಯೋಗವು ಸಾವಿರಾರು ವರ್ಷಗಳ ಐತೀಹ್ಯವನ್ನು ಹೊಂದಿದೆ.ಸನಾತನ ಧರ್ಮದಲ್ಲಿ ಯೋಗ 
ಯೋಗದಲ್ಲಿ ಅನೇಕ ವಿಧಗಳಿವೆ, ಪ್ರತಿಯೊಬ್ಬರು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಯೋಗವನ್ನು ಅನುಸರಿಸುತ್ತಾರೆ ಮತ್ತು ಅದನ್ನು ವ್ಯಾಖ್ಯಾನಿಸುತ್ತಾರೆ. ಋಷಿ – ಮುನಿಗಳು ಕೂಡ ಯೋಗದ ಮಹತ್ವವನ್ನು, ಯೋಗದ ವಿಧಗಳನ್ನು ಸಾಕಷ್ಟು ಬಾರಿ ವಿವರಿಸಿದ್ದಾರೆ. ವ್ಯಾಸರು ಸಮಾಧಿಯನ್ನೇ ಯೋಗವೆಂದು ಹೇಳಿದರೆ, ಪತಂಜಲಿ ಮಹರ್ಷಿಗಳು ಯೋಗವನ್ನು ಮನಸ್ಸನ್ನು ನಿಯಂತ್ರಿಸುವ ವಿಧಾನವೇ ಯೋಗ. ಯೋಗವನ್ನು ಮಾಡುವ ಮೂಲಕ ಮನುಷ್ಯನು ಧ್ಯಾನ, ಸಮಾಧಿ ಮತ್ತು ಮೋಕ್ಷವನ್ನು ತಲುಪುತ್ತಾನೆ ಎಂದು ಹೇಳಲಾಗಿದೆ.
ಶಿವ ಮತ್ತು ಯೋಗ 
ಧಾರ್ಮಿಕ ದೃಷ್ಟಿಕೋನದಿಂದ ನಾವು ನೋಡುವುದಾದರೆ, ಯೋಗವು ಭಗವಾನ್ ಶಿವನೊಂದಿಗೆ ಸಂಬಂಧವನ್ನು ಹೊಂದಿದೆ. ಏಕೆಂದರೆ ಯೋಗಕ್ಕೆ ಹೆಚ್ಚು ಮಹತ್ವವನ್ನು ನೀಡಿದವರಲ್ಲಿ ಶಿವನು ಪ್ರಮುಖನಾಗಿದ್ದಾನೆ. ಹಾಗೂ ಅನೇಕ ಧಾರ್ಮಿಕ ಗ್ರಂಥಗಳಲ್ಲಿ ಶಿವನಿಂದಲೇ ಯೋಗ ಸೃಷ್ಟಿಯಾಯಿತು ಎಂದು ಕೂಡ ಹೇಳಲಾಗಿದೆ. ಈ ಕಾರಣಕ್ಕಾಗಿ ನಾವು ಶಿವನನ್ನು ಆದಿಯೋಗಿ ಎಂದು ಕರೆಯುತ್ತೇವೆ. ಬ್ರಹ್ಮಾಂಡಕ್ಕೆ ಯೋಗವನ್ನು ಮೊದಲು ಪರಿಚಯಿಸಿದವನೇ ಶಿವ.

ಶಿವನು ಆದಿಯೋಗಿ ರೂಪದಲ್ಲಿ ಸಾವಿರಾರು ವರ್ಷಗಳ ಹಿಂದೆ ಕಾಣಿಸಿಕೊಂಡಿದ್ದನು. ಶಿವನು ಈ ರೂಪದಲ್ಲಿ ಹಿಮಾಲಯದಲ್ಲಿ ಪ್ರತ್ಯಕ್ಷನಾದನು. ಶಿವನು ಆದಿಯೋಗಿ ರೂಪದಲ್ಲಿ ಹಿಮಾಲಯದ ಮೇಲೆ ಆನಂದಪರವಶನಾಗಿ ನೃತ್ಯ ಮಾಡುತ್ತಿದ್ದನು ಮತ್ತು ಕೆಲವೊಮ್ಮೆ ಅವನು ಇದ್ದಕ್ಕಿದ್ದಂತೆ ಶಾಂತನಾಗುತ್ತಿದ್ದನು. ಧ್ಯಾನದಲ್ಲಿದ್ದ ಶಿವನು ಆಗಾಗೆ ತನ್ನ ಕಣ್ಣೀರಿನ ಮೂಲಕ ಬ್ರಹ್ಮಾಂಡವನ್ನು ಕಾಯುತ್ತಿದ್ದೇನೆ ಎಂಬುದನ್ನು ಸೂಚಿಸುತ್ತಿದ್ದನು. ಸಪ್ತಋಷಿಗಳು ಶಿವನ ಸಾಧನೆಯ ಅನುಭವವನ್ನು ಪಡೆದುಕೊಳ್ಳಲು ಬಯಸಿದರು.
ಶಿವನಿಂದ ಯೋಗವನ್ನು ಕಲಿತ ಋಷಿಗಳು
ಶಿವನ ಬಳಿ ಅವನ ಸಾಧನೆಯನ್ನು ಕಲಿತುಕೊಳ್ಳುವ ಮನದಾಸೆಯನ್ನು ಹೊರಹಾಕಿದವರೇ ಸಪ್ತ ಋಷಿಗಳು(ಗೌತಮ, ಅತ್ರಿ, ವಶಿಷ್ಠ, ಕಶ್ಯಪ, ಭಾರದ್ವಾಜ, ವಿಶ್ವಾಮಿತ್ರ ಮತ್ತು ಜಮದಗ್ನಿ). ಆದಿಯೋಗ ಅವರ ಆಸೆಗೆ ಒಪ್ಪಿಗೆಯನ್ನು ಸೂಚಿಸಿ, ಸಪ್ತ ಋಷಿಗಳಿಗೆ ಮೊದಲು ಜ್ಞಾನಯೋಗ, ಭಕ್ತಿಯೋಗ, ಕರ್ಮಯೋಗ ಮತ್ತು ಕ್ರಿಯಾಯೋಗದ ಜ್ಞಾನವನ್ನು ನೀಡಿದನು. ಈ ಮೂಲಕ ಶಿವನು ಸಪ್ತ ಋಷಿಗಳಿಗೆ ಯೋಗವನ್ನು ಕಲಿಸಿಕೊಟ್ಟನು. ನಂತರ ಈ ಸಪ್ತಋಷಿಗಳು ಯೋಗದ ಜ್ಞಾನವನ್ನು ಪ್ರಪಂಚದಾದ್ಯಂತ ಹರಡಿದರು.
ಯೋಗ ದಿನಾಚರಣೆಯನ್ನೇಕೆ ಆಚರಿಸುತ್ತಾರೆ.?
ಧಾರ್ಮಿಕ ನಂಬಿಕೆಗಳ ಪ್ರಕಾರ, ಇಂದು ಯೋಗವೆನ್ನುವುದು ಪ್ರಪಂಚದಾದ್ಯಂತ ಹರಡಿಕೊಂಡಿದೆ ಎಂದರೆ ಅದುವೇ ಈ ಸಪ್ತ ಋಷಿಗಳಿಂದ ಎಂದು ಹೇಳಲಾಗುತ್ತದೆ. ಅನೇಕರು ಯೋಗದ ಪ್ರಯೋಜನವನ್ನು ತಿಳಿದುಕೊಂಡು ಪಾಲಿಸುತ್ತಿದ್ದಾರೆ. ಹಾಗೂ ಈ ಯೋಗದ ಮಹತ್ವವನ್ನು ಮತ್ತಷ್ಟು ಹೆಚ್ಚಿಸುವುದಕ್ಕಾಗಿ ಪ್ರತಿ ವರ್ಷ ಜೂನ್ 21 ರಂದು ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.
