ನನ್ನ ಹೆಸರು ನೈದಿಲೆ, ನಾನು ಎಂ ಬಿ ಬಿ ಎಸ್ ನ ವಿದ್ಯಾರ್ಥಿಯಾಗಿದ್ದೇನೆ , ಕೊನೆಯ ವರ್ಷದ ಇಂಟೆನ್ ಶಿಪ್ ನಲ್ಲಿ ನಾವೆಲ್ಲರೂ ಕೆಲಸ ಮಾಡುತ್ತಿದ್ದೆವು , ಹಿರಿಯ ವೈದ್ಯಾಧಿಕಾರಿಗಳು ಹೇಳಿದ ರೀತಿ ಮತ್ತು ಅವರು ತೋರಿಸುತ್ತಿದ್ದ ಮಾರ್ಗದರ್ಶನದಲ್ಲಿ ಕೆಲಸ ಕಲಿಯುವುದೇ ನಮ್ಮೆಲ್ಲರ ಧ್ಯೇಯವಾಗಿತ್ತು, ರೋಗಿಗಳ ಜೊತೆ ಯಾವುದೇ ಕಾರಣಕ್ಕೂ ಗೆಳೆತನ ಬೆಳೆಸುವುದಾಗಲಿ ಅಥವಾ ಭಾವೋದ್ವೇಗಕ್ಕೆ ಒಳಗಾಗುವುದಾಗಲಿ ಮಾಡಬಾರದು ಎಂಬುದು ಅವರ ಕಟ್ಟುನಿಟ್ಟಿನ ಸೂಚನೆಯಾಗಿತ್ತು.
ಆದರೆ ನಾನು ತುಂಬಾ ಭಾವನಾತ್ಮಕ ಹುಡುಗಿಯಾಗಿದ್ದೆ, ಅಪ್ಪ ಮತ್ತು ಅಮ್ಮಳು ಕೂಡ ನನ್ನನ್ನು ಹಾಗೆಯೇ ಬೆಳೆಸಿದ್ದರು, ಯಾವುದೇ ವ್ಯಕ್ತಿಗಳನ್ನು ನೋಡಿದ ಕ್ಷಣ ಅವರ ಜೀವನದ ಕಥೆಗಳನ್ನು ಕೇಳಬೇಕು ಅವರ ಕಷ್ಟ ಸುಖಗಳನ್ನು ಆಲಿಸಬೇಕು ಎಂಬುದು ನನ್ನ ಕವಿ ಹೃದಯದ ಮಿಡಿತವಾಗಿತ್ತು. ಹಾಗೆಯೇ ನಾನು ಎಲ್ಲರ ಜೊತೆ ಬೆರೆಯುತ್ತಿದ್ದೆ ,ಇದೇ ಕಾರಣಕ್ಕೆ ಹಲವಾರು ಬಾರಿ ನನ್ನ ಹಿರಿಯ ವೈದ್ಯರಿಂದ ಬೈಗುಳಗಳನ್ನು ಕೇಳಿದ್ದೇನೆ.
ಒಂದು ದಿನ ಎಂದಿನಂತೆ ರೋಗಿಗಳನ್ನು ಪರೀಕ್ಷಿಸುತ್ತಿದ್ದಾಗ ಎಂಟು ವರ್ಷದ ಆಸುಪಾಸಿನ ಮಗನನ್ನು ಪಕ್ಕದಲ್ಲಿ ಕೂರಿಸಿಕೊಂಡು ಒಬ್ಬ ತಾಯಿ ಹೊರಗಡೆ ಕುರ್ಚಿಯ ಮೇಲೆ ಕುಳಿತಿದ್ದಳು, ಅವಳ ಮುಖದಲ್ಲಿ ದುಗುಡವು ಎದ್ದು ಕಾಣುತ್ತಿತ್ತು, ಯಾರ ಜೊತೆ ತನ್ನ ಕಷ್ಟ ಸುಖಗಳನ್ನು ಹಂಚಿಕೊಳ್ಳಬೇಕು ಯಾರು ತನ್ನೆಲ್ಲಾ ಭಾವನೆಗಳಿಗೆ ಸ್ಪಂದಿಸುತ್ತಾರೆ ಎಂಬುದು ಅವಳ ಪ್ರಶ್ನೆಯಂತೆ ಮೇಲ್ನೋಟಕ್ಕೆ ಕಾಣುತ್ತಿತ್ತು.
ನಾನು ಹೋಗಿ ವಿಚಾರಿಸಿದೆ , ಆ ತಾಯಿ ನನ್ನ ಮಗನಿಗೆ ಒಂದು ವಾರದಿಂದ ಚಳಿ ಜ್ವರ ಬಿಟ್ಟು ಬಿಡದೆ ಬರುತ್ತಿದೆ ಎಂದು ಹೇಳಿದರು , ನಾನು ನನ್ನ ಹಿರಿಯ ವೈದ್ಯರ ಹತ್ತಿರ ಕರೆದುಕೊಂಡು ಹೋದೆ, ಕೂಲಂಕುಶವಾಗಿ ವಿಚಾರಿಸಿದ ಅವರು ಎಲ್ಲಾ ಪರೀಕ್ಷೆಗಳ ವರದಿಗಳು ಬರಲು ತಡವಾಗುವುದರಿಂದ ಅವರನ್ನು ಹೊರಗಡೆ ಕೂರಲು ಅವರಿಗೆ ತಿಳಿಸಿದರು.
ನನ್ನನ್ನು ಪ್ರತ್ಯೇಕವಾಗಿ ಕರೆದು ಆ ತಾಯಿ ಮತ್ತು ಮಗನನ್ನು ಪರೀಕ್ಷಿಸುವ ಸಂದರ್ಭದಲ್ಲಿ ನೀನು ಸ್ವಲ್ಪ ಜಾಗರೂಕರಾಗಿರಲು ತಿಳಿಸಿದರು, ನನಗೆ ಕುತೂಹಲ ಮತ್ತು ದುಗುಡಗಳು ಒಮ್ಮೆಲೇ ಮನಸ್ಸಿನಾಳದಲ್ಲಿ ಬಂದು ಹೋದವು.
ಮಧ್ಯಾಹ್ನದ ಮೇಲೆ ನಮ್ಮ ಸರ್ ಮನೆಗೆ ತೆರಳಿದ ನಂತರ ನಾನು ಆ ತಾಯಿಯನ್ನು ಪ್ರತ್ಯೇಕವಾಗಿ ಕರೆದು ಮಾತನಾಡಿಸಿದೆ, ಆ ತಾಯಿ ಹೇಳಿದ ಮಾತುಗಳು ನನ್ನನ್ನು ಮೂಕವಿಸ್ಪಿತಳನ್ನಾಗಿ ಮಾಡಿತು.
ಆ ತಾಯಿ ಹೇಳಿದ ಮಾತುಗಳು ಹೀಗಿತ್ತು, ನನ್ನ ಹೆಸರು ಪ್ರಮೀಳಾ , ಎಳೆಯ ವಯಸ್ಸಿನಲ್ಲೇ ಅಂದರೆ 19ನೇ ವರ್ಷ ತುಂಬುವ ಮೊದಲೇ ಅಪ್ಪ-ಅಮ್ಮ ನನಗೆ ಮದುವೆ ಮಾಡಿಕೊಟ್ಟರು , ಗಂಡ ಬೆಂಗಳೂರಿನ ಒಂದು ಖಾಸಗಿ ಕಂಪನಿಯಲ್ಲಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದರು, ಅವರ ಮನೆಯ ಕಡೆಯೂ ಬಡವರೇ, ಆದರೆ ನನ್ನ ಗಂಡ ಕಷ್ಟಪಟ್ಟು ದುಡಿಯುತ್ತಾ ಇದ್ದರು , ನನಗೆ ಯಾವುದೇ ತೊಂದರೆ ಆಗದ ರೀತಿ ಸಂಸಾರವನ್ನು ಸರಿದೂಗಿಸಿಕೊಂಡು ಹೋಗುತ್ತಿದ್ದರು.
ಮದುವೆಯಾದ ಮೂರನೇ ವರ್ಷಕ್ಕೆ ನನ್ನ ಮಗ ‘ಸೌರಭ್’ ಹುಟ್ಟಿದ , ಅವನು ಎಂತಹ ಚೈತನ್ಯ ಹೊತ್ತು ತಂದಿದ್ದನೆಂದರೆ ಹೇಳತ್ತೀರದು , ಬೆಳೆಯುತ್ತಾ ಬೆಳೆಯುತ್ತಾ ತುಂಬಾ ಬುದ್ಧಿವಂತನಾದ , ಎಂಟನೇ ವರ್ಷಕ್ಕೆ ಅವನು ನಮಗೆ ಬುದ್ಧಿ ಹೇಳುವ ಮಟ್ಟಿಗೆ ಬೆಳೆದುಬಿಟ್ಟಿದ್ದ.
ಆದರೆ ಏನು ಮಾಡುವುದು ಆರು ತಿಂಗಳ ಹಿಂದೆ ನನ್ನ ಗಂಡ ಕಾಯಿಲೆಯಿಂದ ಹಾಸಿಗೆ ಹಿಡಿದಿದ್ದರು , ಆಸ್ಪತ್ರೆಗೆ ಹೋಗಿ ಸೇರಿಸಿದಾಗ ವೈದ್ಯರು ಹೇಳುವ ಕಾಯಿಲೆಯನ್ನು ಕೇಳಿ ನಾನು ಜೀವಂತ ಶವವಾಗಿ ಹೋದೆ, ಎಂದು ಮಾತು ನಿಲ್ಲಿಸಿ ಅಳಲಾರಂಭಿಸಿದರು.
ನನ್ನ ಸರ್ ಮೊದಲೇ ಜಾಗರೂಕರಾಗಿರಿ ಇರಲು ತಿಳಿಸಿದ್ದರು ಮತ್ತು ನನಗೆ ಇವರ ಖಾಯಿಲೆಯ ನಿಗೂಢ ಪರಿಕ್ಷೆಗಳ ವರದಿಯಿಂದ ಆಗಲೇ ತಿಳಿದುಹೋಗಿತ್ತು, ಆದರೂ ನಿಮ್ಮ ಗಂಡನಿಗೆ ಅದೆಂತಹ ಕಾಯಿಲೆ ಇತ್ತು ಎಂದು ನಾನು ಕುತೂಹಲಭರಿತಳಾಗಿ ಕೇಳಿದೆ.
ಅಂದು ನನ್ನ ಗಂಡನನ್ನು ಪರೀಕ್ಷಿಸಿದ ವೈದ್ಯರು ಏಡ್ಸ್ ಎಂದು ಹೇಳಿದರು ಮೇಡಂ, ಇನ್ನು ಕೆಲವೇ ಕೆಲವು ದಿನ ಬದುಕಿರುತ್ತಾರೆ, ಈ ಕಾಯಿಲೆ ನಿಮ್ಮ ಗಂಡನಿಗೆ ಬಂದು ಹಲವಾರು ವರ್ಷಗಳೇ ಕಳೆದಿವೆ ಆದರೆ ಸರಿಯಾದ ಕ್ರಮದಲ್ಲಿ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದರಿಂದ ಇಲ್ಲಿಯವರೆಗೂ ಬದುಕಿದ್ದಾರೆ, ಇನ್ನು ಅವರ ಜೀವನದ ಅಂತ್ಯ ಕಾಲ ಹತ್ತಿರವಿದೆ ಎಂದರು.
ನಂತರ ಆಸ್ಪತ್ರೆಯಿಂದ ನನ್ನ ಗಂಡನನ್ನು ಮನೆಗೆ ಕರೆದುಕೊಂಡು ಬಂದೆ, ನಮ್ಮ ಮಗ ಮಲಗಿದ ನಂತರ ಅವರ ಹತ್ತಿರ ಹೋಗಿ ಸಾವಕಾಶವಾಗಿ ಕೇಳಿದೆ,
ಯಾಕೆ ಇಷ್ಟು ಬೇಗ ನಮ್ಮನ್ನು ಬಿಟ್ಟು ಹೊರಡಲು ನಿರ್ಧರಿಸಿದ್ದೀರಿ.?
ನಿಮ್ಮನ್ನು ಬಿಟ್ಟರೆ ನಮಗೆ ಯಾರು ಗತಿ.?
ನಾವು ನಿಮಗೆ ಮಾಡಿದ ಮೋಸವಾದರೂ ಏನು ಎಂದು.?
ಕಾಲಿಗೆ ಬಿದ್ದ ನನ್ನ ಗಂಡ ಕ್ಷಮಿಸಿಬಿಡು ಪ್ರಮೀಳಾ, ಹರೆಯದ ವಯಸ್ಸಿನಲ್ಲಿ ಮಾಡಿದ ಒಂದು ತಪ್ಪು ನನ್ನನ್ನು ಈ ಸ್ಥಿತಿಗೆ ತಳ್ಳಿದೆ , ಎಷ್ಟೋ ಬಾರಿ ನಿನಗೆ ಹೇಳಬೇಕು ಎಂದು ನಿರ್ಧರಿಸಿದೆ ಆದರೆ ನಿನ್ನ ಕೊರಳಲ್ಲಿನ ಮಾಂಗಲ್ಯ ಸೂತ್ರ ನನ್ನನ್ನು ತಡೆಹಿಡಿದಿತ್ತು, ನಿನ್ನ ಅರಿಶಿನ ಕುಂಕುಮ ನನ್ನನ್ನು ಹೇಳದಂತೆ ಬಾಯಿ ಮುಚ್ಚಿಸಿತು ಎಂದು ಅಳಲು ಶುರು ಮಾಡಿಬಿಟ್ಟರು.
ಇದಾದ ಕೆಲವೇ ತಿಂಗಳುಗಳಲ್ಲಿ ನಮ್ಮನ್ನು ಅನಾಥರನ್ನಾಗಿ ಮಾಡಿ ಹೋಗಿಯೇ ಬಿಟ್ಟರು ಅವರು, ಬದುಕುವ ಹೋರಾಟ, ಸಮಾಜದ ಎದುರಿಗೆ ಕಳಂಕಿತಳ ಪಟ್ಟ ಎಲ್ಲವೂ ನನ್ನನ್ನು ಕುಗ್ಗಿಸಿ ಬಿಟ್ಟಿತ್ತು ಎಂದರು.
ನನಗೆ ಅಷ್ಟು ಹೊತ್ತಿಗಾಗಲೇ ಈ ಮೂವರಿಗೂ ಏಡ್ಸ್ ಇರುವುದು ನಿರ್ಧಾರವಾಗಿತ್ತು, ನಾನು ಮುಂದುವರೆದು ಕೇಳಿದೆ ಈಗ ಮಗನಿಗೆ ಏನಾಗಿದೆ ಗೊತ್ತಾ ಎಂದು.
ಗೊತ್ತು ಮೇಡಂ, ನಮಗಿಬ್ಬರಿಗೂ ಏಡ್ಸ್ ಇದೆ, ನನಗೆ ಸಾವಿನ ಭಯ ಇಲ್ಲ, ಗಂಡನನ್ನು ಕೈಹಿಡಿದು ಹತ್ತು ವರ್ಷಗಳ ಸಂಸಾರ ಸುಖವನ್ನು, ಕಷ್ಟ ನಷ್ಟಗಳನ್ನು ನೋಡಿದ್ದೇನೆ , ಗಂಡ ಮಾಡಿದ ತಪ್ಪಿಗೆ ನಾನು ಪಾಲುದಾರಣೆ,
ಆದರ ಮೇಲೆ ನನಗೆ ಯಾವುದೇ ಬೇಸರವಿಲ್ಲ.
ಆದರೆ ನನ್ನ ಮುಗ್ಧ ಕಂದ ಮಾಡಿದ ತಪ್ಪೇನು.?
ಅವನಿಗೆ ಈ ಖಾಯಿಲೆಯ ತೀವ್ರತೆಯೂ ಗೊತ್ತಿಲ್ಲ, ಅದು ಯಾವ ರೀತಿ ಬಂದಿದೆ ಎಂಬುದೂ ತಿಳಿದಿಲ್ಲ,
ಅವನೆದುರು ಈ ಸತ್ಯವನ್ನೆಲ್ಲಾ ಹೇಗೆ ಹೇಳಲಿ.?
ಅಪ್ಪನೆಂದರೆ ಅವನಿಗೆ ಎಲ್ಲಿಲ್ಲದ ಪ್ರೀತಿ , ಆದರೆ ಇದಕ್ಕೆಲ್ಲ ನಿಮ್ಮಪ್ಪನೇ ಕಾರಣ ಎಂದು ಹೇಗೆ ತಿಳಿಸಲಿ.?
ಅಥವಾ ನಮ್ಮ ಹಣೆಬರವನ್ನು ನಿಮ್ಮಪ್ಪ ಹೀಗೆ ಬರೆದು ಹೋಗಿದ್ದಾರೆ ಮಗನೇ, ನಮ್ಮ ಈ ದುರ್ಗತಿಗೆ ನಿಮ್ಮಪ್ಪನೇ ವಿಲನ್ ಎಂದು ಹೇಗೆ ಹೇಳಲಿ ಎಂದಾಗ ನಾನು ಮೂಕವಿಸ್ಮಿತಳಾದೆ.
ನನಗೆ ಯಾಕೋ ಆ ಮಗುವನ್ನು ಒಮ್ಮೆ ಮಾತನಾಡಿಸಬೇಕೆಂದು ಅನಿಸತೊಡಗಿತು , ಬೇರೆ ವಾರ್ಡಿನಲ್ಲಿ ಇದರ ಪರಿವೇ ಇಲ್ಲದೆ ಹಾಯಾಗಿ ನಿದ್ರಿಸುತ್ತಾ ಮಲಗಿದ್ದ ಅವನ ಹತ್ತಿರ ಹೋಗಿ ಹಣೆಯ ಮೇಲೆ ಕೈ ಹಿಡಿದು ನೋಡಿದೆ ಜ್ವರ ಸುಡುತ್ತಿತ್ತು.
ನಾನು ಕೈ ಇಟ್ಟ ತಕ್ಷಣ ಎಚ್ಚರಗೊಂಡ ಆ ಮಗು ನನ್ನನ್ನು ಆಶ್ಚರ್ಯದಿಂದ ನೋಡ ತೊಡಗಿತು.
ಮಗು ಊಟ ಮಾಡಿದೆಯಾ ಎಂದು ಕೇಳಿದೆ,
ಹಸಿವಿಲ್ಲ ನನಗೆ, ಊಟ ಮಾಡಿದರೆ ವಾಂತಿ ಆಗುತ್ತದೆ ಎಂದು ಹೇಳಿದಾಗ ನನ್ನಲ್ಲಿನ ತಾಯಿ ಹೃದಯ ಚುರುಕ್ ಎಂದಿತು.
ಮುಂದೆ ದೊಡ್ಡವನಾದ ಮೇಲೆ ಏನಾಗುತ್ತೀಯಾ ಎಂದು ಕೇಳಿದೆ,
ನಾನು ನಿಮ್ಮ ಹಾಗೆ ಡಾಕ್ಟರ್ ಆಗಬೇಕೆಂದಿದ್ದೇನೆ, ನನ್ನ ರೀತಿ ಕಾಯಿಲೆಯಿಂದ ನರಳುವ ಎಷ್ಟೋ ಜನರಿಗೆ ಉಚಿತವಾಗಿ ಸೇವೆ ಸಲ್ಲಿಸಬೇಕೆಂದಿದ್ದೇನೆ ಎಂದಿದು.
ಅಪ್ಪ ಯಾವುದೋ ಖಾಯಿಲೆಯಿಂದ ತೀರಿಕೊಂಡರಂತೆ, ನನ್ನ ಗೆಳೆಯರೆಲ್ಲರೂ ನಿನಗೂ ಆ ಖಾಯಿಲೆ ಬಂದಿದೆ ಅಂತ ನನ್ನನ್ನು ಹೀಯಾಳಿಸುತ್ತಾರೆ, ನನ್ನ ಜೊತೆ ಆಟವಾಡಲು ಯಾರೂ ಬರುವುದಿಲ್ಲ, ನನ್ನನ್ನು ಅವರ ಗುಂಪಿಗೆ ಸೇರಿಸುವುದಿಲ್ಲ, ಎಲ್ಲರೂ ನನ್ನನ್ನು ದೂರಮಾಡುತ್ತಾರೆ ಯಾಕೆ ಮೇಡಂ ನಾನೇನು ಮಾಡಿದ್ದೇನೆ ಎಂದಿಂತು.
ಅಮ್ಮ ದಿನವೂ ರಾತ್ರಿ ಅಳುತ್ತಾಳೆ, ಒಬ್ಬಳೇ ನಡುರಾತ್ರಿಯಲ್ಲಿ ಎಚ್ಚರಗೊಂಡಿರುತ್ತಾಳೆ,
ಸುಮ್ಮನೇ ನನ್ನನ್ನು ತಬ್ಬಿಕೊಂಡು ಮಗನೇ ಎಂದು ಗೋಳಾಡುತ್ತಾಳೆ, ನಾನಿನ್ನು ಚಿಕ್ಕವನು, ನನಗೆ ಇವೆಲ್ಲವೂ ಅರ್ಥವಾಗುವುದಿಲ್ಲ ಆದರೆ ಅಮ್ಮನ ಕಣ್ಣೀರು ನನ್ನಲ್ಲಿ ಇತ್ತೀಚಿಗೆ ಅನಾಥ ಭಾವವನ್ನು ಸೃಷ್ಟಿಸುತ್ತಿದೆ ಎಂದಿತು ಆ ಮುಗ್ದ ಮಗು.
ನಮ್ಮ ಈ ಮಾತುಕತೆಗಳನ್ನು ಕೇಳಿಸಿಕೊಂಡ ಅವರ ಅಮ್ಮ ಬಾಗಿಲ ಬಳಿ ನಿಂತು ಜೋರಾಗಿ ಅಳಲಾರಂಬಿಸಿದರು,
ಇದನ್ನು ನೋಡಿದ ಆ ಮಗು , ನನಗೆ ಏನಾಗಿದೆ ಮೇಡಂ, ನಾನು ಬದುಕುತ್ತೇನಲ್ಲವೇ.?
ನನಗೂ ಬದುಕುವ ಆಸೆ ಇದೆ, ನಾನೇನು ಮಾಡಲಿ ಎಂದಾಗ ನನ್ನ ಕಣ್ಣುಗಳು ತೇವವಾದವು.
ನಿನಗೆ ಏನು ಆಗಿಲ್ಲ ಮಗು, ಆರೋಗ್ಯವಾಗಿ ಬದುಕುತ್ತೀಯಾ , ನಿನ್ನೆಲ್ಲಾ ಆಸೆಗಳು ಕನಸುಗಳು ಈಡೇರುತ್ತವೆ ಎಂದು ಸುಳ್ಳು ಹೇಳಲೇ.? ಅಥವಾ ಈ ಕಾಯಿಲೆಯನ್ನು ನಾವು ಗುಣಪಡಿಸುತ್ತೇವೆ ಎಂದು ಹುಸಿ ಭರವಸೆಗಳನ್ನು ಕೊಡಲೇ.?
ನಾನು ಅಸಹಾಯಕಳಾದೆ..!!
— ಇಂತಿ ನಿಮ್ಮವ ಅಪರಿಚಿತ ಮೌನಿ
