
ನವದೆಹಲಿ: ಪ್ರಸಕ್ತ ಆರ್ಥಿಕ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಶೇ. 5. 4 ರಷ್ಟು ಬೆಳವಣಿಗೆಯೊಂದಿಗೆ ಜಿಡಿಪಿ ವೇಗವಾಗಿ ಚೇತರಿಕೆ ಕಂಡಿದ್ದು, ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಖಚಿತಪಡಿಸಿಕೊಳ್ಳಲು ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಲೋಕಸಭೆಯಲ್ಲಿ 2025-26ರ ಕೇಂದ್ರ ಬಜೆಟ್ ಮೇಲಿನ ಚರ್ಚೆಗೆ ಉತ್ತರಿಸಿದ ಹಣಕಾಸು ಸಚಿವರು, 2026 ರ ಆರ್ಥಿಕ ವರ್ಷದಲ್ಲಿ ಶೇ. 99 ರಷ್ಟು ಸಾಲವನ್ನು ಬಂಡವಾಳ ವೆಚ್ಚಕ್ಕಾಗಿ ಬಳಸಿಕೊಂಡು ಹಣಕಾಸಿನ ವಿವೇಕವನ್ನು ಕಾಪಾಡಿಕೊಂಡು ಜನರ ಕೈಯಲ್ಲಿ ದ್ರವ್ಯತೆ ಹೆಚ್ಚಿಸಲು ಬಜೆಟ್ ನಲ್ಲಿ ವಿವಿಧ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಜಿಡಿಪಿ ಬೆಳವಣಿಗೆಯ ಕುರಿತು ಮಾತನಾಡಿದ ಸೀತಾರಾಮನ್, 2024-25 ರ ಹಿಂದಿನ ಮೂರು ವರ್ಷಗಳಲ್ಲಿ, ದೇಶದ ಜಿಡಿಪಿ ಬೆಳವಣಿಗೆ ದರವು ಸರಾಸರಿ ಶೇ. 8 ರಷ್ಟಿತ್ತು. ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆಯು ಶೇ. 6. 4 ರಷ್ಟು ಬೆಳವಣಿಗೆಯಾಗಲಿದೆ ಎಂದು ಅಂದಾಜಿಸಲಾಗಿದೆ ಎಂದು ಹೇಳಿದರು.
ಹಣಕಾಸು ಸಚಿವಾಲಯದ ಆರ್ಥಿಕ ಸಮೀಕ್ಷೆಯು ಮುಂದಿನ ಹಣಕಾಸು ವರ್ಷ 2026ರಲ್ಲಿ ಜೆಡಿಪಿ ಶೇ. 6-3,6-8 ರಷ್ಟು ಇರಲಿದೆ ಎಂದು ಅಂದಾಜಿಸಿದೆ. 12 ತ್ರೈಮಾಸಿಕಗಳಲ್ಲಿ ಎರಡರಲ್ಲಿ ಮಾತ್ರ ಭಾರತದ ಬೆಳವಣಿಗೆಯ ದರ ಶೇ 5.4 ರಷ್ಟು ತಲುಪಿತ್ತು ಅಥವಾ ಅದಕ್ಕಿಂತಲೂ ಕಡಿಮೆ ಇತ್ತು. ಎರಡನೇ ತ್ರೈಮಾಸಿಕದಲ್ಲಿ (ಜುಲೈ-ಸೆಪ್ಟೆಂಬರ್ ) ಜಿಡಿಪಿ ಬೆಳವಣಿಗೆ ದರ ಕನಿಷ್ಠ ಶೇ. 5.4 ರಷ್ಟು ಕುಸಿದಿದೆ. ಬಲವಾದ ಆರ್ಥಿಕ ತಳಹದಿಯ ಕಾರಣ, ತ್ವರಿತಗತಿಯಲ್ಲಿ ಚೇತರಿಕೆ ಕಾಣುತ್ತಿದೆ. ಜೆಡಿಪಿ ಬೆಳವಣಿಗೆಗೆ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಕಳೆದ ಕೆಲವು ವರ್ಷಗಳಿಂದ ನಮ್ಮ ಆರ್ಥಿಕತೆಯು ವೇಗವಾಗಿ ಬೆಳೆಯುತ್ತಿದೆ ಎಂದು ಹಣಕಾಸು ಸಚಿವರು ಲೋಕಸಭೆಯಲ್ಲಿ ತಿಳಿಸಿದರು.