ಹಾಸನ, ಜೂನ್ 26 – ನಗರಸಭೆಯಿಂದ ಮಹಾನಗರಪಾಲಿಕೆಯಾಗಿರುವ ಹಾಸನ ನಗರ ವ್ಯಾಪ್ತಿಯ 30 ಪ್ರಮುಖ ರಸ್ತೆಗಳನ್ನು ಅಭಿವೃದ್ಧಿಪಡಿಸಲು 30 ಕೋಟಿ ರೂಪಾಯಿ ಹೆಚ್ಚುವರಿ ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದ್ದು, ಈ ಮೂಲಕ ನಗರ ಮೂಲಭೂತ ಸೌಕರ್ಯಗಳ ಉನ್ನತಿಗೆ ಕೇಂದ್ರ ಸರ್ಕಾರ ಸ್ಪಂದಿಸಿರುವುದು ನಿರೀಕ್ಷೆ ಹುಟ್ಟಿಸಿದೆ.
ದೇವೇಗೌಡರ ಪತ್ರಕ್ಕೆ ಸ್ಪಂದನೆ
ಮಾಜಿ ಪ್ರಧಾನಿ ಹಾಗೂ ರಾಜ್ಯಸಭೆ ಸದಸ್ಯ ಹೆಚ್.ಡಿ. ದೇವೇಗೌಡ ಅವರು ಮೇ ೨೮ರಂದು ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆದು, ಹಾಸನ ಮಹಾನಗರ ಪಾಲಿಕೆಗೆ ವಿಶೇಷ ಅನುದಾನ ನೀಡುವಂತೆ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ ಜೂನ್ ೬ರಂದು ಸಚಿವರು ದೇವೇಗೌಡರಿಗೆ ಪ್ರತಿಕ್ರಿಯಿಸಿ, “ನಿಮ್ಮ ಕಾಳಜಿಗೆ ಧನ್ಯವಾದ. ಅನುದಾನ ಬಿಡುಗಡೆಗೆ ಕ್ರಮ ಜರುಗಿಸಲಾಗುವುದು” ಎಂಬ ಭರವಸೆ ನೀಡಿದರು.
ಸ್ಥಳೀಯ ಶಾಸಕರ ಸಹಮತ
ಶಾಸಕ ಎಚ್.ಪಿ. ಸ್ವರೂಪ್ ಪ್ರಕಾಶ್ ಅವರು ಮೇ ೨೩ರಂದು ದೇವೇಗೌಡರಿಗೆ ಬರೆದ ಪತ್ರದಲ್ಲಿ, ಹೊಸದಾಗಿ ಸೇರ್ಪಡೆಗೊಂಡ ೩೭ ಹಳ್ಳಿಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಬೇಕೆಂದು ಸೂಚಿಸಿದ್ದರು. ಅವರು ವರ್ಡ್ವಾರು ಅವಶ್ಯಕತೆಗಳನ್ನು ನಿಖರವಾಗಿ ವಿವರಿಸಿ, ೩೦ ಕೋಟಿ ರೂ. ಸಿಆರ್ಎಫ್ ನಿಧಿ ಅಡಿಯಲ್ಲಿ ಬಿಡುಗಡೆ ಮಾಡುವಂತೆ ವಿನಂತಿಸಿದ್ದರು.
ರಾಜ್ಯ ಸರ್ಕಾರಕ್ಕೂ ಮನವಿ
ಇದಕ್ಕೂ ಮುನ್ನ ದೇವೇಗೌಡರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೂಡಾ ಪತ್ರ ರವಾನಿಸಲಾಗಿದೆ. ಹಾಸನ ಮಹಾನಗರಪಾಲಿಕೆಗೆ ಸೇರ್ಪಡೆಗೊಂಡ ೨೫ ಹಳ್ಳಿಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಲು ವಿಶೇಷ ಅನುದಾನ ಕೋರಿ, ನಗರಾಭಿವೃದ್ಧಿ ಇಲಾಖೆಯೂ ಸ್ಪಂದಿಸಿದ್ದು, ಪೌರಾಡಳಿತ ನಿರ್ದೇಶಕರು ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ ನೀಡಿದ್ದಾರೆ.
ಬದಲಾವಣೆಯ ನಾಂದಿ: ಶಾಸಕ ಹೇಳಿಕೆ
“ಹಿರಿಯರಾದ ದೇವೇಗೌಡರ ಮೂಲಕ ರಾಜ್ಯ ಮತ್ತು ಕೇಂದ್ರಕ್ಕೆ ಬರೆದ ಪತ್ರಗಳಿಗೆ ಸ್ಪಂದನೆ ಸಿಕ್ಕಿರುವುದು ಸಂತೋಷದ ಸಂಗತಿ. ಅನುದಾನ ಬಿಡುಗಡೆ ಆದರೆ ಮಹಾನಗರಪಾಲಿಕೆಗೆ ಹೊಸ ರೂಪ ಸಿಗಲಿದೆ. ನಾನು ನಗರ ಜನರ ಪರವಾಗಿ ಧನ್ಯವಾದ ಅರ್ಪಿಸುತ್ತೇನೆ” ಎಂದು ಶಾಸಕ ಸ್ವರೂಪ್ ಪ್ರಕಾಶ್ ತಿಳಿಸಿದ್ದಾರೆ.




