ರಾಮನಗರ: ರಾಜ್ಯ ರಾಜಕೀಯಲ್ಲಿ ಫವರ್ ಫುಲ್ ಆಗಿರುವ ಡಿ.ಕೆ.ಸುರೇಶ್ ಅವರಿಗೆ ಬಯಸದೆ ಅನೇಕ ಭಾಗ್ಯಗಳು ಬರುತ್ತಿವೆ. ಯಾವುದೇ ಕೆಲಸ ಕೊಟ್ಟರೂ, ಸೈ ಎನ್ನುವ ಡಿ.ಕೆ.ಸುರೇಶ್ ಅವರಿಗೆ ಕಳೆದೊಂದು ವರ್ಷದಲ್ಲಿ ಮೂರು ಹುದ್ದೆಗಳು ಲಭಿಸಿದ್ದು, ಭವಿಷ್ಯದಲ್ಲಿಇನ್ನೆರೆಡು ಹುದ್ದೆಗಳು ಲಭಿಸುವ ಸಾಧ್ಯತೆಗಳಿವೆ.
ಬರೊಬ್ಬರಿ ಮೂರು ಬಾರಿ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಸಂಸದರಾಗಿದ್ದ ಡಿ.ಕೆ.ಸುರೇಶ್, 2024ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಸೋಲು ಕಂಡಿದ್ದರು. ಬಳಿಕ ಒಂದಷ್ಟು ದಿನ ರಾಜಕೀಯದಿಂದ ವಿಶ್ರಾಂತಿ ಎನ್ನುತ್ತಿದ್ದ ಸುರೇಶ್, ಏಕಾಏಕೀ ರಾಜಕೀಯ ಅಖಾಡದಲ್ಲಿ ಕಾಣಿಸಿಕೊಂಡರು. ಈಗ ಮೂರು ಹುದ್ದೆಗಳೊಂದಿಗೆ ಜಾಲತಾಣಗಳಲ್ಲಿಯೂ ಫುಲ್ ಆಯಕ್ಟಿವ್ ಆಗಿದ್ದಾರೆ. ಬಮೂಲ್ ಅಧ್ಯಕ್ಷರಾದ ಬೆನ್ನಲ್ಲೇ, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶಕರಾಗಿಯೂ ಡಿಕೆಸು ಆಯ್ಕೆಯಾಗಿರುವುದು ಸಾಕಷ್ಟು ಕುತೂಹಲಗಳಿಗೆ ಕಾರಣವಾಗಿದೆ.
ಯಾವಾಗ ಯಾವ ಹುದ್ದೆ?
ಕಳೆದ ಲೋಕಸಭೆ ಚುನಾವಣೆ ಸೋಲಿನ ನಂತರ ಕನಕಪುರ ಬಗರ್ ಹುಕುಂ ಸಾಗುವಳಿ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದ ಡಿ.ಕೆ.ಸುರೇಶ್, ಇದಾದ ನಂತರ ಒಂದೊಂದೇ ಮಹತ್ವದ ಹುದ್ದೆಗಳನ್ನು ತಮ್ಮದಾಗಿಸಿಕೊಳ್ಳುತ್ತಿದ್ದಾರೆ. ಬಮೂಲ್ ನಿರ್ದೇಶಕರಾಗಿ ಅವಿರೋಧ ಆಯ್ಕೆಯಾದ ಕೂಡಲೇ, ಬಮೂಲ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಈಗ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶಕರಾಗಿದ್ದಾರೆ. ಭವಿಷ್ಯದಲ್ಲಿ ಕೆಎಂಎಫ್ ಅಧ್ಯಕ್ಷರೊಂದಿಗೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದರೂ ಅಚ್ಚರಿ ಇಲ್ಲ.
ಸುರೇಶ್ ಏಕೆ?
ಈ ಹಿಂದೆ ಸಂಸದರಾಗಿದ್ದ ಅವರು, ಜನಪರ ಕೆಲಸಗಳಿಗೆ ಸೈ ಎನ್ನಿಸಿಕೊಂಡಿದ್ದಾರೆ. ಯಾವುದೇ ಕೆಲಸ ನೀಡಿದರೂ, ಅದನ್ನು ಪೂರ್ಣಗೊಳಿಸುವವರೆಗೂ ಅವರು ಬಿಡುವುದೇ ಇಲ್ಲ. ಅಧಿಕಾರಿಗಳಿಂದ ಕೆಲಸ ತೆಗೆಸುವಲ್ಲಿ ನಿಸ್ಸಿಮರು. 30 ಸಾವಿರ ಕೋಟಿ ರೂ. ಯೋಜನೆಯಾಗಿರುವ ‘ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ’ದ ಮೂಲಕ ಬಿಡದಿ ಸ್ಮಾರ್ಟ್ಸಿಟಿ ಯೋಜನೆ ನಡೆಯಬೇಕಿದೆ. ಇದಕ್ಕಾಗಿ ಮಾರ್ಚ್ನಲ್ಲಿಯೇ ಅಧಿಸೂಚನೆ ಹೊರಡಿಸಿದರೂ, ಈ ವರೆಗೂ ಯಾವ ಕೆಲಸಗಳು ನಡೆದಿಲ್ಲ. ಹೀಗಾಗಿ ಡಿ.ಕೆ.ಸುರೇಶ್ ಅವರಿಗೆ ನಿರ್ದೇಶಕ ಸ್ಥಾನ ನೀಡುವ ಮೂಲಕ ಯೋಜನೆ ವೇಗ ಹೆಚ್ಚಿಸುವ ಉದ್ದೇಶ ಹೊಂದಲಾಗಿದೆ. ಮತ್ತೊಂದೆಡೆ ಬೆಂಗಳೂರು ದಕ್ಷಿಣ ಜಿಲ್ಲೆಯವರೇ ಆದ ಡಿ.ಕೆ.ಸಹೋದರರ ಕನಸಿನ ಯೋಜನೆಯೂ ಇದಾಗಿದೆ. ಹೀಗಾಗಿ ಡಿ.ಕೆ.ಸುರೇಶ್ ಅವರ ಅಧ್ಯಕ್ಷತೆಯಲ್ಲಿಯೇ ಯೋಜನೆ ಮುಂದುವರಿಯಲಿ ಎಂಬ ಉದ್ದೇಶವು ಇರಬಹುದು ಎಂದೇ ಚರ್ಚಿಸಲಾಗುತ್ತಿದೆ.
