ವೃತ್ತಿಯಿಂದ ವಿಶ್ರಾಂತ ಹೊಂದಿದ ನಂತರ ಹಲವು ಹೂರ ರಾಷ್ಟ್ರಗಳ ಪ್ರವಾಸ ಮಾಡುವ ಗೀಳನ್ನು ಶುರು ಹಚ್ಚಿಕೊಂಡೆ. ಜಾಣನುಡಿ, “ಕೋಶ ಓದು, ಇಲ್ಲ ಅಂದರೆ ದೇಶ ಸುತ್ತು” ವಾಖ್ಯಾನಕ್ಕೆ ಚ್ಯತಿ ಆಗದಂತೆ ಅನೇಕ ದೇಶಗಳ ಪರ್ಯಾಟನೆ ಮಾಡಿದ್ದ ಅನುಭವಗಳು ನನ್ನಲ್ಲಿ ಸಾಕಷ್ಟು ಬದಲಾವಣೆ ತಂದಿದೆ.
ವಿದೇಶ ಪ್ರವಾಸ ಕೈಗೊಂಡಾಗಲೆಲ್ಲಾ ನನ್ನ ಪ್ರವಾಸದ ಹಿನ್ನಲೆ, ಆ ದೇಶಗಳ ಭೌಗೋಳಿಕ ವೈವಿಧ್ಯತೆ ಮತ್ತು ಲಕ್ಷಣಗಳು, ಅವುಗಳ ಆರ್ಥಿಕ ಸ್ಥಿತಿಗತಿಗಳು, ಆ ರಾಷ್ಟ್ರಗಳ ವಿಜ್ಞಾನ ಮತ್ತು ವಿಜ್ಞಾನಿಗಳ ಪರಿಚಯ, ಅಲ್ಲಿಯ ಪ್ರಸಿದ್ದ ವ್ಯಕ್ತಿಗಳ ಪ್ರಸ್ತಾವನೆ, ನನ್ನ ಸಿಹಿ ಕಹಿ ಅನುಭವಗಳು ಹೀಗೆ ಹಲವಾರನ್ನು ಪ್ರವಾಸ ಕಥನ ರೂಪದಲ್ಲಿ ಬರೆಯುವುದು ನನ್ನ ಹವ್ಯಾಸ.
ಆಫ್ರಿಕಾ ಖಂಡದ, ಆರ್ಥಿಕವಾಗಿ ಉನ್ನತ ಮಟ್ಟದಲ್ಲಿ ಇರುವ ಮತ್ತು ಭಾರತ ದೇಶದ ಅನಿವಾಸಿಗಳಿಂದ ತುಂಬಿರುವ “ಮಾರಿಷಸ್” ದ್ವೀಪವನ್ನು ಭೇಟಿ ಮಾಡಿದ್ದೆ. ಚಿಕ್ಕ ಮತ್ತು ಚೊಕ್ಕ ದ್ವೀಪ. “ಗಂಗಾ ಟಾಲೋ” ಕೆರೆ ಅಥವ ಸರೋವರ ಇಲ್ಲಿಯ ಹಿಂದೂ ಅನಿವಾಸಿ ಭಾರತೀಯರಿಗೆ ಪವಿತ್ರವಾದ ಸ್ಥಳ. ಈ ಸರೋವರವನ್ನು ಸಾಕ್ಷಾತ್ ಮಾತೆ ಗಂಗೆಯ ಸರೋವರ ಎಂದು ಅಲ್ಲಿಯ ಪ್ರಜೆಗಳು ನಂಬುತ್ತಾರೆ.

ಹದಿನೆಂಟನೆ ಶತಮಾನದಲ್ಲಿ ಒಬ್ಬ ಪೂಜಾರಿ, ಈ ಸರೋವರವು “ಜಾನ್ಹವಿ” ನದಿಯಿಂದ ಉಗಮ ಆಯಿತು ಎಂದು ಹೇಳಿದ್ದರಂತೆ. ಈ ಶುದ್ಧವಾದ ಸರೋವರದ ನೀರಿಗೆ ಮೊದಲನೆ ಪ್ರಧಾನ ಮಂತ್ರಿ “ಸರ್ ಸಿವೂಸಾಗರ್ ರಾಮಗೂಲಮ್” ಭಾರತದಿಂದ ತಂದ ಗಂಗಾ ಜಲವನ್ನು ತಂದು ಬೆರೆಸಿದ್ದರಂತೆ.
ಈ ಸರೋವರಕ್ಕೆ ಪುಷ್ಕರಣಿ ತರಹ ಮೆಟ್ಟಲು ಇದ್ದು ಸುಂದರವಾದ ಈಶ್ವರನ ದೇವಸ್ಥಾನ ಇದೆ. ದೇವಸ್ಥಾನಕ್ಕೆ ಬರುವ ಪ್ರವಾಸಿಗರಲ್ಲಿ ಈರೋಪಿಯನ್ನರು ಮತ್ತು ಅಮೇರಿಕನ್ನರು ಹೆಚ್ಚು ಇರುತ್ತಾರೆ. ಅಲ್ಲಿಯ ಗೈಡ್ಸ ನಮಗಿಂತ ಚೆನ್ನಾಗಿ “ಲಿಂಗ ಮತ್ತು ಯೋನಿ” ವಿವರಣೆಯನ್ನು ಪ್ರವಾಸಿಗರಿಗೆ ತಿಳಿಸುತ್ತಾರೆ. ನಾನು ಕೇಳಿಸಿಕೊಳ್ಳುತ್ತಾ ಇದ್ದಾಗ ನನ್ನ ಗಮನವು ಆ ಮೆಟ್ಟಲ ಮೇಲೆ ಚಲಿಸುವ ತೊಟ್ಟಿಲಿನ ಒಳಗೆ ಸುಮಾರು ಎಂಟು ತಿಂಗಳ ಹೆಣ್ಣು ಮಗುವಿನ ಮೇಲೆ ಹರಿಸಿದೆ. ಅ ಮಗು ಗೊಂಬೆಯಂತೆ ಇತ್ತು. ಈ ಮಗುವಿನ ತಾಯಿಗೆ ನಮ್ರತೆಯಿಂದ “ಕೆನ್ ಐ ಟೇಕ್ ಎ ಷೋಟೋ ಆಫ್ ಹರ್” ಎಂದು ಕೇಳಿದಾಗೆ ಆಕೆ ಸಾರಾಸಗಟಾಗಿ ನಿರಾಕರಿಸಿಬಿಟ್ಟಳು. ಬಹುಶಃ ಜಾಲತಾಣದಲ್ಲಿ ಈ ಮಗುವಿನ ಫೋಟೋ ಹಾಕಬಹುದೆಂಬ ಸಂಶಯ ಆಕೆಯ ಮನಸ್ಸಿನಲ್ಲಿ ಬಂದಿರಬೇಕೋ ಏನೋ ತಿಳಿಯದು.
ಆ ಮಗುವಿನ ಜ್ಞಾಪಕ ಬಂದಾಗಲೆಲ್ಲಾ ಸುಸೂತ್ರದ ಪ್ರಮಾಣ ಬದ್ದತೆಯ ಸಿದ್ದಾಂತದ ಕಡೆ ನನ್ನ ಮನಸ್ಸು ಹೋ
ಗುತ್ತಿತ್ತು. ನನ್ನ ಚೌಕಟ್ಟಿನ ಹೊರಗೆ (ಔಟ್ ಆಫ್ ಬಾಕ್ಸ ತಿಂಕಿಂಗ್) ಯೋಚನೆ ಮಾಡುತ್ತಿದ್ದಾಗ ನನಗೆ “ಸಮರೂಪತೆ” ಅಥವ ಇಂಗ್ಲಿಷಿನಲ್ಲಿ “ಸಿಮಿಟ್ರಿ” ಯ ಬಗ್ಗೆ ಕುತೂಹಲ ಉಂಟಾಗುತ್ತಿತ್ತು. “ತಂತ್ರ” ದ ಎಲ್ಲಾ ವಿಷಯವೂ ಯಂತ್ರ ಶಾಸ್ತ್ರದ ಬಗ್ಗೆಯೇ ಇರುವುದು.
ಇಂದಿನ ಗಣಿತ ಶಾಸ್ತ್ರ, ಅಂಕ ಗಣಿತ ಮತ್ತು ರೇಖಾಗಣಿತದ ಸಮ್ಮಿಲನ. ನಮ್ಮ ಹಿಂದೂ ಧಾರ್ಮಿಕ ಆಚರಣೆಗಳಲ್ಲಿ ಯಾವುದೇ ತರಹದ ಚಿನ್ಹೆ ಬರೆದಾಗ ಆ ಚಿಹ್ನೆ ತ್ರಿಕೋನ, ಚೌಕಾಕೋನ, ಷಡ್ಭುಜಕೋನ, ವರ್ತುಲ, ಸಮಾನಾಂತರ ರೇಖೆಗಳು ಹೀಗೆ ಹಲವಾರು ಸಮಾನತೆಯಿಂದ ಇದ್ದು, ಇವುಗಳ ಒಳಗೆ ಬಣ್ಣದ ರಂಗೋಲಿಯಿಂದ ಅಲಂಕರಿಸುತ್ತಾರೆ. ಹೀಗೆ ಬರೆದ ರಂಗೋಲೆಯ ಚಿಹ್ನೆ ಅಥವ ಮಂಡಲವನ್ನು ಪವಿತ್ರವಾದ ಸ್ಥಳವೆಂದು ಪರಿಗಣಿಸಲಾಗುತ್ತದೆ.

ನಮ್ಮ ಹಿಂದೂ ಧರ್ಮ ಆಚರಣೆಗಳಲ್ಲಿ ಇಂತಹ ಚಿತ್ರಾತ್ಮಕ ಬರಹಗಳಿಗೆ ತನ್ನದೇ ಆದ ಅರ್ಥಗಳು ಇರುತ್ತವೆ ಅಥವಾ ವಿವರಿಸಲಾಗುತ್ತದೆ. ನಾನು ತಿಳಿಸುವ “ತಂತ್ರ” ವಾಖ್ಯಾನಗಳನ್ನು ವಿಜ್ಞಾನದ ಮಾದರಿಯಲ್ಲಿ ನೋಡಬೇಕು. ಉದಾಹರಣೆಗೆ, ಕಾಣದ ಚಿತ್ರಗಾರ ಮಾನವನನ್ನು ಸಮರೊಪತೆ ವಿನ್ಯಾಸದಲ್ಲೇ ತಯಾರಿಸಿದ್ದಾನೆ. ಹೀಗೆ ತಯಾರಿಸಿರುವ ಗಂಡಸು ಮತ್ತು ಹೆಣ್ಣನ್ನು ಸ್ಪುರದ್ರೂಪಿ ಎಂದು ಕರೆಯುವರು. ಇದೇ ತರಹದ ವಿನ್ಯಾಸದ ಮಗುವನ್ನು “ಗೊಂಬೆ ಅಥವ ಬೊಂಬೆ” ಎಂದು ಕರೆಯುತ್ತಾರೆ. ಜೀವಿಗಳಿಗೆ ಇಂತಹ ಮಾನ್ಯತೆಗಳನ್ನು ನೀಡುವುದಾದರೆ ಜೀವಿಗಳನ್ನು ಸೃಷ್ಟಿಸಿದ ಸೃಷ್ಟಿಕರ್ತನಿಗೆ ನಾವು ಯಾವ ಮಾನ್ಯತೆ ನೀಡಬೇಕು?
ಇದನ್ನು ಓದಿ: “ಮಹಿಳೆ – ಚಾರ್ಲ್ಸ ಡಾರ್ವಿನ್ – ಓಶೋ – ಮುಕ್ತಾನಂದ”
ಹಿಂದೂ ಧಾರ್ಮಿಕ “ಹೋಮ” ಕಾರ್ಯಕ್ರಮಗಳಲ್ಲಿ ತರತರಹದ ರೇಖಾಚಿತ್ರಗಳನ್ನು ಬಿಡಿಸುತ್ತಾರೆ. ಇಂತಹ ಗುಣಾತ್ಮಕ ರೇಖಾ ವಿನ್ಯಾಸಗಳನ್ನು ಯಾವ ಸಂದರ್ಭದಲ್ಲಿ ಬಿಡಿಸಿದ್ದಾರೆ ಎಂಬುದು ಮುಖ್ಯ ಅಂಶ. ಉದಾಹರಣೆಗೆ ಮಕ್ಕಳಾಗಿರದ ದಂಪತಿಗಳು ಯಾಗ ಮಾಡುತ್ತಾರೆ ಎನ್ನುವುದಾದರೆ ನಕ್ಷತ್ರ ಮಾದರಿ ರಂಗೋಲಿ ಬಿಡುಸುತ್ತಾರೆ. ಈ ರೇಖಾ ವಿನ್ಯಾಸ ಎರೆಡು ತ್ರಿಕೋನಗಳ ಮಿಶ್ರಣ ಎಂದೆನ್ನಬಹುದು. ಅಂದರೆ ತ್ರಿಕೋನ ರೇಖೆಗಳು ಗಂಡು ಮತ್ತು ಹೆಣ್ಣೆಂದು ಬಿಂಬಿಸಿದಾಗ ಇವುಗಳ ಮಿಶ್ರಣವೇ ದಾಂಪತ್ಯ ಮಿಲನ ಮಹೋತ್ಸವದ ಚಿಹ್ನೆ ಆಗಿರುತ್ತದೆ.

ನಮ್ಮ ಕರಾವಳಿ ಪ್ರದೇಶಗಳಲ್ಲಿ ದೈವ ಮತ್ತು ಭೂತಗಳನ್ನು ಆರಾಧಿಸುತ್ತಾರೆ. ಅದರಲ್ಲೂ ವಿಷೇಶವಾಗಿ “ನಾಗ ಮಂಡಲ” ಪೂಜೆ ಮಾಡುವುದು ಅಲ್ಲಿಯ ಪದ್ದತಿ. ಈ ಪೂಜೆಯ ಕೈಂಕರ್ಯಗಳನ್ನು ಅತಿ ಮಡಿ, ಭಕ್ತಿ ಮತ್ತು ವಿಧಿ ವಿಧಾನಗಳಿಗೆ ಯಾವುದೇ ಧಕ್ಕೆ ಬಾರದ ಹಾಗೆ ಅಲ್ಲಿಯ ಜನ ನೆರವೇರಿಸುತ್ತಾರೆ. ಈ ಆಚರಣೆಯನ್ನು ಭಯ ಭಕ್ತಿಯಿಂದ ಮಾಡುತ್ತಾರೆ. ನಾನು ಮನೋ ವೈದ್ಯನಾದ್ದರಿಂದ ಈ ಪೂಜೆಯ ಮಹತ್ವ ಅಥವ ಇದರ ಅರ್ಥವನ್ನು ಸಂಕ್ಷಿಪ್ತವಾಗಿ ತೆರೆದಿಡುವ ಪ್ರಯತ್ನ ಮಾಡುವೆ.
ಮನುಷ್ಯನ ಪ್ರಜ್ಞೆ ಮೂರು ವಿಭಾಗವಾಗಿ ವಿಂಗಡಿಸಬಹುದು. ಮೊದಲನೆಯದು “ಅರಿವು“, ಎರಡನೆಯದು “ಕನಸು” ಮತ್ತು ಮೂರನೆಯದು “ಸೂಕ್ಷ್ಮ” ಅವಸ್ತೆಗಳು. ಹಾವಿಗೆ ನಿಜವಾದ ಹಾವು “ಮಾನವ”. ಮನುಷ್ಯರನ್ನು ಕಂಡರೆ ಈ ಹಾವುಗಳು ಹತ್ತಿರ ಬರುವುದೇ ಇಲ್ಲ. ಅವು ಸೌಮ್ಯವಾಗಿ ಇರುವಾಗ ಸುರುಳಿ ಸುತ್ತಿಕೊಳ್ಳುವುದು ಸಾಮಾನ್ಯ. ಅವುಗಳನ್ನು ಕೆರಳಿಸಿದರೆ ಆ ಹಾವುಗಳ ರೋಷ ಹನ್ನೆರೆಡು ವರ್ಷಗಳು. ಇದೇ ತರಹ ಸಮಾನಾಂತರ ವಿವರಣೆಯನ್ನು ಮಾನವನಿಗೆ ನಾವು ನೀಡಬಹುದು. ಮನಷ್ಯ ಮೂಲತಃ ಮೇಲೆ ಹೇಳಿದ ಮೂರು ಪದರಗಳನ್ನು ಒಳಗೊಂಡಿದ್ದಾನೆ.ತನ್ನ ಸೂಕ್ಷ್ಮ ಮನಸ್ಸಿಗೆ ಯಾರು ಕೈ ಹಾಕುವುದಿಲ್ಲ. ಈ ಕೆಲಸವನ್ನು ಮನೋ ವೈದ್ಯರು ಮಾಡುತ್ತಾರೆ. ಇದರಿಂದ ಅವರ ಮನೋ ದೌರ್ಬಲ್ಯಗಳಿಗೆ ಪರಿಹಾರ ಸಿಗಬಹುದು ಎಂಬ ಕಾರಣಕ್ಕೆ. ಇದು ಮನೋ ವಿಷ್ಲೇಶನೆಯಿಂದ ಸಾಧ್ಯ.
ಇದನ್ನು ಓದಿ: “ಶಿವ – ಪಾರ್ವತಿ – ಸ್ಕಿಜೋಫ್ರೇನಿಯ ಮತ್ತು ಕೆಟಟೋನಿಯಾ”
ಹಾವಿನ ಹಾಗೆ ತನ್ನ ಸೂಕ್ಷ್ಮ ಮನಸ್ಸನ್ನು ಯಾರು ಕೆರಳಿಸುತ್ತಾರೋ ಆಗ ದ್ವೇಷ ಮತ್ತು ಉದ್ವೇಗಳು ಬರುವುದು ಸಾಧ್ಯ. ಉದಾಹರಣೆಗೆ, ಪೀಡಿಸುವುದು, ಆಡಿಕೊಳ್ಳುವುದು (bullying), ಬೈಯ್ಯುವುದು, ಇತ್ಯಾದಿ. ಇವುಗಳಿಂದ ಹಲವಾರು ಅನಾಹುತಗಳು ಆಗಿರುವುದನ್ನು ಓದಿದ್ದೇವೆ ಮತ್ತು ಕೇಳಿದ್ದೇವೆ.
ಮನಸ್ಸಿನಲ್ಲೇ ಉಳಿಯುವಂತಾ ಮನೋ ಸಮಸ್ಯೆಗಳಿಗೆ ಸಹಾನುಭೂತಿ, ಆತ್ಮ ಸಮಾಲೋಚನೆ ಮತ್ತು ಔಷಧೋಪಚಾರದಿಂದ ವಾಸಿ ಮಾಡಲು ಸಾಧ್ಯ…
ಮುಂದುವರಿಯುವುದು….
-ಡಾ॥ ಎ.ಎಂ.ನಾಗೇಶ್
ಖ್ಯಾತ ಮನೋವೈದ್ಯ


[…] ಇದನ್ನು ಓದಿ: “ಸಮರೂಪ – ಸಮತೋಲನ – ಮಂಡಲ – ನಾಗ ಮಂಡಲ” […]