ಹಾಸನ: ಬೇಲೂರು ತಾಲೂಕು ಕೆಳ್ಳಹಳ್ಳಿ ಗ್ರಾಮದ ದಲಿತ ಮಹಿಳೆ ಶಾರದಾ ಕೊಲೆ ಪ್ರಕರಣದ ಆರೋಪಿಯನ್ನು ಕೂಡಲೇ ಬಂಧಿಸಬೇಕು ಹಾಗೂ ಪೆÇಲೀಸರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ದಲಿತ ಸಂಘಟನೆಗಳ ಒಕ್ಕೂಟದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಆರ್ಪಿಐ ಸತೀಶ್ ಮಾತನಾಡಿ ಕೆಳ್ಳಹಳ್ಳಿ ಗ್ರಾಮದ ದಲಿತ ಮಹಿಳೆ ಶಾರದಾಳನ್ನು ಅದೇ ಗ್ರಾಮದ ಲಿಂಗಾಯತ ಸಮುದಾಯದ ಪ್ರಸನ್ನ ಎಂಬಾತ ಪರಸ್ಪರ ಪ್ರೀತಿಸಿ 6 ವರ್ಷಗಳ ಹಿಂದೆ ಮದುವೆಯಾಗಿದ್ದ. ಆದರೆ ಮದುವೆ ಆದಾಗಿನಿಂದಲೂ ದಲಿತ ಸಮುದಾಯಕ್ಕೆ ಸೇರಿದ ಹುಡುಗಿಯನ್ನು ಮದುವೆಯಾಗಿದ್ದೀಯಾ, ನೀನು ನಮ್ಮ ಮನೆಗೆ ಬರುವುದು ಬೇಡವೆಂದು ಹುಡುಗನ ಮನೆಯವರು ಇಬ್ಬರನ್ನೂ ತಮ್ಮೊಂದಿಗೆ ಸೇರಿಸಿಕೊಂಡಿರಲಿಲ್ಲ. ಇದೇ ಕಾರಣಕ್ಕೆ ಪ್ರಸನ್ನ ಪತ್ನಿಗೆ ಕೊಡಬಾರದ ಕಾಟದ ಜೊತೆಗೆ ಚಿತ್ರ ಹಿಂಸೆ ನೀಡುತ್ತಿದ್ದ. ಕುಟುಂಬದವರ ಮಾತು ಕೇಳಿ ಇತ್ತೀಚೆಗೆ ಶಾರದಾಳನ್ನು ದೇವಸ್ಥಾನಕ್ಕೆ ಹೋಗಿ ಬರೋಣ ಎಂದು ಕರೆದುಕೊಂಡು ಹೋಗಿ ಕೊಲೆ ಮಾಡಿ ನಂತರ ಹೃದಯಾಘಾತ ಎಂದು ನಾಟಕ ಮಾಡಿದ್ದಾನೆ ಎಂದು ದೂರಿದರು.
ತಾಯಿಯನ್ನು ಅಪ್ಪನೇ ಕೊಲೆ ಮಾಡಿರುವುದು ಎಂದು ಬಾಲಕಿ ಹೇಳಿದೆ. ಇಷ್ಟಾದರೂ ಪೊಲೀಸರು ಯಡಿಆರ್ ಪ್ರಕರಣ ದಾಖಲಿಸಿ, ಕೊಲೆಯನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಿದ್ದಾರೆ. ಕೂಡಲೇ ಪರಿಶಿಷ್ಟರ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ನಡೆಸಬೇಕು. ಇಲ್ಲದಿದ್ದರೆ ಸಿಐಡಿ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿದರು.
ದಲಿತ ಮುಖಂಡರಾದ ಬಿಎಸ್ಪಿ ರಾಜ್ಯ ಉಸ್ತುವಾರಿ ಗಂಗಾಧರ್ ಬಹುಜನ್, ಕೃಷ್ಣದಾಸ್, ಅಂಬುಗ ಮಲ್ಲೇಶ್, ಹೊನ್ನಯ್ಯ, ಗೌತಂ, ದೇವರಾಜ್, ಶೇಖರ್, ತಿಮ್ಮಯ್ಯ,ಎಚ್.ಕೆ ಸಂದೇಶ್, ಬಿ.ಎಲ್. ಲಕ್ಷ್ಮಣ್, ರಮೇಶ್, ಶಿವಕುಮಾರ್ ಇತರರು ಭಾಗವಹಿಸಿದ್ದರು.

[…] […]