ಹಾಸನ: ನಗರದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಶೀಘ್ರವೇ ಆರಂಭಿಸಬೇಕು, ಜಿಲ್ಲೆಯ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಿ ಜನಾರೋಗ್ಯ ಖಾತ್ರಿಪಡಿಸುವಂತೆ ಆಗ್ರಹಿಸಿ ಇಂದು ಆಸ್ಪತ್ರೆ ಕಟ್ಟಡದ ಮುಂದೆ ಜಿಲ್ಲಾ ಜನಪರ ಸಂಘಟನೆಯವರು ಪ್ರತಿಭಟನಾ ಸಭೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಕಳೆದ ತಿಂಗಳಿನಿಂದೀಚೆಗೆ ಜಿಲ್ಲೆಯಲ್ಲಿ ಸಂಭವಿಸಿದ ಹಠಾತ್ ಸಾವುಗಳು ಎಲ್ಲರನ್ನೂ ಆತಂಕಕ್ಕೆ ಈಡು ಮಾಡಿವೆ. ಹಠಾತ್ ಸಾವು ದೇಶದಾದ್ಯಂತ ಸುದ್ದಿಯಾದವು. ಅದರಲ್ಲೂ ಎಳೆಯರು ಮತ್ತು ಯುವಜನರ ಹಠಾತ್ ಸಾವು ತೀವ್ರ ಆತಂಕ ಸೃಷ್ಟಿಮಾಡಿದೆ. ಸ್ಪರ್ಧಾತ್ಮಕ ಸಮಾಜದಲ್ಲಿ ಜನರು ಅನುಭವಿಸುತ್ತಿರುವ ಆರ್ಥಿಕ, ಸಾಮಾಜಿಕ ತಾರತಮ್ಯ ಮತ್ತು ಕೌಟುಂಬಿಕ ಒತ್ತಡಗಳು ಗಂಭೀರವಾದ ಪರಿಣಾಮಗಳಿಗೆ ಕಾರಣವಾಗುತ್ತಿವೆ.
ಜಿಲ್ಲೆಯ ಆರೋಗ್ಯ ಇಲಾಖೆಗೆ ಮಂಜೂರಾದ 340 ವೈದ್ಯರ ಹುದ್ದೆಗಳಲ್ಲಿ 117 ವೈದ್ಯರ ಹುದ್ದೆ ಖಾಲಿಯಿವೆ. ಅವುಗಳಲ್ಲಿ 36 ತಜ್ಞ ವೈದ್ಯರು, 22 ತುರ್ತು ಚಿಕಿತ್ಸಾ ವೈದ್ಯಾಧಿಕಾರಿಗಳು ಮತ್ತು 52 ಕರ್ತವ್ಯನಿರತ ವೈದ್ಯಾಧಿಕಾರಿಗಳ ಹುದ್ದೆ ಖಾಲಿ ಇವೆ. ಒಟ್ಟು ಮಂಜೂರಾದ 1856 ವೈದ್ಯಕೀಯ ಸಿಬ್ಬಂದಿ ಹುದ್ದೆಗಳಲ್ಲಿ, 815 ಹುದ್ದೆ ಖಾಲಿ ಇವೆ. ಒಟ್ಟು ಮಂಜೂರಾದ 824 ವೈದ್ಯಕೀಯೇತರ ಸಿಬ್ಬಂದಿಗಳ ಹುದ್ದೆಗಳಲ್ಲಿ 664 ಖಾಲಿ ಇವೆ. ಇದನ್ನು ಸರಿಪಡಿಸಿ ಹಿಮ್ಸ್ಗೆ ಬೇಕಾದ ಸೌಲಭ್ಯ ನೀಡಬೇಕು. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆರಂಭಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲೆಗೆ ರೋಗಿಗಳ ಸಂಖ್ಯೆ ಹೆಚ್ಚಳವಾಗುತ್ತಿರುವುದರಿಂದ ಜಿಲ್ಲಾಸ್ಪತ್ರೆ ಮೇಲೆ ತೀವ್ರ ಒತ್ತಡ ಹೆಚ್ಚಾಗುತ್ತಿದೆ. ಅಗತ್ಯ ವೈದ್ಯಕೀಯ ತಜ್ಞರು ಮತ್ತು ಶಸ್ತ್ರಚಿಕಿತ್ಸಾ ತಜ್ಞರು, ವೈದ್ಯಕೀಯ ಮತ್ತು ವೈದ್ಯಕೀಯೇತರ ಸಿಬ್ಬಂದಿ ಕೊರತೆ ತೀವ್ರವಾಗಿದೆ. ಮಾರಣಾಂತಿಕ ಕಾಯಿಲೆಗಳಾದ ಹೃದ್ರೋಗ, ಕ್ಯಾನ್ಸರ್, ಮೂತ್ರಪಿಂಡ, ಮೆದುಳು ಮತ್ತು ನರರೋಗಗಳ ತಪಾಸಣೆ ಮತ್ತು ಚಿಕಿತ್ಸೆಗೆ ಸೂಕ್ತವಾಗುವ ತಜ್ಞ ವೈದ್ಯರು, ಸಿಬ್ಬಂದಿ ಮತ್ತು ವೈದ್ಯಕೀಯ ವ್ಯವಸ್ಥೆಯ ಕೊರತೆಯಿದೆ. ಇತ್ತೀಚೆಗಷ್ಠೆ ಹಿಮ್ಸ್ ನಲ್ಲಿ ಒಬ್ಬರು ಹೃದ್ರೋಗ ತಜ್ಞರು ಕರ್ತವ್ಯ ನಿರ್ವಹಿಸುತ್ತಿದ್ದು ಅವರು ಇಡೀ ಜಿಲ್ಲೆಗೆ ಒಬ್ಬರೇ ವೈದ್ಯರು ಕರ್ತವ್ಯ ನಿರ್ವಹಿಸುವಂತಾಗಿದೆ.
ಹೃದ್ರೋಗ, ನರರೋಗ ಸೇರಿದಂತೆ ಗಂಭೀರ ಸ್ವರೂಪದ ಆರೋಗ್ಯದ ಸಮಸ್ಯೆ ಗಳಿಗೆ ಚಿಕಿತ್ಸೆ ದೊರೆಯುವ ಹಿಮ್ನ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯು ಆರಂಭವಾಗದೇ ಹಾಗೇ ನಿಂತಿದೆ. ಕೂಡಲೇ ಸರ್ಕಾರ ಅಗತ್ಯವಿರುವ ಅನುದಾನ ಬಿಡುಗಡೆಮಾಡಿ, ಸ್ಪೆಷಾಲಿಟಿ ಆಸ್ಪತ್ರೆ ಕಾರ್ಯಾರಂಭಕ್ಕೆ ಅಗತ್ಯ ಅನುಮತಿ ನೀಡುವ ಅಗತ್ಯವಿದೆ ಎಂದರು.
ಮಾರಣಾಂತಿಕ ರೋಗಗಳ ತಪಾಸಣೆ ಮತ್ತು ಚಿಕಿತ್ಸೆ ನೀಡಲು ವೈದ್ಯಕೀಯ ವಿಭಾಗಗಳು, ಕ್ಯಾತ್ ಲ್ಯಾಬ್, ಅತ್ಯಂತ ಸುಸಜ್ಜಿತವಾದ ಅತ್ಯುತ್ತಮ ಗುಣಮಟ್ಟದ ವೈದ್ಯಕೀಯ ಸೌಲಭ್ಯಗಳಿರುವ ಪ್ರತ್ಯೇಕ ಶಸ್ತ್ರಚಿಕಿತ್ಸಾ ಘಟಕಗಳನ್ನು ಕೂಡಲೇ ಪ್ರಾರಂಭಿಸಬೇಕು. ತಜ್ಞ ವೈದ್ಯರು, ವೈದ್ಯಕೀಯ ಮತ್ತು ವೈದ್ಯಕೀಯೇತರ ಸಿಬ್ಬಂದಿ ನೇಮಕ ಮಾಡಬೇಕು. ಇಸಿಜಿ, ಎಕೋ, ಎಕ್ಸ್ ರೇ, ತುರ್ತು ಚಿಕಿತ್ಸಾ ಘಟಕಕ್ಕೆ ಆಂಬ್ಯುಲೆನ್ಸ್ ಹಾಗೂ ತಜ್ಞ ವೈದ್ಯರು ಮತ್ತು ಸಿಬ್ಬಂದಿ ಒದಗಿಸಬೇಕೆಂದರು.
ಈ ವೇಳೆ ಜನಪರ ಚಳವಳಿಯ ಧರ್ಮೇಶ್, ಆರ್.ಪಿ. ವೆಂಕಟೇಶಮೂರ್ತಿ, ರೂಪ ಹಾಸನ, ಎಚ್.ಕೆ. ಸಂದೇಶ್, ಎಚ್.ಆರ್. ನವೀನ್ ಕುಮಾರ್, ಟಿ.ಆರ್.ವಿಜಯಕುಮಾರ್, ಎಂ.ಜಿ. ಪೃಥ್ವಿ, ರಮೇಶ್, ಎಸ್, ಹರೀಶ್ ಕಟ್ಟೆಬೆಳಗುಲಿ, ಶಬ್ಬಿರ್, ಗೀತಾ, ಪುಷ್ಪ, ಭಾನುಮತಿ ಮೊದಲಾದವರಿದ್ದರು.
