ಮುಂಬೈ: 2006ರ ಮುಂಬೈ ರೈಲು ಬಾಂಬ್ ದಾಳಿ ಪ್ರಕರಣದ ಎಲ್ಲಾ 12 ಮಂದಿ ಆರೋಪಿಗಳನ್ನು ಸೋಮವಾರ (ಜು.21) ಬಾಂಬೆ ಹೈಕೋರ್ಟ್ ಖುಲಾಸೆ ಮಾಡಿದೆ. 2006ರ ಟ್ರೈನ್ ಬ್ಲಾಸ್ಟ್ ನಲ್ಲಿ 189 ಮಂದಿ ಸಾವನ್ನಪ್ಪಿ, 800ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
ಮುಂಬೈನ ಉಪನಗರ ರೈಲ್ವೆ ಜಾಲವನ್ನು ಅಲುಗಾಡಿಸಿದ ಸರಣಿ ಸ್ಫೋಟಗಳು ನಡೆದು ಸುಮಾರು ಎರಡು ದಶಕಗಳ ನಂತರ ಈ ಖುಲಾಸೆ ಬಂದಿದೆ.
2015 ರಲ್ಲಿ, ವಿಚಾರಣಾ ನ್ಯಾಯಾಲಯವು ಈ 12 ಆರೋಪಿಗಳನ್ನು ದೋಷಿಗಳು ಎಂದು ತೀರ್ಪು ನೀಡಿ, ಅವರಲ್ಲಿ ಐವರಿಗೆ ಮರಣದಂಡನೆ ಮತ್ತು ಉಳಿದವರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.
ನ್ಯಾಯಮೂರ್ತಿಗಳಾದ ಅನಿಲ್ ಕಿಲೋರ್ ಮತ್ತು ಶ್ಯಾಮ್ ಚಂಡಕ್ ಅವರಿದ್ದ ವಿಭಾಗೀಯ ಪೀಠವು ಆದೇಶದ ಕಾರ್ಯಕಾರಿ ಭಾಗವನ್ನು ಓದಿ, ಪ್ರಾಸಿಕ್ಯೂಷನ್ ಪ್ರಕರಣದಲ್ಲಿನ ಗಂಭೀರ ನ್ಯೂನತೆಗಳನ್ನು ಎತ್ತಿ ತೋರಿಸಿತು. ಪ್ರಮುಖ ಸಾಕ್ಷಿಗಳು ವಿಶ್ವಾಸಾರ್ಹವಲ್ಲ, ಗುರುತಿನ ಪೆರೇಡ್ಗಳು ಪ್ರಶ್ನಾರ್ಹವಾಗಿವೆ ಮತ್ತು ಚಿತ್ರಹಿಂಸೆಯ ಮೂಲಕ ತಪ್ಪೊಪ್ಪಿಗೆಯ ಹೇಳಿಕೆಗಳನ್ನು ಹೊರತೆಗೆಯಲಾಗಿದೆ ಎಂದು ನ್ಯಾಯಾಲಯ ಗಮನಿಸಿತು.
“ಗುರುತಿನ ಪರೇಡ್ ಬಗ್ಗೆ ಪ್ರತಿವಾದಿಗಳು ಗಂಭೀರ ಪ್ರಶ್ನೆಗಳನ್ನು ಎತ್ತಿದ್ದರು. ಅನೇಕ ಸಾಕ್ಷಿಗಳು ಅಸಾಧಾರಣವಾಗಿ ದೀರ್ಘಕಾಲದವರೆಗೆ ಮೌನವಾಗಿದ್ದರು, ಕೆಲವರು ನಾಲ್ಕು ವರ್ಷಗಳಿಗೂ ಹೆಚ್ಚು ಕಾಲ ಮೌನವಾಗಿದ್ದರು, ಆದರೆ ನಂತರ ಇದ್ದಕ್ಕಿದ್ದಂತೆ ಆರೋಪಿಯನ್ನು ಗುರುತಿಸಿದರು. ಇದು ಅಸಹಜವಾಗಿದೆ” ಎಂದು ಪೀಠ ಗಮನಿಸಿತು.
ಆರೋಪಗಳನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾದ ಕಾರಣ ಅಪರಾಧಿಗಳಿಗೆ “ಸಂದೇಹದ ಲಾಭ” ನೀಡಲಾಗಿದೆ ಎಂದು ಪೀಠವು ಗಮನಿಸಿತು. ನ್ಯಾಯಾಲಯವು ಸಾಕ್ಷಿಗಳ ಹೇಳಿಕೆಗಳನ್ನು ಪ್ರಶ್ನಿಸಿತು. ಸ್ಫೋಟಗಳ 100 ದಿನಗಳ ನಂತರ, ಒಬ್ಬ ವ್ಯಕ್ತಿಯು ಶಂಕಿತನನ್ನು ನೆನಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅದು ಗಮನಿಸಿತು.
ತನಿಖೆಯ ಸಮಯದಲ್ಲಿ ವಶಪಡಿಸಿಕೊಂಡ ಸ್ಫೋಟಕಗಳು, ಶಸ್ತ್ರಾಸ್ತ್ರಗಳು ಮತ್ತು ನಕ್ಷೆಗಳು ಸ್ಫೋಟಗಳಿಗೆ ಸಂಬಂಧಿಸಿಲ್ಲ ಎಂದು ನ್ಯಾಯಾಲಯ ಹೇಳಿದೆ. ಸ್ಫೋಟಗಳಲ್ಲಿ ಯಾವ ರೀತಿಯ ಬಾಂಬ್ಗಳನ್ನು ಬಳಸಲಾಗಿದೆ ಎಂಬುದನ್ನು ಪ್ರಾಸಿಕ್ಯೂಷನ್ ಸಾಬೀತುಪಡಿಸಲು ಸಾಧ್ಯವಾಗಲಿಲ್ಲ ಎಂದು ಅದು ಹೇಳಿದೆ.
ಜುಲೈ 11, 2006 ರಂದು, 11 ನಿಮಿಷಗಳ ಒಳಗೆ ಮುಂಬೈ ಸ್ಥಳೀಯ ರೈಲುಗಳಲ್ಲಿ ಏಳು ಬಾಂಬ್ ಸ್ಫೋಟಗಳು ಸಂಭವಿಸಿದವು. ಹಾನಿ ಹೆಚ್ಚಿಸಲು ಬಾಂಬ್ ಸ್ಫೋಟಗಳಿಗೆ ರಿಗ್ಡ್ ಪ್ರೆಶರ್ ಕುಕ್ಕರ್ಗಳನ್ನು ಬಳಸಲಾಗಿತ್ತು. ಜನರು ಕೆಲಸದಿಂದ ಹಿಂತಿರುಗುತ್ತಿದ್ದರಿಂದ ಜನದಟ್ಟಣೆಯ ಸಮಯದಲ್ಲಿ ಈ ಸ್ಪೋಟ ನಡೆಸಲಾಗಿತ್ತು. ಮೊದಲನೆಯದು ಸಂಜೆ 6.24 ಕ್ಕೆ ನಡೆದರೆ ಕೊನೆಯ ಸಂಜೆ 6.35 ಕ್ಕೆ ನಡೆದಿತ್ತು. ಚರ್ಚ್ಗೇಟ್ನಿಂದ ಬರುವ ರೈಲುಗಳ ಪ್ರಥಮ ದರ್ಜೆಯ ವಿಭಾಗಗಳಲ್ಲಿ ಬಾಂಬ್ಗಳನ್ನು ಇರಿಸಲಾಗಿತ್ತು. ಅವು ಮಾತುಂಗಾ ರಸ್ತೆ, ಮಾಹಿಮ್ ಜಂಕ್ಷನ್, ಬಾಂದ್ರಾ, ಖಾರ್ ರಸ್ತೆ, ಜೋಗೇಶ್ವರಿ, ಭಯಂದರ್ ಮತ್ತು ಬೋರಿವಲಿ ನಿಲ್ದಾಣಗಳ ಬಳಿ ಸ್ಫೋಟಗೊಂಡವು.
2015 ರಲ್ಲಿ ವಿಚಾರಣಾ ನ್ಯಾಯಾಲಯವು ಸ್ಫೋಟ ಪ್ರಕರಣದಲ್ಲಿ 12 ಜನರನ್ನು ದೋಷಿಗಳೆಂದು ತೀರ್ಪು ನೀಡಿತ್ತು. ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆಯ ವಿಶೇಷ ನ್ಯಾಯಾಲಯವು ಫೈಸಲ್ ಶೇಖ್, ಆಸಿಫ್ ಖಾನ್, ಕಮಲ್ ಅನ್ಸಾರಿ, ಎಹ್ತೆಶಾಮ್ ಸಿದ್ದುಕಿ ಮತ್ತು ನವೀದ್ ಖಾನ್ ಅವರಿಗೆ ಮರಣದಂಡನೆ ವಿಧಿಸಿತ್ತು. ಇತರ ಏಳು ಅಪರಾಧಿಗಳಾದ ಮೊಹಮ್ಮದ್ ಸಾಜಿದ್ ಅನ್ಸಾರಿ, ಮೊಹಮ್ಮದ್ ಅಲಿ, ಡಾ. ತನ್ವೀರ್ ಅನ್ಸಾರಿ, ಮಜೀದ್ ಶಫಿ, ಮುಝಮ್ಮಿಲ್ ಶೇಖ್, ಸೊಹೈಲ್ ಶೇಖ್ ಮತ್ತು ಜಮೀರ್ ಶೇಖ್ ಅವರಿಗೆ ಪಿತೂರಿಯ ಭಾಗವಾಗಿದ್ದಕ್ಕಾಗಿ ಜೀವಾವಧಿ ಶಿಕ್ಷೆ ವಿಧಿಸಲಾಯಿತು.
ಆದರೆ ಇಂದು ಹೈಕೋರ್ಟ್ ತೀರ್ಪಿನ ನಂತರ ಎಲ್ಲಾ 12 ಅಪರಾಧಿಗಳು ಈಗ ಬಿಡುಗಡೆಯಾಗಲಿದ್ದಾರೆ.

ತಾತ್ಪರ್ಯ>ನ್ಯಾಯಾ ಲಯದ ಸಹವಾಸ ಗೆದ್ದವನು ಸೋತ, ಸೋತವನು ಸತ್ತ