ಬೆಂಗಳೂರು, ಜುಲೈ 25: ಕರ್ನಾಟಕ ನಾಟಕ ಅಕಾಡೆಮಿ 2025–26ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರಕಟಿಸಿದೆ. ಪ್ರಸಿದ್ಧ ಕಲಾ ನಿರ್ದೇಶಕ ಶಶಿಧರ ಅಡಪ ಬಿ. ಅವರನ್ನು ‘ಜೀವಮಾನ ಸಾಧನೆ ಗೌರವ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿ ₹50,000 ನಗದು ಹಾಗೂ ನಟರಾಜ ವಿಗ್ರಹವನ್ನು ಒಳಗೊಂಡಿದೆ.
ಅಕಾಡೆಮಿ ಅಧ್ಯಕ್ಷ ಕೆ.ವಿ. ನಾಗರಾಜ ಮೂರ್ತಿ ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ 34 ಪ್ರಶಸ್ತಿ ಪುರಸ್ಕೃತರ ಪಟ್ಟಿ ಬಿಡುಗಡೆ ಮಾಡಿದರು. ಈ ಸಾಲಿನ ವಾರ್ಷಿಕ ಪ್ರಶಸ್ತಿಗೆ 25 ಮಂದಿ ಭಾಜನರಾಗಿದ್ದಾರೆ. ಈ ನಡುವೆ 2024–25ನೇ ಸಾಲಿನಲ್ಲಿ ನಟ ಪ್ರಕಾಶ್ ರಾಜ್ ಅವರು ಪ್ರಶಸ್ತಿ ನಿರಾಕರಿಸಿದ್ದರಿಂದ ಬಾಕಿ ಉಳಿದಿದ್ದ ಒಂದು ಪ್ರಶಸ್ತಿಗೆ ಉತ್ತರ ಕನ್ನಡದ ಕಲಾವಿದ ಶಂಕರ್ ಭಟ್ ಅವರನ್ನು ಆಯ್ಕೆ ಮಾಡಲಾಗಿದೆ.
ವಾರ್ಷಿಕ ಪ್ರಶಸ್ತಿಗಳು ತಲಾ ₹25,000 ನಗದು ಹಾಗೂ ನಟರಾಜ ವಿಗ್ರಹವನ್ನು ಒಳಗೊಂಡಿವೆ. ಈ ಬಾರಿ ದತ್ತಿನಿಧಿ ಪ್ರಶಸ್ತಿಗಳ ನಗದು ಮೊತ್ತವನ್ನು ₹10,000 ರಿಂದ ₹15,000ಕ್ಕೆ ಹೆಚ್ಚಿಸಲಾಗಿದೆ.
ಪ್ರಶಸ್ತಿ ಪ್ರದಾನ ಸಮಾರಂಭವನ್ನು ಸೆಪ್ಟೆಂಬರ್ ತಿಂಗಳಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಸ್ಥಳ ಹಾಗೂ ದಿನಾಂಕವನ್ನು ನಂತರ ಘೋಷಿಸಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು.
ವಾರ್ಷಿಕ ಪ್ರಶಸ್ತಿ ಪುರಸ್ಕೃತರು (2025–26):
ಜಿ.ಎನ್. ಮೋಹನ್, ಮಾಲತೇಶ ಬಡಿಗೇರ, ಟಿ. ರಘು, ವೆಂಕಟಾಚಲ, ಮುರ್ತುಜಸಾಬ ಘಟ್ಟಿಗನೂರ, ಚೆನ್ನಕೇಶವಮೂರ್ತಿ ಎಂ., ಗೋಪಾಲ ಯಲ್ಲಪ್ಪ ಉಣಕಲ್, ಚಿಕ್ಕಪ್ಪಯ್ಯ, ದೇವರಾಜ ಹಲಗೇರಿ, ವೈ.ಎಸ್. ಸಿದ್ಧರಾಮೇಗೌಡ, ಅರುಣ್ಕುಮಾರ್ ಆರ್.ಟಿ., ರೋಹಿಣಿ ರಘುನಂದನ್, ರತ್ನ ಸಕಲೇಶಪುರ, ವಿ.ಎನ್. ಅಶ್ವಥ್, ಶಿವಯ್ಯ ಸ್ವಾಮಿ ಬಿಬ್ಬಳ್ಳಿ, ಕೆ.ಆರ್. ಪೂರ್ಣೇಂದ್ರ ಶೇಖರ್, ಭೀಮನಗೌಡ ಬಿ. ಕಟಾವಿ, ಕೆ. ಮುರಳಿ, ಮುತ್ತುರಾಜ್, ಮಲ್ಲೇಶ್ ಬಿ. ಕೋನಾಳ, ಸುಗಂಧಿ ಉಮೇಶ್ ಕಲ್ಮಾಡಿ, ಮಹೇಶ ವಿ. ಪಾಟೀಲ, ಶಿವಪುತ್ರಪ್ಪ ಶಿವಸಿಂಪಿ, ಸದ್ಯೋಜಾತ ಶಾಸ್ತ್ರಿ ಹಿರೇಮಠ, ಉದಯ್ ಎಸ್.ಆರ್.
ದತ್ತಿನಿಧಿ ಪ್ರಶಸ್ತಿ ಪುರಸ್ಕೃತರು:
- ಎಚ್.ವಿ. ವೆಂಕಟಸುಬ್ಬಯ್ಯ ದತ್ತಿ ಪುರಸ್ಕಾರ: ಮಂಜಪ್ಪ ಪಿ.ಎ. (ಕೊಡಗು)
- ಬಿ.ಆರ್. ಅರಿಶಿಣಕೋಡಿ ದತ್ತಿ ಪುರಸ್ಕಾರ: ಕಿರಣ್ ರತ್ನಾಕರ ನಾಯ್ಕ (ಉತ್ತರ ಕನ್ನಡ)
- ಕೆ. ರಾಮಚಂದ್ರಯ್ಯ ದತ್ತಿ ಪುರಸ್ಕಾರ: ಸಿ.ವಿ. ಲೋಕೇಶ್ (ದೊಡ್ಡಬಳ್ಳಾಪುರ)
- ಶ್ರೀಮತಿ ಮಾಲತಿಶ್ರೀ ಮೈಸೂರು ದತ್ತಿ ಪುರಸ್ಕಾರ: ಎಚ್.ಪಿ. ಈಶ್ವರಾಚಾರಿ (ಮಂಡ್ಯ)
- ನಟರತ್ನ ಚಿಂದೋಡಿ ವೀರಪ್ಪ ದತ್ತಿ ಪುರಸ್ಕಾರ: ದೊಡ್ಡಮನೆ ವೆಂಕಟೇಶ್ (ಬೆಂಗಳೂರು)
- ಪದ್ಮಶ್ರೀ ಚಿಂದೋಡಿ ಲೀಲಾ ದತ್ತಿ ಪುರಸ್ಕಾರ: ಪಿ.ವಿ. ಕೃಷ್ಣಪ್ಪ (ಬೆಂಗಳೂರು)
- ಕಲ್ಚರ್ಡ್ ಕಮೆಡಿಯನ್ ಕೆ.ಹಿರಣ್ಣಯ್ಯ ದತ್ತಿ ಪುರಸ್ಕಾರ: ನಾಗೇಂದ್ರ ಪ್ರಸಾದ್ (ಬೆಂಗಳೂರು)
