
ನಿಮಗೆ ಇದನ್ನೆಲ್ಲಾ ಹೇಳಲು ತೇಜಸ್ವಿ ನನಗೆ ನಿಮಿತ್ತ…
(ಕಾಡಿನ ಸಂತ–ತೇಜಸ್ವಿ ಪುಸ್ತಕದ ಪರಿಷ್ಕೃತ ಆವೃತ್ತಿ)
ಕಾಸಿನ ಕಟ್ಟೆ
ಹೇಗೆ ಬಾಲ್ಯದಲ್ಲಿ ಪೋಷಕರಿಂದ ಆರೈಕೆ ಪಡೆದು, ಯೌವನದಲ್ಲಿ ತಿರುಗಿಬಿದ್ದು, ಅವರ ವೃದ್ದಾಪ್ಯದಲ್ಲಿ ಕಡೆಗಣಿಸಿ ಆ ಮೂಲಕ ನಮ್ಮ ನೈತಿಕ ಅವನತಿಯನ್ನು ಹೊಂದುತ್ತೇವೆಯೋ ಅದೇ ರೀತಿಯ ಬಲವಂತದ ವೃದ್ದಾಪ್ಯವನ್ನು ನಾವು ನಮ್ಮ ಭೂಮಿಗೆ ದಯಪಾಲಿಸಿದ್ದೇವೆ. ದುಡಿಮೆ ಇಲ್ಲದಿದ್ದರೆ ಇನ್ನೆಲ್ಲಿಯದರೂ ಬೇರೆ ಯಾವುದೇ ರೂಪದಲ್ಲಿಯಾದರೂ ಮಾಡಬಹುದು ಈ ಕಾಡನ್ನು ಪುನಃ ಸೃಷ್ಠಿಸಲು ಸಾಧ್ಯವಿದೆಯಾ? ಪರ್ಯಾಯವೇ ಇಲ್ಲದ ವಿಶಿಷ್ಠ ಮತ್ತು ಅಪರೂಪದ ವೃಕ್ಷ ಸಂಪತ್ತು ಹಾಗೂ ವನ್ಯಜೀವಿಗಳ ನೆಲೆ ಇದಾಗಿದ್ದು, ಇವುಗಳ ಜೈವಿಕ ಮೌಲ್ಯವನ್ನು ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಜನಸಾಮಾನ್ಯರು ಅರಿಯಬೇಕಾದ ಅಗತ್ಯ ಹಿಂದೆಂದಿಗಿಂತಲೂ ಇಂದು ಹೆಚ್ಚಾಗಿದೆ.
ಸಾಮಾನ್ಯ ಜ್ಞಾನವೂ ಸಹಾ ಇಲ್ಲದೇ ನೆಲವಿರುವುದೇ ಅಗೆಯಲಿಕ್ಕಾಗಿ, ಅಭಿವೃದ್ಧಿಯೆಂದರೆ ನೆಲದ ಮೇಲೆ ರಸ್ತೆ ಹಾಸುವುದು, ಬಯಲಲ್ಲಿ ಕಾಂಕ್ರೀಟ್ ರಾಶಿ ಏರಿಸುವುದು ಅಂದುಕೊಂಡಿರುವುದು ನಮ್ಮ ತಿಳುವಳಿಕೆಗಿರುವ ಮಿತಿ. ಅದರಿಂದಾಚೆಗೆ ನಾವು ಯೋಚಿಸುವುದೇ ಇಲ್ಲವಲ್ಲ ಎಂದು ವಿಷಾದವಾಗುತ್ತದೆ. ಅದರಿಂದಾಚೆಗೆ ಯೋಚಿಸದಂತೆ ನಮ್ಮ ಅಜ್ಞಾನ, ಅಮಾಯಕತೆ ಹಾಗೂ ಅಸಹಾಯಕತೆಯೆಂಬ ಮಿತಿಯನ್ನೇ ಬಂಡವಾಳವನ್ನಾಗಿಸಿಕೊಂಡಿದೆ ಈ ವ್ಯವಸ್ಥೆ.
ಹಲವರ ಅಜ್ಞಾನವೇ ಕೆಲವರ ಆಸ್ತಿ. ಜನರಿಗೆ ಬೇಕಾಗಿರುವುದು ಗೌರವಯುತ ಜೀವನ ಮತ್ತು ಸ್ವಾವಲಂಬಿ ಬದುಕು. ಈ ಪ್ರಕೃತಿಯು ನಮ್ಮ ಮುಂದಿನ ದಿನಗಳಲ್ಲಿ ಮೈದೆಳೆಯಲಿರುವ ಜೀವಸಂಕುಲದ ಆಸ್ತಿ. ಈ ಅಮೂಲ್ಯ ಕಾಡುಗಳನ್ನು ರಕ್ಷಿಸಲು, ವಿಸ್ತರಿಸಲು ತ್ವರಿತ ಕ್ರಮ ಕೈಗೊಳ್ಳದಿದ್ದರೆ ಅದು ನಮ್ಮ ಮೂರ್ಖತನದ ಪರಮಾವಧಿ. ರಸ್ತೆ, ಜಲವಿದ್ಯುತ್, ಗಣಿಗಾರಿಕೆ, ತೈಲಸಾಗಣೆ, ಕೃಷಿಗಾಗಿ ಭೂಮಿ ಒತ್ತುವರಿ ಮುಂತಾದುವು ವಿವಿಧ ಯೋಜನೆಗಳ ಹೆಸರಿನಲ್ಲಿ ಪರಿಸರದ ಮೇಲೆ ನಡೆಯುತ್ತಿರುವ ಅಮಾನುಷ ಅತ್ಯಾಚಾರ. ಈ ಕುರಿತು ಸೈದ್ಧಾಂತಿಕ ಹಾಗೂ ತಾರ್ಕಿಕ ಹಿನ್ನೆಲೆಯಿಲ್ಲದೇ ಆ ಯೋಜನೆಗಳ ಪರವಾಗಿ ಮಾತನಾಡುವವರು ಒಂದೋ ಆ ಯೋಜನೆಯಿಂದ ಅನ್ಡ್ಯೂ ಲಾಭ ಪಡೆಯಲು ಹವಣಿಸುತ್ತಿರುವವರು ಅಥವಾ ವಿವೇಕರಹಿತ ಮೂರ್ಖರು.
ಕಾಡಿನೊಳಗೆ ಪ್ರವೇಶಿಸಿದೊಡನೆ ಎದುರಾಗುವ ಮರದಿಂದ ಎಷ್ಟು ಚದರಡಿ ನಾಟಾ ಪಡೆಯಬಹುದೆನ್ನುವುದು, ಕಾಡು ಸವರಿ ತೋಟ ಮಾಡಿದರೆ ಎಷ್ಟು ಬೆಳೆ ತೆಗೆಯಬಹುದೆನ್ನುವುದು, ಕರಿಕಲ್ಲು ಕಿತ್ತರೆ ಎಷ್ಟು ಗಳಿಸಬಹುದೆನ್ನುವುದು, ನೆಲ ಅಗೆದರೆ ಎಷ್ಟು ಅದಿರು ಸಾಗಿಸಬಹುದೆನ್ನುವುದು, ನೀರು ಕಟ್ಟಿ ನಿಲ್ಲಿಸಿದರೆ ಎಷ್ಟು ಕಮಿಷನ್ ಪಡೆಯಬಹುದೆನ್ನುವುದು, ಅರಣ್ಯವಾಸಿಗಳನ್ನು ಸ್ಥಳಾಂತರಿಸಿದರೆ ಹುಟ್ಟುವ ಕಾಲನಿಗಳಲಿ ಎಷ್ಟು ಓಟು ಪಡೆಯಬಹುದೆನ್ನುವುದು, ರಸ್ತೆ ನಿರ್ಮಾಣ ಮಾಡಲು ಗುತ್ತಿಗೆ ನೀಡಿದರೆ ಪಾರ್ಟಿಗೆ ಎಷ್ಟು ಫಂಡ್ ಪಡೆಯಬಹುದೆಂದು ಯೋಚಿಸುವುದನ್ನು ಬಿಟ್ಟು ಮರದ ಮೇಲಿರುವ ಆರ್ಕಿಡ್ಗಳು, ತೊಗಟೆಯಡಿ ವಾಸಿಸುವ ಹುಳುಹುಪ್ಪಟೆಗಳು, ಕಪ್ಪೆಗಳು, ಪೊಟರೆಯ ಪಕ್ಷಿಗಳು, ನೆಲದಡಿಯಿಂದ ಉದ್ಭವವಾಗುವ ಅಣಬೆಗಳು, ಯಾವುದೋ ಕೊರಕಲಿನಿಂದ ಜಿನುಗಿ ಬೃಹತ್ ನದಿಗೆ ಜೀವ ನೀಡುವ ಸರುಕಲುಗಳು, ಲಕ್ಷಾಂತರ ಜೀವಿಗಳಿಗೆ ಆವಾಸಸ್ಥಾನವಾಗಿರುವ ಜವುಗು ಪ್ರದೇಶಗಳು, ತನ್ನದೇ ಆದ ಜೀವವೈವಿದ್ಯ ಪಡೆದಿರುವ ನಮ್ಮ ಲೆಕ್ಕದ ಬಂಜರು ಪ್ರದೇಶ, ಮರಗಳು ಬೇರಿಳಿಸಿ ಬಾಷ್ಪೀಕರಿಸುವ ನೀರು, ಮೇಲ್ಮಣ್ಣಿನ ಸೂಕ್ಷ್ಮ ಜೀವಿಗಳು, ಕಲ್ಲಿನಡಿಯ ನೀರಿನ ಸಂಗ್ರಹ, ದೊಣೆಗಳೊಳಗಿನ ಸರೀಸೃಪಗಳು ಇವುಗಳನ್ನು ಗಮನಿಸಲಿ.
ಇವೆಲ್ಲವೂ ಸೇರಿಯೇ ಅರಣ್ಯವಾಗುತ್ತದೆ. ಅರಣ್ಯ ಇಲಾಖೆಯ ಅಧಿಕಾರಿಗಳಲ್ಲದೇ ಆ ಕ್ಷೇತ್ರದಲ್ಲಿ ಪರಿಣತಿ, ಆಸಕ್ತಿಯುಳ್ಳ ಸ್ವಯಂಸೇವಾ ಸಂಸ್ಥೆಗಳ ಪ್ರತಿನಿಧಿಗಳು, ವಿಜ್ಞಾನಿಗಳು ಸೇರಿ ಸಮಗ್ರವಾಗಿ ಜೀವವೈವಿದ್ಯದ ಉಸ್ತುವಾರಿ ಮಾಡಬೇಕು. ನಮಗೆ ನಮ್ಮ ಅರಣ್ಯ ಪ್ರದೇಶದ ಜೈವಿಕ ಮೂಲಸ್ವರೂಪವನ್ನು ಉಳಿಸಿಕೊಳ್ಳುವುದು ಬೇರೆಲ್ಲದಕ್ಕಿಂತ ಮುಖ್ಯ.
ನಮ್ಮ ನೈಸರ್ಗಿಕ ಸಂಪನ್ಮೂಲಗಳು ಲೂಟಿಯಾಗುತ್ತಿರುವುದನ್ನು ಪ್ರಸ್ತಾಪಿಸುತ್ತಾ “ಲೂಟಿಕೋರರೊಡನೆ ಅರಣ್ಯ ಇಲಾಖೆ, ರೆವಿನ್ಯೂ, ಸರ್ವೆ ಮತ್ತು ವ್ಯಾಪಾರಿಗಳು ಕೈಜೋಡಿಸಿದರೆ ದೇಶವನ್ನೇ ಮಾರುವ ಲೂಟಿಕೋರರ ಇರಾದೆ ಗಟ್ಟಿಗೊಳ್ಳುತ್ತಾ ಹೋಗುತ್ತದೆ. ನಮ್ಮ ಕಾಡುಗಳು ಬಾಗಿಲು ತೆರೆದಿಟ್ಟ ಖಜಾನೆಗಳಾಗಿವೆ’’ ಎಂದು ಎಚ್ಚರಿಸಿದ್ದ ತೇಜಸ್ವಿಗೆ ಪಶ್ಚಿಮಘಟ್ಟದ ಕಾಡಿನಲ್ಲಿ ನಡೆಯುವ ಚಟುವಟಿಕೆಗಳ ಅರಿವಿತ್ತು. ಮರಗಳು ಓಟು ಹಾಕದಿದ್ದರೂ ಈ ದೇಶದ ರಾಜಕಾರಣವನ್ನು ನಿಯಂತ್ರಿಸುತ್ತವೆ ಎಂಬ ಅರಿವಿತ್ತು.
ಲಕ್ಷಾಂತರ ರೂಪಾಯಿ ಬೆಲೆಬಾಳುವ ಒಂದೊಂದು ಮರವೂ, ಕೋಟ್ಯಾಂತರ ತೂಗುವ ಕರಿಕಲ್ಲುಗಳೂ, ದುಡ್ಡು ಹರಡಿ ಬಿದ್ದಂತಿರುವ ಮರಳಿನ ದಿಬ್ಬಗಳೂ ಲೂಟಿಕೋರರ ಕಣ್ಣಮುಂದೆ ಚಿನ್ನದ ಗಣಿಗಳಂತೆ ಕಾಣಲಾರಂಬಿಸಿದವು. ಸಂಪತ್ತನ್ನು ಲೂಟಿ ಹೊಡೆಯುವ, ಹೊಡೆದ ಲೂಟಿಯನ್ನು ಕಾಪಾಡಿಕೊಳ್ಳುವ, ಅದರಿಂದ ಅಧಿಕಾರ ಪಡೆಯುವ, ಪಡೆದ ಅಧಿಕಾರವನ್ನು ಉಳಿಸಿಕೊಳ್ಳುವ ಸಾಧನವಾಗಿ ಈ ಅರಣ್ಯ ಸಂಪತ್ತು ವರ್ತಿಸಲಾರಂಭಿಸಿತು. ಈ ಸನ್ನಿವೇಶದ ಸ್ಥೂಲ ಚಿತ್ರಣ ನಮಗೆ ತೇಜಸ್ವಿಯವರ “ಜುಗಾರಿ ಕ್ರಾಸ್’’ನಲ್ಲಿ ರೋಮಾಂಚನಕಾರಿಯಾಗಿ ತೆರೆದುಕೊಳ್ಳುತ್ತದೆ.
ಮುಂದುವರೆಯುವುದು….
– ಧನಂಜಯ ಜೀವಾಳ ಬಿ.ಕೆ. ಮೂಡಿಗೆರೆ
9448421946