“ಮನಸ್ಸು” ಎನ್ನುವುದನ್ನು ಸೂತ್ರಿಕರಣ ಮಾಡಲು ಸಾಧ್ಯವೇ? ಆದಿ ಕಾಲದಿಂದಲೂ ಮನಸ್ಸು ಎಂಬುದು ಅಸ್ಪಷ್ಟ, ಗೊಂದಲ ಮತ್ತು ಗಡಿ ಕಾಣದ ಕಾರ್ಯಾತ್ಮಕ ಮಾಧ್ಯಮ. ಸಾಮಾನ್ಯವಾಗಿ ಕೆಲವು ಗುಣ ಲಕ್ಷಣಗಳ ಆಧಾರದ ಮೇಲೆ ಮನಸ್ಸನ್ನು ತಿಳಿದುಕೊಳ್ಳಬಹುದು. ಇಂತಹ ಸಾಮಾನ್ಯ ಲಕ್ಷಣಗಳನ್ನು ಮೀರಿದ ಮನಸ್ಸನ್ನು ಮನೋ ವೈದ್ಯರಿಗೆ ಮತ್ತು ಮನೋಶಾಸ್ತ್ರಜ್ಞರಿಗೆ ಮಾತ್ರ ತಿಳಿಯಲು ಸಾಧ್ಯ.
ಅಂದಾಜಿಗೆ ಮನೋವೈದ್ಯ ಶಾಸ್ತ್ರದಲ್ಲಿ ಮನಸ್ಸಿನ ವ್ಯಾಧಿಗಳನ್ನು ಮನೋ ಭ್ರಾಂತು, ಮನೋ ಚಂಚಲತೆ, ಮನೋ ವಿಕೃತ ಮತ್ತು ಮನೋ ಮಂದತೆ ಎಂದು ವಿಂಗಡಿಸಲಾಗಿದೆ. ನನ್ನ ಮನೋ ವೈದ್ಯ ವೃತ್ತಿಯಲ್ಲಿ ಹೆಚ್ಚಾಗಿ ಸಲಹೆಗೆ ಬರುತ್ತಿದ್ದವರು ಚಂಚಲತೆಯ ಮನಸ್ಸು ಉಳ್ಳವರು. ಮನೋವೈದ್ಯ ಶಾಸ್ತ್ರದಲ್ಲಿ ಮನೋವೈದ್ಯರು ಮನೋ ಸಮಸ್ಯೆಗಳನ್ನು ತಿಳಿಯಲು ಮನೋರೋಗಿಯ ಇತಿಹಾಸಕ್ಕೆ ಹೆಚ್ಚು ಒತ್ತು ನೀಡುತ್ತಾರೆ. ನಾನು ಸಹ ಇದರಿಂದ ಹೊರತಾಗಿ ಇರಲಿಲ್ಲ. ಎರಡು ಸಾವಿರ ಹದಿನಾಲ್ಕನೆಯ ಇಸವಿಯ ಮುಂಚೆ “ಯೋಗ” ತಿಳಿದವರಿಗೆ ಮಾತ್ರ ಯೋಗ ಆಗಿತ್ತು. ಈಗಂತೂ “ಯೋಗ” ಮನೆ ಮಾತಾಗಿದೆ ಮತ್ತು ಔಷಧಿಯೂ ಸಹ ಆಗಿದೆ. ಇಂದು ಭಾರತ ಸೇರಿದಂತೆ ಪ್ರಪಂಚಾದ್ಯಂತ “ಯೋಗ” ಎಂಬುದು ಮಲ್ಟಿ ಮಿಲಿಯನ್ ಡಾಲರ್ಸ ವ್ಯವಹಾರ ಆಗಿದೆ. ಯೋಗ ಗುರು “ಋಷಿ ಪತಂಜಲಿ” ಇಂದು ಅವರು ಬದುಕಿದ್ದರೆ ಅವರನ್ನು ಅಪಹರಣ ಮಾಡುತ್ತಿದ್ದರೋ ಏನೋ ತಿಳಿಯದು.

ನಾನು ಈ ಹಿಂದೆ ರೋಗ ಪೂರ್ವ ವಿಷಯಗಳನ್ನು ಕಲೆಹಾಕುತ್ತಿದ್ದಾಗ ಯಾರು ಸಹ ಯೋಗದ ಬಗ್ಗೆ ಪ್ರಸ್ತಾಪಿಸಿದ್ದು ನನ್ನ ನೆನಪಲ್ಲಿ ಉಳಿದಿಲ್ಲ. ಹತ್ತು ವರ್ಷದಿಂದ ಎಲ್ಲರ ಬಾಯಲ್ಲೂ “ಸರ್, ಯೋಗ ಮಾಡ್ತಾ ಇದೀನಿ” ಅಂತ ಹೇಳುವುದನ್ನು ಕೇಳಿಸಿಕೊಂಡು ಬಂದಿರುವೆ. ಋಷಿ ಪತಂಜಲಿಯರ ಸೂತ್ರಗಳನ್ನು ದಿನ ನಿತ್ಯ ಅರ್ಥ ಮಾಡಿಕೊಳ್ಳುವವರಿಗೆ “ಅಂಜಲಿ”, ಅರ್ಥಾತ್ ಮಾನಸಿಕ ಒತ್ತಡಗಳಿಗೆ ಔಷಧೀಯ ಗುಣದಂತೆ ಪರಿಣಾಮಕಾರಿಯಾಗುತ್ತಿತ್ತು ಎಂಬುದನ್ನು “ಅಷ್ಟಾಂಗ ಯೋಗ” ಶಾಸ್ತ್ರದಲ್ಲಿ ತಿಳಿಸಲಾಗಿದೆ.
ಜನ ಸಾಮಾನ್ಯರ ನಡುವೆ ಒಂದು ವಾಕ್ಯ ಬಳಕೆ ಇದೆ, “ಅವನಿಗೆ ಯೋಗ ಹೊಡಿತು”. ಇಲ್ಲಿಯ “ಯೋಗ” ಪದ ಯೋಗದ ವಿರುದ್ದಾರ್ಥಕ ಪದ ಆಗಿದೆ. ಅಂದರೆ, ಆತನಿಗೆ ಯೋಗ (ಹಣ, ಚಿನ್ನ, ವೈಢೂರ್ಯ, ಭೂಮಿ ಇತ್ಯಾದಿ) ಹೊಡೆದಮೇಲೆ ಅವನು “ಭೋಗಾನಂದ” ಆದ ಅಂತ. ಅಂತಹವರು ನಮ್ಮ ಅಕ್ಕ ಪಕ್ಕದಲ್ಲೇ ಇರುವರು. ಇರಲಿ, ಅದು ಅವರ ಯೋಗ. ನಿಜವಾದ “ಯೋಗ” ಸಂಪಾದನೆ ಮಾಡುವುದು ಹೇಗೆ? ಈ ಕ್ರಿಯೆ ತುಂಬ ಕಠಿಣ ಮತ್ತು ಶ್ರಮದಾಯಕ. ನಾವು ಸಂಪಾದನೆ ಮಾಡಿದ ಯೋಗ ನಮ್ಮದಾಯಿತು ಆದರೆ ಯಾರು ಇತರರನ್ನು ಸಹ ತಮ್ಮ ಜೊತೆ ಯೋಗ ಸಂಪಾದನೆಯ ಕಡೆಗೆ ಕರೆದೋಯ್ಯುತ್ತಾರೋ ಅವರು ಶ್ರೇಷ್ಠ ಯೋಗಿ. ಇಂತಹ ನಿಷ್ಕಳಂಕ ಪರಿಶುದ್ಧ ಯೋಗವನ್ನು “ತಂತ್ರ ಯೋಗ” ಎಂಬುದು ತಂತ್ರ ಶಾಸ್ತ್ರದಲ್ಲಿ ಹೇಳಲಾಗಿದೆ. ಅಂತವರಲ್ಲಿ “ಸ್ವರ್ಗೀಯ ರತನ್ ಟಾಟಾ” ಒಬ್ಬರು. ಭಾರತ ದೇಶದ ಜನ ಸಾಮಾನ್ಯ ಆರ್ಥಿಕ ವರ್ಗದವರಿಗೆ ಇವರು ದೇವರಾದವರು. ತಮ್ಮ ಟಾಟಾ ಘಟಕದಿಂದ ತಯಾರಾದ “ಇಂಡಿಕಾ” ನಾಲ್ಕು ಚಕ್ರದ ವಾಹನದಿಂದ ಲಕ್ಷ ಲಕ್ಷಾಂತರ ಕುಟುಂಬಗಳಿಗೆ ಅನ್ನ ದಾತರಾದ ಮಹಾನ್ ಚೇತನಾ ಸ್ವರೂಪಿ ರತನ್ ಟಾಟಾರವರು.

ಯೋಗದ ಮಾರ್ಗದಲ್ಲಿ, ಮುಕ್ತಿ (ಪರಮಾತ್ಮನ ಸಮನಾದ ಅನಂದವನ್ನು ಅಸ್ವಾದಿಸುವುದು) ಅಥವ ಮೋಕ್ಷ (ಅಜ್ಞಾನವನ್ನು ಬೆಳಕಿನಿಂದ ನೋಡುವುದು) ಪಡೆಯುವುದು. ಆದರೆ “ತಂತ್ರ ಯೋಗ” ದಲ್ಲಿ ಮೂರು ಮಾರ್ಗಗಳು ಇವೆ. ಒಂದು “ವಾಮ ಮಾರ್ಗ”, “ಬಲ ಮಾರ್ಗ” ಮತ್ತು “ಅನ್ವೇಷಣಾ ಮಾರ್ಗ”. ಈ ಅಂಕಣದ ಮೂಲ ತತ್ವ ಅನ್ವೇಷಣೆ ಅಥವ ತಂತ್ರ ಯೋಗ. ಮೊದಲೆ ತಿಳಿಸಿದ ಹಾಗೆ ತಂತ್ರ ಎಂಬುದು “ಆತ್ಮವನ್ನು ಹಿಗ್ಗಿಸುವುದು”. ನನ್ನ ಪುಸ್ತಕದ ಶಿರೋ ನಾಮ “ಪರಾತ್ಮ ಆ ಅಂತರ “, ಅಂದರೆ “ಲಭ್ಯವಿರುವ ಜಾಗ ಮತ್ತು ಸಮಯದಲ್ಲಿ ಹಿಗ್ಗಿದ ಆತ್ಮ ಪರರಿಗೆ” ಎಂದು. ಉದಾಹರಣೆಗೆ, ವಿಜ್ಞಾನಿಗಳ ಅನ್ವೇಷಣೆಗಳು.
ಎರಡನೆ ಮಹಾ ಯುದ್ಧ 1939 ರಿಂದ 1945 ನೆ ಇಸವಿಯವರೆಗು ನಡೆದು ಲಕ್ಷಾಂತರ ಯೋಧರು ಮತ್ತು ಮುಗ್ಧ ನಾಗರಿಕರ ಮಾರಣಹೋಮ ಆಗಿತ್ತು ಎನ್ನುವುದು ಇತಿಹಾಸ. ಸರ್ವಾಧಿಕಾರಿ “ಅಡಾಲ್ಫ ಹಿಟ್ಲರ್” ಅಂದು “ಎನಿಗ್ಮ” ಯಂತ್ರ ಸಹಾಯದಿಂದ ತಮ್ಮ ಸೈನ್ಯ ತುಕಡಿಗಳಿಗೆ ಗುಟ್ಟು ಅಥವ ನಿಗೋಡ ತಂತಿ ಸಂಕೇತಗಳನ್ನು ಕಳಿಸಿ ವಿರೋಧಿ ಸೈನ್ಯಗಳ ಮೇಲೆ ವೈಮಾನಿಕ ಸಿಡಿ ಗುಂಡುಗಳನ್ನ ಹಾಕಿ ಸಹಸ್ರಾರು ಸೈನಿಕರನ್ನು ಮತ್ತು ನಾಗರಿಕರನ್ನು ಕೊಲ್ಲುತ್ತಿದ್ದ. ಆಗ ಆಪತ್ಪಬಾಂದವನಂತೆ ಬಂದಿದ್ದು ಬ್ರಿಟಿಷ ದೇಶದ ಗಣಿತಜ್ಞ ಮತ್ತು ಗಣಕ ಯಂತ್ರದ ಪಿತಾಮಹ “ಅಲನ್ ಟುರಿಂಗ್ (1912 – 1954)”. ಇವರಿಂದ ಆವಿಷ್ಕಾರಲ್ಪಟ್ಟ ಗಣಕ ಯಂತ್ರದಿಂದ ಜರ್ಮನಿಯರ “ಎನಿಗ್ಮ” ಯಂತ್ರದ ನಿಗೋಡ ಲಿಪಿಯನ್ನು ಅನಾವರಣಗೊಳಿಸಿ ಲಂಡನ್ ಮೇಲೆ ಬಿಳುವ ವೈಮಾನಿಕ ದಾಳಿಗಳನ್ನು ತಪ್ಪಿಸಿದ್ದರು. ಇದರಿಂದ ಅಲ್ಲಿಯ ಮುಗ್ಧ ನಾಗರಿಕರು ಬದುಕಿ ಉಳಿದರು. 1954 ನೆ ಇಸವಿಯಲ್ಲಿ ಇವರು ಆತ್ಮಹತ್ಯೆ ಮಾಡಿಕೊಂಡರೆಂಬುದು ಇತಿಹಾಸ.
ಇವರ ಮುಂದೆ ನಾವು ಹೇಳಿಕೊಳ್ಳುವ “ಯೋಗ” ಏನೇನು ಅಲ್ಲ. ನಾವು ಆತ್ಮ ಅವಲೋಕನ ಮಾಡಿದಾಗ ..ಒಬ್ಬ ಬಡಪಾಯಿ ರೈತ ಬಿಸಿಲು ಮಳೆ ಲೆಕ್ಕಿಸದೆ ತನ್ನ ತುಂಡು ಭೂಮಿಯಲ್ಲಿ ಬೆಳೆದ ಫಲವನ್ನು ಇತರರಿಗೆ ಕೊಡುತ್ತಾನಲ್ಲ, ಅವನು ಶುದ್ಧ ಯೋಗಿ ಅಲ್ಲವೇ?

ಒಬ್ಬ ವೈದ್ಯ ತನ್ನ ವೈಯಕ್ತಿಕ ದುಡಿಮೆಗಳನ್ನು ಬಿಟ್ಟು ದಿನವಿಡಿ ರೋಗಿಗಳನ್ನು ಔಷದ ಉಪಚಾರ ಮಾಡಿ ವಾಸಿ ಮಾಡಿದವನು ನಿಜವಾದ ಯೋಗಿ ಅಲ್ಲವೇ? ಒಂದು ಕಾರ್ಖಾನೆಯ ಉದ್ಯೋಗದಾತ ಸಾವಿರಾರು ಮಂದಿಗೆ ಉದ್ಯೋಗವನ್ನು ಕಲ್ಪಿಸಿ ತಾನು ಗಳಿಸಿದ ಲಾಭವನ್ನು ಅಲ್ಪ ಪ್ರಮಾಣದಲ್ಲಿ ಇಟ್ಟುಕೊಂಡು ಉಳಿದಿದ್ದನ್ನು ಉದ್ಯೋಗಿಗಳಿಗೆ ಹಂಚುತ್ತಾನಲ್ಲ, ಇವನು ಯೋಗಿ ಆಗಲು ಸಾಧ್ಯವಿಲ್ಲವೇ? ಹೀಗೆ ಇಂತಹ ಪಟ್ಟಿಗಳು ಹಲವಾರು. ಈ ಸೂಕ್ತ ಸಮಯದಲ್ಲಿ ತಂತ್ರ ಯೋಗದ ಒಂದು ವಿಚಾರವನ್ನು ಸಂಕ್ಷಿಪ್ತವಾಗಿ ತಿಳಿಸುವ ಪ್ರಯತ್ನ ಮಾಡುವೆ.
“ಚಿಕ್ಕವ ಯಾವತ್ತೂ ಚಿಕ್ಕವ ಎಂದು ಭಾವಿಸಬಾರದು. ಯಾವಾಗ ದೊಡ್ಡಾತ ಈತನ ಪಕ್ಕದಲ್ಲಿ ಇರುತ್ತಾನೋ ಆಗ ಚಿಕ್ಕವ ಚಿಕ್ಕವನಾಗುತ್ತಾನೆ. ದೂಡ್ಡಾತ, ಚಿಕ್ಕವನನ್ನು ಮೇಲೆ ಎತ್ತುವುದಿಲ್ಲವೋ, ಅಲ್ಲಿಯವರಿಗೂ ದೊಡ್ಡಾತ ಚಿಕ್ಕವನಾಗಿಯೇ ಉಳಿಯುತ್ತಾನೆ”
ಮುಂದುವರಿಯುವುದು…
-ಡಾ॥ ಎ.ಎಂ.ನಾಗೇಶ್
ಖ್ಯಾತ ಮನೋವೈದ್ಯ

