ಕನಕಪುರ: ಸಾತನೂರು ಸಮೀಪದ ಡಾಬಾವೊಂದರಲ್ಲಿ ಸಿನಿಮೀಯ ರೀತಿ ಗ್ರಾಮ ಪಂಚಾಯಿತಿಯ ಕಾಂಗ್ರೆಸ್ ಮಾಜಿ ಅಧ್ಯಕ್ಷನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಅಚಲು ಗ್ರಾಪಂ ಮಾಜಿ ಅಧ್ಯಕ್ಷ ಹಾಗೂ ಹೊಂಗಾಣಿದೊಡ್ಡಿ ನಿವಾಸಿ ನಂಜೇಶ್ (44) ಎಂಬುವರು ಕೊಲೆಗೀಡಾದವರು.
ಹೊಂಗಾಣಿದೊಡ್ಡಿಯಲ್ಲಿ ಕೆಲ ತಿಂಗಳಿಂದ ಅಶಾಂತಿಯ ವಾತಾವರಣವಿದ್ದು, ನಾಲ್ಕು ದಿನಗಳ ಹಿಂದೆ ಗ್ರಾಮದ ಸೈಟ್ ಒಂದರ ವಿಚಾರಕ್ಕೆ ಗಲಾಟೆ ನಡೆದಿತ್ತು. ಈ ಸಂಬಂಧ ಸಾತನೂರು ಪೊಲೀಸರು ಎರಡು ಗುಂಪುಗಳ ನಡುವೆ ದೂರು-ಪ್ರತಿದೂರು ದಾಖಲಿಸಿಕೊಂಡಿದ್ದರು.
ಮೃತ ನಂಜೇಶ್ ವಿರುದ್ಧವೂ ಪ್ರಕರಣ ದಾಖಲಾಗಿತ್ತು. ಪ್ರಕರಣಗಳು ದಾಖಲಾದ ಬೆನ್ನಲ್ಲೇ ಶನಿವಾರ ರಾತ್ರಿ ನಂಜೇಶ್ ಮೇಲೆ ನಡೆದಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ನಂಜೇಶ್ ಅವರನ್ನು ಆಸ್ಪತ್ರೆಗೆ ಸ್ನೇಹಿತರು ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ಶನಿವಾರ ರಾತ್ರಿ ಮೃತಪಟ್ಟಿದ್ದಾರೆ.
ಇನ್ನು ಹೊಂಗಾಣಿದೊಡ್ಡಿಯಲ್ಲಿ ಭಾನುವಾರ ಮಧ್ಯಾಹ್ನ ನಂಜೇಶ್ ಅಂತ್ಯಕ್ರಿಯೆ ನಡೆಯಿತು. ಈ ವೇಳೆ ಅಂತಿಮ ದರ್ಶನ ಪಡೆಯಲು ಬಂದ ಅಚ್ಚಲು ಪಂಚಾಯಿತಿಯ ಬಿಜೆಪಿ ಗ್ರಾಪಂ ಸದಸ್ಯನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆದಿದೆ. ಬೊಮ್ಮನಹಳ್ಳಿ ಕುಮಾರಸ್ವಾಮಿ ಎಂಬುವರು ಹಲ್ಲೆಗೊಳಗಾದವರು. ಸ್ಥಳದಲ್ಲಿದ್ದ ತಾಪಂ ಮಾಜಿ ಅಧ್ಯಕ್ಷ ದೊಡ್ಡಆಲಹಳ್ಳಿ ಕೃಷ್ಣಪ್ಪ ಸೇರಿ ಮತ್ತಿತರರು ಕುಮಾರಸ್ವಾಮಿ ಅವರನ್ನು ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ. ದಾಳಿಯಿಂದ ಗಂಭೀರ ಗಾಯಗೊಂಡ ಕುಮಾರಸ್ವಾಮಿ ಅವರನ್ನು ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ನಿಮ್ಹಾನ್ಸ್ಗೆ ರವಾನಿಸಲಾಗಿದೆ.
