ನವದೆಹಲಿ, ಆಗಸ್ಟ್ 1: ಅಮೆರಿಕದ ಎಫ್-35 ಶ್ರೇಣಿಯ ಯುದ್ಧವಿಮಾನ ಖರೀದಿಸುವ ಆಲೋಚನೆಯನ್ನು ಭಾರತ ಅಧಿಕೃತವಾಗಿ ಕೈಬಿಟ್ಟಿದ್ದು, ಈ ನಿರ್ಧಾರ ವಿದೇಶಾಂಗ ಮತ್ತು ಆರ್ಥಿಕ ಸಂಬಂಧಗಳ ಬೆಳವಣಿಗೆಯ ನಡುವೆ ಮಹತ್ವದ ಬೆಳಕು ಚೆಲ್ಲಿದೆ.
ಅಮೆರಿಕ ಭಾರತದ ಮೇಲೆ ಶೇ.25ರಷ್ಟು ಆಮದು ಸುಂಕವನ್ನು ಹೇರಿರುವ ಹಿನ್ನೆಲೆಯಲ್ಲಿ, ಈ ಯುದ್ಧವಿಮಾನ ಖರೀದಿಯಿಂದ ಹಿಂದೆ ಸರಿಯಲಾಗಿದೆ ಎಂದು ಹೇಳಲಾಗಿದೆ. ಇದನ್ನು ಭಾರತ retaliatory step (ಪ್ರತಿಕ್ರಿಯಾತ್ಮಕ ಕ್ರಮ) ಎಂದೇ ಪರಿಗಣಿಸಿಲ್ಲ. ಯಾವುದೇ ಪ್ರತಿಸುಂಕ ವಿಧಿಸುವ ಯೋಚನೆಯೂ ಇಲ್ಲ ಎಂದು ಅಧಿಕೃತ ಮೂಲಗಳು ಸ್ಪಷ್ಟಪಡಿಸಿವೆ. ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದದ ಚರ್ಚೆಗಳು ಇನ್ನೂ ಅಂತಿಮ ಹಂತಕ್ಕೆ ತಲುಪಿಲ್ಲ.
ಇದೀಗ ತಕ್ಷಣಕ್ಕೆ, ಭಾರತ ಈ ವ್ಯಾಪಾರ ತೆರಿಗೆಯನ್ನು ಸಹಿಸಿಕೊಳ್ಳಬೇಕಾಗುತ್ತದೆ ಎನ್ನುವುದು ವಾಸ್ತವ. ಈ ನಡುವೆ, ಪ್ರಧಾನಮಂತ್ರಿ ನರೇಂದ್ರ ಮೋದಿ ಅಮೆರಿಕಕ್ಕೆ ಭೇಟಿ ನೀಡಿದ ವೇಳೆ, ಡೊನಾಲ್ಡ್ ಟ್ರಂಪ್ ಅವರು ಭಾರತಕ್ಕೆ ಎಫ್-35 ಫೈಟರ್ ಜೆಟ್ನ್ನು ಆಫರ್ ಮಾಡಿದ್ದನ್ನು ಸ್ಮರಿಸಬಹುದು.
ಸ್ವಾವಲಂಬಿ ಭಾರತದತ್ತ ದಿಟ್ಟ ಹೆಜ್ಜೆ:-
ಅಮೆರಿಕದ ಲಾಕ್ಹೀಡ್ ಮಾರ್ಟಿನ್ ಕಂಪನಿಯು ತಯಾರಿಸುವ ಎಫ್-35 ಯುದ್ಧವಿಮಾನ ಜಂಟಿಯಾಗಿ ತಯಾರಿಸಲು ಭಾರತ ಕೇಳಿದರೂ, ಅಮೆರಿಕ ಸಹಕಾರ ನೀಡಲಿಲ್ಲ. ಇದರಿಂದ ಸ್ವದೇಶಿ ತಂತ್ರಜ್ಞಾನ ಅಭಿವೃದ್ಧಿಗೆ ಮಹತ್ವ ನೀಡುತ್ತಿರುವ ಭಾರತ, ತಮ್ಮದೇ ಆದ ಐದನೇ ತಲೆಮಾರಿನ ಫೈಟರ್ ಜೆಟ್ ಅಭಿವೃದ್ಧಿಗಾಗಿ ಎಎಂಸಿಎ (Advanced Medium Combat Aircraft) ಪ್ರಾಜೆಕ್ಟ್ನ್ನು ಆರಂಭಿಸಿದೆ.
ಇದು ಭಾರತ ಭದ್ರತಾ ನೀತಿಯಲ್ಲಿಯೂ ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗುತ್ತಿದೆ. ದೇಶೀಯ ಶಸ್ತ್ರಾಸ್ತ್ರ ತಯಾರಿಕೆಗೆ ಜೋರಾಗಿರುವ ಭಾರತ, ವಿದೇಶಿ ಅವಲಂಬನೆ ಕಡಿಮೆ ಮಾಡುವ ಉದ್ದೇಶ ಹೊಂದಿದ್ದು, ಈ ನಿರ್ಧಾರವು ಅದನ್ನು ಬಲಪಡಿಸುತ್ತದೆ.
ಪರಿಸ್ಥಿತಿ ಯಥಾವತ್ತೆ:-
ಚೀನಾ ಹಾಗೂ ರಷ್ಯಾ ಕೂಡ ಐದನೇ ತಲೆಮಾರಿನ ಫೈಟರ್ ಜೆಟ್ಗಳನ್ನು ಹೊಂದಿದ್ದು, ಫ್ರಾನ್ಸ್ನ ರಫೇಲ್ ಯುದ್ಧವಿಮಾನವು ಐದನೇ ತಲೆಮಾರಿನಲ್ಲಿ ಸೇರದು. ಭಾರತವು ಇಂತಹ ಅತಿ ಆಧುನಿಕ ತಂತ್ರಜ್ಞಾನವನ್ನು ದೇಶೀಯವಾಗಿ ಅಭಿವೃದ್ಧಿಪಡಿಸುವ ಕನಸು ಕಟ್ಟಿಕೊಂಡಿದ್ದು, ಅದು ಮುಂದೆ ತನ್ನ ತಾಂತ್ರಿಕ ಸ್ವಾವಲಂಬನೆಯ ಸಂಕೇತವಾಗಲಿದೆ.
