ನವದೆಹಲಿ, ಆಗಸ್ಟ್ 6: ಪಾಕಿಸ್ತಾನದ ಪರವಾಗಿ ಚೀನಾ ನಿಲುವು ತಳೆದ ಬಳಿಕ ಭಾರತ ಮತ್ತು ಚೀನಾ ದೇಶಗಳ ನಡುವಿನ ಸಂಬಂಧ ಮತ್ತಷ್ಟು ಹಳಸಿದೆ. ಇದರ ಬೆನ್ನಲ್ಲೇ ಆಗಸ್ಟ್ 31ರಿಂದ ಸೆಪ್ಟೆಂಬರ್ 1ರವರೆಗೆ ಶಾಂಘೈ ಸಹಕಾರ ಸಂಸ್ಥೆ (ಎಸ್ಸಿಒ) ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಚೀನಾದ ಟಿಯಾಂಜಿನ್ಗೆ ಭೇಟಿ ನೀಡಲಿದ್ದಾರೆ.
ಇದು 2020ರ ಗಲ್ವಾನ್ ಘರ್ಷಣೆಯ (Galwan Clash) ನಂತರ ಅವರ ಮೊದಲ ಚೀನಾ ಭೇಟಿಯಾಗಿದೆ. ಪ್ರಧಾನಿ ಮೋದಿ ಕೊನೆಯ ಬಾರಿಗೆ 2019ರಲ್ಲಿ ಚೀನಾಕ್ಕೆ ಭೇಟಿ ನೀಡಿದ್ದರು. ಹೀಗಾಗಿ, ಈ ಭೇಟಿ ಭಾರೀ ಮಹತ್ವ ಪಡೆದಿದೆ.
ಎಸ್ಸಿಒ ಶೃಂಗಸಭೆಯಲ್ಲಿ ಭಾಗವಹಿಸುವ ಮೊದಲು ಪ್ರಧಾನಿ ಮೋದಿ ಆಗಸ್ಟ್ 30ರಂದು ಜಪಾನ್ಗೆ ಭೇಟಿ ನೀಡಲಿದ್ದಾರೆ. ಅಲ್ಲಿ ಅವರು ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರೊಂದಿಗೆ ವಾರ್ಷಿಕ ಭಾರತ-ಜಪಾನ್ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಅಲ್ಲಿಂದ ಅವರು ಚೀನಾಕ್ಕೆ ತೆರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಳೆದ ಜೂನ್ನಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಚೀನಾದ ಕ್ವಿಂಗ್ಡಾವೊದಲ್ಲಿ ನಡೆದ SCO ರಕ್ಷಣಾ ಸಚಿವರ ಸಭೆಯಲ್ಲಿ ಭಾಗವಹಿಸಿದ್ದರು. ಅಲ್ಲಿ ಅವರು ಭಯೋತ್ಪಾದನೆ ಮತ್ತು 26 ಜನರ ಸಾವಿಗೆ ಕಾರಣವಾದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಗ್ಗೆ ಭಾರತದ ನಿಲುವನ್ನು ದುರ್ಬಲಗೊಳಿಸಬಹುದೆಂಬ ಕಾರಣಕ್ಕೆ ಭಯೋತ್ಪಾದನೆಯ ವಿಷಯದ ಬಗ್ಗೆ ಭಿನ್ನಾಭಿಪ್ರಾಯದಿಂದಾಗಿ ಜಂಟಿ ಹೇಳಿಕೆ ನೀಡದಿರಲು ನಿರ್ಧರಿಸಿದ್ದರು. ಇದು ಭಾರೀ ಚರ್ಚೆಗೆ ಕಾರಣವಾಗಿತ್ತು.
ಮೂಲಗಳ ಪ್ರಕಾರ, SCO ಅಧ್ಯಕ್ಷ ಸ್ಥಾನವನ್ನು ಹೊಂದಿರುವ ಚೀನಾ ಮತ್ತು ಅದರ ಸಾರ್ವಕಾಲಿಕ ಸ್ನೇಹಿತ ದೇಶವಾದ ಪಾಕಿಸ್ತಾನವು SCO ದಾಖಲೆಯಲ್ಲಿ ಭಯೋತ್ಪಾದನೆಯಿಂದ ಗಮನವನ್ನು ಬೇರೆಡೆಗೆ ತಿರುಗಿಸಲು ಪ್ರಯತ್ನಿಸಿತು. ಪಹಲ್ಗಾಮ್ ದಾಳಿಯ ಯಾವುದೇ ಉಲ್ಲೇಖವನ್ನು ಅಲ್ಲಿ ಮಾಡಲಿಲ್ಲ. ಹೀಗಾಗಿ, ಭಾರತ ಜಂಟಿ ಹೇಳಿಕೆ ನೀಡದಿರಲು ನಿರ್ಧರಿಸಿತ್ತು.
ಚೀನಾದಲ್ಲಿ ನಡೆಯುವ ಶೃಂಗಸಭೆಯ ಸಮಯದಲ್ಲಿ ರಷ್ಯಾದ ಅಧ್ಯಕ್ಷ ಪುಟಿನ್ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರೊಂದಿಗೆ ಮೋದಿ ಅನೌಪಚಾರಿಕ ಸಭೆಗಳನ್ನು ನಡೆಸುವ ಸಾಧ್ಯತೆಯಿದೆ. ಇದಕ್ಕೂ ಮೊದಲು ಅಕ್ಟೋಬರ್ 2024ರಲ್ಲಿ ಕಜಾನ್ನಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಭೇಟಿಯಾಗಿದ್ದರು. ಅದರ ನಂತರ, ಎರಡೂ ದೇಶಗಳ ನಡುವಿನ ಗಡಿ ಉದ್ವಿಗ್ನತೆಯನ್ನು ಕಡಿಮೆ ಮಾಡುವ ಪ್ರಯತ್ನಗಳು ವೇಗವನ್ನು ಪಡೆದವು.
ಪೂರ್ವ ಲಡಾಖ್ನ ಗಲ್ವಾನ್ನಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವಿನ ಘರ್ಷಣೆಯ ನಂತರ ಭಾರತ ಮತ್ತು ಚೀನಾ ನಡುವಿನ ಸಂಬಂಧದಲ್ಲಿ 2020ರಲ್ಲಿ ಬಿರುಕು ಬಿಟ್ಟಿತ್ತು. 1962ರ ಯುದ್ಧದ ನಂತರ ಉಭಯ ದೇಶಗಳ ನಡುವಿನ ಈ ಮೊದಲ ಹಿಂಸಾತ್ಮಕ ಘರ್ಷಣೆಯಲ್ಲಿ 20 ಭಾರತೀಯ ಸಿಬ್ಬಂದಿ ಪ್ರಾಣ ಕಳೆದುಕೊಂಡರು ಮತ್ತು ಚೀನಾದ ಕಡೆಯಿಂದ ಕೂಡ ಸಾವುನೋವುಗಳು ವರದಿಯಾಗಿತ್ತು.
4 ವರ್ಷಗಳಿಗೂ ಹೆಚ್ಚು ಕಾಲದ ಉದ್ವಿಗ್ನ ಸಂಬಂಧಗಳ ನಂತರ ಅಕ್ಟೋಬರ್ 23, 2024ರಂದು ಕಜಾನ್ನಲ್ಲಿ ನಡೆದ 16 ನೇ ಬ್ರಿಕ್ಸ್ ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರನ್ನು ಭೇಟಿಯಾದರು. ಆ ವೇಳೆ ಭಾರತ-ಚೀನಾ ಗಡಿ ಪ್ರದೇಶಗಳಲ್ಲಿ 2020ರಲ್ಲಿ ಉದ್ಭವಿಸಿದ ಸಮಸ್ಯೆಗಳ ಪರಿಹಾರಕ್ಕಾಗಿ ಒಪ್ಪಂದವನ್ನು ಉಭಯ ನಾಯಕರು ಸ್ವಾಗತಿಸಿದರು. ಭಿನ್ನಾಭಿಪ್ರಾಯಗಳು ಮತ್ತು ವಿವಾದಗಳನ್ನು ಸರಿಯಾಗಿ ನಿರ್ವಹಿಸುವ ಮತ್ತು ಅವು ಶಾಂತಿ ಮತ್ತು ನೆಮ್ಮದಿಗೆ ಭಂಗ ತರದಂತೆ ನೋಡಿಕೊಳ್ಳುವ ಮಹತ್ವವನ್ನು ಪ್ರಧಾನಿ ಮೋದಿ ಒತ್ತಿ ಹೇಳಿದ್ದರು.
