ಅಮೆರಿಕ ಮೊದಲು’ ಎಂಬ ಘೋಷವಾಕ್ಯದೊಂದಿಗೆ ಅಮೆರಿಕವನ್ನು ಮತ್ತೊಮ್ಮೆ ವಿಶ್ವದ ಶ್ರೀಮಂತ ರಾಷ್ಟ್ರವನ್ನಾಗಿಸುವ ಪಣ ತೊಟ್ಟಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತನ್ನ ಉದ್ದೇಶವನ್ನು ಈಡೇರಿಸಿಕೊಳ್ಳಲು ವಾಮಮಾರ್ಗ ಹಿಡಿದಿರುವುದು ಈಗಾಗಲೇ ಜಗಜ್ಜಾಹೀರಾಗಿದೆ.
ಅಮೆರಿಕದಿಂದ ರಫ್ತಾಗುವ ಸರಕುಗಳಿಗೆ ಒಂದಿಷ್ಟು ಹೆಚ್ಚಿನ ಪ್ರಮಾಣದಲ್ಲಿ ಸುಂಕ ವಿಧಿಸುತ್ತಿರುವ ರಾಷ್ಟ್ರಗಳನ್ನು ಗುರಿಯಾಗಿಸಿ, ಅಲ್ಲಿಂದ ಅಮೆರಿಕ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಗಣನೀಯ ಪ್ರಮಾಣದ ಸುಂಕ ವಿಧಿಸುವ ಮೂಲಕ ಆ ರಾಷ್ಟ್ರಗಳ ಆರ್ಥಿಕತೆಗೆ ಹೊಡೆತ ನೀಡುವ ಪ್ರಯತ್ನದಲ್ಲಿ ಟ್ರಂಪ್ ನಿರತರಾಗಿದ್ದಾರೆ.
ಈಗ 2ನೇ ಹಂತದಲ್ಲಿ ಟ್ರಂಪ್ ತಮ್ಮೆಲ್ಲ ಹುಳುಕುಗಳನ್ನು ಮುಚ್ಚಿಟ್ಟು, ಇಲ್ಲಸಲ್ಲದ ನೆಪ ಹೇಳಿ ಕೆಲವು ರಾಷ್ಟ್ರಗಳ ಮೇಲೆ ಅಗಾಧ ಪ್ರಮಾಣದಲ್ಲಿ ಸುಂಕ ಹೇರುವ ಮೂಲಕ ಮತ್ತೊಮ್ಮೆ ಜಾಗತಿಕ ಮಾರುಕಟ್ಟೆಯಲ್ಲಿ ಆತಂಕದ ವಾತಾವರಣ ಸೃಷ್ಟಿಸಿದ್ದಾರೆ. ಈ ಬಾರಿ ಟ್ರಂಪ್ ಕೆಂಗಣ್ಣಿಗೆ ಗುರಿಯಾಗಿರುವುದು ಆರ್ಥಿಕತೆಯಲ್ಲಿ ಒಂದಿಷ್ಟು ಮುಂಚೂಣಿಯಲ್ಲಿ ಸಾಗುತ್ತಿರುವ ಭಾರತ, ಬ್ರೆಜಿಲ್, ಚೀನ, ಜಪಾನ್ನಂತಹ ಅಭಿವೃದ್ಧಿಶೀಲ ರಾಷ್ಟ್ರಗಳು. ಭಾರತದಿಂದ ಅಮೆರಿಕಕ್ಕೆ ರಫ್ತಾಗುವ ಸರಕುಗಳ ಮೇಲೆ ಶೇ.50ರಷ್ಟು ಸುಂಕ ವಿಧಿಸುವ ಕಾರ್ಯಾದೇಶಕ್ಕೆ ಅಂಕಿತ ಹಾಕಿರುವ ಟ್ರಂಪ್ ಮುಂದಿನ ದಿನಗಳಲ್ಲಿ ಚೀನದ ಮೇಲೂ ಇಂತಹುದೇ ನಿರ್ಧಾರ ಕೈಗೊಳ್ಳುವ ಸುಳಿವು ನೀಡಿದ್ದಾರೆ.
ತನ್ನ ಈ ನಿರ್ಧಾರಕ್ಕೆ ಭಾರತವು ರಷ್ಯಾದಿಂದ ಕಚ್ಚಾತೈಲ ಆಮದು ಮಾಡಿಕೊಳ್ಳುವುದನ್ನು ಮುಂದುವರಿಸಿರುವುದರಿಂದಾಗಿ ಉಕ್ರೇನ್ ವಿರುದ್ಧ ರಷ್ಯಾ ನಡೆಸುತ್ತಿರುವ ಸಮರಕ್ಕೆ ಪರೋಕ್ಷ ಪ್ರೋತ್ಸಾಹ ನೀಡುತ್ತಿದೆ ಎಂಬ ನೆಪವನ್ನು ಮುಂದೊಡ್ಡಿದ್ದಾರೆ. ಒಂದೆಡೆಯಿಂದ ಅಮೆರಿಕ ಮಾತ್ರ ಯಾರಿಗೂ ಗೊತ್ತಿಲ್ಲ ಎಂಬಂತೆ ವರ್ತಿಸಿ ರಷ್ಯಾದೊಂದಿಗೆ ವ್ಯಾಪಾರವನ್ನು ಮುಂದುವರಿಸಿದ್ದರೆ ಮತ್ತೂಂದೆಡೆಯಿಂದ ಇತರ ರಾಷ್ಟ್ರಗಳು ರಷ್ಯಾದೊಂದಿಗೆ ವ್ಯಾಪಾರ ನಡೆಸಬಾರದು ಎಂಬ ಟ್ರಂಪ್ ಅವರ ಎಡಬಿಡಂಗಿ ನಿಲುವು ತೀರಾ ಹಾಸ್ಯಾಸ್ಪದ.
ಅಮೆರಿಕದೊಂದಿಗಿನ ವ್ಯಾಪಾರ ಬಿಕ್ಕಟ್ಟು ತೀವ್ರಗೊಂಡಿರುವಂತೆಯೇ ಭಾರತ, ಚೀನ, ಬ್ರೆಜಿಲ್, ರಷ್ಯಾ, ಜಪಾನ್ ಪರಸ್ಪರ ಸಂಪರ್ಕ ಸಾಧಿಸುವ ಮೂಲಕ ಟ್ರಂಪ್ ಅವರ ಈ ಸುಂಕಾಸ್ತ್ರದ ಸವಾಲನ್ನು ಎದುರಿಸಲು ಪ್ರತಿ ತಂತ್ರವನ್ನು ಹೆಣೆಯುವ ಕಾರ್ಯದಲ್ಲಿ ನಿರತವಾಗಿವೆ. ಟ್ರಂಪ್ ಭಾರತದ ವಿರುದ್ಧ ಸುಂಕ ಸಮರದ ಎಚ್ಚರಿಕೆ ನೀಡುತ್ತಿರುವಂತೆಯೇ ಭಾರತದ ಪ್ರಧಾನಿ ಈ ಮಾಸಾಂತ್ಯದಲ್ಲಿ ಚೀನ ಪ್ರವಾಸ ಕೈಗೊಳ್ಳುವ ನಿರ್ಧಾರ ಕೈಗೊಂಡಿದ್ದಾರೆ.
ಟ್ರಂಪ್ ಅವರ ವ್ಯಾಪಾರ ತಂತ್ರದ ವಿರುದ್ಧ ಭಾರತ ಮತ್ತು ಚೀನ ಪರಸ್ಪರ ಜಂಟಿಯಾಗಿ ಹೋರಾಟ ನಡೆಸಲು ಸಜ್ಜಾಗಿವೆ. ದಶಕಗಳಿಂದಲೂ ಭಾರತದ ಪರಮಾಪ್ತ ರಾಷ್ಟ್ರವೆಂದು ಗುರುತಿಸಿಕೊಂಡು ಬಂದಿರುವ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಕೂಡ ಶೀಘ್ರ ಭಾರತ ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ. ಇನ್ನು ಬ್ರೆಜಿಲ್, ಜಪಾನ್ ಕೂಡ ಭಾರತದೊಂದಿಗೆ ನಿಕಟ ಸಂಪರ್ಕವಿರಿಸಿ ಕೊಂಡಿವೆ.
ಚೀನಾದಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಘದ ಶೃಂಗದಲ್ಲಿ ಬ್ರಿಕ್ಸ್ ರಾಷ್ಟ್ರಗಳು ಅಮೆರಿಕದ ಸುಂಕ ನೀತಿಗೆ ಪ್ರತಿಯಾಗಿ ಒಮ್ಮತದ ಕಾರ್ಯತಂತ್ರವನ್ನು ರೂಪಿಸಿ ಮುನ್ನಡೆಯುವ ಸಾಧ್ಯತೆಗಳು ದಟ್ಟವಾಗಿವೆ. ಟ್ರಂಪ್ ಅವರ ಈ ಸುಂಕಾಸ್ತ್ರ ಪ್ರಯೋಗದಂತಹ ಅತಿರೇಕದ ನಡೆ ಅವರ ಅಪ್ರಬುದ್ಧ ರಾಜತಾಂತ್ರಿಕತೆಗೆ ಸಾಕ್ಷಿಯಾಗಿರುವುದೇ ಅಲ್ಲದೆ ಸದ್ಯೋಭವಿಷ್ಯದಲ್ಲಿ ಇದು ಅಮೆರಿಕನ್ನರು ಮತ್ತು ಟ್ರಂಪ್ ಅವರ ಪಾಲಿಗೇ ತಿರುಗುಬಾಣವಾಗಿ ಪರಿಣಮಿಸುವ ಎಲ್ಲ ಸಾಧ್ಯತೆಗಳು ಸ್ಪಷ್ಟವಾಗಿ ಗೋಚರಿಸತೊಡಗಿವೆ. ಈಗ ಭಾರತ ಸಹಿತ ಇತರ ರಾಷ್ಟ್ರಗಳ ವಿರುದ್ಧ ಕೈಗೊಂಡಿರುವ ಸುಂಕ ಸಮರ ಅಮೆರಿಕದ ಆರ್ಥಿಕತೆಗೆ ತಾತ್ಕಾಲಿಕ ವೇಗವನ್ನು ನೀಡಬಹುದಾದರೂ ದೀರ್ಘಕಾಲಿಕವಾಗಿ ಇದು ಅಲ್ಲಿನ
ವ್ಯಾಪಾರ-ವಹಿವಾಟು, ಉದ್ಯಮ, ಆರ್ಥಿಕತೆಗೆ ಬಲವಾದ ಹೊಡೆತ ನೀಡಲಿರುವುದಂತೂ ಸ್ಪಷ್ಟ.
