ಚಿಕ್ಕವನಿದ್ದಾಗಲಿಂದಲೂ ನನಗೆ ಆಟ ಆಡುವುದೆಂದರೆ ಬಲು ಪ್ರಾಣ. ಓದಿದ್ದು ಕಮ್ಮಿ, ಆಡಿದ್ದೇ ಹೆಚ್ಚು. ಅದರಲ್ಲೂ ಬ್ಯಾಟ್ ಉಪಯೋಗಿಸಿ ಆಡುವಂತಹ ಆಟಗಳೆಂದರೆ ಇಷ್ಟ. ಬಾಲ್ ಬ್ಯಾಟ್ಮಿಂಟನ್, ಶಟ್ಟಲ್ ಕಾಕ್, ಟೆನ್ನಿಸ್ ಹೀಗೆ ಹಂತಹಂತವಾಗಿ ಆಡುತ್ತಾ ಬಂದಿರುವೆ. ಜೂಜು ನನಗೆ ಇಷ್ಟವಿಲ್ಲದ ಕಾರಣ ಕ್ರಿಕೆಟ್ ನನ್ನಿಂದ ದೂರವಾಯಿತು. ನಾನು ವೃತ್ತಿಪರನಿದ್ದಾಗ ಬೆಳಿಗ್ಗೆ ಟೆನ್ನಿಸ್ ಆಡದಿದ್ದರೆ ಅಂದಿನ ದಿನವೇ ಸಾಗುತ್ತಿರಲಿಲ್ಲ.
ನಮ್ಮ ಕ್ಲಬ್ಬಿನ ಟೆನ್ನಿಸ್ ಅಂಕಣ ಮಣ್ಣಿನ ಅಂಕಣವಾಗಿದ್ದರಿಂದ ಮಳೆ ಬಂದಾಗ ಆಟಸಿಕ್ಕರುಕ್ಕೆ ವಿರಾಮ. ಅಂತ ದಿನಗಳಲ್ಲಿ ನನ್ನ ಅಭ್ಯಾಸ ವಾಕಿಂಗ್ (ವಾಯು ವಿಹಾರ). ನಾನೊಬ್ಬನೆ ನೆಡೆಯುವುದೆಂದರೆ ಬಹು ಖುಷಿ. ಹೀಗೆ ವಾಕ್ ಮಾಡುತಿದ್ದಾಗ ನನಗೆ ತಿಳಿದಿರುವ ಒಬ್ಬರು ದಾರಿಯಲ್ಲಿ . ಉಭಯ ಕುಶಲೋಪರಿ ವಿನಮಯ ಮಾಡಿ ಜೊತೆಯಲ್ಲೇ ಗಾಳಿ ವಿಹಾರ ಮಾಡುತ್ತಿರುವಾಗ ಸುಮಾರು ಒಂದು ಕಿಲೋಮೀಟರ್ ಹೋಗಿರಬಹುದು “ಡಾಕ್ಟ್ರೇ ನೀವು ಎಷ್ಟು ಆಸ್ತಿ ಮಾಡಿದ್ದೀರಿ?” ಎಂಬ ಪ್ರಶ್ನೆ ಹಾಕಿದರು.
ಇವರ ಮೊದಲನೆ ಮಗ ತನ್ನ ಸ್ನೇಹತರ ಜೊತೆ ಕಾರಿನಲ್ಲಿ ಬಹು ವೇಗವಾಗಿ ಹೆದ್ದಾರಿಯಲ್ಲಿ ಕಾರ್ ಚಾಲನೆ ಮಾಡುತ್ತಿರುವಾಗ ಅಪಘಾತಕ್ಕೆ ಬಲಿ ಆದ ಎನ್ನುವ ವಿಷಯ ತಿಳಿದಿದ್ದೆ. ಆಗಲಿಂದಲೂ ಆ ಘಟನೆಯನ್ನು ಮರೆಯಲು ಇವರು “ಯೋಗ” ಅಭ್ಯಾಸ ಮತ್ತು ಯೋಗ ಶಾಲೆಗೆ ಹೋಗುತ್ತಿರುವ ವಿಚಾರ ನನಗೆ ತಿಳಿದಿತ್ತು. ತಾರ್ಕಿಕವಾಗಿ ನನಗೆ ಅರ್ಥವಾಗದ ವಿಷಯ ” ಯೋಗ” ಮತ್ತು “ಆಸ್ತಿ”. ನನ್ನ ಚಿತ್ತ ಈ ಸಂದಿಗ್ಧ ಸ್ಥಿತಿಯ ಕಡೆ ಹರಿದಾಡಲು ಶುರುವಾಯಿತು. “ಭೋಗದ ಸ್ವರೂಪ ಯೋಗವೋ ಅಥವ ಯೋಗದ ಮೂಲ ಭೋಗ ತ್ಯಜಿಸುವಿಕೆಯೋ?” ಹೀಗಿರುವಾಗ “ಯೋಗ” ಎಂತಾದ್ದು?
ಯೋಗ ಪದದ ಅರ್ಥ “ಮಿಕ್ಸ್, ಸೇರು ಅಥವ ಬೆರೆಸು”. ಬೆರೆಸುವಂತಹ ಅಂಶ ಅಥವ ಮಾಧ್ಯಮ ಯಾವುದು? ಸಾಮಾನ್ಯವಾಗಿ ಯೋಗದ ವಿವರಣೆ “ಮಾನವನ ಜ್ಞಾನವನ್ನು ಆ ಪರಮಾತ್ಮನ ಪ್ರಜ್ಞೆಯೊಂದಿಗೆ ಸೇರಿಸು ಅಥವ ಬೆರೆಸು” ಎಂಬುದು ಆಗಿರುತ್ತದೆ. ಪರಮಾತ್ಮನ ಪ್ರಜ್ಞೆಯೊಂದಿಗೆ ನನ್ನ ಅರಿವನ್ನು ಸೇರಿಸಿದರೆ ಆಸ್ತಿಯ ಬಗ್ಗೆ ನಾನು ಮಾತಾಡಬಹುದೇ? ಆಸ್ತಿ ಎಂಬುದು ನನ್ನ ಮನಸ್ಸಾಗಿದ್ದರೆ ಮತ್ತು ಆ ಪರಮಾತ್ಮನ ಮನಸ್ಸು ಜ್ಞಾನವಾಗಿದ್ದರೆ, ಈ ಮಿಕ್ಸ್ ಹೇಗೆ ಸಾಧ್ಯ?
ಮನುಷ್ಯರ ಸಕಲ ಸಂಪತ್ತು ಐಶ್ವರ್ಯ ಹಾಗು ಅಹಂಕಾರ. ಪರಮಾತ್ಮನ ಸಂಪತ್ತು ಜ್ಞಾನ, ಕರುಣೆ ಮತ್ತು ಕೃಪೆಗಳು. ಹೀಗಿದ್ದಾಗ ಆ ಪರಮಾತ್ಮನ ಸಾಧನೆಯನ್ನು ನಾನು ಹೇಗೆ ಪಡೆಯಬಹುದು? ಮಾನವ ತನ್ನ ಎಲ್ಲಾ ಸಂಪತ್ತನ್ನು ತ್ಯಜಿಸಿದಾಗ ಮಾತ್ರ ಪರಮಾತ್ಮನ ಸಿದ್ದಿಯನ್ನು ಪಡೆಯಬಹುದು.
ಪರಮಾತ್ಮನನ್ನು ಕುರಿತು “ನೀನು ಅಜ್ಞಾನಿ ಆಗು ಅಥವ ವ್ಯಾಪಾರಿ ಆಗು” ಎಂದು ಹೇಳಲು ಸಾಧ್ಯವೇ? ಇಲ್ಲ, ಆತನಿಗೆ ತಿಳಿಸಲು ಆ ಪರಮಾತ್ಮ ನಮಗೆ ಕಾಣುವುದಿಲ್ಲ, ಅವನ ಜೊತೆ ಮಾತನಾಡಲು ಆಗುವುದಿಲ್ಲ ಮತ್ತು ಇವನಲ್ಲಿ ವ್ಯವಹರಿಸಲು ಅಸಾಧ್ಯ. ಹೀಗೆ ಇರುವಾಗ ಎರಡು ವಿರುದ್ಧ ಮಾಧ್ಯಮಗಳು ಅಥವ ಆತ್ಮಗಳು ಹೇಗೆ ಒಂದಾಗುತ್ತಾವೆ. ಹೀಗಿರಬೇಕಾದರೇ ಇವತ್ತಿನ ಯೋಗ ಎಂಬುದು ಡೊಂಗಿಯೇ? ನಾನು ಯಾವ ವಿದ್ವಾಂಸರ ವಿರುದ್ಧವೂ ಅಲ್ಲ ಅಥವ ಯೋಗ ಶಿಕ್ಷಕರ ವಿರುದ್ಧವೂ ಅಲ್ಲ. ಇಲ್ಲಿಯ ವಿವರಣೆ ನನ್ನ ವೈಯಕ್ತಿಕ ವಿಷಯ.

ಋಷಿ ಪತಂಜಲಿಯರ ಹೆಸರು “ಗೋವಿಂದ ಭಟ್ಟ”. ಸುಮಾರು ಮೂರು ಸಾವಿರ ವರ್ಷಗಳ ಹಿಂದೆ “ಯೋಗ ಸೂತ್ರ” ಗಳನ್ನು ಬರೆದಿದ್ದರು. ಇವರ ಒಂದೊಂದು ಸೂತ್ರವನ್ನು ಮನಗೊಂಡು ಅರ್ಥ ಮಾಡಿಕೊಂಡರೆ ಮೋಕ್ಷಕ್ಕೆ ಹೆದ್ದಾರಿ ಅಂತ ಹೇಳಿದ್ದರು. ಈ ಋಷಿಯ ಒಂದೊಂದು ಸೂತ್ರದ ಅರ್ಥ ಮನಸ್ಸಿಗೆ “ಅಂಜಲಿ (ಔಷದಿ ಪ್ರಮಾಣ)”, ಅಂದರೆ ನಮ್ಮ ಮನಸ್ಸಿನ ಸಮತೋಲನಕ್ಕೆ ಔಷಧವಲ್ಲದ ಔಷಧಿ. ಆದುದರಿಂದ ಈ ಋಷಿಯ ಹೆಸರು “ಪತಂಜಲಿ” ಆಗಿ ಪರಿವರ್ತನೆ ಆಯಿತು.
ಋಷಿ ಪತಂಜಲಿಯವರ ಅಷ್ಟಾಂಗ ಯೋಗ ಎಂಟು ಅಂಗಗಳು ಇವೆ. ಇವುಗಳಲ್ಲಿ ಮೂರು ಅಂಗಗಳು ಮಾತ್ರ ಪ್ರಪಂಚಾದ್ಯಂತ ಪ್ರಚಲಿತವಾಗಿದೆ. ಅವು “ಯೋಗಾಸನ, ಪ್ರಾಣಾಯಾಮ ಮತ್ತು ಧ್ಯಾನ”. ಧ್ಯಾನವನ್ನು ಕುರಿತಂತೆ ನಾನು ಸಿದ್ಧಪಡಿಸಿರುವ ಸಿದ್ದಾಂತವನ್ನು ಸಂಕ್ಷಿಪ್ತವಾಗಿ ತಿಳಿಸುವ ಪ್ರಯತ್ನ ನನ್ನದು. ಈ ಧ್ಯಾನದ ಶಿರೋನಾಮ “ಕಣ್ಣು ತೆರೆದು ಧ್ಯಾನಿಸು“. ನಾವು ಕಣ್ಣು ಮುಚ್ಚಿ ಧ್ಯಾನಿಸುತ್ತಿರುವಾಗ ಮೆದುಳಿನ ತರಂಗಗಳಲ್ಲಿ “ಆಲ್ಫಾ” ತರಂಗಗಳು ಹೆಚ್ಚಾಗಿ ಉತ್ಪನ್ನವಾಗುತ್ತದೆ. ಅಂದರೆ ಕಣ್ಣು ಮುಚ್ಚಿದಾಗ ಬಾಹ್ಯ ದೃಶ್ಯ ಸಂಕೇತಗಳ ಸಂಪರ್ಕವನ್ನು ಕಳೆದುಕೊಂಡು ಆಲ್ಫಾ ತರಂಗ ಹೆಚ್ಚಾಗುತ್ತದೆ. ನನ್ನ ವಾದ ಕಣ್ಣು ತೆರೆದಾಗ ಇದೇ ಆಲ್ಫಾ ತರಂಗಗಳನ್ನು ವೃದ್ಧಿ ಮಾಡಿಸುವ ಪ್ರಯತ್ನ ಸಾಧ್ಯವೇ? ವಿಜ್ಞಾನ ಸಾಧ್ಯವಿದೆ ಎಂದು ಹೇಳಿದೆ. ಹಲವಾರು ಸಂಶೋಧನೆಗಳು ಈ ನಿಟ್ಟಿನಲ್ಲಿ ಸಾಗುತ್ತಿವೆ.
ಮೇಲೆ ತಿಳಿಸಿದಂತೆ “ಮಿಕ್ಸ್” ಅಥವ ಬೆಸೆಯುವ ಕಾರ್ಯ ಯಾವ ಮಾಧ್ಯಮ ( ಮೀಡಿಯಮ್) ಮಧ್ಯೆ ನಡೆಯಬೇಕು? ಗೌತಮ ಬುದ್ಧರು ತಮ್ಮ ಜೀವಿತ ಸಮಯದಲ್ಲಿ ಸುಮಾರು ಇಪ್ಪತ್ತು ವರ್ಷಗಳ ಕಾಲ ಧ್ಯಾನಾಸಕ್ತರಾಗಿದ್ದರು ಎನ್ನುವುದನ್ನು ಬೌದ್ಧ ಧರ್ಮ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ಇಲ್ಲಿ ಒಂದು ವಿಷಯ ಜ್ಞಾಪಕದಲ್ಲಿ ಇಟ್ಟುಕೊಳ್ಳಬೇಕಾಗಿರುವುದು ಯಾವುದು ಎಂದರೆ ಗೌತಮ ಬುದ್ಧ ಧ್ಯಾನಿಸುತ್ತಿರುವಾಗ ತನ್ನ ಅರ್ಧ ಕಣ್ಣನ್ನು ತೆರೆದು ಧ್ಯಾನಿಸುತ್ತಿದ್ದರು. ಈ ವಿಷಯದ ದಾಖಲಾತಿ ಬೌದ್ಧ ಗ್ರಂಥಗಳಲ್ಲಿ ಓದಲು ಸಿಗುವುದು. ಸಾವಿರಾರು ವರ್ಷಗಳ ಹಿಂದೆ ಮೆದುಳಿನ ತರಂಗಗಳನ್ನು ತಿಳಿಯಲು ಯಾವುದೇ ಯಂತ್ರ ಇರಲಿಲ್ಲ. ಈಗ ಇಂತಹ ತರಂಗಗಳನ್ನು “ಎಲೆಕ್ಟ್ರೋ ಎನಸೆಫಲೋ ಗ್ರಾಫ್” ಮೂಲಕ ತಿಳಿಯಲು ಸಾಧ್ಯ.

ಗೌತಮ ಬುದ್ಧ ಕಣ್ಣು ತೆರೆದು ಧ್ಯಾನಿಸುತ್ತಿದ್ದಾಗ ಅವರ ಮೆದುಳಿನಲ್ಲಿ ಸದಾಕಾಲ “ಆಲ್ಫಾ” ವೇವ್ಸಿಂದ ತುಂಬಿತ್ತು ಎಂಬುದಾಗಿ ಈಸ್ಟರ್ನ ಅತೀಂದ್ರಿಯ ಅಧ್ಯಾತ್ಮ ಪುಸ್ತಕಗಳಲ್ಲಿ ತಿಳಿಸಲಾಗಿದೆ.
ಉದಾಹರಣೆಗೆ ಒಬ್ಬ ವ್ಯಕ್ತಿ ತಾನು ಶಾಂತತೆ, ಕರುಣಾಮಯಿ ಮತ್ತು ನಮ್ರತೆಯಿಂದ ಇದ್ದರೆ ಆತನನ್ನು ಈ ಈ ಜಿ (ಎಲೆಕ್ಟ್ರೋ ಎನಸೆಫಲೋ ಗ್ರಾಫ್) ಯಂತ್ರದಿಂದ ಮೆದುಳನ್ನು ಪರೀಕ್ಷಿಸಿದಾಗ ಹೆಚ್ಚು ಹೆಚ್ಚು ಅಲ್ಫಾ ತರಂಗಗಳು ಇರುವುದನ್ನು ನರ ವಿಜ್ಞಾನಿಗಳು ಕಂಡು ಹಿಡಿದಿರುವ ಲೇಖನಗಳು ವೈದ್ಯಕೀಯ ಜರ್ನಲ್ಗಳಲ್ಲಿ ಓದಲು ಸಿಗುವುದು.
ವರ್ಷ ವರ್ಷಗಳ ಕಾಲ ಗೌತಮ ಬುದ್ಧರ ಧನಾತ್ಮಕ ಧ್ಯಾನ ಆಸಕ್ತಿಯ ಮೆದುಳಲ್ಲಿ ಯಾವ ತರಂಗ ಇರಲು ಸಾಧ್ಯ? ಆಲ್ಫಾ ವೇವ್ಸಿಂದ ಮಾತ್ರ ಸಾಧ್ಯ. ಇಂತಹ ತರಂಗ ಮಾಧ್ಯಮ ನಾವು ಪಡೆಯಲು ಸಾಧ್ಯ ಇಲ್ಲವೇ? ಖಂಡಿತ ಸಾಧ್ಯ. ನನ್ನ “ಕಣ್ಣು ತೆರೆದು ಧ್ಯಾನಿಸು” ವಿನ ಚಿಂತನೆಗಳು ಇದೇ ಆಗಿರುತ್ತದೆ. ಸಂಸಾರದ ವಿಷಯ ಗೌತಮ ಬುದ್ಧರದ್ದು ಎಂದು ಆಗಿದ್ದರೆ, ವೇದಾಂತದ ವಿಚಾರ ಭೂಮಿ, ಮಾನವ, ಆಚಾರ ಮತ್ತು ವಿಜ್ಞಾನದ ವಿಷಯಗಳು. ಸಂಸಾರಿಗಳ ಮೂಲ ತತ್ವ ಹೊಂದಾಣಿಕೆ. ಸಮಸ್ಯೆ ಎಂದೂ ನಮ್ಮ ಮತ್ತು ಪರಮಾತ್ಮರ ನಡುವೆ ಉದ್ಭವಿಸುವುದಿಲ್ಲ.

ಮಾನಸಿಕ ಅಸಮತೋಲನ ಎರಡು ಅಥವ ಮೂರು ಆತ್ಮಗಳ ನಡುವೆ ಮಾತ್ರ. ಉದಾಹರಣೆಗೆ ಸಂಸಾರ ಚೌಕಟ್ಟಿನ ಬಂಧು ವರ್ಗದವರ ಆತ್ಮಗಳ ಮಧ್ಯೆ ವ್ಯಕ್ತಿತ್ವದ ತಿಕ್ಕಾಟ, ಅಹಂಗಳ ಪ್ರತಿಷ್ಠೆ, ನವ ಪೀಳಿಗೆಯ ಅಂತರ, ವರ್ತನೆಗಳ ಅಭಾವ, ನಡವಳಿಕೆಗಳ ಕುಂದು ಕೊರತೆಗಳು, ಆರ್ಥಿಕ ಮತ್ತು ಶೈಕ್ಷಣಿಕ ಸಮಸ್ಯೆಗಳು, ವಿರುದ್ಧ ಭಾವನೆಗಳು ಹೀಗೆ ಒಂದಾ ಎರಡಾ, ಅನೇಕ ಒಗಟುಗಳು ಮತ್ತು ತೊಡಕುಗಳು. ಇಂತಹ ಸಮಸ್ಯೆಗಳಿಂದ ದೂರ ಇರಬೇಕು ಅಂದರೆ ನಾವು ನಮ್ಮ ಕಣ್ಣುಗಳನ್ನು ತೆರೆದು ಸಂಸಾರದ ಆತ್ಮಗಳ ಜೊತೆ ಬೆಸೆಯುವಂತಹ ಕಾರ್ಯ ಮಾಡಬೇಕು.

ಈ ಮಿಕ್ಸ್ ಹೇಗೆ ಸಾಧ್ಯ? ನಮ್ಮಲ್ಲಿ ಇರುವ ಮನಸ್ಸಿನ ಸಲಕರಣೆಗಳನ್ನು ವೃದ್ದಿಸುವ ಪ್ರಯತ್ನ ಮಾಡಿದರೆ ಸಾಧ್ಯ. ಆ ಸಲಕರಣೆಗಳು “ತಾಳ್ಮೆ, ಅರ್ಥಗ್ರಹಿಕೆ, ತರ್ಕ, ವಿವೇಕ, ಜ್ಞಾನ, ಸಾಮಾನ್ಯ ಜ್ಞಾನ, ಕಲಿಕೆ, ನೋಡಿ ಕಲಿಯುವುದು, ಮೌನ, ಇತ್ಯಾದಿ”. ಇವುಗಳಿಂದ ಸಂಸಾರದ ಗೊಂದಲಗಳಿಗೆ ಉತ್ತರಗಳು ಸಿಗುತ್ತವೆ ಎನ್ನುವುದು ನನ್ನ ಭಾವನೆ.
“ಧ್ಯಾನಾಸಕ್ತ ಮಂತ್ರ ಹಾಗು ಧನಾತ್ಮಕ ಯಂತ್ರ, ಇದುವೇ ತಂತ್ರ”
ಮುಂದುವರಿಯುವುದು…
-ಡಾ॥ ಎ.ಎಂ.ನಾಗೇಶ್
ಖ್ಯಾತ ಮನೋವೈದ್ಯ

