ಹಾಸನ: ಅರಸೀಕೆರೆ ವಿಧಾನಸಭಾ ಕ್ಷೇತ್ರದ ಬಾಣಾವರ ಗ್ರಾಮಪಂಚಾಯತ್ನಲ್ಲಿ ಪ್ರಧಾನಿ ಆವಾಸ್ ಯೋಜನೆ (PMAY) ಅಡಿ ಮನೆ ಹಂಚಿಕೆಯಲ್ಲಿ ಭ್ರಷ್ಟಾಚಾರ, ಅವ್ಯವಹಾರ ನಡೆದಿದೆ ಎಂಬುದನ್ನು ಸ್ವತಃ ಶಾಸಕರೇ ಒಪ್ಪಿಕೊಂಡಿದ್ದಾರೆ ಎಂದು ಜೆಡಿಎಸ್ ಮುಖಂಡ ಎನ್.ಆರ್. ಸಂತೋಷ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮ್ಮದೇ ಸರ್ಕಾರ ಅಧಿಕಾರದಲ್ಲಿರುವಾಗಲೇ ತಕ್ಷಣ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು ಹಾಗೂ ಶಾಸಕರಾದ ಕೆ.ಎಂ. ಶಿವಲಿಂಗೇಗೌಡರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಂತೋಷ್, “ಕೇಂದ್ರ ವಸತಿ ಯೋಜನೆಯಡಿ 90 ಮಂದಿ ಫಲಾನುಭವಿಗಳಿಗೆ ಹಣ ಬಿಡುಗಡೆ ಮಾಡುವಲ್ಲಿ ಬೋಗಸ್ ನಡೆದಿದೆ. ಈ ಭ್ರಷ್ಟಾಚಾರಕ್ಕೆ ಕಾರಣರಾದವರು ಶಾಸಕರೇ ಶಿಫಾರಸು ಮಾಡಿ ನೇಮಕ ಮಾಡಿಸಿರುವ ಅಧಿಕಾರಿಗಳು” ಎಂದು ದೂರಿದರು.
ಬಾಣಾವರ ಪಿಡಿಒ ಕುಮಾರಸ್ವಾಮಿ ಎನ್. ಹಿಂದೆ ಹಬ್ಬನಘಟ್ಟ ಪಂಚಾಯತ್ನಲ್ಲಿ ಕರ್ತವ್ಯಲೋಪ ಆರೋಪದಡಿ ಅಮಾನತು ಗೊಂಡಿದ್ದರೂ, ಬಳಿಕ ಶಾಸಕರೇ ಅವರನ್ನು ಬಾಣಾವರ ಪಿಡಿಒ ಆಗಿ ನೇಮಕ ಮಾಡಿಸಿದ್ದರು. ಇಷ್ಟೆಲ್ಲ ಅವ್ಯವಹಾರಗಳಿಗೆ ಕುಮಾರಸ್ವಾಮಿಯೇ ಕಾರಣವಾಗಿದ್ದು, ಇವರ ನೇಮಕಕ್ಕೆ ಶಾಸಕರ ಮೌಖಿಕ ಆದೇಶವೇ ಕಾರಣ ಎಂದು ಆಗಿನ ತಾಪಂ ಇಒ ನಾಗರಾಜ್ ನೀಡಿದ ವರದಿಯಲ್ಲಿದೆ ಎಂದು ಅವರು ಹೇಳಿದರು.
“ಯಾವ ಅಧಿಕಾರಿ ಶಾಸಕರ ಮಾತು ಕೇಳುತ್ತಾನೋ, ಸಹಿ ಹಾಕುತ್ತಾನೋ ಅವನನ್ನೇ ಗ್ರಾಮಪಂಚಾಯತ್ಗಳಿಗೆ ಪ್ರಭಾರಿಯಾಗಿ ನೇಮಕ ಮಾಡಿಸುತ್ತಿದ್ದಾರೆ. ನಮ್ಮ ಬಳಿ ಸಾಕ್ಷಿಗಳಿವೆ. ನರೇಗಾ ಅಡಿ 5 ಕೋಟಿ ಬಿಲ್ ಪಾವತಿ ಯಾರ ಹೆಸರಿಗೆ ಆಗಿದೆ ಎಂದು ಶಾಸಕರು ಬಹಿರಂಗಪಡಿಸಲಿ” ಎಂದು ಸವಾಲು ಹಾಕಿದ ಸಂತೋಷ್, ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ ಎಂದು ಶಾಸಕರು ಹೇಳಿದ್ದರೂ, ಇದುವರೆಗೆ ಕ್ರಮ ಕೈಗೊಂಡಿಲ್ಲವೆಂದು ಪ್ರಶ್ನಿಸಿದರು.
ಅರಸೀಕೆರೆಯಲ್ಲಿ ಪ್ರಾಮಾಣಿಕ ಅಧಿಕಾರಿಗಳಿಗೆ ಜಾಗವಿಲ್ಲ, ಶಾಸಕರ ತಾಳಕ್ಕೆ ಕುಣಿಯುವವರಿಗೇ ಮಣೆ ಹಾಕಲಾಗುತ್ತಿದೆ ಎಂದು ಆರೋಪಿಸಿದ ಸಂತೋಷ್, “ಕ್ಷೇತ್ರದಲ್ಲಿ ನಡೆದಿರುವ ಎಲ್ಲ ಭ್ರಷ್ಟಾಚಾರವನ್ನು ಹಂತ ಹಂತವಾಗಿ ಬಯಲು ಮಾಡುತ್ತೇವೆ. ಬಡವರಿಗೆ ಅನ್ಯಾಯ ಮಾಡಿದವರ ವಿರುದ್ಧ ಹೋರಾಟ ಮುಂದುವರಿಯುತ್ತದೆ” ಎಂದು ಘೋಷಿಸಿದರು.
ಸುದ್ದಿಗೋಷ್ಟಿಯಲ್ಲಿ ನಾಗರಾಜ್, ಭೋಜನಾಯಕ, ಅಜ್ಜಪ್ಪ, ಉಮೇಶ್ ಹಾಗೂ ಜಯರಾಮ್ ಉಪಸ್ಥಿತರಿದ್ದರು.
