
ನಿಮಗೆ ಇದನ್ನೆಲ್ಲಾ ಹೇಳಲು ತೇಜಸ್ವಿ ನನಗೆ ನಿಮಿತ್ತ…
(ಕಾಡಿನ ಸಂತ–ತೇಜಸ್ವಿ ಪುಸ್ತಕದ ಪರಿಷ್ಕೃತ ಆವೃತ್ತಿ)
ಹುಳು- ಹುಪ್ಪಟೆ ನೋಡಲು ಜನ ಬರ್ತಾರಾ ???
ಮೂಡಿಗೆರೆಯಲ್ಲಿರುವ ಕೃಷಿ ಸಂಶೋಧನಾ ಕೇಂದ್ರದ ಶ್ರೀ ಬೆಳವಾಡಿ ಮತ್ತು ತೇಜಸ್ವಿಯವರದ್ದು ಬಹಳ ವರ್ಷಗಳ ಸ್ನೇಹ. ಬೆಳವಾಡಿಯವರು ಮತ್ತು ಅವರ ಪತ್ನಿಯವರಾದ ಶ್ರೀಮತಿ ಪಾರ್ವತಿಯವರು ಈ ದೇಶ ಕಂಡ ಅತ್ಯುತ್ತಮ ಕೀಟ ಶಾಸ್ತ್ರಜ್ಞರಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಈ ಇಬ್ಬರು ತಮ್ಮ ಸೇವಾವಧಿಯಲ್ಲಿ ಸಂಶೋಧನೆಗಾಗಿ ತಮ್ಮ ಶಿಷ್ಯವೃಂದ ಹಾಗೂ ಸಹೋದ್ಯೋಗಿಗಳೊಡನೆ ಸಂಗ್ರಹಿಸಿದ ಕೀಟಮಾದರಿಗಳ ಬೃಹತ್ ಸಂಗ್ರಹವೇ ಇದೆ.
ಜನಸಾಮಾನ್ಯರಿಗೆ ನಿಲುಕದ ಹಾಗೂ ಅರ್ಥವಾಗದಂತೆಯೇ ಇದ್ದ ಕೀಟಶಾಸ್ತ್ರವನ್ನು ಸಣ್ಣ ಮಕ್ಕಳಿಗೂ ತಿಳಿಯುವಂತೆ ಅನಾವರಣಗೊಳಿಸಿದ ಔದಾರ್ಯ ಈ ತಂಡದ್ದು. ತಮ್ಮ ಸೇವಾವಧಿಯಲ್ಲಿ ಸಂಗ್ರಹಿಸಿದ ಕೀಟಗಳನ್ನು ಸಾರ್ವಜನಿಕರಿಗೆ ಅದರಲ್ಲೂ ಮುಖ್ಯವಾಗಿ ವಿದ್ಯಾರ್ಥಿಗಳಿಗೆ ಪ್ರದರ್ಶಿಸಿ ಅವರಲ್ಲಿ ಕೀಟ ಪ್ರಪಂಚದ ಬಗ್ಗೆ ಕುತೂಹಲ ಮೂಡುವಂತೆ ಮಾಡಲು ನಮ್ಮ ನೇಚರ್ ಕ್ಲಬ್ನ ಸಹಯೋಗದಲ್ಲಿ ಕಾರ್ಯಕ್ರಮವನ್ನು ಆಯೋಜಿಸಿದ್ದೆವು.
ತೇಜಸ್ವಿಯವರನ್ನು ಉದ್ಘಾಟನೆಗೆ ಆಹ್ವಾನಿಸಿದಾಗ “ಹುಳು ಹುಪ್ಪಟೆ ನೋಡಲು ಜನ ಬರ್ತಾರೇನ್ರೋ? ನಿಮಗೆಲ್ಲೋ ಒಂಥರಾ ಭ್ರಮೆ! ನೋಡೋಣ ಅದೇನು ಮಾಡ್ತೀರೋ, ಗೊತ್ತಾಗುತ್ತಲ್ಲಾ” ಎಂದರು. ಮೂರು ದಿನ ನಡೆದ ಈ ಕಾರ್ಯಕ್ರಮಕ್ಕೆ ಮೂಡಿಗೆರೆಯಂಥ ಈ ಸಣ್ಣ ಪಟ್ಟಣದಲ್ಲಿ ಎಂಟು ಸಾವಿರ ಜನ ಸೇರಿಸಿದ ಹೆಗ್ಗಳಿಕೆ ನಮ್ಮದು. ತೇಜಸ್ವಿಯವರೇ ಉದ್ಘಾಟಿಸಿ, ವೀಕ್ಷಿಸಿ, ಅಚ್ಚರಿ ವ್ಯಕ್ತಪಡಿಸಿ ಇಡೀ ತಂಡವನ್ನು ಅಭಿನಂದಿಸಿದ್ದರು.

ಪಾರ್ವತಿ ಬೆಳವಾಡಿಯವರ `ಇನ್ಸೆಕ್ಟ್ ಆನ್ ಗ್ಲಾಸ್’’ ಪೈಟಿಂಗ್ ಪ್ರದರ್ಶನವನ್ನು ಸಹ ವ್ಯವಸ್ಥೆ ಮಾಡಿದ್ದೆವು. ಇದೇ ಕಾರ್ಯಕ್ರಮವನ್ನು ಮೂರು ವರ್ಷದ ನಂತರ ಮತ್ತೊಮ್ಮೆ ಆಯೋಜಿಸಿ ಸಾವಿರಾರು ಜನರಿಗೆ ಮಾಹಿತಿ ನೀಡಿದೆವು. ಆ ಕಾರ್ಯಕ್ರಮವನ್ನು ಹೆಸರಾಂತ ಪರಿಸರ ಕಾರ್ಯಕರ್ತರಾದ ಶ್ರೀ ಕೃಪಾಕರ ಮತ್ತು ಶ್ರೀ ಸೇನಾನಿಯವರು ಉದ್ಘಾಟಿಸಿದಾಗಲೂ ತೇಜಸ್ವಿಯವರು ಹಾಜರಿದ್ದರು. ಇದಾದ ನಂತರ ಶೃಂಗೇರಿ, ಚಿಕ್ಕಮಗಳೂರು, ಮೂಡಿಗೆರೆ, ತೀರ್ಥಹಳ್ಳಿ ಮುಂತಾದೆಡೆಯಲ್ಲಿ ಕೀಟ ಪ್ರದರ್ಶನ ನಡೆಸಿದಾಗ ಬೆಳವಾಡಿಯವರ ತಂಡದ ಸಹಕಾರ ಪ್ರಶಂಸನೀಯ.
ನೇರಳೆ ಹಣ್ಣಿನ ಬಗ್ಗೆ ಮಾತನಾಡುತ್ತಾ, ಒಮ್ಮೆ ಶಿವಮೊಗ್ಗದಲ್ಲಿ ರಸ್ತೆ ಪಕ್ಕದ ನೇರಳೆ ಮರದ ತುಂಬಾ ಹಣ್ಣಾಗಿದ್ದವಂತೆ. ರಾತ್ರಿ ಮಳೆ ಬಂದು ಟಾರು ರಸ್ತೆಯ ಮೇಲೆ ಹಣ್ಣುಗಳ ರಾಶಿರಾಶಿ ಬಿದ್ದಿದ್ದುವಂತೆ. ಬೆಳಗಿನ ವಾಯು ಸಂಚಾರಕ್ಕೆ ಹೊರಟಿದ್ದ ತೇಜಸ್ವಿಯವರ ಮುಂದೆ ಸ್ಕೂಟರಿನವನೊಬ್ಬ ನೇರಳೆ ಹಣ್ಣಿನ ಮೇಲೆ ಸ್ಕೂಟರ್ ಓಡಿಸಿ ಬ್ಯೂಟಿಫುಲ್ ಆಗಿ ಬಿದ್ದ ಮಾರಯಾ ಎಂದು ತಮಾಷೆಯಾಗಿ ವಿವರಿಸಿದ್ದು ಈಗಲೂ ನೆನಪಿದೆ.

ನಮ್ಮೆಲ್ಲರ ಕಣ್ಣಿಗೆ ಕಂಡದ್ದನ್ನೇ ತಾವೂ ಗಮನಿಸಿ, ಅವಲೋಕಿಸಿ, ಪ್ರಸ್ತುತಪಡಿಸಿದ ರೀತಿ ಇದೆಯೆಲ್ಲಾ ಅದೊಂದು ಸಾಕ್ಷಾತ್ಕಾರ. ಸೌಂದರ್ಯಪ್ರಜ್ಞೆಗೆ ತಮ್ಮದೇ ಆದ ಭಾಷ್ಯ ಬರೆದ ಲೇಖಕರ ಸಾಲಿನಲ್ಲಿ ವಿಶಿಷ್ಠವಾಗಿ ಪ್ರಯೋಗಶೀಲತೆಯನ್ನು ಓದುಗರ ಮನದಾಳಕ್ಕೆ ಇಳಿಸಿದ್ದೇ ತೇಜಸ್ವಿಯವರ ಹೆಗ್ಗಳಿಕೆ. ನಮ್ಮೆಲ್ಲರಂತೆ ಉಪಕರಣಗಳನ್ನು ಕೆಟಲಾಗ್, ಮ್ಯಾನುಯಲ್ಗಳ ವಿವರಣೆಯೊಳಗೇ ಸೀಮಿತಗೊಳಿಸಿ ಉಪಯೋಗಿಸಿದವರಲ್ಲ. ಕೈಯಲ್ಲಿದ್ದ ಸಾಧನಗಳ ಹೊಸ ಸಾಧ್ಯತೆಗಳ ಕುರಿತು ಆಲೋಚಿಸಿ ಕಾರ್ಯರೂಪಕ್ಕೆ ತಂದದ್ದೇ ಅವರನ್ನು ಇತರ ಕಲಾವಿದರಿಂದ ಎತ್ತರಕ್ಕೇರಿಸಿ ವಿಶೇಷವಾಗಿ ಗಮನಿಸುವಂತೆ ಮಾಡಿದೆ.
ತೆಪ್ಪದಲ್ಲಿ ನಮ್ಮಂತೆ ತೆಪ್ಪಗೆ ತೇಲಿ ಹೋಗದೇ, ಗಿರಕಿ ಹೊಡೆಸಿ, ಹರಿವಿನ ವಿರುದ್ಧ ಹುಟ್ಟುಹಾಕಿ, ಪ್ರವಾಹದೊಡನೆ ಅದರಷ್ಟಕ್ಕೆ ತೂರಿಬಿಟ್ಟು, ಧಾರೆಗೆ ಅಡ್ಡಡ್ಡಲಾಗಿ ಮುಕ್ಕಿರಿಸಿ, ಸುಳಿಯ ನಡುವಿನಲ್ಲಿ ತೊನೆಸಿ, ಕೈಯಲ್ಲಿದ್ದ ಹುಟ್ಟನ್ನು ಹರಿಗೋಲಿನಲಿ ಬಿಸುಟಿ, ನದಿಯ ಹುಟ್ಟು-ಗಮ್ಯದೆಡೆಗೆ ಚಿಂತಿಸಿ, ಹರಿಯುತ್ತಿರುವ ನೀರು ಹಠಾತ್ತನೆ ಸ್ಥಿರಗೊಂಡರೆ ಎಂಬ ಕಲ್ಪನೆಯಲ್ಲಿ ಈಜಾಡಿ, ಜಲಪಾತದ ಭೋರ್ಗರೆತದಲಿ ಉಂಟಾಗುವ ತುಮುಲವನ್ನು ಅನುಭವಿಸಿ, ಜಾಗತಿಕ ಸಾಂಸ್ಕೃತಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪ್ರತಿಮವಾದುದ್ದು.
ಜ್ಞಾನ ವಿಜ್ಞಾನದ ಅತ್ಯಂತ ಜಟಿಲ ಸಂಗತಿಗಳನ್ನು ಸರಳವಾಗಿ ಸಾಮಾನ್ಯರಿಗೂ ಅರ್ಥವಾಗುವಂತೆ ತಲುಪಿಸಲು ಅವರು ಬಳಸಿದ ರೇಖಾಚಿತ್ರ, ಛಾಯಾಚಿತ್ರ, ಸಾಹಿತ್ಯ ಮುಂತಾದವು ಭಾರತದ ಮಟ್ಟಿಗೆ ಯಶಸ್ವೀ ಪ್ರಯೋಗಗಳು. ನೋಡ ನೋಡುತ್ತಿದ್ದಂತೆ ಬದಲಾಗುವ ವಿಸ್ಮಯಕಾರೀ ಪ್ರಾಕೃತಿಕ ಸನ್ನಿವೇಶಗಳನ್ನು ಗ್ರಹಿಸಿ ಹಿಡಿದಿಟ್ಟು ಪ್ರಸರಣಗೊಳಿಸಿದ ರೀತಿಯೇ ಒಂದು ಚಾರಿತ್ರಿಕ ಮಹತ್ವದ್ದು. ಹಾದಿ ಬೀದಿ ಬದಿಯ ಬದುಕು, ಮನೆ ಸುತ್ತಲಿನ ದೈನಂದಿನ ವಿದ್ಯಮಾನ, ಸಹಜವಾಗಿ ನಿತ್ಯವೂ ಸಂಭವಿಸುತ್ತಲೇ ಇರುವ ಜೈವಿಕ ಆಗುಹೋಗುಗಳನ್ನೇ ವಸ್ತುವನ್ನಾಗಿ ಮಾಡಿಕೊಂಡು ಹೊಸೆದ ಕಲಾಕೃತಿಗಳು, ಹೌದಲ್ವಾ!? ಎಂದು ನಮ್ಮನ್ನು ಚಕಿತಗೊಳಿಸಿ ನಮ್ಮ ನಿರ್ಲಕ್ಷ, ನಿರಾಸಕ್ತಿಗಳನ್ನು ಹಾಸ್ಯ ಮಾಡುತ್ತವೆ.
ಮುಂದುವರೆಯುತ್ತದೆ..
– ಧನಂಜಯ ಜೀವಾಳ ಬಿ.ಕೆ. ಮೂಡಿಗೆರೆ
9448421946
