
ಕಿರುತೆರೆಯಲ್ಲಿ ಸ್ಟಾರ್ ನಿರ್ದೇಶಕರೆನ್ನಿಸಿಕೊಂಡಿರುವ ಹಯವದನ ನಿರ್ದೇಶನದ ಚೊಚ್ಚಲ ಸಿನಿಮಾ `ಎಲ್ಲೋ ಜೋಗಪ್ಪ ನಿನ್ನರಮನೆ’. ಫೆಬ್ರವರಿ 21 ರಂದು ಅಂದರೆ ನಾಳೆ ಬಿಡುಗಡೆಗೊಳ್ಳುತ್ತಿರುವ ಈ ಸಿನಿಮಾ ಈಗಾಗಲೇ ಟ್ರೈಲರ್ ಮೂಲಕ ಸಿನಿಮಾ ಪ್ರೇಮಿಗಳನ್ನೆಲ್ಲ ಆವರಿಸಿಕೊಂಡಿದೆ. ಪ್ರೇಮವೂ ಸೇರಿದಂತೆ ಬದುಕಿಗೆ ಹತ್ತಿರವಾಗಿರುವ ಎಲ್ಲವನ್ನೂ ಒಳಗೊಂಡಂತೆ ಕಾಣಿಸುವ ಈ ಕಥಾನಕ ಸಿನಿಮಾ ಪ್ರೇಮಿಗಳ ವಲಯದಲ್ಲೊಂದು ಸಕಾರಾತ್ಮಕ ಚರ್ಚೆಯನ್ನೂ ಹುಟ್ಟು ಹಾಕಿದೆ.
ಈ ಚಿತ್ರ ನಾಯಕನಾಗಿ, ಭಿನ್ನ ಚಹರೆಗಗಳಿರುವ ವಿಶೇಷ ಪಾತ್ರದಲ್ಲಿ ನಟಿಸಿರುವವರು ಅಂಜನ್ ನಾಗೇಂದ್ರ. ಈ ಹಿಂದೆ ಕಂಬ್ಳಿಹುಳ ಎಂಬ ಚಿತ್ರದಲ್ಲಿ ನಾಯಕನಾಗಿ ನಟಿಸಿ ಮನ ಗೆದ್ದಿದ್ದ ಅಂಜನ್ ಎಲ್ಲೋ ಜೋಗಪ್ಪ ನಿನ್ನರಮನೆ ಚಿತ್ರದಲ್ಲಿ ಸಂಕೀರ್ಣವಾದ ಪಾತ್ರವನ್ನು ಆವಾಹಿಸಿಕೊಂಡಿರೋದು ಟ್ರೈಲರ್ ಮೂಲಕವೇ ಋಜುವಾತಾಗಿದೆ.
ಮೂಲತಃ ಹಾಸನದವರಾದ ಅಂಜನ್ ನಾಗೇಂದ್ರ ಎಳವೆಯಿಂದಲೇ ರಂಗಭೂಮಿಯಲ್ಲಿ ಪಳಗಿಕೊಂಡಿರುವ ನಟ. ಇವರ ತಂದೆ ನಾರಾಯಣ್ ಕೂಡಾ ರಂಗಭೂಮಿಯಲ್ಲಿ ಹೆಸರಾಗಿರುವವರು. ಪ್ರೈಮರಿ ಶಾಲಾ ದಿನಗಳಲ್ಲಿಯೇ ಬಣ್ಣ ಹಚ್ಚಿದ್ದ ಅಂಜನ್ ಪಾಲಿಗೆ ನಟನೆ ಎಂಬುದು ಕರತಲಾಮಲಕವಾಗಿತ್ತು. ವಿಶೇಷವೆಂದರೆ, ಶಾಲಾ ಕಾಲೇಜು ಹಂತದವರೆಗೂ ಸಿನಿಮಾ ನಟನಾಗಬೇಕೆಂಬ ಕನಸೇನೂ ಅವರಲ್ಲಿರಲಿಲ್ಲ. ಇಂಜಿನಿಯರಿಂಗ್ ಪದವೀಧರರಾದ ಅಂಜನ್ ಕಾಲೇಜು ವ್ಯಾಸಂಗ ನಡೆಸುತ್ತಿರುವಾಗ ಒತ್ತಾಯ ಮಾಡಿ ಸಿನಿಮಾ ಒಂದರ ಆಡಿಷನ್ನಿಗೆ ತೆರಳುವಂತತೆ ಮಾಡಿದ್ದರಂತೆ. ಆ ಕ್ಷಣದಲ್ಲಿಯೇ ಎಲ್ಲರೂ ತನ್ನೊಳಗಿನ ನಟನನ್ನು ಗುರುತಿಸುತ್ತಿದ್ದಾರೆಂಬ ಮನವರಿಕೆಯಾಗಿ, ಆ ಮೇಲಿಂದ ನಟನೆಯತ್ತ ಆಕರ್ಷಿತರಾಗಿದ್ದವರು ಅಂಜನ್.
ಇಂಜಿನಿಯರಿಂಗ್ ಪದವಿ ಮುಗಿಸಿಕೊಂಡು ಸಿನಿಮಾ ರಂಗದತ್ತ ಹೊರಳಿಕೊಂಡಿದ್ದ ಅಂಜನ್ ಎರಡು ವರ್ಷದ ಗಡುವು ವಿಧಿಸಿಕೊಂಡಿದ್ದರಂತೆ. ಪ್ರಯತ್ನಗಳಾಚೆಗೂ ಆ ಎರಡು ವರ್ಷಗಳಲ್ಲಿ ಏನೂ ಸಾಧ್ಯವಾಗಿರಲಿಲ್ಲ. ಕಡೆಗೂ ಲಾಕ್ ಡೌನ್ ಕಾಲದಲ್ಲಿ ಕಂಬ್ಳಿಹುಳ ಚಿತ್ರದ ನಾಯಕನಾಗೋ ಅವಕಾಶ ಬಂದೊದಗಿತ್ತು. ಅದೇ ಚಿತ್ರದ ಪ್ರೀಮಿಯರ್ ಶೋಗೆ ಬಂದಿದ್ದ ಹಯವದನ ಅದಾಗಲೇ ರೆಡಿಯಾಗಿದ್ದ ಕಥೆಗೆ ಅಂಜನ್ ನಾಯಕನಾಗೋದು ಪಕ್ಕಾ ಎಂಬಂಥಾ ನಿರ್ಧಾರ ಮಾಡಿದಂತಿದ್ದರು. ಕಂಬ್ಳಿ ಹುಳ ಚಿತ್ರ ನೋಡಿದ ನಂತರ ಅವರೊಳಗೆ ಅಂಜನ್ ನಟನೆಯ ಕಸುವಿನ ಬಗೆಗೊಂದು ನಂಬಿಕೆ ಮೂಡಿಕೊಂಡಿತ್ತು. ಆ ನಂತರ ಕಥಾ ಎಳೆ ಹೇಳಿದ್ದ ಹಯವದನ ಅವರು ರಿಹರ್ಸಲ್ಲಿಗೂ ಅಂಜನ್ರನ್ನು ತಯಾರುಗೊಳಿಸಿದ್ದರು.
ಬೇರೆಯದ್ದೇ ತೆರನಾದ ಕಥೆ ಸಿಕ್ಕಿ, ಭಿನ್ನ ಬಗೆಯ ಪಾತ್ರ ಮಾಡಬೇಕೆಂಬ ತುಡಿತ ಹೊಂದಿದ್ದ ಅಂಜನ್ ಪಾಲಿಗೆ ಎಲ್ಲೋ ಜೋಗಪ್ಪ ನಿನ್ನರಮನೆ ಚಿತ್ರದ ಮೂಲಕ ಅದು ಸಾಧ್ಯವಾಗಿದೆ. ಕುಟುಂಬ ಸಮೇತರಾಗಿ ಕೂತು ನೋಡುವಂಥಾ, ಎಲ್ಲ ವರ್ಗದ ಪ್ರೇಕ್ಷಕರಿಗೂ ಹಿಡಿಸುವಂಥಾ ಈ ಸಿನಿಮಾ ಭಾಗವಾಗಿರುವ ಬಗ್ಗೆ ಅಂಜನ್ ಅವರೊಳಗೊಂದು ಹೆಮ್ಮೆ ಇದೆ.
ಈ ಸಿನಿಮಾ ಮೂಲಕ ನಾಯಕ ನಟನಾಗಿ ತನ್ನ ಬದುಕಿನ ದಿಕ್ಕು ಬದಲಾದೀತೆಂಬ ತುಂಬು ನಂಬಿಕೆಯೂ ಅವರಲ್ಲಿದ್ದಂತಿದೆ. ಈ ಚಿತ್ರದ ಚಿತ್ರೀಕರಣದುದ್ದಕ್ಕೂ ಭಾರತವನ್ನಿಡೀ ಸುತ್ತುವ ಅವಕಾಶ ಅವರ ಪಾಲಿಗೆ ಒದಗಿ ಬಂದಿದೆ. ಸಾಕಷ್ಟು ರಿಸ್ಕು ತೆಗೆದುಕೊಂಡು, ಅತ್ಯಂತ ನೈಜವಾಗಿ ಪಾತ್ರಕ್ಕೆ ಜೀವ ತುಂಬಿರುವ ಖುಷಿ ಇದೆ ಎನ್ನುತ್ತಾರೆ ನಟ ಅಂಜನ್ ನಾಗೇಂದ್ರ .
ಇಡೀ ಭಾರತದ ಅತ್ಯಂತ ಅಪರೂಪದ, ಸುಂದರ ಲೊಕೇಷನ್ನುಗಳಲ್ಲಿ ಈ ಸಿನಿಮಾ ಚಿತ್ರೀಕರಣಗೊಂಡಿದೆ. ಟ್ರೈಲರಿನಲ್ಲಿ ಕಂಡಂಥಾ ತಾಜಾ ತಾಜಾ ದೃಶ್ಯಗಳು ಚಿತ್ರದುದ್ದಕ್ಕೂ ಪ್ರೇಕ್ಷಕರನ್ನು ಚಕಿತಗೊಳಿಸಲಿವೆ ಎಂಬ ಭರವಸೆಯೂ ಅಂಜನ್ ನಾಗೇಂದ್ರ ಅವರಲ್ಲಿದೆ. ಪವನ್ ಶಿಮಿಕೇರಿ ಮತ್ತು ಸಿಂಧು ಹಯವದನ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಸೃಜನ್ ರಾಘವೇಂದ್ರ, ಚೇತನ್, ಹಯವದನ ಚಿತ್ರಕಥೆ, ವೇಣು ಹಸ್ರಾಳಿ ಸಂಭಾಷಣೆ, ನಟರಾಜು ಮದ್ದಾಲ ಛಾಯಾಗ್ರಹಣ, ಹೊಸ್ಮನೆ ಮೂರ್ತಿ ಕಲಾ ನಿರ್ದೇಶನ, ಶಿವಪ್ರಸಾದ್ ಸಂಗೀತ ನಿರ್ದೇಶನದೊಂದಿಗೆ ಮೂಡಿ ಬಂದಿರುವ ಈ ಚಿತ್ರ ಫೆಬ್ರವರಿ 21 ರಂದು ತೆರೆಕಾಣಲಿದೆ.
ಕುಟುಂಬ ಸಮೇತ ನೋಡುವಂತ ಸಿನಿಮಾ ಮರೆಯಾಗುತ್ತಿರುವ ಈ ಕಾಲಘಟ್ಟದಲ್ಲಿ, ಹೊಸ ಪ್ರತಿಭೆಗಳ ಹೊಸ ಪ್ರಯತ್ನಗಳು ಹೊಸತನವನ್ನು ಹುಟ್ಟಿಹಾಕುತ್ತಿದೆ. ನಾಳೆ ತೆರೆಗೆ ಬರುತ್ತಿರುವ ʼಎಲ್ಲೋ ಜೋಗಪ್ಪ ನಿನ್ನರಮನೆʼ ಸ್ಯಾಂಡಲ್ ವುಡ್ ನಲ್ಲಿ ತನ್ನ ಅರಮನೆಯನ್ನು ಸೃಷ್ಟಿಸಿಕೊಳ್ಳುತ್ತಾ ಕಾದು ನೋಡಬೇಕಾಗಿದೆ.