ಪ್ರಪಂಚಾದ್ಯಂತ ಮಂಗೋಲಿಯ ಚಕ್ರವರ್ತಿಯನ್ನು ಜೆಂಗಿಸ್ ಖಾನ್ ಎಂದು ಸಂಬೋಧನೆ ಮಾಡುತ್ತಾರೆ, ಆದರೆ ಆತನ ನಿಜವಾದ ಹೆಸರು “ಚಿಂಗಿಸ್ ಹಾನ್”. ಮಂಗೋಲಿಯ ಭಾಷೆಯಲ್ಲಿ “ಚಿಂಗಿಸ್” ಎಂದರೆ “ಸಾಗರ” ಮತ್ತು “ಹಾನ್” ಎಂದರೆ “ಚಕ್ರಾಧಿಪತಿ”. ಹನ್ನೆರಡನೇ ಶತಮಾನದಲ್ಲಿ ಮಂಗೋಲಿಯ ಪ್ರಾಂತ್ಯದ ಎಲ್ಲಾ ಅಲೆಮಾರಿ ಬುಡಕಟ್ಟಿನ ಜನಾಂಗದವರನ್ನು ಒಟ್ಟುಗೂಡಿಸಿ ಹಲವಾರು ಚೀನಾ ಮತ್ತು ರಷ್ಯ ಪ್ರದೇಶಗಳನ್ನು ವಶ ಪಡಿಸಿಕೊಂಡಿದ್ದರು. ಅದರಲ್ಲೂ ಪ್ರಮುಖವಾದ ಮತ್ತು ಶಕ್ತಿಶಾಲಿ “ಉಲಿಗೀರ್” ಪ್ರಾಂತ್ಯವನ್ನು ಅತಿಕ್ರಮಣ ಮಾಡಿದ್ದು, ಈ ಉಲಿಗೀರರು ಮುಸ್ಲಿಮ್ ಪಂಗಡದವರು ಮತ್ತು ಆ ಸಮಯದಲ್ಲಿ ಉಲಿಗೀರ ಚೀನಾದ ಅತಿ ದೊಡ್ಡ ಪ್ರಾಂತ್ಯವಾಗಿತ್ತು. ಇಂದು ಕಮ್ಯುನಿಸ್ಟ್ ಚೀನಾ ಇವರ ಅಸ್ತಿತ್ವವನ್ನೆ ಕಿತ್ತು ಹಾಕಿದ್ದಾರೆ.
ಈ ಚೆಂಗಿಸ್ ಖಾನ್ ದೊಡ್ಡ ಪ್ರತಿಮೆಯ ಕೆಳಗೆ ಆತನ ವಸ್ತು ಸಂಗ್ರಹಾಲಯ ಇದೆ. ಈ ಸ್ಥಳದಲ್ಲಿ ಆತನ ವಂಶಸ್ತರ ಭಾವ ಚಿತ್ರಗಳನ್ನು ಕಾಣಬಹುದು. ಆತನು ಧರಿಸುತ್ತಿದ್ದ ಬೂಟು, ವಸ್ತ್ರ, ಆಯುಧಗಳು ಹೀಗೆ ಅನೇಕ ಪ್ರತಿಕೃತಿಗಳನ್ನು ನೋಡಬಹುದು. ಮಂಗೋಲಿಯ ಪ್ರಜೆಗಳು ಚಿಂಗಿಸ್ ಹಾನ್ ರನ್ನು ಪಿತಾಮಹ ಅಂತ ಕರೆದರೂ ಅಖಂಡ ಮಂಗೋಲಿಯವನ್ನು ಸ್ಥಾಪಿಸಿದ್ದು ಅವರ ಮೊಮ್ಮಕ್ಕಳಾದ “ಕೂಬ್ಲೈ ಹಾನ್ ಮತ್ತು ಬಾಟು ಹಾನ್”. ಕೂಬ್ಲೈ ಹಾನ್ ಚೀನಾ ದೇಶದ ಯುವಾನ್ ರಾಜವಂಶಸ್ತರ ಜತೆಗೂಡಿ ಇಡೀ ಚೀನಾ ದೇಶವನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಆಳ್ವಿಕೆಯನ್ನು ಮಾಡಿದ್ದ. ಬಾಟು ಹಾನ್ ಇಡೀ ರಷ್ಯ ದೇಶವನ್ನು ತನ್ನ ಸುಬರ್ದಿಗೆ ತೆಗೆದುಕೊಂಡು ಆಳ್ವಿಕೆಯನ್ನು ಮಾಡುತ್ತಿದ್ದ. ಈ ಅಖಂಡ ಮಂಗೋಲಿಯವನ್ನು ಹಾನ್ ವಂಶಸ್ತರು ಹದಿಮೂರನೆಯ ಶತಮಾನದವರಿಗೂ ನೆಡೆಸಿಕೊಂಡು ಬಂದಿದ್ದರು. ಹದಿನಾಲ್ಕನೆಯ ಶತಮಾನ ಹೊತ್ತಿಗೆ ಕೊನೆ ಮಂಗೋಲಿಯ ಚಕ್ರವರ್ತಿ “ತೋಗೋ ತೆಮೂರ್” ಸಮಯದಲ್ಲಿ ಈಜಿಪ್ಟ್ನ ಮೆಮ್ಲುಕ್ಸ, ಭಾರತದ ಸುಲ್ತೇನೇಟ್ಸ್, ಜಪಾನ್ ಮತ್ತು ವಿಯೆಟ್ನಾಮ್ ರಾಜರಗಳಿಂದ ಸೋಲುಂಡಿ ಮಂಗೋಲಿಯ ದೇಶ ಅನೇಕ ಭಾಗಗಳಾದವು ಎಂಬುದು ಇತಿಹಾಸ. ಹದಿನಾರನೆಯ ಶತಮಾನದವರಿಗೂ ಚಿಂಗಿಸ್ ಹಾನ್ ವಂಶಸ್ತರು ಇದ್ದರು ಎಂಬುದರ ದಾಖಲಾತಿಗಳು ಇಲ್ಲಿ ಸಿಗುತ್ತವೆ.
ವಿಚಿತ್ರ ಎಂದರೆ ಇದುವರಿಗೂ ಚಿಂಗಿಸ್ ಹಾನ್ ಸಮಾಧಿ ಎಲ್ಲಿದೆ ಎಂಬುದು ಯಾರಿಗೂ ತಿಳಿದಿಲ್ಲ. ಹಾಗೆಯೆ ಅವರ ವಂಶಸ್ತರ ಸಮಾಧಿಗಳು ಸಹ ಕಂಡಿಲ್ಲ. ಈ ಚಕ್ರಾಧಿಪತಿ ಯಾವುದೇ ಕೋಟೆಯನ್ನು ಕಟ್ಟಿಲ್ಲ. ಇವರ ವಾಸ ಸ್ಥಾನ ಗೆರ್ ಟೆಂಟ್ ಅಥವ ಯುರ್ಟ ಆಗಿದ್ದವು. ಅಂತಹ ಪ್ರತಿ ಕೃತಿ ಈ ವಸ್ತು ಸಂಗ್ರಹಾಲಯದಲ್ಲಿ ಕಾಣಲು ಸಿಗುವುದು. ಆ ಸಮಯದಲ್ಲಿನ “ಶಗೈ” ಅಂದರೆ ಮೇಕೆ ಮತ್ತು ಕುರಿ ಕಾಲಿನ ಮಣಿಕಟ್ಟು ಮೂಳೆಗಳನ್ನು ಸಾಂಪ್ರದಾಯಕ ಆಟಗಳಿಗೆ ಮತ್ತು ಭವಿಷ್ಯ ವಾಣಿ ಗೇಮ್ಸಗಳಿಗೆ ಉಪಯೋಗಿಸುತ್ತಿದ್ದರು. ಅವುಗಳನ್ನು ಇಲ್ಲಿ ಇಟ್ಟಿದ್ದಾರೆ. ಇದಲ್ಲದೆ ಇಂತಹ ಮೂಳೆಗಳನ್ನು ಯಾರು ಎಷ್ಟು ಹೊಂದಿದ್ದಾರೆ ಎನ್ನುವುದರ ಮೇಲೆ ಅವರವರ ಸಾಮರ್ಥ್ಯ, ಶ್ರೀಮಂತಿಕೆ ಮತ್ತು ಸಮೃದ್ಧಿಗಳನ್ನು ತೋರಿಸುತಿತ್ತು.

ಈ ಮೂಳೆಗಳ ಹಾರ ಪವಿತ್ರೆಯ ಸಂಕೇತ. ಇಂತಹ ಹಾರಗಳನ್ನು ಪ್ರಿಯತಮೆಯ ಕುತ್ತಿಗೆಗೆ ಕಟ್ಟುತ್ತಾರೆ (ತಾಳಿ ತರ). ಈ ಮಾದರಿಯ ಮೂಳೆಗಳು ಒಳಗೊಂಡ ಗುಚ್ಛವನ್ನು ತಮ್ಮ ಸಾಂಪ್ರದಾಯಕ ಸಂಗೀತ ಕಾರ್ಯಕ್ರಮಗಳಲ್ಲಿ ಉಪಯೋಗಿಸಿಸುತ್ತಾರೆ. ಇವುಗಳಲ್ಲದೆ ಅಂದಿನ ಒಗಟಿನ (puzzle) ಆಟಗಳ ಪ್ರತೀಕ ಮತ್ತು ಅವರು ಉಪಯೋಗಿಸುತ್ತಿದ್ದ ಯುದ್ಧ ಆಯುಧಗಳನ್ನು ಸಹ ಇಲ್ಲಿ ಸಂಗ್ರಹಿಸಿ ಇಟ್ಟಿದ್ದಾರೆ.

ನಮ್ಮ ಎರಡನೆ ದಿವಸದ ಪ್ರಯಾಣ “ಟೆರೆಲ್ಜ್ ” ರಾಷ್ಟ್ರೀಯ ಉದ್ಯಾನವನದ ಕಡೆ. ಈ ಪ್ರದೇಶ ಸುಮಾರು ಉಲಾನ್ ಬಾತಾರ್ ಇಂದ ಪಶ್ಚಿಮ ದಿಕ್ಕಿನ ಕಡೆ ಅರವತ್ತು ಕಿಲೋಮೀಟರ್ಸ ದೂರದಲ್ಲಿ ಇದೆ. ಇಂತಹ ಹಲವಾರು ರಾಷ್ಟ್ರೀಯ ಉದ್ಯಾನವನಗಳನ್ನು ಮಂಗೋಲಿಯ ದೇಶ ಸಂರಕ್ಷಣೆ ಮಾಡಿದೆ. ನಾವು ಈ ಪ್ರದೇಶಕ್ಕೆ ಸುಮಾರು ಹತ್ತು ಕಿಲೋಮೀಟರ್ಸ ಮಣ್ಣಿನ ರಸ್ತೆಯಲ್ಲಿ ಸಾಗಬೇಕು. ಈ ಪ್ರದೇಶ ಕಲ್ಲಿನ ಬೆಟ್ಟಗಳಿಂದ ಕೂಡಿದೆ. ಇಲ್ಲಿಯ ನೈಸರ್ಗಿಕವಾದ ಒಂದು ಬೃಹತ್ತಾದ ಕಲ್ಲು ಆಮೆಯಂತೆ ಇದೆ. ಇದನ್ನು “Turtle Rock” ಎಂದು ಕರೆಯುತ್ತಾರೆ. ಸ್ವಲ್ಪ ಮುಂದೆ ಸಾಗಿದರೆ ಬೆಟ್ಟದ ಮೇಲೆ ಬೌದ್ಧ ವಿಹಾರ ಇದೆ. ಇಲ್ಲಿಯ ಪ್ರಜೆಗಳಿಗೆ ಮತ್ತು ಬೌದ್ಧ ಯಾತ್ರಿಗಳಿಗೆ ಈ ವಿಹಾರ ತುಂಬ ಪ್ರಮುಖವಾದದ್ದು. ಈ ದೇವಸ್ಥಾನದ ಹೆಸರು “ಆರ್ಯಪಾಲ್ಯ” ಅಧ್ಯಾತ್ಮಿಕ ಕೇಂದ್ರ. ಇಲ್ಲಿಯ ದೇವರು “ಅವಲೋಕೀಟೇಶ್ವರ”. ಮಹಾಯಾನದ ಮಂತ್ರ “ಓಂ ಮಣಿ ಪದ್ಮಾಯ ಹುಮ್” ಹೇಳುತ್ತಾ ನೂರೆಂಟು ಮೆಟ್ಟಲುಗಳನ್ನು ಹತ್ತಿದರೆ ಮನಸ್ಸಿಗೆ ನೆಮ್ಮದಿ ತರುತ್ತೆ ಎನ್ನುವುದು ಇಲ್ಲಿಯ ಬೌದ್ಧ ಧರ್ಮದವರ ನಂಬಿಕೆ. ನನಗೆ ಇಲ್ಲಿಯ ನೂರೆಂಟು ಮೆಟ್ಟಲು ಅಂದಾಗ ನಮ್ಮ ಅಷ್ಟೋತ್ತರ ನೆನಪಿಗೆ ಬಂತು. ಈ ಮಂತ್ರದ ಅರ್ಥ “ಓ ಬ್ರಹ್ಮ ಸ್ವರೂಪಿಯೇ ನನ್ನ ಆತ್ಮದ ತೇಜಸ್ಸನ್ನು ವಜ್ರದಂತೆ ಬೆಳಗಿಸು ಮತ್ತು ಮನಸ್ಸನ್ನು ತಾವರೆ ಪುಷ್ಪದಂತೆ ಅರಳಿಸು” ಎಂದು. ಈ ವಿಹಾರದ ಸುತ್ತಲು ಪ್ರಾರ್ಥನೆಯೊಂದಿಗೆ ತಿರುಗಿಸುವ ಡ್ರಮ್ಗಳು ಇವೆ. ಯಾತ್ರಾರ್ತಿಗಳು ಇವುಗಳನ್ನು ತಿರುಗಿಸುತ್ತಾ ಮೇಲಿನ ಮಂತ್ರವನ್ನು ಹೇಳುತ್ತಾ ಸಾಗುತ್ತಾರೆ.

ನಾವು ಟೆರೆಲ್ಜ ರಾಷ್ಟ್ರೀಯ ಉದ್ಯಾನವನಕ್ಕೆ ಬರುವ ಮುನ್ನ ಇಲ್ಲಿಯ ಕಣಿವೆಯನ್ನು ದಾಟಬೇಕು. ಈಗಷ್ಟೇ ಅಧಿಕವಾಗಿ ಪ್ರವಾಸಿಗರು ಬರುತ್ತಿರುವುದರಿಂದ ಎಲ್ಲಿ ನೋಡಿದರೆ ಅಲ್ಲಿ ಗೆರ್ ಟೆಂಟಿನ ಕ್ಯಾಂಪ್ಸ ನೋಡಬಹುದು. ದೂರದಿಂದ ಈ ಕ್ಯಾಂಪ್ಸಗಳು ಬಿಳಿ ಮೋಡದಂತೆ ಕಾಣುತಿತ್ತು. ಬರುವ ಪ್ರವಾಸಿಗರು, ಅದರಲ್ಲೂ ಮುಖ್ಯವಾಗಿ ಸೌತ್ ಕೋರಿಯ, ಚೀನಾ, ಈರೋಪ್ ದೇಶದ ಪ್ರವಾಸಿಗರು ಈ ಗೆರ್ ಟೆಂಟ್ ಅಥವ ಯುರ್ಟಗಳಲ್ಲಿ ಉಳಿದುಕೊಳ್ಳಲು ಆಯ್ಕೆ ಮಾಡಿಕೊಳ್ಳುತ್ತಾರೆ.

ಈ ದೇಶದ ಅಧಿಕ ಆರ್ಥಿಕ ಅವಲಂಬನೆ ಹೈನುಗಾರಿಕೆಯಿಂದ. ಶೇಕಡ ಐವತ್ತರಷ್ಟು ದೇಶದ ಆದಾಯ ಹೈನುಗಾರಿಕೆ ರಫ್ತಿನಿಂದ ಬರುತ್ತದೆ. ಇಲ್ಲಿಯ ಹಾಲಿನ ಗುಣಮಟ್ಟ ಅಧಿಕವಾಗಿ ಇರುತ್ತದೆ. ಹಸು, ಯಾಕ್ ಮತ್ತು ಮೇಕೆ ಹಾಲನ್ನು ಬೆರೆಸುತ್ತಾರೆ. ನಾವು ಇಳಿದುಕೊಂಡಿದ್ದ ಹೋಟೆಲ್ನ ಲಾಬಿಯಲ್ಲಿ ನೇರವಾಗಿ ಚೀಸ್ ನ್ನು ತಯಾರು ಮಾಡುತ್ತಿದ್ದರು. ಈ ಚೀಸ್ ತಯಾರಿಕೆಯಲ್ಲಿ ನಾಲ್ಕು ಪ್ರಮುಖ . ಮೊದಲನೆಯದು ಇಟಾಲಿ ದೇಶದ “ಸ್ಟ್ರಾಸಿಯಟೆಲ್ಲಾ (stracciatella)” ಚೀಸ್. ಇದನ್ನು ಮೊಜೆರೆಲ್ಲಾ, ಮೊಸರು ಮತ್ತು ಫ್ರೆಷ್ ಕ್ರೀಮ್ ಬೆರೆಸಿ ಮಾಡುವಂತಾದ್ದು. ಎರಡನೆಯದ್ದು “ಬುರೆಟ್ಟಾ (buretta)” ಬಾಲ್ ಚೀಸ್. ಇದು ಕೆನೆ, ಕ್ರೀಮ್ ಮತ್ತು ಮೊಸರಿನ ಮಿಶ್ರಣದ ಮೇಲೆ ಮೊಜೆರೆಲ್ಲಾ ಹೊದಿಕೆಯನ್ನು ಹಾಕಿ ಮೆತ್ತೆಗೆ ಇರುವ ಬಾಲ್ ತಯಾರು ಮಾಡುತ್ತಾರೆ. ಮೂರೆನೆಯದು “ತಾಜಾ ಮೊಜೆರೆಲ್ಲಾ (fresh mozzeralla)” . ಇದು ತಂಬಾ ಮೆತ್ತಗೆ ಇದ್ದು ತಿನ್ನಲು ಬಹು ರುಚಿಯಾಗಿ ಇರುತ್ತದೆ. ನಾವು ಹಾಲಿನ .ಕೆನೆಗೆ ಸಕ್ಕರೆ ಬೆರಸಿ ತಿನ್ನುವ ತರವೆ, ಆದರೆ ಇದರ ರುಚಿಯೇ ಸ್ವಲ್ಪ ಬೇರೆ. ನಾವೆಲ್ಲಾ ಇದರ ರುಚಿಯನ್ನು ಸವಿದೆವು. ನಾಲ್ಕನೆಯದು “ಪಿಜ್ಜಾ ಮೊಜೆರೆಲ್ಲಾ (pizza mozzarella)”. ಇದು ಗಟ್ಟಿಯಾದ ತೆಳುವಿನ ಚೀಸ್ ಮತ್ತು ಇದನ್ನು ತುಂಬಾ ದಿವಸಗಳು ಇಟ್ಟರೂ ಕೆಡುವುದಿಲ್ಲ. ಆದರೆ ಬೇರೆ ತರಹದ ಚೀಸ್ ಮೂರೇ ದಿವಸಗಳಲ್ಲಿ ಖಾಲಿ ಮಾಡಬೇಕು.
ಮುಂದುವರಿಯುವುದು…
-ಡಾ॥ ಎ.ಎಂ.ನಾಗೇಶ್
ಖ್ಯಾತ ಮನೋವೈದ್ಯ

