ಟಿ.ನರಸೀಪುರ : ಕೆಲವು ದಲಿತ ಸಂಘಟನೆಗಳು ಅಧಿಕಾರಿಗಳ ಪರ ಹೇಳಿಕೆ ಕೊಡುವ ಮೂಲಕ ಓಲೈಕೆ,ಸ್ವಾರ್ಥ ನಡೆ ಪ್ರದರ್ಶಿಸಿ ಶೋಷಿತರಿಗೆ ಹಾಗೂ ಸಂಘಟನೆಗೆ ಮಾಡುತ್ತಿರುವ ಅಪಚಾರವಾಗಿದೆ ಎಂದು ರಾಜ್ಯ ಪರಿಶಿಷ್ಟ ಸಮುದಾಯದ ರಾಜ್ಯಾಧ್ಯಕ್ಷರಾದ ಸೋಸಲೆ ಶಶಿಕಾಂತ್ ಅಸಮಾಧಾನ ವ್ಯಕ್ತಪಡಿಸಿದರು.
ಪಟ್ಟಣದ ತಮ್ಮ ಕಚೇರಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಇತ್ತೀಚೆಗೆ ನರಸೀಪುರ ಪೊಲೀಸ್ ಠಾಣೆಗೆ ಬಂದಂತಹ ಇನ್ಸ್ಪೆಕ್ಟರ್ ಧನಂಜಯ್ ಅವರು ಆರಂಭದಲ್ಲಿ ಖಡಕ್ ಪೊಲೀಸ್ ಆಫೀಸರ್ ಆಗಿ ಗುರುತಿಸಿಕೊಂಡು ಸಾರ್ವಜನಿಕ ವಲಯದಲ್ಲಿ ಶಹಬ್ಬಾಸ್ ಗಿರಿ ತೆಗೆದುಕೊಂಡು ಬಂದಿದ್ದರು.ಕಾಲಕ್ರಮೇಣ ಇವರ ವರ್ತನೆ ಮಾನವೀಯತೆಯನ್ನೇ ಮರೆತು ಅಧಿಕಾರದ ಹೆಸರಿನಲ್ಲಿ ದಲಿತ ಸಮುದಾಯದವರ ಮೇಲೆ ಹೆಚ್ಚಿನ ದೌರ್ಜನ್ಯ ನಡೆಸುತ್ತಿರುವುದು ಆತಂಕಕ್ಕೀಡು ಮಾಡಿದೆ.ಇದಕ್ಕೆ ಸಂಬಂಧಿಸಿದಂತೆ ಇತ್ತೀಚಿಗೆ ತುಂಬಲ ಗ್ರಾಮದಲ್ಲಿ ನಡೆದ ಗಲಾಟೆ ವಿಷಯದಲ್ಲಿ ದಲಿತ ಯುವಕರನ್ನು ಇನ್ಸ್ಪೆಕ್ಟರ್ ಹಾಗೂ ಸಬ್ ಇನ್ಸ್ಪೆಕ್ಟರ್ ಜಗದೀಶ್ ಧೂಳ್ ಶೆಟ್ಟಿ ಮನಬಂದಂತೆ ಥಳಿಸಿ ದೌರ್ಜನ್ಯ ವೆಸಗಿರುವುದು ಎದೆ ಝಲ್ ಎನ್ನುವಂತ್ತಿದೆ.ಇಂತಹ ಹಲವಾರು ಪ್ರಕರಣಗಳಲ್ಲಿ ಇನ್ಸ್ಪೆಕ್ಟರ್ ದಲಿತರಿಗೆ ಅನ್ಯಾಯವೆಸಗುತ್ತಿದ್ದಾರೆಂದು ಗಂಭೀರವಾಗಿ ಆರೋಪಿಸಿದರು.

ಇಂತಹ ಒಬ್ಬ ದಲಿತ ವಿರೋಧಿ ಅಧಿಕಾರಿಯ ಪರ ಕೆಲವು ದಲಿತಪರ ಸಂಘಟನೆಗಳ ಮುಖಂಡರು ಹಾಗೂ ತಾಲ್ಲೂಕು ಅಂಬೇಡ್ಕರ್ ಅಭಿವೃದ್ಧಿ ಸಂಘದ ತಾಲ್ಲೂಕು ಅಧ್ಯಕ್ಷರು ಬೆನ್ನಿಗೆ ನಿಂತು ದಲಿತರೇ,ದಲಿತರಿಗೆ ದೌರ್ಜನ್ಯ ವೆಸಗುವ ಅಧಿಕಾರಿಯ ಬೆಂಬಲಕ್ಕೆ ನಿಂತಿರುವುದು ಸಮುದಾಯದ ನೈತಿಕತೆಯನ್ನು ಪ್ರಶ್ನೆ ಮಾಡುವಂತ್ತಿದೆ.ಇದು ಸಮುದಾಯಕ್ಕೆ ಯಾವ ಸಂದೇಶ ರವಾನೆಯಾಗುತ್ತಿದೆ ಎಂಬ ಸಾಮಾನ್ಯ ಪರಿಜ್ಞಾನ ಇಲ್ಲದ ಇಂತಹ ಮುಖಂಡರಿಂದ ನ್ಯಾಯ ನಿರೀಕ್ಷಿಸಲು ಸಾಧ್ಯವೇ ಎಂದು ಪ್ರಶ್ನಿಸಿ ಇವರ ಗುಲಾಮಿಗಿರಿತನಕ್ಕೆ ಇಡೀ ಸಮುದಾಯವನ್ನೇ ಬಲಿ ಕೊಡುವ ಹುನ್ನಾರಕ್ಕೆ ಮುಂದಾಗುತ್ತಿರುವುದು ನಾಚಿಕೆಗೇಡಿತನದ್ದಾಗಿದೆ ಎಂದರು.
ಬಹಳಷ್ಟು ಸಂಘಟನೆಗಳು ದಲಿತರ ಮೇಲೆ ದೌರ್ಜನ್ಯ ಮಾಡಿ ಅವರಿಂದಾನೆ ಹಣ ವಸೂಲಿ ಮಾಡಿ ಪೊಲೀಸ್ ಠಾಣೆಗೆ ದೂರು ಕೊಡಿಸಿ ಇವರ ಮೇಲೆ ಅವರನ್ನ,ಅವರ ಮೇಲೆ ಇವರನ್ನ ಎತ್ತಿ ಕಟ್ಟಿ ಇಬ್ಬರನ್ನ ಕೂರಿಸಿ ವಸೂಲಿ ಮಾಡಿ ಪೊಲೀಸ್ ನವರ್ರಿಗೂ ಹಣ ನೀಡಿ ತಾವೂ ಹಣ ಮಾಡಿಕೊಂಡು ಒಳ್ಳೆಯ ಜೀವನವನ್ನು ನಡೆಸುತ್ತಿದ್ದಾರೆ.ಇದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ಚರ್ಚೆ ನಡೆಯತ್ತಿದ್ದು ಸಂಘಟನೆಯ ನೇತೃತ್ವ ವಹಿಸುವ ಕೆಲವು ಮುಖಂಡರಿಗೆ ಬೇರೆ ಯಾವುದೇ ಉದ್ಯೋಗವಿಲ್ಲ ಹೋರಾಟಗಾರರಿಗೆ ಹಣ ಎಲ್ಲಿಂದ ಬರುತ್ತದೆ ಎಂದು ಪ್ರಶ್ನಿಸುತ್ತಿದ್ದಾರೆ.ಯಾವ ಆದಾಯದ ಮೂಲವೇ ಇಲ್ಲದ ಇವರಿಗೆ ಪೊಲೀಸ್ ಠಾಣೆಯ ಕೇಸುಗಳಲ್ಲಿ ಮದ್ಯಸ್ಥಿಕೆ ವಹಿಸಿ ಹಣ ಮಾಡುವ ದಂಧೆ ಮಾಡುತ್ತಿದ್ದಾರೆಯೇ ವಿನಃ ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡುತ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ಸ್ಪೆಕ್ಟರ್ ಧನಂಜಯ್ ರವರು ಯಾವ,ಯಾವ ಸಂಘಟನೆ ಮುಖಂಡರುಗಳಿಗೆ ಸಹಾಯ ಮಾಡಿದ್ದರೋ ಅಂತಹವರನ್ನ ಎತ್ತಿ ಕಟ್ಟಿ ಅವರ ಪರವಾಗಿ ಹೇಳಿಕೆ ಕೊಡಿಸುತ್ತಿದ್ದಾರೆಂಬ ಅನುಮಾನ ಮೂಡುತ್ತಿದೆ.ದೂರು ಕೊಟ್ಟಿರುವವರನ್ನು ಬೆದರಿಸಿ ಅವರಿಂದಾನೇ ಮರು ಹೇಳಿಕೆ ಕೊಡಿಸಿ ನಮಗೇನು ಆಗಿಲ್ಲ ಎಂಬ ಹೇಳಿಕೆ ಕೊಡಿಸುವ ಪ್ರಯತ್ನ ನಡೆಯುತ್ತಿದೆ ಎಂದರು.
ಇದು ಮುಖ್ಯಮಂತ್ರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಕ್ಷೇತ್ರವಾಗಿದೆ.ಅವರಲ್ಲಿ ಮನವಿ ಮಾಡುವುದೇನೆಂದರೆ ನಡೆದಿರುವ ಘಟನೆಯಲ್ಲಿ ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಸಿಗಬೇಕು.ಪೊಲೀಸ್ ಇಲಾಖೆಯಲ್ಲಿ ಇಲಾಖೆಯವರು ಅಧಿಕಾರಿಗಳನ್ನು ಬಿಟ್ಟು ಕೊಡುವುದಿಲ್ಲ ಅವರ ರಕ್ಷಣೆಗೆ ಇಲಾಖೆ ನಿಂತಿರುತ್ತದೆ.ಆದರೆ ಇಲ್ಲಿ ಇನ್ಸ್ಪೆಕ್ಟರ್ ರವರದ್ದು ತಪ್ಪಿಲ್ಲವೆಂದರೆ ಇಲಾಖೆಯ ಉನ್ನತ ಅಧಿಕಾರಿಗಳು ತನಿಖೆ ಮಾಡಿ ಕ್ಲೀನ್ ಚಿಟ್ ನೀಡಲಿ.ಆದರೆ ತಾಲ್ಲೂಕಿನಲ್ಲಿ ವಿವಿಧ ಸಂಘಟನೆಗಳನ್ನು ಎತ್ತಿ ಕಟ್ಟಿ ಗೊಂದಲ ಸೃಷ್ಟಿಸಿ ವೈಯಕ್ತಿಕವಾಗಿ ಸಂಘ,ಸಂಸ್ಥೆಗಳು ದ್ವೇಷ ಬೆಳೆಸಿಕೊಂಡು ಸಮಾಜದ ಸ್ವಾಸ್ಥ್ಯ ಹಾಳಾಗುವ ಪರಿಸ್ಥಿತಿ ಬಂದೊದಗಿದೆ.ಅಧಿಕಾರಿಗಳನ್ನು ಓಲೈಸಿಕೊಂಡು ತಮ್ಮ ಕೆಲಸ ಮಾಡಿಸಿಕೊಳ್ಳುವ ಭರದಲ್ಲಿ ಹಲವಾರು ಸಂಘಟನೆಗಳು ದಿನದಿಂದ ದಿನಕ್ಕೆ ಅಧಿಕಾರಿಗಳ ಪರ ಹೇಳಿಕೆ ಕೊಡುತ್ತಿರುವುದನ್ನು ನೋಡಿದರೆ ಮುಂದಿನ ದಿನಗಳಲ್ಲಿ ಸಂಘಟನೆಗಳ ನಡುವೆ ಘರ್ಷಣೆಗಳು ನಡೆಯುವ ಸಾಧ್ಯತೆ ಕೂಡ ಇರುತ್ತದೆ.ಇದರಿಂದ ಸಾರ್ವಜನಿಕ ಜೀವನಕ್ಕೆ ತುಂಬಾ ತೊಡಕ್ಕಾಗುತ್ತದೆ.ಆ ಕಾರಣದಿಂದ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು,ಸಿದ್ದರಾಮಯ್ಯರವರು ಹಾಗೂ ಮಹದೇವಪ್ಪರವರು ಈ ಅಧಿಕಾರಿಗಳನ್ನು ಕೂಡಲೇ ವರ್ಗಾವಣೆಗೊಳಿಸಿ ಶಾಂತಿ ನೆಲಸುವಂತೆ ಮಾಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಸೋಸಲೆ ನಂಜುಂಡಯ್ಯ,ಪರಿಶಿಷ್ಟ ಮಹಾಸಭಾದ ನಿರ್ದೇಶಕರ ಕೊಳತ್ತೂರು ಕೆ.ಎಂ.ಮಂಜುನಾಥ್, ಗ್ರಾ.ಪಂ.ಮಾಜಿ ಅಧ್ಯಕ್ಷರಾದ ಕೊಳತ್ತೂರು ಸೋಮಣ್ಣ ಇದ್ದರು.
