ಹಾಸನ: ಪ್ರಧಾನ ಮಂತ್ರಿ ಅವಾಸ್ ಯೋಜನೆ(ಪಿಎಂಎವೈ)ಯಡಿ ಮನೆ ಹಂಚಿಕೆಯಲ್ಲಿ ಸಕಲೇಶಪುರ ತಾಲೂಕು ಸೇರಿದಂತೆ ಜಿಲ್ಲೆಯ ವಿವಿಧೆಡೆ ನಡೆದಿರುವ ಅವ್ಯವಹಾರ ಖಂಡಿಸಿ, ತಪ್ಪಿತಸ್ಥರ ಮೇಲೆ ಶಿಸ್ತುಕ್ರಮಕ್ಕೆ ಆಗ್ರಹಿಸಿ ಸಕಲೇಶಪುರ ಬಿಜೆಪಿ ಮಂಡಲ ವತಿಯಿಂದ ನಗರದ ಜಿಪಂ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಸ್ಥಳೀಯ ಶಾಸಕ ಸಿಮೆಂಟ್ ಮಂಜು ನೇತೃತ್ವದಲ್ಲಿ ಆರ್.ಸಿ.ರಸ್ತೆಯಲ್ಲಿರುವ ಜಿಲ್ಲಾ ಬಿಜೆಪಿ ಕಚೇರಿಯಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು,
ಜಿಲ್ಲಾ ಪಂಚಾಯಿತಿ ಕಚೇರಿ ಎದುರಿಗೆ ಆಗಮಿಸಿ ಕೆಲಕಾಲ ಧರಣಿ ನಡೆಸಿ ಘೋಷಣೆ ಕೂಗಿದರು.
ಸಕಲೇಶಪುರ ತಾಲ್ಲೂಕುವೊಂದರಲ್ಲೇ ೨೧೯ಕ್ಕೂ ಹೆಚ್ಚು ಅರ್ಹ ಫಲಾನುಭವಿಗಳಿಗೆ ಸೇರಬೇಕಿದ್ದ ೩ ಕೋಟಿಗೂ ಅಧಿಕ ಹಣ ದುರುಪಯೋಗ ಆಗಿದೆ. ಮನೆ ಯಾರದೋ, ಹಣವನ್ನು ಬೇರೆ ಯಾರದೋ ಖಾತೆಗೆ ಹಣ ವರ್ಗಾವಣೆ ಮಾಡಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಲಾಗಿದೆ ಎಂದು ದೂರಿದರು.
ಈ ವೇಳೆ ಮಾತನಾಡಿದ ಶಾಸಕ ಸಿಮೆಂಟ್ ಮಂಜು, ಇದೊಂದು ದೊಡ್ಡ ಹಗರಣ, ಇದರಲ್ಲಿ ಪಿಡಿಒ, ತಾಪಂ ಇಒ, ಯೋಜನಾ ನಿರ್ದೇಶಕರು, ಜಿಪಂ ಮುಖ್ಯ ಲೆಕ್ಕಾಧಿಕಾರಿ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ. ಇವರೆಲ್ಲರೂ ಜಿಪಂ ಸಿಇಒ ಅವರ ಅಡಿಯಲ್ಲೇ ಕರ್ತವ್ಯ ನಿರ್ವಹಿಸುವುದರಿಂದ ಈ ವಿಚಾರದಲ್ಲಿ ಸಿಇಒ ಏಕೆ ಮೌನವಾಗಿದ್ದಾರೆ, ಈವರೆಗೂ ಏಕೆ ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಿಲ್ಲ. ಹಗರಣದಲ್ಲಿ ಅವರು ಭಾಗಿಯಾಗಿದ್ದಾರೆಯೇ ಎಂದು ಪ್ರಶ್ನಿಸಿದರು.
ಯಾರೆಲ್ಲ ತಪ್ಪು ಮಾಡಿದ್ದಾರೋ ಅವರನ್ನು ಕೂಡಲೇ ಅಮಾನತು ಮಾಡಿ ತನಿಖೆ ನಡೆಸಬೇಕು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು, ಶೀಘ್ರವೇ ಈ ಕಾರ್ಯ ಆಗದಿದ್ದರೆ, ವಿಧಾನಸೌಧದ ಎದುರು ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದರು. ನಂತರ ಜಿ.ಪಂ. ಸಿಇಒ ಪೂರ್ಣಿಮಾ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ಪ್ರಧಾನ ಕಾರ್ಯದರ್ಶಿ ಅಮಿತ್ಶೆಟ್ಟಿ ಮೊದಲಾದವರು ಭಾಗಿಯಾಗಿದ್ದರು
