
ಅರಕಲಗೂಡು: ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಮನೆಯಲ್ಲಿದ್ದ ವಸ್ತುಗಳು ಸಂಪೂರ್ಣ ಸುಟ್ಟುಹೋಗಿ ಅಪಾರ ಪ್ರಮಾಣದ ಹಾನಿಸಂಭವಿಸಿರುವ ಘಟನೆ ಪಟ್ಟಣದ ಕೋಟೆ ವಿನಾಯಕ ನಗರ ಬಡಾವಣೆಯಲ್ಲಿ ಶುಕ್ರವಾರ ನಡೆದಿದೆ.
ಶಿಕ್ಷಕ ಎಂ.ವಿ.ಜನಾರ್ಧನ್ ಎಂಬುವವರ ಮೂರನೆ ಅಂತಸ್ಥಿನಲ್ಲಿ ಬಾಡಿಗೆಗೆ ಇದ್ದ ಕೆ.ಪಿ. ಪ್ರಮೀಳಾ ಅವರ ಮನೆಯಲ್ಲಿ ಈ ಅವಘಡ ಸಂಭವಿಸಿದೆ. ಬೆಳಿಗ್ಗೆ 10 ಗಂಟೆ ಸಮಯದಲ್ಲಿ ಬಾರಿ ಸದ್ದಿನೊಂದಿಗೆ ಸಿಲಿಂಡರ್ ಸ್ಫಟಗೊಂಡಿದೆ, ಸ್ಫೋಟದ ರಭಸಕ್ಕೆ ಶೀಟಿನ ಮೇಲ್ಛಾವಣಿ ಹಾರಿ ಹೋಗಿ ಬೆಂಕಿ ಕಾಣಿಸಿಕೊಂಡು ಮನೆಯಲ್ಲಿದ್ದ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ಮನೆಯ ಮಾಲೀಕರು ಸದ್ದು ಕೇಳಿ ಮೇಲಕ್ಕೆ ತೆರಳಿ ನೋಡಿ ಕೂಡಲೆ ವಿದ್ಯುತ್ ಇಲಾಖೆ ಹಾಗೂ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ.
ಮನೆಯಲ್ಲಿ ವಾಸವಿದ್ದ ಪ್ರಮೀಳಾ ಟೈಮ್ಸ್ ಹಾಸನ ಪಿಯು ಕಾಲೇಜಿನಲ್ಲಿ ಗುಮಾಸ್ಥೆಯಾಗಿ ಕಾರ್ಯ ನಿರ್ವಹಿಸುತ್ತಿದ್ದು ಮಗುವನ್ನು ಶಾಲೆಗೆ ಬಿಟ್ಟು ಕರ್ತವ್ಯಕ್ಕೆ ತೆರಳಿದ್ದರಿಂದ ಯಾವುದೇ ಅಪಾಯ ಸಂಭವಿಸಿಲ್ಲ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರು. ಮನೆಯಲ್ಲಿದ್ದ ಆಹಾರ ಪದಾರ್ಥ ಸೇರಿದಂತೆ ಎಲ್ಲ ವಸ್ತುಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು ರೂ 10 ಲಕ್ಷದಷ್ಟು ಹಾನಿ ಸಂಭವವಿಸಿದೆ. ಪಟ್ಟಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.