ಟಿ.ನರಸೀಪುರ : ಇತರೆ ಸಮುದಾಯಗಳನ್ನು ಎಸ್ಟಿ ಸಮುದಾಯಕ್ಕೆ ಸೇರಿಸುವ ಸರ್ಕಾರದ ನಿರ್ಧಾರವನ್ನು ಖಂಡಿಸಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ಪೂರ್ವಭಾವಿ ಸಭೆಯನ್ನು ಬಹಿಷ್ಕರಿಸುತ್ತಿರುವುದಾಗಿ ತಿಳಿಸಿ ಸಮುದಾಯದ ಮುಖಂಡರು ಸಭೆಯಿಂದ ಹೊರ ನಡೆದರು. ಪಟ್ಟಣದ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಪರಿಶಿಷ್ಟ ಪಂಗಡ ಇಲಾಖೆ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಕರೆದಿದ್ದ ವಾಲ್ಮೀಕಿ ಜಯಂತಿ ಪೂರ್ವ ಭಾವಿ ಸಭೆಯಲ್ಲಿ ನಾಯಕ ಸಮುದಾಯದ ಮುಖಂಡರು ಮಾತನಾಡಿ ರಾಜ್ಯದಲ್ಲಿ 40 ಲಕ್ಷ ನಾಯಕ ಸಮುದಾಯದವರಿದ್ದು ಈಗಾಗಲೇ ಶೇಕಡಾವಾರು ಅತ್ಯಂತ ಕಡಿಮೆ ಮಟ್ಟದಲ್ಲಿ ಮೀಸಲಾತಿ ಸಿಗುತ್ತಿದ್ದು ನಾವು ಇನ್ನೂ ಕೂಡ ಎಲ್ಲಾ ರಂಗದಲ್ಲೂ ಹಿಂದುಳಿದಿದ್ದೇವೆ ಈಗ ಇತರೆ ಸಮುದಾಯದವರನ್ನು ನಮ್ಮ ಸಮುದಾಯಕ್ಕೆ ಸೇರಿಸಿದರೆ ಸರ್ಕಾರದ ಸವಲತ್ತುಗಳಿಂದ ವಂಚಿತರಾಗುತ್ತೇವೆಂಬ ಆತಂಕ ಕಾಡುತ್ತಿರುವುದರಿಂದ ಸಭೆಗೆ ವಿರೋಧ ವ್ಯಕ್ತ ಪಡಿಸುತ್ತಿದ್ದೇವೆಂದರು.
ತಾಲ್ಲೂಕಿನ ನಮ್ಮ ಸಂಘಟನೆ ವತಿಯಿಂದ ಸಭೆ ಸೇರಿ ಸರ್ಕಾರ ನಡೆಸುವ ವಾಲ್ಮೀಕಿ ಜಯಂತಿಗೆ ನಮ್ಮ ಸಮುದಾಯ ಗೈರಾಗುವ ಮೂಲಕ ಸರ್ಕಾರದ ನಡೆಯನ್ನು ವಿರೋಧ ವ್ಯಕ್ತಪಡಿಸುತ್ತಿದ್ದೇವೆಂದು ತಿಳಿಸಿ ಹೊರ ನಡೆದರು. ಮಾದಿಗ ಸಮುದಾಯದ ತಾಲ್ಲೂಕು ಪಂಚಾಯತಿ ಮಾಜಿ ಉಪಾಧ್ಯಕ್ಷರಾದ ಬಿ.ಮರಯ್ಯರವರು ಮಾತನಾಡಿ ಸರ್ಕಾರದಿಂದ ಆಚರಿಸುವ ವಾಲ್ಮೀಕಿ ಜಯಂತಿಯನ್ನು ವಿರೋಧಿಸುವುದು ಸಮಂಜಸವಲ್ಲ.ಇವರ ಬೇಡಿಕೆಯನ್ನು ಸರ್ಕಾರಕ್ಕೆ ತಲುಪಿಸಬೇಕು ಇಲ್ಲದಿದ್ದರೆ ತಹಶಿಲ್ದಾರ್ ಮುಖೇನ ಇವರ ಮನವಿಯನ್ನು ನೀಡಿ ಜಯಂತಿ ಆಚರಣೆಗೆ ಸಹಕಾರ ನೀಡಬಹುದಿತ್ತೆಂದರು.ತಹಶಿಲ್ದಾರ್ ರವರು ಸರ್ಕಾರದ ಆದೇಶದನ್ವಯ ವಾಲ್ಮೀಕಿ ಜಯಂತಿಯನ್ನು ಆಚರಿಸಿ.ಆ ದಿನ ಕಾರ್ಯಕ್ರಮವನ್ನು ರದ್ದು ಪಡಿಸುವುದು ಬೇಡ ಕಾರ್ಯಕ್ರಮಕ್ಕೆ ನಾವೆಲ್ಲರೂ ಹಾಜರಾಗುವುದಾಗಿ ತಿಳಿಸಿದರು.
ತಹಶಿಲ್ದಾರ್ ಟಿ.ಜೆ.ಸುರೇಶ್ ಆಚಾರ್ ಮಾತನಾಡಿ ಸರ್ಕಾರ ನಡೆಸುವ ಜಯಂತಿಗೆ ಬಹಿಷ್ಕರಿಸಬಾರದಿತ್ತು ಇದರಿಂದ ಏನೂ ಸಾಧನೆಯಾಗಲಾರದು.ಲಿಖಿತ ರೂಪದಲ್ಲಿ ನಮಗೆ ಮನವಿ ನೀಡಿ ಈ ಕಾರಣಕ್ಕಾಗಿ ಸಭೆ ಬಹಿಷ್ಕರಿಸುತ್ತಿದ್ದೇವೆಂದು ಹೇಳಬಹುದಿತ್ತಿತ್ತು.ಸರ್ಕಾರದ ಹಂತದಲ್ಲಿ ಮಾತುಕತೆಯ ಮೂಲಕ ಇದೆ ಹೊರತು ಯಾವುದೇ ಆದೇಶವಾಗಿಲ್ಲ.ಹೋರಾಟ ಮಾಡುವುದು ಎಲ್ಲರ ಹಕ್ಕು ಅದಕ್ಕೆ ನಮ್ಮ ವಿರೋಧವಿಲ್ಲ. ಆದ್ದರಿಂದ ಇಂದಿನ ಸಭೆಯ ಎಲ್ಲಾ ಘಟನಾವಳಿಗಳನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಅವರ ನಿರ್ದೇಶನದಂತೆ ಸಾಧ್ಯವಾದಷ್ಟು ಅ: 7 ನೇ ತಾರೀಖು ಜಯಂತಿ ಆಚರಿಸಲು ಕ್ರಮ ವಹಿಸಲಾಗುವುದೆಂದರು. ಪರಿಶಿಷ್ಟ ಪಂಗಡ ಇಲಾಖೆ ಕಲ್ಯಾಣಾಧಿಕಾರಿ ಕೋಮಲ,ತಾ.ಪಂ.ಯೋಜನಾಧಿಕಾರಿ ರಂಗಸ್ವಾಮಿ, ಭೂ ನ್ಯಾಯ ಮಂಡಳಿ ಸದಸ್ಯರಾದ ಕುಕ್ಕೂರು ಗಣೇಶ್,ತಾ.ಪಂ.ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷರಾದ ರಾಮಲಿಂಗಯ್ಯ,ಜಿ.ಪಂ.ಮಾಜಿ ಸದಸ್ಯರಾದ ಹೊನ್ನನಾಯಕ,ಅಲ್ಪಸಂಖ್ಯಾತ ವಿಭಾಗದ ಡಾ.ಮನ್ಸೂರ್ ಅಲಿ,ಮೂಗೂರು ಸಿದ್ದರಾಜು, ಕುಕ್ಕೂರು ಪ್ರಸನ್ನ,ಸೋಸಲೆ ಮಂಜು,ಸೆಸ್ಕಾಂ ಸಹಾಯಕ ಅಭಿಯಂತರರಾದ ವೀರೇಶ್ ಸೇರಿದಂತೆ ತಾಲ್ಲೂಕಿನ ಇತರೆ ಸಮುದಾಯದ ಮುಖಂಡರು ಹಾಜರಿದ್ದರು.

