
ಭಾರತದಲ್ಲಿ ಸುಮಾರು 1,64,972 ಅಂಚೆ ಕಛೇರಿಗಳಿವೆ. ಪಟ್ಟಣ ಪ್ರದೇಶದಲ್ಲಿ 15,494 ಅಂಚೆ ಕಛೇರಿಗಳು ಹಾಗೂ ಗ್ರಾಮೀಣ ಪ್ರದೇಶದಲ್ಲಿ 1,49,478 ಅಂಚೆ ಕಛೇರಿಗಳಿವೆ. ಹಿಮಾಚಲ ಪ್ರದೇಶದ ಹಿಕ್ಕಿಮ್ ಗ್ರಾಮದಲ್ಲಿ 1983 ರಲ್ಲಿ ಆರಂಭಗೊಂಡ ಅಂಚೆ ಕಚೇರಿಯು ಸಮುದ್ರ ಮಟ್ಟದಿಂದ 14,567 ಅಡಿಗಳಷ್ಟು ಎತ್ತರದಲ್ಲಿದ್ದು ಇದು ವಿಶ್ವದಲ್ಲಿಯೇ ಅತ್ಯಂತ ಹೆಚ್ಚು ಎತ್ತರದಲ್ಲಿರುವ ಅಂಚೆ ಕಛೇರಿಯಾಗಿದೆ.
ಭಾರತದಲ್ಲಿ ಅಂಚೆ ಸೇವೆಯಿಂದ ಹೊರತಾದ ಒಂದು ಚಿಕ್ಕ ಭೂಪ್ರದೇಶವೂ ಇಲ್ಲ. ಕಾಶ್ಮೀರವೇ ಇರಲಿ, ಥಾರ್ ಮರು ಭೂಮಿಯೇ ಇರಲಿ, ಕನ್ಯಾಕುಮಾರಿಯೇ ಇರಲಿ ಭಾರತದ ಯಾವ ಮೂಲೆಯಲ್ಲಿರುವ ಯಾವ ಹಳ್ಳಿಯೇ ಇರಲಿ. ಅಲ್ಲೆಲ್ಲ ಅಂಚೆ ಸೇವೆ ಲಭ್ಯವಿದೆ. ಅಲ್ಲೆಲ್ಲ ಅಂಚೆ ಅಣ್ಣನ ಪತ್ರ ಬಟವಾಡೆ, ಮನಿಯಾರ್ಡರ್ ಪಾವತಿ / ಬ್ಯಾಂಕಿಂಗ್ ಸೇವೆಗಳು ನಿರಂತರವಾಗಿ ಜನರಿಗೆ ಲಭ್ಯವಾಗುತ್ತಿದೆ.
ಇಂತಹ ವಿಶಿಷ್ಟವಾದ ಭಾರತೀಯ ಅಂಚೆ ವ್ಯವಸ್ಥೆಗೆ ಅನೇಕ ಶತಮಾನಗಳ ಇತಿಹಾಸವಿದೆ. ಭಾರತದ ಮೊತ್ತ ಮೊದಲ ಅಂಚೆ ಕಚೇರಿ 1727ರಲ್ಲಿ ಕಲ್ಕತ್ತಾದಲ್ಲಿ ಪ್ರಾರಂಭವಾಯಿತು. ನಂತರ ಇದು ಪ್ರೆಸಿಡೆನ್ಸಿ ಅಂಚೆ ಕಚೇರಿಯಾಗಿ 1774ರಲ್ಲಿ ಉನ್ನತೀಕರಣಗೊಂಡಿತು. 1786ರಲ್ಲಿ ಮದ್ರಾಸಿನಲ್ಲಿಅಂದರೆ ಈಗಿನ ಚೆನ್ನೈನಲ್ಲಿ ಮತ್ತು 1793ರಲ್ಲಿ ಮುಂಬೈ ಯಲ್ಲಿ ಪ್ರೆಸಿಡೆನ್ಸಿ ಅಂಚೆ ಕಚೇರಿಗಳು ಆರಂಭಗೊಂಡವು. ನಂತರ ದೇಶದೆಲ್ಲೆಡೆ ಅಂಚೆ ಕಛೇರಿಗಳು ಆರಂಭವಾಗುತ್ತ ಬಂದು, ಅಂಚೆ ಸೇವೆಯು ಒಂದು ಸಾಂಸ್ಥಿಕ ರೂಪವನ್ನು ಪಡೆಯುತ್ತಿದಂತೆ ಮೊದಲ ಅಂಚೆ ಕಛೇರಿ ಕಾಯಿದೆಯು 1837 ರಲ್ಲಿ ಜಾರಿಗೆ ಬಂದಿತು. ನಂತರ 1854ರಲ್ಲಿ ಹೊಸ ಕಾಯಿದೆಯು ಜಾರಿಗೆ ಬಂತು.
ಆ ಕಾಯಿದೆಯು ಅನೇಕ ಬಾರಿ ಪರಿಷ್ಕರಣೆಗೊಂಡು 1866 ರಲ್ಲಿ ಇನ್ನೊಂದು ಕಾಯಿದೆ ಜಾರಿಗೆ ಬಂತು. ಈ 1866 ರ ಕಾಯಿದೆಗೆ 1882, 1895 ಮತ್ತು 1896 ರಲ್ಲಿ ಅನೇಕ ಪರಿಷ್ಕರಣೆಗಳಾದವು. ನಂತರ 1898 ರಲ್ಲಿ ಪರಿಷ್ಕೃತ ಅಂಚೆ ಕಛೇರಿ ಕಾಯಿದೆ ಜಾರಿಯಾಯಿತು. ನಂತರದ ವರ್ಷಗಳಲ್ಲಿ ಅಂಚೆ ಸೇವೆಯಲ್ಲಿ ಅನೇಕ ಮಾರ್ಪಾಡುಗಳಾದವು. ಇತ್ತೀಚಿನ ದಿನಗಳಲ್ಲಿ ಅನೇಕ ಹೊಸ ಸೇವೆಗಳ ಮೂಲಕ ಅಂಚೆ ಸೇವೆಯು ನಾವೀನ್ಯತೆಯನ್ನು ಪಡೆದು ಜನಜೀವನದ ಅವಿಭಾಜ್ಯ ಅಂಗವಾಗಿದೆ. ಬದಲಾಗುತ್ತಿರುವ ಕಾಲದ ಅಗತ್ಯತೆಗೆ ತಕ್ಕಂತೆ ಜನರಿಗೆ ಅತ್ಯುತ್ತಮ ಸೇವೆಯನ್ನು ನೀಡಲು ಭಾರತ ಸರಕಾರವು ನೂತನವಾಗಿ ‘ಅಂಚೆ ಕಛೇರಿ ಕಾಯಿದೆ 2023’’ ನ್ನು ಜಾರಿಗೊಳಿಸಿದೆ. ಈ ಹೊಸ ಕಾಯಿದೆಯು 14 ನೇ ಜೂನ್ 2024 ರಿಂದ ಭಾರತದಾದ್ಯಂತ ಜಾರಿಗೊಂಡಿದೆ. ಈ ಮೂಲಕ 1898 ರ ಹಳೆಯ ಕಾಯಿದೆಯು ರದ್ದುಗೊಂಡಿದೆ.
1898 ರ ಕಾಯಿದೆಯನ್ನು ಹೋಲಿಸಿದರೆ 2023 ರ ಕಾಯಿದೆಯಲ್ಲಿ ಅನೇಕ ವಿಶೇಷತೆಗಳಿವೆ. ಹಳೆಯ ಕಾಯಿದೆಯಲ್ಲಿ 77 ಸೆಕ್ಷನ್ ಗಳಿದ್ದವು . ಈಗಿನ ಕಾಯಿದೆಯಲ್ಲಿ 16 ಸೆಕ್ಷನ್ ಗಳಿವೆ ಮತ್ತು ಸರಳವಾದ ಭಾಷೆಯಲ್ಲಿದೆ.

ಅಂಚೆ ಕಛೇರಿ ಕಾಯಿದೆ 2023 ರ ಅಡಿಯಲ್ಲಿ ಹೊಸದಾಗಿ ಅಂಚೆ ಕಛೇರಿ ನಿಯಮಾವಳಿ 2024 ಮತ್ತು ಅಂಚೆ ಕಛೇರಿ ರೆಗ್ಯುಲೇಷನ್ 2024 16 ನೇ ಡಿಸೆಂಬರ್ 2024 ರಿಂದ ಜಾರಿಗೆ ಬಂದಿದೆ. ಇದರಿಂದಾಗಿ 1933 ರ ಅಂಚೆ ಕಛೇರಿ ನಿಯಮಾವಳಿ ರದ್ದುಗೊಂಡಿದೆ. ಅದರಲ್ಲಿ 225 ನಿಯಮಾವಳಿಗಳಿದ್ದವು. ಈಗ ಕೇವಲ 19 ನಿಯಮಾವಳಿಗಳಿದ್ದು ಸರಳೀಕೃತಗೊಳಿಸಲಾಗಿದೆ. ಅಂಚೆ ಕಛೇರಿ ರೆಗ್ಯುಲೇಷನ್ 2024 ರಲ್ಲಿ 180 ರೆಗ್ಯುಲೇಷನ್ ಗಳಿವೆ. ಅಂಚೆ ಸೇವೆಯನ್ನು ಇನ್ನಷ್ಟು ಜನ ಸ್ನೇಹಿಗೊಳಿಸಲು ಈ ಕಾಯಿದೆ, ನಿಯಮಾವಳಿ ಮತ್ತು ರೆಗ್ಯುಲೇಷನ್ ಸಹಕಾರಿಯಾಗಲಿದೆ. ಅಂಚೆ ಚೀಟಿಯನ್ನು ತಯಾರಿಸುವ, ಅದನ್ನು ಬಿಡುಗಡೆಗೊಳಿಸುವ ಮತ್ತು ಅಧಿಕೃತವಾಗಿ ಅದನ್ನು ಚಲಾವಣೆಗೊಳಿಸುವ ಅಧಿಕಾರ ಅಂಚೆ ಇಲಾಖೆಗೆ ಮಾತ್ರ ಇದೆ. ಈಗಿರುವ ‘ಪಿನ್ ಕೋಡ್’ ವ್ಯವಸ್ಥೆಯ ಜೊತೆಗೆ ವಿಳಾಸದಾರರನ್ನು ಕ್ಷಿಪ್ರವಾಗಿ ತಲುಪಲು ‘ಪೋಸ್ಟ್ ಕೋಡ್’ ಎಂಬ ಇನ್ನೊಂದು ಹೊಸ ವ್ಯವಸ್ಥೆ ಕೂಡ ಜಾರಿಗೆ ಬರಲಿದೆ.
ಭಾರತದಿಂದ ವಿದೇಶಗಳಿಗೆ ರವಾನಿಸಲ್ಪಡುವ ಮತ್ತು ವಿದೇಶಗಳಿಂದ ಭಾರತಕ್ಕೆ ರವಾನಿಸಲ್ಪಡುವ ಪತ್ರ, ಪಾರ್ಸೆಲ್ ಗಳ ಬಟವಾಡೆಯಲ್ಲಿ ಉತ್ಕೃಷ್ಠ ಸೇವೆ ನೀಡಲು ವಿದೇಶಗಳೊಡನೆ ವಿಶೇಷ ಸಂವಹನ ಸಾಧಿಸಲು ಹೊಸ ಕಾಯಿದೆ ಅನುವು ಮಾಡಿ ಕೊಡಲಿದೆ. ಪತ್ರಗಳ ಮೇಲೆ, ಪಾರ್ಸೆಲ್ ಗಳ ಮೇಲೆ ಅಂಚೆ ಕಛೇರಿಯಿಂದ ಮಾಡಲಾಗುವ ಗುರುತು / ಅಥವಾ ಷರಾಗಳಿಗೆ ಕಾನೂನಿನಲ್ಲಿ ವಿಶೇಷ ಮಾನ್ಯತೆಯು ದೊರಕಿದೆ. ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯಿಂದ ಅಂಚೆ ಕಛೇರಿಗೆ ಪಾವತಿಯಾಗಲು ಬಾಕಿಯಾದ ಮೊತ್ತವನ್ನು ಪಡೆಯಲು ಕಾನೂನಾತ್ಮಕ ವ್ಯವಷ್ಠೆಯನ್ನು ಜಾರಿಗೊಳಿಸಿದೆ. ರಾಷ್ಟ್ರದ ರಕ್ಷಣೆ ಮತ್ತು ಸಾರ್ವಜನಿಕ ಹಿತದೃಷ್ಠಿಯಿಂದ ಅಂಚೆ ಕಛೇರಿಯ ಮೂಲಕ ರವಾನೆಯಾಗುತ್ತಿರುವ ಯಾವುದೇ ವಸ್ತುವನ್ನು ಅಗತ್ಯ ಸಂದರ್ಭಗಳಲ್ಲಿ ಪ್ರತಿಬಂಧಿಸಿ, ಅದನ್ನು ಸಕ್ಷಮ ಪ್ರಾಧಿಕಾರದ ಮುಂದೆ ಹಾಜರುಪಡಿಸಿ ಮುಂದಿನ ತನಿಖೆಗೆ ಒಳಪಡಿಸುವ ಅವಕಾಶ ಈ ಕಾಯಿದೆಯಲ್ಲಿದೆ. ಅದಕ್ಕೆ ನಿರ್ದಿಷ್ಠ ಅಂಚೆ ಪ್ರಾಧಿಕಾರದಿಂದ ಒಪ್ಪಿಗೆಯನ್ನು ಪಡೆಯಬೇಕು ಮತ್ತು ಸೂಚಿತ ವಿಧಾನವನ್ನು ಅನುಸರಿಸಬೇಕಾಗುತ್ತದೆ.
ಅಂಚೆ ಸೇವೆಗಳಲ್ಲೂ ಕೆಲವು ಬದಲಾವಣೆಗಳು 16 ನೇ ಡಿಸೆಂಬರ್ 2024 ರಿಂದ ಜಾರಿಗೆ ಬಂದಿವೆ. ಪತ್ರಗಳನ್ನು ಮೊದಲು 2 ಕಿಲೋ ಗ್ರಾಂ ವರೆಗೆ ಕಳುಹಿಸಬಹುದಾಗಿತ್ತು. ಈಗ 500 ಗ್ರಾಂ ವರೆಗೆ ಪತ್ರಗಳಿಗೆ ಅವಕಾಶವಿದೆ. ಅದಕ್ಕಿಂತ ಜಾಸ್ತಿ ಇದ್ದರೆ ಅದು ‘ಇಂಡಿಯಾ ಪೋಸ್ಟ್ ಪಾರ್ಸೆಲ್’ ಎಂದು ಪರಿಗಣಿತವಾಗುತ್ತದೆ. ಈ ಮೊದಲು ಇದ್ದ ‘ರಿಜಿಸ್ಟರ್ಡ್ ಪಾರ್ಸೆಲ್’ ಈಗ ‘ಇಂಡಿಯಾ ಪೋಸ್ಟ್ ಪಾರ್ಸೆಲ್’ ಎಂದು ಬದಲಾವಣೆಗೊಂಡಿದೆ. 35 ಕಿಲೋ ಗ್ರಾಂವರೆಗೂ ‘ಇಂಡಿಯಾ ಪೋಸ್ಟ್ ಪಾರ್ಸೆಲ್’ ಅಥವಾ ‘ಸ್ಪೀಡ್ ಪೋಸ್ಟ್ ಪಾರ್ಸೆಲ್’ ಗಳನ್ನು ಕಳುಹಿಸಬಹುದಾಗಿದೆ. ನೊಂದಾಯಿತವಲ್ಲದ ಅಂದರೆ ‘ಅನ್ ರಿಜಿಸ್ಟರ್ಡ್ ಪಾರ್ಸೆಲ್ ಸೇವೆ’ ಈಗ ಇರುವುದಿಲ್ಲ. ಇಂಡಿಯಾ ಪೋಸ್ಟ್ ಪಾರ್ಸೆಲ್ ಅಥವಾ ಸ್ಪೀಡ್ ಪೋಸ್ಟ್ ಪಾರ್ಸೆಲ್ ನ್ನು ಕಳುಹಿಸುವಾಗ ಒಂದು ಸ್ವಯಂ ಘೋಷಣೆಯ ಫಾರಂ ಅನ್ನು ಗ್ರಾಹಕರು ಭರ್ತಿ ಮಾಡಿ ಅಂಚೆ ಕಚೇರಿಗೆ ಸಲ್ಲಿಸಬೇಕಾಗುತ್ತದೆ.
ಈ ಮೊದಲು ‘ಬುಕ್ ಪೋಸ್ಟ್’ ಅಂದರೆ ‘ತೆರೆದ ಅಂಚೆ’ ಯಲ್ಲಿ 6 ವಿಧಗಳಿದ್ದವು. ಆದರೆ ಈಗ ಕೇವಲ ನಾಲ್ಕು ತರಹದ ಬುಕ್ ಪೋಸ್ಟ್ ಸೇವೆ ಅಂದರೆ ನೊಂದಾಯಿತ ವೃತ್ತ ಪತ್ರಿಕೆ, ನಿಯತಕಾಲಿಕ , ಬ್ಲೈಂಡ್ ಲಿಟರೇಚರ್ ಮತ್ತು ಸಾಮಾನ್ಯ ತೆರೆದ ಅಂಚೆ ಸೇವೆಗಳು ಲಭ್ಯವಿದೆ.
ಅಂಚೆ ಕಾರ್ಡ್ ನಲ್ಲಿ ಈ ಮೊದಲು ನಾಲ್ಕು ವಿಧಗಳಿದ್ದು ಈಗ ಒಂದೇ ವಿಧವಿದೆ. ಅಂಚೆ ಕಾರ್ಡ್ ನ್ನು ನೊಂದಾಯಿತ ಅಂಚೆಯಲ್ಲಿ ಕೂಡ ನಿಗಧಿತ ಶುಲ್ಕ ಪಾವತಿಸಿ ಕಳುಹಿಸಬಹುದಾಗಿದೆ.
ನೊಂದಾಯಿತ ವೃತ್ತ ಪತ್ರಿಕೆ ಅಂದರೆ ರಿಜಿಸ್ಟರ್ಡ್ ನ್ಯೂಸ್ ಪೇಪರ್ ಗರಿಷ್ಠ ವಾರಕ್ಕೊಮ್ಮೆಯಾದರೂ ಪ್ರಕಟವಾಗುತ್ತಿದ್ದಲ್ಲಿ ಮಾತ್ರ ಅಂಚೆ ಇಲಾಖೆಯಲ್ಲಿ ನೊಂದಾಯಿಸಿ ವಿನಾಯತಿ ದರದಲ್ಲಿ ರವಾನಿಸಬಹುದಾಗಿದೆ.
ಪಾಕ್ಷಿಕ, ಮಾಸಿಕ , ತ್ರ್ಯೆಮಾಸಿಕ, ವಾರ್ಷಿಕ ಇತ್ಯಾದಿ ಪತ್ರಿಕೆಗಳನ್ನು ತೆರೆದ ಅಂಚೆಯಲ್ಲಿ ಪಿರಿಯಾಡಿಕಲ್ ಅಂದರೆ ನಿಯತಕಾಲಿಕ ವರ್ಗದಡಿ ಅದಕ್ಕೆ ಅನ್ವಯಿಸುವ ಅಂಚೆದರವನ್ನು ಪಾವತಿಸುವ ಮೂಲಕ ಕಳುಹಿಸಬಹುದು. ಇಂತಹ ಪತ್ರಿಕೆಗಳನ್ನು ಅಂಚೆ ಇಲಾಖೆಯಲ್ಲಿ ಪ್ರತ್ಯೇಕವಾಗಿ ನೊಂದಾಯಿಸುವುದಿಲ್ಲ. ಆದರೆ ಆ ವೃತ್ತ ಪತ್ರಿಕೆಗಳು ಪ್ರೆಸ್ ಎಂಡ್ ರಿಜಿಸ್ಟ್ರೇಶನ್ ಆಫ್ ಪಿರಿಯಾಡಿಕಲ್ಸ್ ಆಕ್ಟ್ 2023 ರ ಅಡಿಯಲ್ಲಿ ನೊಂದಾಯಿತವಾಗಿರಬೇಕು.
ಈ ಮೊದಲು ಇದ್ದ ‘ವ್ಯಾಲ್ಯೂ ಪೇಯೇಬಲ್ ಪೋಸ್ಟ್’ ಅಂದರೆ ‘ವಿ. ಪಿ. ಪಿ.’ ಸೇವೆಯು ಈಗ ಲಭ್ಯವಿರುವುದಿಲ್ಲ. ಅದರ ಬದಲಾಗಿ ಹೆಚ್ಚು ಅನುಕೂಲತೆಗಳಿರುವ ‘ಕ್ಯಾಶ್ ಆನ್ ಡೆಲಿವರಿ’ ಅಂದರೆ ಬಟವಾಡೆಯ ಸಮಯದಲ್ಲಿ ಹಣ ಪಾವತಿ ಮಾಡಿ ತೆಗೆದುಕೊಳ್ಳುವ ಸೇವೆ ಲಭ್ಯವಿದೆ. ಈಗ ರಿಟೈಲ್ ಗ್ರಾಹಕರಿಗೂ ಈ ಸೇವೆ ಲಭ್ಯವಾಗಲಿದೆ. ಅಂಚೆ ಕಛೇರಿಗಳಲ್ಲಿ ಇಂಡಿಯನ್ ಪೋಸ್ಟಲ್ ಆರ್ಡರ್ ಮೊದಲು ರೂ. 1,2,5,7,10,20,50 ಮತ್ತು 100 ರೂ. ಮುಖ ಬೆಲೆಗಳಲ್ಲಿ ಲಭ್ಯವಿದ್ದವು. ಈಗ ರೂ. 10, 20, 50 ಮತ್ತು 100 ರ ಮುಖ ಬೆಲೆಯಲ್ಲಿ ಇಂಡಿಯನ್ ಪೋಸ್ಟಲ್ ಆರ್ಡರ್ ಗಳು ಲಭ್ಯವಿದೆ.

ಈ ಮೊದಲು ಮನಿಯಾರ್ಡರ್ ಗಳನ್ನು ಕಳುಹಿಸುವಾಗ ಪ್ರತೀ ಮನಿಯಾರ್ಡರಿನ ಮೊತ್ತ ರೂ. 5೦೦೦/-ವನ್ನು ಮೀರುವಂತಿರಲಿಲ್ಲ. ಆದರೆ ಈಗ ರೂ. 1೦,೦೦೦/-ದ ವರೆಗೂ ಮನಿಯಾರ್ಡರ್ ಗಳನ್ನು ಕಳುಹಿಸಬಹುದಾಗಿದೆ. ಅಲ್ಲದೇ ಯಾವುದೇ ವ್ಯಕ್ತಿಯು ಮನಿಯಾರ್ಡರ್ ಮೂಲಕ ಪ್ರತೀ ತಿಂಗಳು ಪಡೆಯಬಹುದಾದ ಹಣ ರೂ. 25 ೦೦೦/- ವನ್ನು ಮೀರುವಂತಿಲ್ಲ. ಇದು ವ್ಯೆಯಕ್ತಿಕವಾಗಿ ಕಳುಹಿಸಲ್ಪಡುವ ಮನಿಯಾರ್ಡರಿಗೆ ಅನ್ವಯಿಸುತ್ತದೆ.
ಹೀಗೆ ಬದಲಾದ ಕಾಲಘಟ್ಟದಲ್ಲಿ ಗ್ರಾಹಕರ ಹಿತ, ಗ್ರಾಹಕರ ಸುರಕ್ಷತೆ ಹಾಗೂ ರಾಷ್ಟ್ರದ ಸುರಕ್ಷತೆಗಳಿಗೆ ಪೂರಕವಾಗಿ ಅಂಚೆ ಕಛೇರಿ ಕಾಯಿದೆ 2023, ಅಂಚೆ ಕಛೇರಿ ನಿಯಮಾವಳಿ 2024 ಹಾಗೂ ಅಂಚೆ ಕಛೇರಿ ರೆಗ್ಯುಲೇಷನ್ 2024 ಜಾರಿಗೆ ಬಂದಿದೆ.
ವಿಶಾಲವಾದ ಭಾರತ ದೇಶದಲ್ಲಿ ಬಹುದೊಡ್ಡ ಸೇವಾ ಜಾಲದ ಮೂಲಕ ಅಂಚೆ ಕಛೇರಿಗಳು ಜನರ ದೈನಂದಿನ ಜೀವನದಲ್ಲಿ ಅತ್ಯಮೂಲ್ಯವಾದ ಪಾತ್ರವನ್ನು ವಹಿಸುತ್ತಿವೆ. ಹೊಸ ಅಂಚೆ ಕಛೇರಿ ಕಾಯಿದೆ, ನಿಯಮಾವಳಿ ಮತ್ತು ರೆಗ್ಯುಲೇಷನ್ ಗಳ ಅಡಿಯಲ್ಲಿ ಅಂಚೆ ಕಛೇರಿಗಳು ಇನ್ನಷ್ಟು ಉತ್ತಮ ಸೇವೆಯನ್ನು ಜನರಿಗೆ ನೀಡಲಿವೆ.