ಕೆ.ಆರ್.ಪೇಟೆ- ತಾಲ್ಲೂಕಿನಲ್ಲಿ ಜೆಡಿಎಸ್ ಪಕ್ಷವು ಗಟ್ಟಿಯಾಗಿದೆ. ಪಕ್ಷದ ಕಾರ್ಯಕರ್ತರು ಶಿಸ್ತಿ ಸಿಪಾಯಿಯಂತೆ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಇದೇ ಸೆ.28ರಂದು ನಡೆಯುವ ತಾಲ್ಲೂಕು ಟಿಎಪಿಸಿಎಂಎಸ್ ಸಂಸ್ಥೆಯ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಪಕ್ಷದ ಅಭ್ಯರ್ಥಿಗಳಾಗಿ ಸ್ಪರ್ಧೆ ಮಾಡಿರುವ ಎಲ್ಲಾ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಪಕ್ಷದ ಶಕ್ತಿಯನ್ನು ಹೆಚ್ಚಿಸಬೇಕು ಎಂದು ಶಾಸಕ ಹೆಚ್.ಟಿ.ಮಂಜು ಟಿಎಪಿಸಿಎಂಎಸ್ ಶೇರುದಾರ ಮತದಾರರು ಹಾಗೂ ಸೊಸೈಟಿಗಳ ಪ್ರತಿನಿಧಿ ಮತದಾರರಲ್ಲಿ ಮನವಿ ಮಾಡಿದರು.
ಅವರು ಕೆ.ಆರ್.ಪೇಟೆ ಪಟ್ಟಣದ ಯಶಶ್ವಿನಿ ಕಲ್ಯಾಣ ಮಂಟಪದಲ್ಲಿ ಹಾಗೂ ಬಿಲ್ಲೇನಹಳ್ಳಿ ಶ್ರೀ ಗವಿರಂಗನಾಥಸ್ವಾಮಿ ಸಮುದಾಯ ಭವನದಲ್ಲಿ ಟಿಎಪಿಸಿಎಂಎಸ್ ಚುನಾವಣೆಯ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ, ಟಿಎಪಿಸಿಎಂಎಸ್ ಸಂಸ್ಥೆಯ ಚುನಾವಣೆಗೆ ಸ್ಪರ್ಧೆ ಮಾಡಿರುವ ಮೈತ್ರಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡಿ ಮಾತನಾಡಿದರು.
ಟಿಎಪಿಸಿಎಂಎಸ್ ಚುನಾವಣೆಯು ಮಿನಿ ವಿಧಾನಸಭಾ ಚುನಾವಣೆಯಂತೆ ನಡೆಯುತ್ತಿದೆ. ತಾಲ್ಲೂಕಿನ ಎಲ್ಲಾ ಗ್ರಾಮಗಳಲ್ಲಿಯೂ ಮತದಾರರು ಇದ್ದಾರೆ. ತಾಲ್ಲೂಕಿನ 4888 ಶೇರುದಾರ ಮತದಾರರಿಂದ ಆಯ್ಕೆಯಾಗಬೇಕಾದ 8ಮಂದಿ ಅಭ್ಯರ್ಥಿಗಳನ್ನು ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಹಿರಿಯ ಸಹಕಾರಿ ಧುರೀಣರು, ರಾಜ್ಯ ಸಹಕಾರ ಮಹಾಮಂಡಳದ ಪ್ರಾದೇಶಿಕ ನಿರ್ದೇಶಕರು ಸಹ ಆಗಿರುವ ಎಲ್.ಎಲ್.ಮೋಹನ್ ನೇತೃತ್ವದಲ್ಲಿ ತಂಡವು ಬಲಿಷ್ಠ ತಂಡವಾಗಿದೆ.
ಟಿಎಪಿಸಿಎಂಎಸ್ ಸಂಸ್ಥೆಯನ್ನು ಸಮರ್ಥವಾಗಿ ಮುನ್ನಡೆಸಲು ನಮ್ಮ ಜೆಡಿಎಸ್ ಅಭ್ಯರ್ಥಿಗಳಿಗೆ ಮತದಾರರು ಅತಿ ಹೆಚ್ಚು ಬಹುಮತದಿಂದ ಗೆಲುವು ನೀಡುವ ಮೂಲಕ ಶಕ್ತಿ ತುಂಬಬೇಕು. ಒಬ್ಬ ಅಭ್ಯರ್ಥಿಯೂ ಸೋಲಬಾರದು ಅಂತಹ ವ್ಯವಸ್ಥಿತ ಚುನಾವಣೆಯನ್ನು ಎದುರಿಸಲು ಕಾರ್ಯಕರ್ತರು ಸಿದ್ದರಾಗಬೇಕು. ಪ್ರಚಾರಕ್ಕೆ ಕಾಲಾವಕಾಶ ಕಡಿಮೆ ಇರುವ ಕಾರಣ ಪಂಚಾಯತ್ ಮಟ್ಟದ ಮುಖಂಡರು ಚುನಾವಣೆಯ ಸಂಪೂರ್ಣ ಜವಾಬ್ದಾರಿ ತೆಗೆದುಕೊಳ್ಳಬೇಕು. ಬಿ.ವರ್ಗದಲ್ಲಿ ಒಂದು ಮತವೂ ವ್ಯರ್ಥವಾಗದಂತೆ 8ಕ್ಕೆ 8ಅಭ್ಯರ್ಥಿಗಳಿಗೂ ಮತದಾನ ಆಗುವಂತೆ ನೋಡಿಕೊಳ್ಳಬೇಕು. ಅದೇ ರೀತಿ ಎ.ವರ್ಗದಲ್ಲಿ 6ಕ್ಕೆ 6ಮತಗಳು ನಮ್ಮ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಗಳಿಗೆ ಹಾಕುವಂತೆ ಮತದಾರರನ್ನು ಮನವೊಲಿಸಬೇಕು ಎಂದು ಮುಖಂಡರು ಮತ್ತು ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ನಾವೂ ಯಾರನ್ನೂ ಟೀಕಿಸಿ ಮತ ಕೇಳುವ ಅಗತ್ಯವಿಲ್ಲ. ಟಿಎಪಿಸಿಎಂಎಸ್ ಸಂಸ್ಥೆಯು ಸ್ಥಾಪನೆಯಾದ ದಿನದಿಂದಲೂ ಜೆಡಿಎಸ್ ಪಕ್ಷದ ಅಭ್ಯರ್ಥಿಗಳೇ ಬಹುಮತ ಪಡೆದು ಅಧಿಕಾರಕ್ಕೆ ಬಂದಿದ್ದಾರೆ ಅದೇ ಈ ಭಾರಿಯೂ ಜೆಡಿಎಸ್ ಪಕ್ಷವು ಅಧಿಕಾರಕ್ಕೆ ಬರುವುದು ಖಚಿತವಾಗಿದೆ ಹಾಗಾಗಿ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಹೆಚ್ಚಿನ ಅಂತರದಿoದ ನಮ್ಮ 14ಮಂದಿ ಅಭ್ಯರ್ಥಿಗಳೂ ಗೆಲ್ಲುವಂತಹ ವಾತಾವರಣವನ್ನು ಸೃಷ್ಠಿಸುವ ಗುರುತರವಾದ ಜವಾಬ್ದಾರಿ ತಮ್ಮ ಮೇಲಿದೆ ಎಂದು ಶಾಸಕರು ತಿಳಿಸಿದರು.

ಕರ್ನಾಟಕ ಸಹಕಾರ ಮಹಾಮಂಡಳದ ಪ್ರಾದೇಶಿಕ ನಿರ್ದೇಶಕ ಎಸ್.ಎಲ್.ಮೋಹನ್ ಮಾತನಾಡಿ ಕಳೆದ ಭಾರಿ ಟಿಎಪಿಸಿಎಂಎಸ್ ನಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಬಹುಮತ ಪಡೆದು ಹಿರಿಯರಾದ ಬಿ.ಎಲ್.ದೇವರಾಜು ಅವರನ್ನು 2ವರ್ಷದ ಅವಧಿಗೆ ಒಂಡAಬಡಿಕೆ ಮಾಡಿಕೊಂಡು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದೆವು. ಆದರೆ ದೇವರಾಜು ಅವರು 2023ರಲ್ಲಿ ಜೆಡಿಎಸ್ ಪಕ್ಷ ಬಿಟ್ಟು ಕಾಂಗ್ರೆಸ್ ಸೇರಿ ವಿಧಾನಸಭೆಗೆ ಸ್ಪರ್ಧೆ ಮಾಡಿದ್ದರು. ಆಗಲಾದರೂ ರಾಜೀನಾಮೆ ನೀಡಿ ತಮ್ಮ ನೈತಿಕ ರಾಜಕಾರಣವನ್ನು ಪ್ರದರ್ಶನ ಮಾಡಬಹುದಿತ್ತು. ಆದರೆ 5ವರ್ಷಗಳ ಕಾಲ ಅಧಿಕಾರಿ ನಡೆಸಿ, ತಮಗೆ ಅಧಿಕಾರದ ದುರಾಸೆ ಇದೆ ಎಂಬುದನ್ನು ತಾಲ್ಲೂಕಿನ ಜನತೆಗೆ ತೋರಿಸಿದ್ದಾರೆ. ಈಗ ಮತ್ತೊಮ್ಮೆ ಚುನಾವಣೆಗೆ ಸ್ಪರ್ಧೆ ಮಾಡಿದ್ದಾರೆ ಹಾಗಾಗಿ ಬಿ.ಎಲ್.ದೇವರಾಜು ಅವರ ಅಧಿಕಾರದ ದುರಾಸೆಯಿಂದಾಗಿ ಜೆಡಿಎಸ್ ಪಕ್ಷದ ಯಾರೊಬ್ಬರೂ ಟಿಎಪಿಸಿಎಂಎಸ್ ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕೆ ಏರಲು ಸಾಧ್ಯವಾಗಲಿಲ್ಲ. ಆದ್ದರಿಂದ ಮಾನ್ಯ ಮತದಾರರು ಇದೇ ಸೆ.28ರಂದು ನಡೆಯುವ ಚುನಾವಣೆಯಲ್ಲಿ ನಮ್ಮ ಜೆಡಿಎಸ್ ಪಕ್ಷದ ಎಲ್ಲಾ 14ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ನಮಗೆ ಅಧಿಕಾರ ನಡೆಸಲು ಅವಕಾಶ ನೀಡಬೇಕು. ಪ್ರಾಮಾಣಿಕವಾಗಿ ಅಧಿಕಾರ ಹಂಚಿಕೆ ಮಾಡಿಕೊಂಡು ಒಳ್ಳೆಯ ಆಡಳಿತ ನೀಡುತ್ತೇವೆ ಎಂದು ಎಲ್.ಎಲ್.ಮೋಹನ್ ಭರವಸೆ ನೀಡಿದರು.
ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮೆಣಸ ಮಹಾದೇವೇಗೌಡ, ತಾ.ಪಂ.ಮಾಜಿ ಸದಸ್ಯರಾದ ಎಂ.ಸಿ.ರಾಮೇಗೌಡ, ಹೊಸಹೊಳಲು ರಾಜು, ಮುಖಂಡರಾದ ಎ.ಪಿ.ಕೇಶವಗೌಡ, ಬೇಲದಕೆರೆ ನಂಜಪ್ಪ, ಎಸ್.ಆರ್.ನವೀನ್ಕುಮಾರ್, ಚಂದ್ರಹಾಸ, ಬಿ.ವರ್ಗದ ಅಭ್ಯರ್ಥಿಗಳಾದ ಎಸ್.ಎಲ್.ಮೋಹನ್, ಮಲ್ಲೇನಹಳ್ಳಿ ಎಂ.ಮೋಹನ್, ಕಿಕ್ಕೇರಿ ಕೆ.ಬಿ.ಮಧು, ನಾಗರಘಟ್ಟ ದಿಲೀಪ್ಕುಮಾರ್, ಎಂ.ಡಿ.ಜ್ಯೋತಿ, ಬಿ.ಆರ್.ಲತಾಮಣಿಮಂಜುನಾಥ್, ರಂಗನಾಥಪುರ ನಾಗರಾಜು, ಬೊಮ್ಮೇನಹಳ್ಳಿ ಮಂಜುನಾಥ್, ಎ.ವರ್ಗದ ಅಭ್ಯರ್ಥಿಗಳಾದ ಟಿ.ಬಲದೇವ್, ವಿ.ಡಿ.ಹರೀಶ್, ಬಿ.ಎಂ.ಕಿರಣ್, ಕುರುಬಹಳ್ಳಿ ಕೆ.ಬಿ.ನಾಗೇಶ್, ಆಲಂಬಾಡಿ ಎ.ಟಿ.ಕರಿಶೆಟ್ಟಿ, ಹೆಚ್.ಟಿ.ಲೋಕೇಶ್ ಮತ್ತಿತರರು ಉಪಸ್ಥಿತರಿದ್ದರು.
ವರದಿ, ಎಸ್ ರವಿ ಹೊನ್ನೇನಹಳ್ಳಿ
