ತುಮಕೂರು:ಎಐ ಮತ್ತು ಎಂ.ಎಲ್ ನಿಂದ ಉತ್ತಮ ಉದ್ಯೋಗವಕಾಶಗಳು ದೊರೆಯುವುದರ ಜೊತೆಗೆ ವಿದ್ಯಾರ್ಥಿಗಳಿಗೆ ಉತ್ತಮ ಜ್ಞಾನವನ್ನು ಸಹ ನೀಡುತ್ತದೆ,2ದಿನಗಳ ಕಾಲ ನಡೆದ ವಿಚಾರಸಂಕಿರಣದಲ್ಲಿ ಸಂಶೋಧನಾ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಮಂಡಿಸಿದ ವಿವಿಧ ಪ್ರಬಂಧಗಳನ್ನು ಕೇಳಿ ಮತ್ತು ನೋಡಿದ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಸಹಾಯವಾಗಿದೆ,ನಾವು ತಂತ್ರಜ್ಞಾನದೊಂದಿಗೆ ಹೆಜ್ಜೆ ಹಾಕಬೇಕು,ಡಾ||ಶ್ರೀ ಶ್ರೀ ಶಿವಕುಮಾರಸ್ವಾಮೀಜಿಗಳು ಕಳೆದ 30ವರ್ಷಗಳ ಹಿಂದೆಯೇ ಹೇಳಿದ್ದರು ಇಂದಿನ ವಿಜ್ಞಾನ ಮತ್ತು ತಂತ್ರಜ್ಞಾನ ಬಹಳ ವೇಗವಾಗಿ ಬೆಳೆಯುತ್ತಿದೆ,ಇಂದಿನದು ನಾಳೆಗೆ ಹಳೆಯದು ಎಂದು ಹೇಳುತ್ತಿದ್ದರು ಅದು ಇಂದು ನಿಜವಾಗಿದೆ,ಶಿಕ್ಷಕರು ಪ್ರತಿದಿನ ಅಪ್ ಡೇಟ್ ಆಗಬೇಕು ಆಗ ಮಾತ್ರ ವಿದ್ಯಾರ್ಥಿಗಳಿಗೆ ಹೊಸ ಹೊಸ ಪಠ್ಯದ ಜೊತೆಗೆ ಹೊಸ ತಂತ್ರಜ್ಞಾನಗಳು,ಹೊಸ ಹೊಸ ಆವಿಷ್ಕಾರಗಳನ್ನು ತಿಳಿಸಬಹುದು ಇಂದು ನಡೆದ ವಿಚಾರ ಸಂಕಿರಣದಿಂದ ವಿದ್ಯಾರ್ಥಿಗಳ ಜ್ಞಾನದ ಮಟ್ಟ ಹೆಚ್ಚಾಗಿದೆ ಎಂದು ಭಾವಿಸಿದ್ದೇನೆ ಎಂದು ಶ್ರೀಸಿದ್ದಗಂಗಾ ಶಿಕ್ಷಣ ಸಂಸ್ಥೆಯ ಜಂಟಿ ಕಾರ್ಯದರ್ಶಿ ಡಾ.ಶಿವಕುಮಾರಯ್ಯ ಅಭಿಪ್ರಾಯಪಟ್ಟರು.
ಅವರು ನಗರದ ಶ್ರೀಸಿದ್ದಗಂಗಾ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಎಐಸಿಟಿಇ ಪ್ರಾಯೋಜಕತ್ವದಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ “ಎಕ್ಸ್ಪ್ಲೋರಿಂಗ್ ಎಐ ಅಂಡ್ ಎಂಎಲ್ ಫಾರ್ ಬೆಟರ್ ಟುಮಾರೋ” ಎಂಬ ವಿಷಯ ಕುರಿತು ರಾಷ್ಟ್ರಮಟ್ಟದ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಡಾ.ಎನ್.ಎಚ್.ಸಿದ್ದಲಿಂಗಸ್ವಾಮಿ, ಎಐಸಿಟಿಇ ಸಲಹೆಗಾರರು,ನವದೆಹಲಿ ಇವರು ಮಾತನಾಡುತ್ತಾ ಶ್ರೀ ಸಿದ್ದಗಂಗಾ ಶಿಕ್ಷಣ ಸಂಸ್ಥೆ ಸದಾ ಬದಲಾಗುತ್ತಿರುವ ಜಗತ್ತಿನ ಅಗತ್ಯಗಳಿಗೆ ಹೊಂದಿಕೊಂಡಂತೆ ಸಕಾರಾತ್ಮಕ ಉಪಕ್ರಮಗಳನ್ನು ಉತ್ತೇಜಿಸುವಲ್ಲಿ ಮುಂಚೂಣಿಯಲ್ಲಿದೆ ಎಂದು ಒತ್ತಿ ಹೇಳಿದರು. ಸಂಸ್ಥೆ ಯಾವಾಗಲೂ ಹೊಸ ಆಲೋಚನೆಗಳನ್ನು ಹಾಗೂ ಪ್ರಗತಿಪರ ಅಭ್ಯಾಸಗಳನ್ನು ಬೆಂಬಲಿಸುತ್ತಾ, ಶಿಕ್ಷಣ ಕ್ಷೇತ್ರದಲ್ಲಿ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಅನುಕೂಲಕರ ವಾತಾವರಣವನ್ನು ನಿರ್ಮಿಸಿದೆ ಎಂದು ಅವರು ತಿಳಿಸಿದರು. ಈ ಪರಿವರ್ತನೆಯ ಸಂದರ್ಭದಲ್ಲಿ ಶಿಕ್ಷಕರ ಪಾತ್ರವನ್ನು ಪ್ರಸ್ತಾಪಿಸಿದ ಅವರು, ಕೃತಕ ಬುದ್ಧಿಮತ್ತೆ (ಎಐ) ಮತ್ತು ಆಧುನಿಕ ತಂತ್ರಜ್ಞಾನಗಳ ಹೆಚ್ಚುತ್ತಿರುವ ಪ್ರಭಾವವನ್ನು ಶಿಕ್ಷಕರು ಭಯಪಡಬೇಕಿಲ್ಲ ಎಂದು ತಿಳಿಸಿದರು. ಬದಲಾಗಿ, ಇವುಗಳನ್ನು ಬೋಧನೆ ಮತ್ತು ಕಲಿಕೆಯ ಪ್ರಕ್ರಿಯೆಯನ್ನು ಉತ್ತೇಜಿಸುವ ಸಾಧನಗಳಾಗಿ ಸ್ವೀಕರಿಸಬೇಕು ಎಂದು ಅಭಿಪ್ರಾಯಪಟ್ಟರು. ಶಿಕ್ಷಕರು ಸದಾ ವೃತ್ತಿಪರ ಪ್ರಗತಿಗೆ ಒತ್ತು ನೀಡಬೇಕು, ಇತ್ತೀಚಿನ ಪ್ರವೃತ್ತಿಗಳು, ಕೌಶಲ್ಯಗಳು ಮತ್ತು ತಂತ್ರಜ್ಞಾನ ಬದಲಾವಣೆಗಳೊಂದಿಗೆ ತಮ್ಮನ್ನು ನವೀಕರಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು. ಇಂತಹ ನವೀನತೆಗಳಿಗೆ ಹೊಂದಿಕೊಂಡು ಹೋಗುವುದರಿಂದ ಶಿಕ್ಷಕರು ವಿದ್ಯಾರ್ಥಿಗಳನ್ನು ಪರಿಣಾಮಕಾರಿಯಾಗಿ ಮಾರ್ಗದರ್ಶನ ಮಾಡಿ, ಭವಿಷ್ಯದ ಸವಾಲುಗಳಿಗೆ ಸಜ್ಜುಗೊಳಿಸಬಹುದು ಎಂದು ಅವರು ಹೇಳಿದರು.
ಡಾ||ಪರಮಶಿವಯ್ಯ ಮಾತನಾಡುತ್ತಾ ಇಂದು ಕಂಪ್ಯೂಟರ್ ಅಪ್ಲಿಕೇಶನ್ ಮತ್ತು ತಂತ್ರಜ್ಞಾನದ ಕೋರ್ಸ್ ಗಳಿಗೆ ಭಾರೀ ಬೇಡಿಕೆ ಇದೆ,ಕಳೆದ ಒಂದು ತಿಂಗಳಲ್ಲಿ ಅಮೇಜಾನ್ ಮತ್ತು ಫ್ಲಿಪ್ ಕಾರ್ಟ್ ನಂತಹ ಇ ಕಾಮರ್ಸ್ ಕಂಪೆನಿಗಳು 66000 ಉದ್ಯೋಗಿಗಳನ್ನು ಹೊಸದಾಗಿ ನೇಮಿಸಿಕೊಂಡಿದೆ ಎಂದರೆ ತಂತ್ರಜ್ಞಾನದ ವೇಗ ಎಷ್ಟೆಂದು ನೀವೇ ಊಹಿಸಿ ಎಂದರು,ಎಐ ನಿಂದ ಕೃಷಿ,ಬ್ಯಾಂಕಿಂಗ್,ಆರೋಗ್ಯ,ಇನ್ಸೂರೆನ್ಸ್ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಸಹಾಯಕವಾಗಿದೆ ಆದ್ದರಿಂದ ಬದಲಾಗುತ್ತಿರುವ ಜಗತ್ತಿನಲ್ಲಿ ಎಐನಿಂದ ಇನ್ನಷ್ಟು ಹೊಸ ಸೇವೆಗಳನ್ನು ಪಡೆದು ನಮ್ಮ ಜೀವನದ ಗುಣಮಟ್ಟವನ್ನು ಸಹ ಹೆಚ್ಚಿಸಿಕೊಳ್ಳೋಣ ಎಂದರು.
ಶ್ರೀಸಿದ್ದಗಂಗಾ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಪ್ರಾಂಶುಪಾಲರಾದ ಡಾ. ಟಿ.ಬಿ.ನಿಜಲಿಂಗಪ್ಪ ಸ್ವಾಗತಿಸಿದರು.ಗಣಕ ಯಂತ್ರ ವಿಭಾಗದ ಮುಖ್ಯಸ್ಥರಾದ ಕೆ.ಎಸ್.ಲಿಂಗದೇವರಪ್ಪ, ಎಂ.ಮಮತಾ,ಪ್ರೊ.ಪ್ರೇಮಸುಧಾ,ಡಾ||ಸುನಿತಾ,ಸಂಶೋಧನಾ ವಿದ್ಯಾರ್ಥಿಗಳು,ಕಾಲೇಜಿನ ವಿದ್ಯಾರ್ಥಿಗಳು,ಅಧ್ಯಾಪಕರು ಮತ್ತಿತರರು ಉಪಸ್ಥಿತರಿದ್ದರು.ಡಾ||ಅರುಣ್ ಕುಮಾರ್ ನಿರೂಪಿಸಿ,ಪ್ರೊ.ಸರ್ವಮಂಗಳ ವಂದಿಸಿದರು.
