ಕೆ.ಆರ್.ಪೇಟೆ,ಸೆ.29: ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ರಾಷ್ಟ್ರ ಪಕ್ಷಿ ನವಿಲು ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಸಾಧುಗೋನಹಳ್ಳಿ ಬಳಿ ನಡೆದಿದೆ.

ಸಾಧುಗೋನಹಳ್ಳಿ ಸಮೀಪವಿರುವ ಅರಣ್ಯ ಪ್ರದೇಶದಲ್ಲಿ ಒಂದು ಬದಿಯಿಂದ ಮತ್ತೊಂದು ಬದಿಗೆ ರಸ್ತೆ ದಾಟುವಾಗ ವೇಗವಾಗಿ ಬಂದಿರುವ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದಿದೆ. ಪರಿಣಾಮ ತೀವ್ರ ಗಾಯಗೊಂಡ ನಮ್ಮ ರಾಷ್ಟ್ರ ಪಕ್ಷಿಯಾಗಿರುವ ನವಿಲು ಸ್ಥಳದಲ್ಲಿಯೇ ಸಾವನ್ನಪ್ಪಿರುತ್ತದೆ.

ಘಟನಾ ಸ್ಥಳಕ್ಕೆ ತಾಲ್ಲೂಕು ವಲಯ ಅರಣ್ಯ ಸಂರಕ್ಷಣಾಧಿಕಾರಿ ಡಾ.ಅನಿತಾ, ತಾಲ್ಲೂಕು ಪಶುವೈದ್ಯ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಹೆಚ್.ಎಸ್.ದೇವರಾಜು ಬೇಟಿ ನೀಡಿ ಮೃತ ನವಿಲು ಪಕ್ಷಿಯನ್ನು ಅರಣ್ಯ ಇಲಾಖೆಯ ಕಚೇರಿಗೆ ತಂದು ವೈದ್ಯಕೀಯ ಪರೀಕ್ಷೆ ಮಾಡಿ ನಂತರ ರಾಷ್ಟ್ರ ಪಕ್ಷಿಗೆ ಸಲ್ಲಬೇಕಾದ ಗೌರವ ಸಲ್ಲಿಸಿ ಅಂತ್ಯಸಂಸ್ಕಾರ ಮಾಡಿದ್ದಾರೆ.
ಅಧಿಕಾರಿಗಳ ಈ ಮಾನವೀಯ ಕ್ರಮಕ್ಕೆ ತಾಲ್ಲೂಕಿನ ವಿವಿಧ ಸಂಘ ಸಂಸ್ಥೆಗಳು ಮೆಚ್ಚುಗೆ ವ್ಯಕ್ತಪಡಿಸಿವೆ.
-ಶ್ರೀನಿವಾಸ್ ಆರ್.
