
ನಿಮಗೆ ಇದನ್ನೆಲ್ಲಾ ಹೇಳಲು ತೇಜಸ್ವಿ ನನಗೆ ನಿಮಿತ್ತ…
(ಕಾಡಿನ ಸಂತ–ತೇಜಸ್ವಿ ಪುಸ್ತಕದ ಪರಿಷ್ಕೃತ ಆವೃತ್ತಿ)
ಗಿರಿಯೇರಿ
ಒಮ್ಮೆ ನೇಚರ್ ಕ್ಲಬ್ನ ಸದಸ್ಯರೆಲ್ಲರೂ ಡಿಸೆಂಬರ್ನ ಅಸಾಧ್ಯ ಕೊರೆಯುವ ಚಳಿಯಲ್ಲೇ ಮುಳ್ಳಯ್ಯನಗಿರಿ ಪರ್ವತದ ಮೇಲೇ ರಾತ್ರಿ ತಂಗುವುದೆಂದು ತೀರ್ಮಾನಿಸಿದೆವು. ಸುಮಾರು ೨೫ ಜನರ ಗುಂಪೊಂದು ಹಿಮಾಲಯಕ್ಕೇ ಹೋಗುತ್ತಿದ್ದೇವೇನೋ ಎಂಬಂತೆ ಹೊರಟು ನಿಂತಿತು. ಹತ್ತು ದಿನದ ಹಿಂದೆಯೇ ತಮ್ಮ ಕುಟುಂಬದ ಸದಸ್ಯರೆಲ್ಲರ ಹೆಸರನ್ನು ನೊಂದಾಯಿಸಿದ್ದ ತೇಜಸ್ವಿಯವರು ನಿಗದಿಯಾಗಿದ್ದ ಸಮಯ ಮಧ್ಯಾಹ್ನ 3 ಗಂಟೆಯಾದರೂ ಕಾಣಲಿಲ್ಲ. ಅವರ ಕುಟುಂಬದವರೆಲ್ಲ ವ್ಯಾನ್ಹತ್ತಿ ಕುಳಿತರೂ ನಮ್ಮ ಮಾನಿಟರ್ ಪತ್ತೆ ಇಲ್ಲ! ಇದೇನಪ್ಪಾ ಎಂದು ಇಳಿದು ನೋಡಿದರೆ, ಸ್ಕೂಟರನ್ನು ರ್ರ್ ರ್ರ್ ಎನಿಸುತ್ತಾ ನಮ್ಮ ವ್ಯಾನ್ ಹೊರಡುವುದನ್ನೇ ಕಾಯುತ್ತಿದ್ದರು. “ಯಾಕೆ ? ಬನ್ನಿ, ಹತ್ತಿ ಒಳಕ್ಕೆ” ಎಂದೆ.
“ಹೋಗಾ ಹೋಗಾ ನೀನು ಬೇಕಾದ್ರೆ ವ್ಯಾನ್ನಲ್ಲಿ ಹೋಗು. ಸ್ಕೂಟರ್ನಲ್ಲಿ ಹೋಗೋ ಮಜಾನೇ ಬೇರೆ. ನಿನ್ನ ಸ್ಕೂಟರ್ ರ್ಲಿಲ್ವ?” ಎಂದು ಛೇಡಿಸಿದರು. ಅವರ ಐಡಿಯಾ ನೋಡಿ ನನಗೂ ಸ್ಕೂಟರ್ನಲ್ಲಿ ಹೋಗಿದ್ರೆ ಚೆನ್ನಾಗಿತ್ತು ಅನಿಸಿತ್ತು. ಆದರೆ ಇಡೀ ತಂಡದ ಉಸ್ತುವಾರಿ ನನ್ನದ್ದಾಗಿದ್ದರಿಂದ ಬಾಲ ಮುದುರಿಕೊಂಡು ಡ್ರೈ ವರ್ನೆಡೆಗೆ ತಿರುಗಿ ರೈಟ್! ಎಂದೆ.
ಚಿಕ್ಕಮಗಳೂರಿನ ಮುಂದಿನ ಅಂಕುಡೊಂಕು ಹಾದಿಯ ರೋಚಕವಾದ ಪ್ರಯಾಣದ ಅನುಭವವು ಇಂದಿಗೂ ಹಸಿರಾಗಿದೆ. ಮುಗಿಲೆತ್ತರದ ಸಿಲ್ವರ್ ಓಕ್ ಮರಗಳ ನಡುವಿನ ಇಷ್ಟಗಲದ ದಾರಿಯಲ್ಲಿ ಕ್ಷಣಕ್ಷಣಕ್ಕೂ ಮೇಲೇರುವ ಅನುಭವವೇ ಬೇರೆ. ನಾವು ತಲುಪಿದ ಮುಕ್ಕಾಲು ಗಂಟೆಯ ನಂತರ ಬಂದ ತೇಜಸ್ವಿಯವರಲ್ಲಿ ಏಕಾಂಗಿ ಶೂರನ ಗೆಲುವಿತ್ತು. ವಸತಿಗಾಗಿ ಏರ್ಪಾಟಾದ ನಂತರ ಕಟಕಟಿಸುತ್ತಿದ್ದ ಹಲ್ಲು ಗಳನ್ನು ನಿಯಂತ್ರಿಸುತ್ತಾ, ಅಂಗೈಗಳನ್ನು ಒಂದಕ್ಕೊಂದು ಉಜ್ಜುತ್ತಾ ರಾತ್ರಿಯ ಕುಳಿರ್ಗಾಳಿಯನ್ನು ಎದುರಿಸಲು ಸನ್ನದ್ಧರಾದೆವು.
ಅಷ್ಟರಲ್ಲಿ ಸಂದೀಪ್, ಗಿರೀಶ್, ಅಮರೇಂದ್ರನಾಥ್ ಮತ್ತು ಅತುಲ್ರಾವ್ ಎಲ್ಲಿಯೋ ಬಿದ್ದಿದ್ದ ಒಣರೆಂಬೆಗಳ ತುಂಡುಗಳನ್ನು ಹೊತ್ತು ತಂದು ಕ್ಯಾಂಪ್ಫೈರ್ ಸಿದ್ಧಪಡಿಸಿದರು. ಅದಕ್ಕಾಗಿಯೇ ಕಾಯುತ್ತಿದ್ದಾರೆನೋ ಎಂಬಂತೆ ನಮ್ಮ ತಂಡದಲ್ಲಿದ್ದ ಹೆಂಗಳೆಯರು ನಾಮುಂದು ತಾಮುಂದು ಎಂದು ಇನ್ನೇನು ಬೆಂಕಿಗೇ ಬಿದ್ದು ಬಿಡುತ್ತಾರೇನೋ ಎನ್ನುವಷ್ಟರ ಮಟ್ಟಿಗೆ ಚಳಿ ಕಾಯಿಸಲು ಮುಗಿಬಿದ್ದರು. `ಸೌದೆ ತಂದದ್ದು ನಾವು, ಮಜಾ ತಗೋಳ್ತಿರೋರು ನೀವು’ ಎಂದು ಹುಡುಗ ಹುಡುಗಿಯರಿಗೆ ಜಟಾಪಟಿ ಶುರುವಾಯಿತು.

ಅದೆಲ್ಲಿದ್ದರೋ ಕರಿ ಜರ್ಕಿನ್ ತೊಟ್ಟು, ಕೊರಳಿಗೆ ಕ್ಯಾಮೆರಾ ನೇತು ಹಾಕಿಕೊಂಡು, ಜೀನ್ಸ್ ಪಾಂಟಿನ ಎರಡೂ ಮುಂಜೇಬುಗಳಿಗೆ ಕೈ ತೂರಿಸಿದ್ದ ತೇಜಸ್ವಿ ಗಂಟಲು ಸರಿ ಮಾಡಿಕೊಳ್ಳುತ್ತಾ ಬಂದ ಕೂಡಲೇ ಎಲ್ಲರೂ ನಿಶ್ಯಬ್ಧರಾದರು.
ಅಷ್ಟರಲ್ಲಿ ತಂಡದಲ್ಲಿದ್ದ ಹುಡುಗಿಯರಿಂದ ಪ್ರೇರಣೆ ಪಡೆದ ಶೇಖರ್ ಹಾಗೂ ರವಿನಂದನ್ ತಮ್ಮ ಕಲೆಗಾರಿಕೆಯನ್ನು ಪ್ರದರ್ಶಿಸಲು ಸೌದೆ ಕೊರಡುಗಳಿಂದಲೇ ಕತ್ತಿ ವರಸೆ ಶುರುಮಾಡಿದರು. ಸ್ವಲ್ಪ ಹೊತ್ತು ಯಾರೂ ಗಮನಿಸದಿದ್ದಾಗ ಕಿಕ್ ಬಾಕ್ಸರ್ಗಳಂತೆ ಅರಚಾಡಿ ಕಳರಿಪಯೆಟ್ ಮಾದರಿಯಲ್ಲಿ ವಿಚಿತ್ರವಾಗಿ ಆಡತೊಡಗಿದರು.
ತೇಜಸ್ವಿ ನನ್ನನ್ನು ಕರೆದು “ಅವರಿಬ್ಬರೂ ದಾರಿಯಲ್ಲೇನಾದರೂ ಬೈನೆ ಕಳ್ಳನ್ನು ಕುಡಿದ್ರಾ?” ಎಂದು ಕೇಳಿದರು. ಅಷ್ಟರಲ್ಲಿ ಅವರಿಬ್ಬರ ಕೈಯಲ್ಲಿದ್ದ ದಗ್ಗುಲಾಗಿದ್ದ ಕೊರಡುಗಳು ಮುರಿದುಕೊಂಡು ಕೆಳಗೆ ಬಿದ್ದವು. ಪ್ರೇಕ್ಷಕರು ತಮಗೂ ವೀಕ್ಷಿಸಿ ಸಾಕಾಯಿತೆಂದು ಮುಖಭಾವ ತೋರಿದ್ದರಿಂದ ಚರ್ಚೆಗಳು ಪ್ರಾರಂಭವಾದವು.
ಮುಂದುವರೆಯುತ್ತದೆ..
– ಧನಂಜಯ ಜೀವಾಳ ಬಿ.ಕೆ. ಮೂಡಿಗೆರೆ
9448421946
